ನವದೆಹಲಿ: 2,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಮಾದಕ ವಸ್ತುಗಳನ್ನು ದೇಶದಿಂದ ಕಳ್ಳ ಸಾಗಣೆ ಮಾಡಿದ ಆರೋಪದ ಮೇಲೆ ಚಲನಚಿತ್ರ ನಿರ್ಮಾಪಕನನ್ನು ಬಂಧಿಸಲಾಗಿದೆ. ತಮಿಳು ಚಿತ್ರೋದ್ಯಮದಲ್ಲಿ ತೊಡಗಿಸಿಕೊಂಡಿದ್ದ, ಡಿಎಂಕೆ ಮಾಜಿ ಕಾರ್ಯಕರ್ತ ಜಾಫರ್ ಸಾದಿಕ್ (Jaffer Sadiq)ನನ್ನು ನಾಲ್ಕು ತಿಂಗಳ ಹುಡುಕಾಟದ ನಂತರ ಬಂಧಿಸಲಾಗಿದೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಶನಿವಾರ ತಿಳಿಸಿದೆ.
ಭಾರತ-ಆಸ್ಟ್ರೇಲಿಯಾ-ನ್ಯೂಜಿಲೆಂಡ್ ಮಾದಕ ವಸ್ತು ಕಳ್ಳಸಾಗಣೆ ಜಾಲದ ಕಿಂಗ್‌ಪಿನ್ ಸಾದಿಕ್ ಎಂದು ಎನ್‌ಸಿಬಿ ತಿಳಿಸಿದೆ. ಈತ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗೆ 2,000 ಕೋಟಿ ರೂ.ಗಳ ಮಾದಕ ವಸ್ತುಗಳನ್ನು ಕಳ್ಳ ಸಾಗಣೆ ಮಾಡಿದ್ದಾನೆ ಎಂದು ಹೇಳಿದೆ. ಸಾದಿಕ್ 3,500 ಕೆಜಿ ಸ್ಯೂಡೋಪೆಡ್ರಿನ್ (Pseudoephedrine) ಅನ್ನು 45 ಬಾರಿ ವಿದೇಶಕ್ಕೆ ಕಳುಹಿಸಿದ್ದಾನೆ” ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈತ ಇದುವರೆಗೆ ನಾಲ್ಕು ಚಿತ್ರಗಳನ್ನು ನಿರ್ಮಿಸಿದ್ದು, ಈ ಪೈಕಿ ಒಂದು ಸಿನಿಮಾ ಇದೇ ತಿಂಗಳು ಬಿಡುಗಡೆಯಾಗುವ ಸಾಧ್ಯತೆ ಇದೆ.
ಮಧುರೈನಲ್ಲಿ ಇಬ್ಬರು ರೈಲು ಪ್ರಯಾಣಿಕರಿಂದ ಮತ್ತು ಚೆನ್ನೈನ ಡಂಪ್ ಯಾರ್ಡ್‌ನಿಂದ 180 ಕೋಟಿ ರೂ. ಮೌಲ್ಯದ ಮೆಥಾಂಫೆಟಮೈನ್ (Methamphetamine) ಅನ್ನು ಅಧಿಕಾರಿಗಳು ವಶಪಡಿಸಿಕೊಂಡ ಒಂದು ವಾರದ ನಂತರ ಸಾದಿಕ್‌ನನ್ನು ಬಂಧಿಸಲಾಗಿದೆ. ಫೆಬ್ರವರಿ 29ರಂದು ಈ ಮಾದಕ ವಸ್ತುಗಳನ್ನು ಶ್ರೀಲಂಕಾಕ್ಕೆ ಕಳ್ಳ ಸಾಗಣೆ ಮಾಡಲು ಮುಂದಾದಾಗ ಆರೋಪಿಗಳು ಸಿಕ್ಕಿ ಬಿದ್ದಿದ್ದರು.
ʼಐಸ್ʼ ಅಥವಾ ʼಕ್ರಿಸ್ಟಲ್ ಮೆಥ್ʼ ಎಂದೂ ಕರೆಯಲ್ಪಡುವ ಮೆಥಾಂಫೆಟಮೈನ್ ಸೈಕೋಸ್ಟಿಮ್ಯುಲಂಟ್ ಔಷಧಿಯಾಗಿದ್ದು, ಇದು ಕೊಕೇನ್‌ಗೆ ಹೋಲುತ್ತದೆ. ಇದರ ನಿರಂತರ ಸೇವನೆ ಜೀವಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ
ಡ್ರಗ್ಸ್ ಜಾಲದ ಪತ್ತೆಯ ನಂತರ, ಬಿಜೆಪಿ ಮುಖಂಡ ಕೆ.ಅಣ್ಣಾಮಲೈ ಆಡಳಿತಾರೂಢ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದ್ದರು ಮತ್ತು ತಮಿಳುನಾಡು ಭಾರತದ ಮಾದಕ ವಸ್ತುಗಳ ರಾಜಧಾನಿಯಾಗಿ ಬದಲಾಗಿದೆ ಎಂದು ಟೀಕಿಸಿದ್ದರು. “ಡಿಎಂಕೆ ಕಾರ್ಯಕರ್ತರ ಸಂಸ್ಥೆಗಳ ಮೇಲೆ ಎನ್‌ಸಿಬಿ ದಾಳಿ ನಡೆಸುತ್ತಿದೆ. ಮಧುರೈನಲ್ಲಿ 30 ಕೆಜಿ ಮೆಥಾಂಫೆಟಮೈನ್ ಅನ್ನು ಕಂದಾಯ ಗುಪ್ತಚರ ನಿರ್ದೇಶನಾಲಯವು ವಶಪಡಿಸಿಕೊಂಡಿದೆ. ಇದು ಕಳವಳಕಾರಿ” ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.
ಅಲ್ಲದೆ ಎನ್‌ಸಿಬಿಯ ಜ್ಞಾನೇಶ್ವರ್ ಸಿಂಗ್ ಅವರು ಡ್ರಗ್ಸ್ ಜಾಲದ ಕುರಿತು ಮಾಹಿತಿ ನೀಡಿ, “ಕೆಲವು ವರ್ಷಗಳಿಂದ ದೆಹಲಿಯಿಂದ ನ್ಯೂಜಿಲ್ಯಾಂಡ್ ಹಾಗೂ ಆಸ್ಟ್ರೇಲಿಯಾಗೆ 2 ಸಾವಿರ ಕೋಟಿ ರೂ. ಮೌಲ್ಯದ ಡ್ರಗ್ಸ್‌ಅನ್ನು ಅಕ್ರಮವಾಗಿ ಸಾಗಣೆ ಮಾಡಿರುವ ಕುರಿತು ನಿಖರ ಮಾಹಿತಿ ಮೇರೆಗೆ ತನಿಖೆ ನಡೆಸಲಾಗುತ್ತಿದೆ. ಆಹಾರ ಪದಾರ್ಥಗಳು ಹಾಗೂ ಒಣಗಿದ ಕೊಬ್ಬರಿ ಪುಡಿಯಲ್ಲಿ ಮಾದಕ ವಸ್ತುವನ್ನು ಮಿಶ್ರಣ ಮಾಡಿ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್‌ಗೆ ಸಾಗಣೆ ಮಾಡಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ” ಎಂದು ವಿವರಿಸಿದ್ದರು.
ಇದನ್ನೂ ಓದಿ: ಮಿಡ್‌ನೈಟ್ ಸುಂದರಿ ವಿಡಿಯೊ ಕಾಲ್ ಬಲೆಗೆ ಬಿದ್ದ 71 ವರ್ಷದ ಡಾಕ್ಟರ್; 9 ಲಕ್ಷ ರೂ. ಹೊಗೆ
ಈ ಅಂತಾರಾಷ್ಟ್ರೀಯ ಡ್ರಗ್ ಮಾಫಿಯಾಕ್ಕೆ ಸಂಬಂಧಿಸಿದ ಇತರ ಮೂವರನ್ನು ಇತ್ತೀಚೆಗೆ ದೆಹಲಿಯಲ್ಲಿ ಎನ್‌ಸಿಬಿ ಬಂಧಿಸಿತ್ತು. ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಕೂಡ ಡ್ರಗ್ಸ್ ತನಿಖೆಯಲ್ಲಿ ಭಾರತೀಯ ಏಜೆನ್ಸಿಯೊಂದಿಗೆ ಸಹಕರಿಸುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ