ಬೆಂಗಳೂರು: ಶಂಕರಾಭರಣಂ, ಸಾಗರ ಸಂಗಮಂ, ಸ್ವಾತಿ ಮುತ್ಯಂ ಮತ್ತು ಸ್ವರ್ಣ ಕಮಲಂ ಮುಂತಾದ ಅಪ್ರತಿಮ ಚಿತ್ರಗಳ ಮೂಲಕ ಜನಪ್ರಿಯರಾಗಿದ್ದ ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ, ನಿರ್ದೇಶಕ ಕೆ.ವಿಶ್ವನಾಥ್ ಅವರು ಹೈದರಾಬಾದ್‌ನ ತಮ್ಮ ನಿವಾಸದಲ್ಲಿ ಗುರುವಾರ ಕೊನೆಯುಸಿರೆಳೆದರು.
ಐದು ಬಾರಿ ರಾಷ್ಟ್ರ ಪ್ರಶಸ್ತಿ ವಿಜೇತರಾಗಿದ್ದ ಅವರಿಗೆ 92 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು.
ವಿಶ್ವನಾಥ್ ಅವರು ಮದ್ರಾಸಿನ ವಾಹಿನಿ ಸ್ಟುಡಿಯೋದಲ್ಲಿ ಆಡಿಯೋಗ್ರಾಫರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಸೌಂಡ್ ಇಂಜಿನಿಯರ್ ಆಗಿ ಅಲ್ಪಾವಧಿ ಸೇವೆ ಸಲ್ಲಿಸಿದ ನಂತರ, ಚಲನಚಿತ್ರ ನಿರ್ಮಾಪಕ ಅದುರ್ತಿ ಸುಬ್ಬಾರಾವ್ ಜತೆಗೆ ಚಲನಚಿತ್ರ ನಿರ್ಮಾಣ ಪ್ರಾರಂಭಿಸಿದರು. 1951ರ ತೆಲುಗು ಚಲನಚಿತ್ರ ಪಾತಾಳ ಭೈರವಿಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. 1965ರಲ್ಲಿ ಆತ್ಮಗೌರವಂ ಚಲನಚಿತ್ರದ ಮೂಲಕ ಚೊಚ್ಚಲ ನಿರ್ದೇಶನ ಮಾಡಿದರು. ಇದು ರಾಜ್ಯ ನಂದಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.
1980ರ ತೆಲುಗು ಚಲನಚಿತ್ರ ಶಂಕರಾಭರಣಂ ಹಿಟ್ ಆಯಿತು. ಇದರೊಂದಿಗೆ ವಿಶ್ವನಾಥ್ ರಾಷ್ಟ್ರೀಯ ಸುದ್ದಿಯಾದರು. ಎರಡು ವಿಭಿನ್ನ ತಲೆಮಾರುಗಳ ಕಲೆ ಹಾಗೂ ಜೀವನದ ಕುರಿತ ದೃಷ್ಟಿಕೋನ, ಕರ್ನಾಟಕ ಸಂಗೀತ ಮತ್ತು ಪಾಶ್ಚಿಮಾತ್ಯ ಸಂಗೀತದ ನಡುವಿನ ಅಂತರವನ್ನು ಚಲನಚಿತ್ರವು ಹೇಳುತ್ತದೆ. ಶಂಕರಭರಣಂ ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ನಂತರ ಇದನ್ನು ಹಿಂದಿಯಲ್ಲಿ ಸುರ್ ಸಂಗಮ್ ಎಂದು ವಿಶ್ವನಾಥ್ ಮತ್ತೆ ನಿರ್ದೇಶಿಸಿದರು.
ಶಂಕರಾಭರಣಂ ಚಿತ್ರದ ಯಶಸ್ಸಿನ ನಂತರ, ವಿಶ್ವನಾಥ್ ಅವರು ಕಲೆಯನ್ನು ಕಥಾವಸ್ತುವಾಗಿ ಹೊಂದಿದ ಇನ್ನೂ ಅನೇಕ ಚಲನಚಿತ್ರಗಳನ್ನು ಮಾಡಿದರು. ವಿಶೇಷವಾಗಿ ಸಂಗೀತವನ್ನು ಅದರ ಹಿನ್ನೆಲೆಯಾಗಿಟ್ಟುಕೊಂಡರು. ಸಾಗರ ಸಂಗಮಂ, ಸ್ವಾತಿ ಕಿರಣಂ, ಸ್ವರ್ಣ ಕಮಲಂ, ಶ್ರುತಿಲಯಲು ಮತ್ತು ಸ್ವರಾಭಿಷೇಕಂ ಇವುಗಳಲ್ಲಿ ಕೆಲವು.
ಅವರ 1985ರ ತೆಲುಗು ಚಲನಚಿತ್ರ ಸ್ವಾತಿಮುತ್ಯಂದಲ್ಲಿ, ಯುವ ವಿಧವೆಯ ರಕ್ಷಣೆಗೆ ಬರುವ ಮುಗ್ಧ ವ್ಯಕ್ತಿಯಾಗಿ ಕಮಲ್ ಹಾಸನ್ ಕೇಂದ್ರ ಪಾತ್ರದಲ್ಲಿ ಕಾಣಿಸಿಕೊಂಡರು. ಇದು ಆಸ್ಕರ್ ಪ್ರಶಸ್ತಿಗಳಿಗಾಗಿ ಅತ್ಯುತ್ತಮ ಭಾಷಾ ವಿದೇಶಿ ಚಲನಚಿತ್ರಕ್ಕಾಗಿ ಭಾರತದಿಂದ ಪ್ರವೇಶ ಪಡೆಯಿತು.
ವಿಶ್ವನಾಥ್ ಅವರು 1979ರ ಸರ್ಗಮ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇದು ಅವರ ಸ್ವಂತ ಚಲನಚಿತ್ರ ಸಿರಿ ಸಿರಿ ಮುವ್ವದ ರಿಮೇಕ್. ಕಾಮ್ಚೋರ್, ಶುಭ್ ಕಾಮ್ನಾ, ಜಗ ಉತಾ ಇನ್ಸಾನ್, ಸಂಜೋಗ್, ಈಶ್ವರ್ ಮತ್ತು ಧನ್ವಾನ್ ಅವರ ಇತರ ಜನಪ್ರಿಯ ಹಿಂದಿ ಚಲನಚಿತ್ರಗಳು.
ಅವರು ಬಾಲಿವುಡ್‌ನಲ್ಲಿ ರಾಕೇಶ್ ರೋಷನ್ ಅವರ ಜತೆ ಸಹಯೋಗದಲ್ಲಿ ಜನಪ್ರಿಯರಾದರು. ಐಎಎನ್‌ಎಸ್‌ಗೆ ನೀಡಿದ ಸಂದರ್ಶನದಲ್ಲಿ ರಾಕೇಶ್ ರೋಷನ್ ಅವರು, ಚಲನಚಿತ್ರ ನಿರ್ಮಾಣದ ಬಗ್ಗೆ ಎಲ್ಲವನ್ನೂ ತಾನು ವಿಶ್ವನಾಥ್ ಅವರಿಂದ ಕಲಿತೆ ಎಂದಿದ್ದರು.
1992ರಲ್ಲಿ ಅವರಿಗೆ ಪದ್ಮಶ್ರೀ ಮತ್ತು 2017ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಯಿತು. ಅವರು ನಾಲ್ಕು ದಶಕಗಳ ವೃತ್ತಿಜೀವನದಲ್ಲಿ ಎಂಟು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಅವರು ವಿಶ್ವನಾಥ್ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ʼʼಸಂಪ್ರದಾಯ, ಆರ್ದ್ರತೆ, ಹೃದಯವಂತಿಕೆ, ಸಂಗೀತ, ನೃತ್ಯ, ಪ್ರೀತಿ… ನಿಮ್ಮ ಚಲನಚಿತ್ರಗಳು ನನ್ನ ಬಾಲ್ಯವನ್ನು ಮಾನವೀಯತೆ ಮತ್ತು ಕೌತುಕದಿಂದ ತುಂಬಿದವುʼ ಎಂದು ಟ್ವೀಟ್ ಮಾಡಿದ್ದಾರೆ.