Site icon Vistara News

Fire Accident: ಚಲಿಸುತ್ತಿದ್ದ ಬಸ್‌ನಲ್ಲಿ ಕಾಣಿಕೊಂಡ ಬೆಂಕಿ; 10 ಮಂದಿ ಭಕ್ತರ ಸಜೀವ ದಹನ

Fire Accident

Fire Accident

ಚಂಡಿಗಢ: ಹರಿಯಾಣದ ಕುಂಡಲಿ-ಮನೇಸರ್-ಪಲ್ವಾಲ್ ಎಕ್ಸ್‌ಪ್ರೆಸ್‌ ವೇಯಲ್ಲಿ ಶುಕ್ರವಾರ ರಾತ್ರಿ ನಡೆದ ಭೀಕರ ರಸ್ತೆ ಅವಘಡದಲ್ಲಿ 10 ಮಂದಿ ಮೃತಪಟ್ಟು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬಸ್‌ಗೆ ಬೆಂಕಿ ಹತ್ತಿಕೊಂಡು ಈ ಅವಘಡ ನಡೆದಿದೆ. ಉತ್ತರ ಪ್ರದೇಶದ ಮಥುರಾ ಮತ್ತು ವೃಂದಾವನಕ್ಕೆ ತೀರ್ಥಯಾತ್ರೆಯಿಂದ ಕೈಗೊಂಡು ಹಿಂದಿರುಗುತ್ತಿದ್ದಾಗ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಭಕ್ತರು ಸುಟ್ಟು ಕರಕಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ (Fire Accident).

ಬಸ್‌ನಲ್ಲಿ ಪಂಜಾಬ್ ಮೂಲದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 60ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಶನಿವಾರ ಮುಂಜಾನೆ 1.30ರ ಸುಮಾರಿಗೆ ಬಸ್‌ನ ಹಿಂಭಾಗದಲ್ಲಿ ಬೆಂಕಿಯ ಕಿಡಿ ಹತ್ತಿಕೊಂಡಿರುವುದು ಗಮನಿಸಿ ಚಾಲಕನನ್ನು ಎಚ್ಚರಿಸಲು ಪ್ರಯತ್ನಿಸಿದ್ದೆವು. ಆದರೆ ಅಷ್ಟರಲ್ಲಿ ಅವಘಡ ಸಂಭವಿಸಿತು ಎಂದು ಬದುಕುಳಿದವರು ತಿಳಿಸಿದ್ದಾರೆ.

ಹೆಚ್ಚುತ್ತಿರುವ ಬೆಂಕಿಯನ್ನು ನೋಡಿದ ಬೈಕ್ ಸವಾರನೊಬ್ಬ ಬಸ್ ಅನ್ನು ಹಿಂಬಾಲಿಸಿ ನಿಲ್ಲಿಸಲು ಚಾಲಕನಿಗೆ ಎಚ್ಚರಿಕೆ ನೀಡಿದ್ದ. ಬಳಿಕ ಸ್ಥಳೀಯರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಬಸ್‌ನ ಮುಂಭಾಗದಲ್ಲಿದ್ದ ಹಲವರನ್ನು ರಕ್ಷಿಸಲಾಯಿತು. ಬೆಂಕಿ ಕಾಣಿಸಿಕೊಳ್ಳಲಿರುವ ಕಾರಣ ಇನ್ನೂ ಪತ್ತೆಯಾಗಿಲ್ಲ. ಘಟನೆ ಬಗ್ಗೆ ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಟ್ರಕ್​ಗೆ ಬಸ್ ಡಿಕ್ಕಿ ಹೊಡೆದು ಐವರು ಸಾವು

ಜೈಪುರ: ರಾಜಸ್ಥಾನ- ಉತ್ತರ ಪ್ರದೇಶ ಮಾರ್ಗದ ಭರತ್‌ಪುರದಲ್ಲಿ ಶುಕ್ರವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಚಾಲಕನ ತಪ್ಪಿನಿಂದಾಗಿ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 12 ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಬಸ್ ಮತ್ತು ಟ್ರಕ್ ಎರಡೂ ಜೈಪುರದಿಂದ ಆಗ್ರಾಕ್ಕೆ ಹೋಗುತ್ತಿದ್ದವು. ಟ್ರಕ್​ಗೆ ಬಸ್ ಹಿಂದಿನಿಂದ ಡಿಕ್ಕಿ ಹೊಡೆದಿತ್ತು.

ಕೊಪ್ಪಳ ಬಳಿ ಟ್ರ್ಯಾಕ್ಟರ್‌ಗೆ ಬಸ್ ಡಿಕ್ಕಿಯಾಗಿ ಮೂವರ ದುರ್ಮರಣ

ಕೊಪ್ಪಳ: ಟ್ರ್ಯಾಕ್ಟರ್‌ಗೆ ಬಸ್ ಡಿಕ್ಕಿಯಾಗಿ ಸ್ಥಳದಲ್ಲಿಯೇ ಮೂವರು ಮೃತಪಟ್ಟು, 20ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿರುವ ಘಟನೆ ಕೊಪ್ಪಳ ತಾಲೂಕಿನ‌ ನಿಂಗಾಪುರದ ಬಳಿಯ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮಸ್ಥರಾದ ಬಸವರಾಜ (22), ಮುತ್ತಪ್ಪ (22), ಕೊಂಡಪ್ಪ (60) ಮೃತರು. ಹುಲಿಗೆಮ್ಮ ದೇವಸ್ಥಾನಕ್ಕೆ ಹೋಗಿ ಮರಳಿ ಊರಿಗೆ ಹೋಗುವಾಗ ದುರ್ಘಟನೆ ನಡೆದಿದೆ. ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ‌ ನಡೆದಿದೆ.

ಮತ ಚಲಾಯಿಸಿ ತೆರಳುತ್ತಿದ್ದ 6 ಮಂದಿ ಸಜೀವ ದಹನ

ಅಮರಾವತಿ: ಆಂಧ್ರ ಪ್ರದೇಶದ ಪಲ್ನಾಡು ಜಿಲ್ಲೆಯ ಚಿಲಕಲೂರಿಪೇಟೆಯಲ್ಲಿ ಬುಧವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬಸ್‌ ಹೊತ್ತಿ ಉರಿದು 6 ಮಂದಿ ಸಜೀವ ದಹನವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಲವು ಮಂದಿಗೆ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿರಾಲಾದಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಖಾಸಗಿ ಟ್ರಾವೆಲ್ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಅದು ಚಾಲಕನ ನಿಯಂತ್ರಣ ಕಳೆದುಕೊಂಡು ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆಯಿತು. ಬಳಿಕ ಬೆಂಕಿ ಇಡೀ ಬಸ್‌ಗೆ ವ್ಯಾಪಿಸಿದ್ದು ಸಂಪೂರ್ಣವಾಗಿ ಸುಟ್ಟು ಹೋಗಿದೆ. 

ಇದನ್ನೂ ಓದಿ: Road Accident: ಬೈಕ್‌ಗಳ ನಡುವೆ ಡಿಕ್ಕಿ; ಒಬ್ಬ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಂಭೀರ ಗಾಯ

Exit mobile version