Site icon Vistara News

Fire Tragedy: ಹೋಟೆಲ್‌ನಲ್ಲಿ ಭೀಕರ ಅಗ್ನಿ ದುರಂತ; 6 ಮಂದಿ ಸಾವು

Fire Tragedy

Fire Tragedy

ಪಾಟ್ನಾ: ಬಿಹಾರದಲ್ಲಿ ಗುರುವಾರ (ಏಪ್ರಿಲ್‌ 25) ಭೀಕರ ಅಗ್ನಿ ಅವಘಢ (Fire Tragedy) ಸಂಭವಿಸಿದೆ. ಪಾಟ್ನಾ ಜಂಕ್ಷನ್ ರೈಲ್ವೆ ನಿಲ್ದಾಣದ ಸಮೀಪವಿರುವ ಹೋಟೆಲ್‌ನಲ್ಲಿ ನಡೆದ ಈ ಅಗ್ನಿ ಅವಘಡದಲ್ಲಿ 6 ಮಂದಿ ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, 30ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಅವರನ್ನು ಸುರಕ್ಷಿತವಾಗಿ ಹೊರಗೆ ಕರೆ ತರಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾರಣ ಏನು?

ಸಿಲಿಂಡರ್ ಸ್ಫೋಟದಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಸುರಕ್ಷತಾ ನಿಯಮಗಳನ್ನು ಅನುಸರಿಸದ ಕಾರಣ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಗೃಹ ರಕ್ಷಕ ದಳ ಮತ್ತು ಅಗ್ನಿಶಾಮಕ ದಳದ ಡಿಜಿ ಶೋಭಾ ಒಹತ್ಕರ್ ಮಾಹಿತಿ ನೀಡಿ, ʼʼಬೆಂಕಿಯನ್ನು ಹತೋಟಿಗೆ ತಂದಿದ್ದೇವೆ. ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಮಾಹಿತಿ ಬಂದಿತ್ತು. ಸರಿಯಾದ ತನಿಖೆಯ ಮೂಲಕ ನಿಖರವಾದ ಕಾರಣವನ್ನು ಕಂಡುಹಿಡಿಯಲಾಗುವುದು ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುವುದುʼʼ ಎಂದು ತಿಳಿಸಿದ್ದಾರೆ.

ʼʼನಾವು 16,000ಕ್ಕೂ ಹೆಚ್ಚು ಹೋಟೆಲ್‌ಗಳನ್ನು ಪರಿಶೀಲಿಸಿದ್ದೇವೆ. ಇನ್ನೂ ಪರಿಶೀಲನೆ ನಡೆಯುತ್ತಿದೆ. ಈ ವೇಳೆ ಅವರಿಗೆ ನಿರ್ದಿಷ್ಟ ಸೂಚನೆಗಳನ್ನು ನೀಡಲಾಗುತ್ತದೆ. ಕೆಲವರು ನಮ್ಮ ಸೂಚನೆಯನ್ನು ಅನುಸರಿಸುತ್ತಾರೆ ಮತ್ತು ಕೆಲವರು ಅನುಸರಿಸುವುದಿಲ್ಲ. ಈ ಘಟನೆಗೆ ಅಂತಹ ನಿರ್ಲಕ್ಷ್ಯವೇ ಕಾರಣ. ಸಿಲಿಂಡರ್ ಸ್ಫೋಟದಿಂದಾಗಿ ಬೆಂಕಿ ಕಾಣಿಸಿಕೊಂಡಿದೆʼʼ ಎಂದು ಶೋಭಾ ಒಹತ್ಕರ್ ಹೇಳಿದ್ದಾರೆ.

ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಮಿಶ್ರಾ ಮಾಹಿತಿ ನೀಡಿ, ʼʼಜನದಟ್ಟಣೆಯ ಪ್ರದೇಶದಲ್ಲಿರುವ ಕಟ್ಟಡದಿಂದ 30ಕ್ಕೂ ಹೆಚ್ಚು ಜನರನ್ನು ಅಗ್ನಿಶಾಮಕ ದಳದವರು ರಕ್ಷಿಸಿದ್ದಾರೆ. ಮೃತರ ಗುರುತುಗಳು ಇನ್ನೂ ಪತ್ತೆಯಾಗಿಲ್ಲ. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ” ಎಂದು ತಿಳಿಸಿದ್ದಾರೆ. ಹೋಟೆಲ್‌ನ ಬಲಭಾಗದಲ್ಲಿರುವ ಎರಡೂ ಹೋಟೆಲ್‌ಗಳು ಬೆಂಕಿಗೆ ಆಹುತಿಯಾಗಿವೆ. ಘಟನೆಯಲ್ಲಿ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಛಿದ್ರವಾದ ರೆಸ್ಟೋರೆಂಟ್​, 31 ಮಂದಿ ದುರ್ಮರಣ; ರಸ್ತೆಗೆ ಬಿದ್ದ ಹೆಣಗಳು, ಅವಶೇಷಗಳು

ಬಣ್ಣದ ಫ್ಯಾಕ್ಟರಿಯಲ್ಲಿ ಭೀಕರ ಬೆಂಕಿ ದುರಂತ, 11 ಸಾವು

ಕೆಲವು ದಿನಗಳ ಹಿಂದೆ ದೆಹಲಿಯ ಅಲಿಪುರ್ ಪ್ರದೇಶದಲ್ಲಿರುವ ಬಣ್ಣದ ಫ್ಯಾಕ್ಟರಿಯಲ್ಲಿ (Paint Factory) ಸಂಭವಿಸಿದ ಭೀಕರ ಬೆಂಕಿ ಆಕಸ್ಮಿಕದಲ್ಲಿ (Fire Tragedy) ಕನಿಷ್ಠ 11 ಜನರು ಸಾವನ್ನಪ್ಪಿದ್ದರು ಮತ್ತು ನಾಲ್ವರು ಗಾಯಗೊಂಡಿದ್ದರು. ಅಗ್ನಿಶಾಮಕ ದಳದ ಪ್ರಕಾರ ಎರಡು ಬಣ್ಣ ಮತ್ತು ರಾಸಾಯನಿಕ ಗೋದಾಮುಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

ಬಣ್ಣದ ಕಾರ್ಖಾನೆಯಲ್ಲಿ ಭಾರಿ ಪ್ರಮಾಣದ ರಾಸಾಯನಿಕಗಳನ್ನು ಶೇಖರಿಸಿಡಲಾಗಿದ್ದು, ಬೆಂಕಿಯ ಆರ್ಭಟ ಇನ್ನೂ ಜೋರಾಗಿತ್ತು. ರಾಸಾಯನಿಕಗಳು ಹಾಗೂ ಪೇಂಟ್‌ ಸುಟ್ಟಿದ್ದರಿಂದ ಉಂಟಾದ ಹೊಗೆ ಹಾಗೂ ದುರ್ವಾಸನೆ ಪರಿಸರದಲ್ಲಿ ದಟ್ಟವಾಗಿ ಕವಿದಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರು. ಪೊಲೀಸರ ಪ್ರಕಾರ, ಬೆಂಕಿಯ ಮೊದಲು ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿತ್ತು.

ಸಂಜೆ 5.25ಕ್ಕೆ ಬೆಂಕಿ ಆಕಸ್ಮಿಕದ ಬಗ್ಗೆ ಕರೆ ಬಂತು. ಕೂಡಲೇ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ನಂದಿಸಲಾಯಿತು. ಬೆಂಕಿ ನಂದಿಸಿ ಸಿಬ್ಬಂದಿ ಒಳಕ್ಕೆ ಪ್ರವೇಶಿಸುವುದಕ್ಕೂ ಮುನ್ನವೇ 11 ಮಂದಿ ಸಾವನ್ನಪ್ಪಿದ್ದರು.

Exit mobile version