Site icon Vistara News

Medicine Price: ಜನರಿಗೆ ಬಿಗ್‌ ರಿಲೀಫ್‌; 800 ಔಷಧಗಳ ಬೆಲೆ ಏರಿಕೆ ಇಲ್ಲ ಎಂದ ಕೇಂದ್ರ

Medicine Price

False And Misleading: Central Government on reports of hike in medicine prices

ನವದೆಹಲಿ: ದೇಶದಲ್ಲಿ ಸುಮಾರು 800 ಅಗತ್ಯ ಔಷಧಗಳ ಬೆಲೆ (Medicine Price) ಏಪ್ರಿಲ್‌ 1ರಿಂದ ಏರಿಕೆಯಾಗಿದೆ. ಜನ ಸಾಮಾನ್ಯರಿಗೆ ಬೇಕಾಗಿರುವ ಔಷಧಗಳ ಬೆಲೆಯನ್ನು ಶೇ.10ರಿಂದ ಶೇ.12ರಷ್ಟು ಏರಿಕೆಯಾಗಿದೆ. ಇದರಿಂದ ಸಾರ್ವಜನಿಕರಿಗೆ ಬೆಲೆ ಏರಿಕೆಯ ಬಿಸಿ ತಾಗಿದೆ. ಅಡುಗೆ ಅನಿಲ ಸಿಲಿಂಡರ್‌, ಪೆಟ್ರೋಲ್‌, ಡೀಸೆಲ್‌ ಜತೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಔಷಧಗಳೂ ತುಟ್ಟಿಯಾಗಿರುವುದು ಜನರಿಗೆ ಭಾರಿ ಹೊಡೆತ ಬಿದ್ದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಔಷಧಗಳ ಬೆಲೆ ಏರಿಕೆ ಕುರಿತು ಮಾಧ್ಯಮಗಳಲ್ಲೂ ವರದಿಯಾಗಿದೆ. ಆದರೆ, ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು (Central Government) ಮಹತ್ವದ ಸ್ಪಷ್ಟನೆ ನೀಡಿದ್ದು, ಔಷಧಗಳ ಬೆಲೆಯೇರಿಕೆಯಾಗಿಲ್ಲ ಎಂದು ತಿಳಿಸಿದೆ.

“ಏಪ್ರಿಲ್‌ 1ರಿಂದ 500ಕ್ಕೂ ಅಧಿಕ ಔಷಧಗಳ ಬೆಲೆಯಲ್ಲಿ ಶೇ.12ರಷ್ಟು ಬೆಲೆ ಏರಿಕೆಯಾಗಿದೆ ಎಂಬ ವದಂತಿಗಳು, ವರದಿಗಳು ಸತ್ಯಕ್ಕೆ ದೂರವಾಗಿವೆ. ಜನರ ಹಾದಿ ತಪ್ಪಿಸಲು ಇಂತಹ ವರದಿಗಳನ್ನು ಪಸರಿಸಲಾಗಿದೆ. ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವು ಸಗಟು ಬೆಲೆ ಸೂಚ್ಯಂಕದ ಆಧಾರದ ಬೆಲೆ ಏರಿಕೆ ಮಾಡುತ್ತದೆ. ಆದರೆ, 782 ಔಷಧಗಳ ಬೆಲೆಯಲ್ಲಿ ಯಾವುದೇ ಏರಿಕೆಯಾಗಿಲ್ಲ. ಇನ್ನು ಸುಮಾರು 54 ಔಷಧಗಳ ಬೆಲೆಯು ಒಂದು ಪೈಸೆ ಮಾತ್ರ ಏರಿಕೆಯಾಗಿದೆ” ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ತಿಳಿಸಿದೆ.

ಅಗತ್ಯ ಔಷಧಗಳ ಪಟ್ಟಿಯಲ್ಲಿ ಪ್ಯಾರಸಿಟಮಾಲ್‌ನಂತಹ ಮಾತ್ರೆಗಳು, ಬ್ಯಾಕ್ಟೀರಿಯಾದ ಸೋಂಕುಗಳಿಗೆ ಚಿಕಿತ್ಸೆ ನೀಡಲು ಬಳಸುವ ಅಜಿಥ್ರೊಮೈಸಿನ್‌ನಂತಹ ಆ್ಯಂಟಿಬಯಾಟಿಕ್ಸ್‌, ರಕ್ತಹೀನತೆ ವಿರೋಧಿ ಔಷಧಗಳು, ಜೀವಸತ್ವಗಳು ಮತ್ತು ಖನಿಜಗಳು ಸೇರಿವೆ. ಜತೆಗೆ ಮಧ್ಯಮದಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗುವ ಕೋವಿಡ್ -19 ರೋಗಿಗಳ ಚಿಕಿತ್ಸೆಗೆ ಬಳಸುವ ಕೆಲವು ಔಷಧಗಳು ಮತ್ತು ಸ್ಟೀರಾಯ್ಡ್‌ಗಳ ಬೆಲೆ ಶೇ.12ರಷ್ಟು ಹೆಚ್ಚಾಗಿದೆ ಎಂಬ ಸುದ್ದಿ ಹರಿದಾಡಿತ್ತು.

ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿ (National List of Essential Medicines)ಯ ಅಡಿಯಲ್ಲಿ ಬರುವ ಔಷಧಗಳ ಬೆಲೆಯಲ್ಲಿ .0055% ಹೆಚ್ಚಳಕ್ಕೆ ಸರ್ಕಾರ ಅನುಮತಿ ನೀಡಲು ಸಜ್ಜಾಗಿದೆ. ಕಳೆದ ವರ್ಷ ಮತ್ತು 2022ರಲ್ಲಿ ಈ ಔಷಧಗಳ ಬೆಲೆಗಳಲ್ಲಿ 12% ಮತ್ತು 10%ದಷ್ಟು ಭಾರಿ ಹೆಚ್ಚಳದ ನಂತರ ಮತ್ತೊಮ್ಮೆ ದರ ಹೆಚ್ಚಿಸಲಾಗುತ್ತಿದೆ. ನಿಗದಿತ ಔಷಧಗಳ ಬೆಲೆಗಳ ಬದಲಾವಣೆಯನ್ನು ವರ್ಷಕ್ಕೊಮ್ಮೆ ಅನುಮತಿಸಲಾಗುತ್ತದೆ ಎಂದು ಹೇಳಲಾಗಿತ್ತು.

ಇದನ್ನೂ ಓದಿ: Benefits Of Ginger: ಶುಂಠಿ ಘಾಟು, ಘಮಕ್ಕೆ ಮಾತ್ರವಲ್ಲ; ಔಷಧಕ್ಕೂ ಬೇಕು!

ಕೆಲ ವರ್ಷಗಳಲ್ಲಿ ಎಷ್ಟು ಏರಿಕೆ?

ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಔಷಧ ತಯಾರಕರು ದರ ವೃದ್ಧಿಸಲು ಆಗ್ರಹಿಸುತ್ತಿದ್ದಾರೆ. ಉದ್ಯಮದ ತಜ್ಞರ ಪ್ರಕಾರ, ಕಳೆದ ಕೆಲವು ವರ್ಷಗಳಲ್ಲಿ ಕೆಲವು ಪ್ರಮುಖ ಔಷಧೀಯ ಪದಾರ್ಥಗಳ ಬೆಲೆಗಳು 15% ಮತ್ತು 130% ನಡುವೆ ಹೆಚ್ಚಾಗಿದೆ. ಜತೆಗೆ ಪ್ಯಾರಸಿಟಮಾಲ್ ಬೆಲೆ 130% ಮತ್ತು ಎಕ್ಸಿಪಿಯೆಂಟ್‌ಗಳ ಬೆಲೆ 18-262% ಹೆಚ್ಚಾಗಿದೆ. ಗ್ಲಿಸರಿನ್ ಮತ್ತು ಪ್ರೊಪಿಲೀನ್ ಗ್ಲೈಕಾಲ್, ಸಿರಪ್‌ಗಳು ಸೇರಿದಂತೆ ಪ್ರತಿ ಔಷಧ ತಯಾರಿಕೆಯಲ್ಲಿ ಬಳಸುವ ದ್ರಾವಕಗಳು ಕ್ರಮವಾಗಿ 263% ಮತ್ತು 83%ದಷ್ಟು ದುಬಾರಿಯಾಗಿವೆ. ಮಧ್ಯವರ್ತಿಗಳ ಬೆಲೆಗಳು ಸಹ 11% ಮತ್ತು 175% ನಡುವೆ ಹೆಚ್ಚಾಗಿದೆ. ಪೆನ್ಸಿಲಿನ್ ಜಿ 175% ದುಬಾರಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version