ಕಳೆದ ಒಂದು ವಾರದಿಂದ ಸುಪ್ರೀಂ ಕೋರ್ಟ್ ಹದಿನೆಂಟು ವಿವಿಧ ಅರ್ಜಿಗಳನ್ನು ಜತೆಗೆ ಕೂಡಿಸಿ ಎದುರಿಗಿಟ್ಟುಕೊಂಡು ನಿರ್ಣಯಕ್ಕೆ ಮುಂದಾಗಿದೆ. ವಿಷಯ ಇಷ್ಟೇ: ಸಲಿಂಗ ಕಾಮಿಗಳು ವಿವಾಹವಾಗಬಹುದೇ? (same sex marriage) ಆಗಬಾರದೇ? ಈ ಬಗ್ಗೆ ಸುಪ್ರೀಂ ಕೋರ್ಟ್ (supreme court) ಸರ್ಕಾರದ ಅಭಿಪ್ರಾಯ ಕೇಳಿತ್ತು. ಅದನ್ನು ಸರ್ಕಾರ ನೀಡಿದ್ದು, ಸಲಿಂಗವಿವಾಹವನ್ನು ಖಂಡತುಂಡವಾಗಿ ವಿರೋಧಿಸಿದೆ. ವಾದ ವಿವಾದ ಮುಂದುವರಿದಿದೆ. ಈ ಬಗ್ಗೆ ವಿವರ ಇಲ್ಲಿದೆ.
ಸೆಕ್ಷನ್ 377ರ ಮುಕ್ತಿ
ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 377 ಸಲಿಂಗಕಾಮವನ್ನು ಅಪರಾಧವೆಂದು ಹೇಳಿತ್ತು. ʼʼಯಾವುದೇ ವ್ಯಕ್ತಿಯು ಇನ್ಯಾವುದೇ ಗಂಡು, ಹೆಣ್ಣು ಅಥವಾ ಪ್ರಾಣಿಯ ಜತೆಗೆ ಅನೈಸರ್ಗಿಕವಾದ ಲೈಂಗಿಕ ಸಂಪರ್ಕ ಅಥವಾ ಗುದಸಂಭೋಗವನ್ನು ಮಾಡಿದರೆ ಅದು ಶಿಕ್ಷಾರ್ಹ ಅಪರಾಧʼʼ ಎಂದು ಹೇಳಿತ್ತು. ಇದಕ್ಕೆ ಜೀವಾವಧಿಯವರೆಗೂ ಶಿಕ್ಷೆಯ ಪ್ರಮಾಣ ವಿಸ್ತರಿಸಬಹುದಾಗಿತ್ತು. ಇದು 1861ರಲ್ಲಿ, ವಸಾಹತುಶಾಹಿ ಕಾಲದಲ್ಲಿ ತರಲಾದ ಕಾಯಿದೆ. 2018ರಲ್ಲಿ ನೀಡಿದ ಐತಿಹಾಸಿಕ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಇದನ್ನು ತಿರಸ್ಕರಿಸಿತು. ಸಮ್ಮತಿಯಿಂದ ನಡೆಯುವ ಸಲಿಂಗಕಾಮ ಅಪರಾಧವಲ್ಲ ಎಂದಿತು. ಸಮ್ಮತಿಯಿಂದ, ಖಾಸಗಿಯಾಗಿ, ವಯಸ್ಕರ ನಡುವೆ ನಡೆಯುವ ಸಲಿಂಗಕಾಮಕ್ಕೆ ಮಾನ್ಯತೆ ನೀಡಿತು. ಇದು ವೈಯಕ್ತಿಕ ಸ್ವಭಾವ, ವ್ಯಕ್ತಿಗೆ ಅದರ ಮೇಲೆ ಯಾವುದೇ ನಿಯಂತ್ರಣವಿಲ್ಲ ಎಂದಿತು.
ಅಂದಿನಿಂದ ಸಲಿಂಗಕಾಮ ಕಾನೂನುಬದ್ಧ. ಆದರೆ ಬಲವಂತವಾದ ಸಲಿಂಗಕಾಮ ಅಪರಾಧ. ಈ ತೀರ್ಪನ್ನು ದೇಶಾದ್ಯಂತ ಎಲ್‌ಜಿಬಿಟಿಕ್ಯು (ಲೆಸ್ಬಿಯನ್, ಗೇ, ಬೈಸೆಕ್ಷುಯಲ್, ಟ್ರಾನ್ಸ್‌ಜೆಂಡರ್, ಕ್ವೀಯರ್) ಸಮುದಾಯದವರು ಸಂಭ್ರಮಿಸಿದ್ದರು. ಕಾನೂನಿನ ಭಯದಿಂದಾಗಿ ಹೆಚ್ಚಿನವರು ಸಂಬಂಧವಿಟ್ಟುಕೊಂಡಿದ್ದರೂ, ಮದುವೆಯಾಗಿರಲಿಲ್ಲ. ಇದೀಗ ಮದುವೆಗೆ ಮಾನ್ಯತೆ ನೀಡುವಂತೆ ಕೋರುತ್ತಿದ್ದಾರೆ.
ಇದೀಗ ಬೇಡಿಕೆ ಏನು?
ಸಲಿಂಗಕಾಮಕ್ಕೆ ಅವಕಾಶ ನೀಡಿದ್ದೀರಿ; ಸಲಿಂಗವಿವಾಹಕ್ಕೂ ಮಾನ್ಯತೆ ನೀಡಿ ಎಂಬುದು ಈಗ ಕೋರ್ಟ್ ಮುಂದಿರುವ ಅರ್ಜಿಗಳ ವಾದ. ದೇಶದ ವಿವಿಧ ನ್ಯಾಯಾಲಯಗಳಲ್ಲಿ, ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಹಲವು ಅರ್ಜಿಗಳಿದ್ದವು. ಜನವರಿ 6ರಂದು ಸುಪ್ರೀಂ ಕೋರ್ಟ್ ವಿವಿಧ ಹೈಕೋರ್ಟ್‌ಗಳಲ್ಲಿದ್ದ ಈ ಅರ್ಜಿಗಳನ್ನು ಒಂದೆಡೆ ಸೇರಿಸಿತು. ಹಿಂದೂ ವಿವಾಹ ಕಾಯ್ದೆ (ಎಚ್‌ಎಂಎ), ವಿಶೇಷ ವಿವಾಹ ಕಾಯ್ದೆ (ಎಸ್‌ಎಂಎ) ಮತ್ತು ವಿದೇಶಿ ವಿವಾಹ ಕಾಯ್ದೆ (ಎಫ್‌ಎಂಎ) ಅಡಿಯಲ್ಲಿ ಮಾನ್ಯತೆ ಕೋರಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಏಪ್ರಿಲ್ 18ರಂದು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಈ ಅರ್ಜಿಗಳ ವಿಚಾರಣೆಯನ್ನು ಪ್ರಾರಂಭಿಸಿತು.
ಕಕ್ಷಿದಾರರ ವಾದವೇನು?
ಸಲಿಂಗಕಾಮದ ಅಪರಾಧೀಕರಣ ತೆಗೆದುಹಾಕಿದ ಬಳಿಕ, ಸಲಿಂಗ ವಿವಾಹಗಳನ್ನು ಗುರುತಿಸುವುದು ಮುಂದಿನ ತಾರ್ಕಿಕ ಹೆಜ್ಜೆ. ಮದುವೆ ಮತ್ತು ವಿಚ್ಛೇದನದಂತಹ ವೈಯಕ್ತಿಕ ವ್ಯವಹಾರಗಳು ಭಾರತದಲ್ಲಿ ಸಮುದಾಯಗಳಿಗೆ ನಿರ್ದಿಷ್ಟವಾದ ಕಾನೂನುಗಳಿಂದ ನಿಯಂತ್ರಿಸಲ್ಪಡುತ್ತವೆ. ಮುಖ್ಯವಾಗಿ ಹಿಂದೂ ವಿವಾಹ ಕಾಯಿದೆ (HMA). ಬೌದ್ಧರು, ಸಿಖ್ಖರು, ಜೈನರು ಮತ್ತು ಹಿಂದೂ ಧರ್ಮದ ಎಲ್ಲಾ ಪಂಗಡಗಳಿಗೂ ಇದು ಅನ್ವಯಿಸುತ್ತದೆ.
ಇದಕ್ಕೆ ಸಂಬಂಧಿಸಿದ ಆರಂಭಿಕ ಅರ್ಜಿಗಳಲ್ಲಿ ಒಂದನ್ನು 2020ರಲ್ಲಿ ದೆಹಲಿ ಹೈಕೋರ್ಟ್‌ನಲ್ಲಿ ಅಭಿಜಿತ್ ಅಯ್ಯರ್- ಮಿತ್ರಾ ಜೋಡಿ ಸಲ್ಲಿಸಿತು. HMAಯಲ್ಲಿ ಭಿನ್ನಲಿಂಗೀಯ ಮತ್ತು ಸಲಿಂಗಕಾಮಿ ವಿವಾಹಗಳ ನಡುವೆ ಯಾವುದೇ ವ್ಯತ್ಯಾಸ ಗುರುತಿಸಿಲ್ಲ. HMAಯ ಸೆಕ್ಷನ್ 5 ಹೇಳುವ ಪ್ರಕಾರ, “ಯಾವುದೇ ಇಬ್ಬರು ಹಿಂದೂಗಳ ನಡುವೆ ವಿವಾಹವನ್ನು ನಡೆಸಬಹುದು…”
ವಿಶೇಷ ವಿವಾಹ ಕಾಯಿದೆ (SMA) ಅಡಿಯಲ್ಲಿಯೂ ಇನ್ನು ಕೆಲವು ಅರ್ಜಿಗಳು ಸಲಿಂಗ ವಿವಾಹಕ್ಕೆ ಮಾನ್ಯತೆ ಕೋರಿವೆ. ಹಿಂದೂ ವಿವಾಹ ಕಾಯಿದೆಗಿಂತ SMA ಇನ್ನಷ್ಟು ಉದಾರವಾಗಿದೆ. SMA ಅಡಿಯಲ್ಲಿ ವಿವಾಹ ನೆರವೇರಿಸಲು ಸಂಬಂಧಿಸಿದ ಷರತ್ತುಗಳಲ್ಲಿ, ಕಾನೂನಿನ ಸೆಕ್ಷನ್ 4 “ಯಾವುದೇ ಇಬ್ಬರು ವ್ಯಕ್ತಿಗಳ ನಡುವಿನ ವಿವಾಹವನ್ನು ಈ ಕಾಯಿದೆಯ ಅಡಿಯಲ್ಲಿ ಸೇರಿಸಲಾಗಿದೆ” ಎಂದು ಹೇಳುತ್ತದೆ. ಇದರಲ್ಲಿ ʼಗಂಡ’ ಅಥವಾ ʼಹೆಂಡತಿ’ ಎಂಬುದನ್ನು ಉಲ್ಲೇಖಿಸುವುದಿಲ್ಲ.
ವಯಸ್ಸಿನ ಅರ್ಹತೆಯನ್ನು ಪಟ್ಟಿಮಾಡುವ SMAಯ ವಿಭಾಗ 4 (c), “ಪುರುಷನು ಇಪ್ಪತ್ತೊಂದು ವರ್ಷಗಳನ್ನು ಪೂರ್ಣಗೊಳಿಸಿರಬೇಕು ಹಾಗೂ ಮಹಿಳೆಯು ಹದಿನೆಂಟು ವರ್ಷಗಳನ್ನು ಪೂರ್ಣಗೊಳಿಸಿರಬೇಕುʼʼ ಎಂದು ಹೇಳಿದೆ. ಆದರೆ ಇದನ್ನು ಲಿಂಗ-ತಟಸ್ಥ ನಿಬಂಧನೆಯಾಗಿಯೂ ಓದಬಹುದು ಎಂದು ವಾದಿಸಲಾಗಿದೆ.
ಕೇಂದ್ರ ಸರ್ಕಾರ ಏನು ಹೇಳಿದೆ?
ಈ ಅರ್ಜಿಗಳ ವಿಚಾರಣೆಗೆ ಮುನ್ನ ಸುಪ್ರೀಂ ಕೋರ್ಟ್ ಈ ಕುರಿತು ಕೇಂದ್ರ ಸರ್ಕಾರದ ಅಭಿಪ್ರಾಯ ಕೇಳಿತ್ತು. ತಾನು ನೀಡಿದ ಅಭಿಪ್ರಾಯದಲ್ಲಿ ಸರ್ಕಾರ ಹೇಳಿದ್ದು ಇಷ್ಟು:
ಸಲಿಂಗ ವಿವಾಹ ಎಂಬುದು ಕೇವಲ ʼನಗರದ ಕೆಲವು ಗಣ್ಯʼರ ಒಂದು ದೃಷ್ಟಿಕೋನವನ್ನು ಪ್ರತಿಬಿಂಬಿಸುವ ಸಂಗತಿ. ಗ್ರಾಮೀಣ ಅಥವಾ ಅರೆಗ್ರಾಮೀಣ ಪ್ರದೇಶಗಳಲ್ಲಿ ಇದು ಸಾಮಾಜಿಕವಾಗಿ, ಸಾಂಸಾರಿಕವಾಗಿ, ಕೌಟುಂಬಿಕವಾಗಿ ಮಾನ್ಯವಲ್ಲ. ಮದುವೆಯನ್ನು ಗುರುತಿಸುವುದು ಮೂಲಭೂತವಾಗಿ ಶಾಸಕಾಂಗದ ಕಾರ್ಯ. ನ್ಯಾಯಾಲಯಗಳು ಇದನ್ನು ನಿರ್ಧರಿಸುವುದರಿಂದ ದೂರವಿರಬೇಕು.
ಸಮರ್ಥ ಶಾಸಕಾಂಗವು ಎಲ್ಲಾ ಗ್ರಾಮೀಣ, ಅರೆ-ಗ್ರಾಮೀಣ ಮತ್ತು ನಗರ ಜನಸಂಖ್ಯೆಯ ವಿಶಾಲ ದೃಷ್ಟಿಕೋನಗಳು ಮತ್ತು ಧ್ವನಿಯನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಧಾರ್ಮಿಕ ಪಂಗಡಗಳ ದೃಷ್ಟಿಕೋನಗಳನ್ನು ಗಮನದಲ್ಲಿಟ್ಟುಕೊಂಡು ಮದುವೆಯ ವ್ಯವಸ್ಥೆಯನ್ನು ನಿಯಂತ್ರಿಸುವ ವೈಯಕ್ತಿಕ ಕಾನೂನುಗಳನ್ನು ರೂಪಿಸಬೇಕಾಗುತ್ತದೆ. ಸಲಿಂಗ ವಿವಾಹವು ಹಿಂದೂ, ಮುಸ್ಲಿಂ, ಕ್ರೈಸ್ತ ಹೀಗೆ ಎಲ್ಲ ಧರ್ಮದಲ್ಲೂ ಅಸಾಂಪ್ರಾಯಿಕವಾದುದು ಮತ್ತು ಮಾನ್ಯತೆಯುಳ್ಳದ್ದಲ್ಲ.
ಮದುವೆ ಎಂಬುದೊಂದು ಕಾಯಿದೆಬದ್ಧ ಸಾಮಾಜಿಕ ಸಂಸ್ಥೆಯಾಗಿದ್ದು, ಇದನ್ನು ಭಾರತದ ಸಂವಿಧಾನದ 246ನೇ ವಿಧಿಯ ಅಡಿಯಲ್ಲಿ ಕಾಯಿದೆಯ ಮೂಲಕ ಸಮರ್ಥ ಶಾಸಕಾಂಗದಿಂದ ಮಾತ್ರ ರಚಿಸಬಹುದು, ಗುರುತಿಸಬಹುದು ಮತ್ತು ನಿಯಂತ್ರಿಸಬಹುದು. ಆದ್ದರಿಂದ ಇದನ್ನು ಪ್ರಜಾಸತ್ತಾತ್ಮಕವಾಗಿ ಕಾರ್ಯಸಾಧ್ಯ ಮತ್ತು ಕಾನೂನುಬದ್ಧ ಮೂಲವಾಗಿರುವ ಚುನಾಯಿತ ಪ್ರತಿನಿಧಿಗಳ ತೀರ್ಮಾನಕ್ಕೆ ಬಿಡಬೇಕು.
ಸಲಿಂಗ ವಿವಾಹವನ್ನು ಗುರುತಿಸುವುದು ಭಾರತೀಯ ಸಮಾಜದಲ್ಲಿ ಕೋಲಾಹಲ ಉಂಟುಮಾಡುತ್ತದೆ. ಮದುವೆಯು ಪುರುಷ ಮತ್ತು ಮಹಿಳೆಯ ನಡುವೆ ಮಾತ್ರ ನಡೆಯಬೇಕು. ಪ್ರಸ್ತುತ ವಿವಾಹ ಕಾನೂನುಗಳಲ್ಲಿನ ಹಸ್ತಕ್ಷೇಪವು ಸಮಾಜದಲ್ಲಿ ಹಾನಿ ಉಂಟುಮಾಡಬಹುದು. ಸಲಿಂಗ ವಿವಾಹ ಮೂಲಭೂತ ಹಕ್ಕಾಗುವುದಿಲ್ಲ.
“ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 377ರಲ್ಲಿ ಸಲಿಂಗಕಾಮವನ್ನು ಅಪರಾಧದಿಂದ ಮುಕ್ತಗೊಳಿಸಲಾಗಿದ್ದರೂ, ಅದು ಸಲಿಂಗ ವಿವಾಹಕ್ಕೆ ಪೂರಕವಾಗಲು ಸಾಧ್ಯವಿಲ್ಲ. ಅದು ವ್ಯಕ್ತಿಗಳ ವೈಯಕ್ತಿಕ ಖಾಸಗಿ ಅಂಶಗಳಿಗೆ, ಗೌಪ್ಯತೆಯ ಹಕ್ಕಿಗೆ, ವ್ಯಕ್ತಿಯ ವೈಯಕ್ತಿಕ ಸ್ವಭಾವಕ್ಕೆ ಸಂಬಂಧಪಟ್ಟದ್ದಾಗಿರುತ್ತದೆ. ಆದರೆ ಅದರಿಂದ ಮದುವೆಯ ವ್ಯವಸ್ಥೆಯನ್ನು ತಿದ್ದಲು ಸಾಧ್ಯವಿಲ್ಲ.
2018ರಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಒಂದೇ ಲಿಂಗದ ವ್ಯಕ್ತಿಗಳು ಸಮ್ಮತಿಯ ಲೈಂಗಿಕ ಸಂಭೋಗದಲ್ಲಿ ತೊಡಗಿದ್ದರೆ ಅದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ರ ಅಡಿಯಲ್ಲಿ ಕ್ರಿಮಿನಲ್ ಅಪರಾಧವಾಗದು. ಇದು ಖಾಸಗಿತನದ ಹಕ್ಕು. ಆದರೆ ಇದು ಚಾಲ್ತಿಯಲ್ಲಿರುವ ಕಾನೂನುಗಳಿಗೆ ವಿರುದ್ಧವಾಗಿ ಒಂದೇ ಲಿಂಗದ ಇಬ್ಬರು ವ್ಯಕ್ತಿಗಳು ಮದುವೆಯಾಗುವ ಹಕ್ಕನ್ನು ಪಡೆದಿದ್ದಾರೆ ಎಂದು ವಿಸ್ತರಿಸುವಂತಿಲ್ಲ.
ಮಕ್ಕಳ ಕತೆಯೇನು?
ಈ ಮದುವೆಯಿಂದ ಮಕ್ಕಳ ಮನಸ್ಸಿನ ಮೇಲೆ ಸಮಸ್ಯೆಯುಂಟು ಮಾಡುತ್ತದೆ ಎಂಬುದು ಕೇಂದ್ರದ ವಾದಗಳಲ್ಲಿ ಒಂದು. ಮಕ್ಕಳ ದತ್ತು, ವಿಚ್ಛೇದನದ ನಿರ್ವಹಣೆ, ಉತ್ತರಾಧಿಕಾರ ಇತ್ಯಾದಿಗಳಿಗೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಬಹಳಷ್ಟು ತೊಡಕುಗಳನ್ನು ಉಂಟುಮಾಡಲಿದೆ. ಸಲಿಂಗ ವಿವಾಹವು ಮಕ್ಕಳನ್ನು ಹೇಗೆ ಬೆಳೆಸಬಹುದು? ತಂದೆ- ತಂದೆ ಅಥವಾ ತಾಯಿ- ತಾಯಿಯನ್ನು ಮಾತ್ರ ಕಂಡ ಆ ಮಕ್ಕಳು ಮುಂದೆ ಹೇಗೆ ಬೆಳೆಯುತ್ತಾರೆ? ಇದು ಗಂಡು- ಹೆಣ್ಣಿನ ಮದುವೆ ಎಂಬ ವ್ಯವಸ್ಥೆಗೇ ಹೊಡೆತ ಅಲ್ಲವೇ? ಎಂದು ಸರ್ಕಾರ ಕೇಳಿದೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಸಲಿಂಗ ವಿವಾಹಕ್ಕೆ ಅನುಮತಿ, ಆತುರದ ತೀರ್ಮಾನ ಬೇಡ
ಸಲಿಂಗ ವಿವಾಹಗಳನ್ನು ಗುರುತಿಸದಿರುವುದು ಸಂವಿಧಾನದ ಭಾಗ IIIರ ಅಡಿಯಲ್ಲಿ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂಬ ಕಕ್ಷಿದಾರರ ವಾದವನ್ನು ಸರ್ಕಾರ ಒಪ್ಪಿಲ್ಲ. ಲಿವ್-ಇನ್ ಸಂಬಂಧಗಳು ಕೂಡ ಭಿನ್ನಲಿಂಗೀಯ ವಿವಾಹಗಳಂತೆ ಅದೇ ಸ್ಥಾನಮಾನವನ್ನು ವಿವಾಹ ಕಾಯಿದೆಯಡಿ ಪಡೆಯುವುದಿಲ್ಲ. ಹಾಗೆಂದು ಇಲ್ಲಿ ಯಾವುದೇ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿಲ್ಲ. ಸಲಿಂಗ ವಿವಾಹವನ್ನು ಗುರುತಿಸದಿರುವಲ್ಲಿ ಲಿಂಗದ ಆಧಾರದ ಮೇಲೆ ಯಾವುದೇ ತಾರತಮ್ಯವಿಲ್ಲ. ಆರ್ಟಿಕಲ್ 21ರ ಅಡಿಯಲ್ಲಿ ಬರುವ ಜೀವನ ಮತ್ತು ಸ್ವಾತಂತ್ರ್ಯದ ಹಕ್ಕಿನೊಳಗೆ “ಸಲಿಂಗ ವಿವಾಹದ ಅನುಮೋದನೆ” ಸೇರಿಸಿಕೊಂಡು ಓದಲಾಗುವುದಿಲ್ಲ ಎಂದಿದೆ.
ಆರೆಸ್ಸೆಸ್, ಜಮೀಯತ್ ವಿರೋಧ
ಹಿಂದೂ ಸಂಘಟನೆ ಆರೆಸ್ಸೆಸ್ ಹಾಗೂ ಮುಸ್ಲಿಂ ಸಂಘಟನೆ ಜಮೀಯತ್ ಉಲಮಾ ಇ ಹಿಂದ್ ಕೂಡ ಸಲಿಂಗವಿವಾಹವನ್ನು ವಿರೋಧಿಸಿವೆ. ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಎಂಬುದು 16 ಸಂಸ್ಕಾರಗಳಲ್ಲಿ ಒಂದು. ಅದೊಂದು ಹೊಣೆಗಾರಿಕೆಯೇ ಹೊರತು ಸುಖೋಪಭೋಗವಲ್ಲ ಎಂದು ಆರೆಸ್ಸೆಸ್ ಹೇಳಿದೆ. ಇದು ಹಿಂದೂ ಸಂಸ್ಕೃತಿಗೆ ಅಪಾಯವನ್ನು ತರಲಿದೆ ಎಂದಿದೆ. ಜಮೀಯತ್ ಕೂಡ ಇದೇ ಮಾದರಿಯಲ್ಲಿ ವಾದಿಸಿದೆ.
ಎಲ್ಲೆಲ್ಲಿ ಕಾನೂನುಬದ್ಧ?
ಜಗತ್ತಿನ 195 ದೇಶಗಳಲ್ಲಿ 29 ದೇಶಗಳಲ್ಲಿ ಮಾತ್ರ ಸಲಿಂಗ ವಿವಾಹವನ್ನು ಇದುವರೆಗೂ ಕಾನೂನಾತ್ಮಕವಾಗಿ ಮಾನ್ಯ ಮಾಡಲಾಗಿದೆ. ಮೊತ್ತಮೊದಲು ಇದಕ್ಕೆ ಮಾನ್ಯತೆ ನೀಡಿದ ದೇಶ ನೆದರ್‌ಲ್ಯಾಂಡ್ (2001). ನಂತರ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಬೆಲ್ಜಿಯಂ, ಸ್ಪೇನ್, ಕೆನಡಾ, ಆಸ್ಟ್ರೇಲಿಯಾ ಮುಂತಾದ 29 ದೇಶಗಳು ಮಾನ್ಯ ಮಾಡಿವೆ. ಆದರೆ ಭಾರತ, ಚೀನಾ ಮುಂತಾದ ಸಾಂಪ್ರದಾಯಿಕ ಹಿನ್ನೆಲೆಯ ದೇಶಗಳು, ಸೌದಿ ಅರೇಬಿಯಾ ಮುಂತಾದ ಇಸ್ಲಾಮಿಕ್ ಪ್ರಾಬಲ್ಯದ ರಾಷ್ಟ್ರಗಳು, ಇನ್ನೂ ಮಾನ್ಯತೆ ನೀಡಿಲ್ಲ. ಎಲ್ಲ ದೇಶಗಳಲ್ಲಿ ಇದನ್ನು ಧಾರ್ಮಿಕ ಗುರುಗಳು, ಮಠ ಮಾನ್ಯಗಳು ವಿರೋಧಿಸಿವೆ.
ಇದನ್ನೂ ಓದಿ: Same Sex Marriage: ಸಲಿಂಗ ವಿವಾಹ ನಗರದ ಮೇಲ್ ಸ್ತರದವರ ದೃಷ್ಟಿಕೋನವಷ್ಟೆ! ಅರ್ಜಿಗಳನ್ನು ವಜಾ ಮಾಡಲು ಸುಪ್ರೀಂಗೆ ಕೇಂದ್ರ ಮನವಿ