Site icon Vistara News

Union Budget 2023 ವಿಸ್ತಾರ ಸಮಗ್ರ : ಆರ್ಥಿಕ ಶಿಸ್ತಿಗಾಗಿ ರಕ್ಷಣಾತ್ಮಕ ಆಟ, ಆದಾಯ ತೆರಿಗೆಯ ಜೂಟಾಟ

Union Budget 2023 allocated to RS 2.41 Crore to Railway

ನವ ದೆಹಲಿ: ಎಲ್ಲರೂ ನಿರೀಕ್ಷೆ ಮಾಡಿದಂತೆ ದೊಡ್ಡ ಮಟ್ಟದ ಜನಪ್ರಿಯ ಘೋಷಣೆಗಳಿಲ್ಲ. ಆದರೆ, ಜನಪರವಾದ ಹಲವು ಕಾರ್ಯಕ್ರಮಗಳಿವೆ. ಆರ್ಥಿಕ ಶಿಸ್ತನ್ನು ಉಳಿಸಿಕೊಂಡೇ ಅಭಿವೃದ್ಧಿಯ ದಾರಿಯಲ್ಲಿ ಸಾಗುವ ಪ್ರಯತ್ನವಿದೆ. ಮಧ್ಯಮ ವರ್ಗ ಯಾವತ್ತೂ ಕಾತರದ ಕಾಯುವ ಆದಾಯ ತೆರಿಗೆ ಪರಿಷ್ಕರಣೆಯ ಕನಸು ನಿಜವಾಗಿದೆಯಾದರೂ ಹಲವು ಗೊಂದಲಗಳ ಗೂಡಾಗಿದೆ. ಹೀಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬುಧವಾರ ಮಂಡಿಸಿದ ೨೦೨೩-೨೪ನೇ ಸಾಲಿನ ಕೇಂದ್ರ ಬಜೆಟ್‌ (Union Budget 2023)ಹಣ ಸಂಗ್ರಹ ಮತ್ತು ಖರ್ಚಿನ ಬ್ಯಾಲೆನ್ಸ್‌ ಮಾಡುವಲ್ಲಿ ಶಕ್ತವಾಗಿದೆ. ಆದರೆ, ಒಂದು ಬಜೆಟ್‌ ಸೃಷ್ಟಿಸಬಹುದಾದ ಕ್ರೇಜ್‌, ಚರ್ಚೆ ಹುಟ್ಟುಹಾಕುವಲ್ಲಿ ಹಿಂದೆಬಿದ್ದಿದೆ.

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ೧೦ನೇ ಬಜೆಟ್‌ ಇದಾಗಿದ್ದು, ಇದರಲ್ಲಿ ಮಂಡನೆಯಾದ ಅಂಕಿ ಅಂಶಗಳು ಭಾರತದ ಆರ್ಥಿಕತೆ ಸರಿಯಾದ ಪಥದಲ್ಲಿದೆ ಮತ್ತು ಭವ್ಯ ಭವಿಷ್ಯ ಹೊಂದಿರುವುದನ್ನು ದೃಢೀಕರಿಸಿದೆ. ಇದರಲ್ಲಿ ಆದಾಯ ತೆರಿಗೆ ಸ್ಲ್ಯಾಬ್‌ಗಳ ಪರಿಷ್ಕರಣೆಯ ಮೂಲಕ ವೇತನ ವರ್ಗಕ್ಕೆ ಖುಷಿಯನ್ನು ನೀಡಿರುವ ನಿರ್ಮಲಾ ಸೀತಾರಾಮನ್‌, ರೈಲ್ವೇ, ಶಿಕ್ಷಣ, ರಕ್ಷಣೆ ಹಾಗೂ ಬಂಡವಾಳ ವೆಚ್ಚಕ್ಕೆ ಧಾರಾಳತನ ತೋರಿಸಿದ್ದಾರೆ.

ಸಪ್ತರ್ಷಿ ಆದ್ಯತೆಗಳು
ಎಲ್ಲವನ್ನೂ ಒಳಗೊಳ್ಳುವ ಅಂತರ್ಗತ ಅಭಿವೃದ್ಧಿ, ಕಟ್ಟಕಡೆಯ ವ್ಯಕ್ತಿಯನ್ನು ತಲುಪುವ ಯೋಜನೆಗಳು, ಮೂಲಸೌಕರ್ಯ ಮತ್ತು ಹೂಡಿಕೆ, ಸಾಮರ್ಥ್ಯದ ಸದ್ಬಳಕೆ, ಹಸಿರು ಅಭಿವೃದ್ಧಿ, ಯುವಜನ ಸಬಲೀಕರಣ ಮತ್ತು ಹಣಕಾಸು ವಲಯವನ್ನು ಆದ್ಯತಾ ಕ್ಷೇತ್ರವಾಗಿಟ್ಟುಕೊಂಡು ರೂಪಿಸಿರುವ ಬಜೆಟ್‌ ಇದೆಂದು ನಿರ್ಮಲಾ ಸೀತಾರಾಮನ್‌ ಆರಂಭದಲ್ಲೇ ಘೋಷಿಸಿದ್ದರು. ಅದಕ್ಕೆ ಪೂರಕವಾಗಿ ಯುವಜನರಿಗೆ ಅವಕಾಶ ಒದಗಿಸುವ, ಉದ್ಯೋಗ ಸೃಷ್ಟಿ, ಸಣ್ಣ ಆರ್ಥಿಕತೆಯನ್ನು ಹೆಚ್ಚು ಬಲಪಡಿಸುವ, ಮಹಿಳೆಯರನ್ನು ಸಶಕ್ತಗೊಳಿಸುವ ಯೋಜನೆಗಳನ್ನು ಪ್ರಕಟಿಸಲಾಗಿದೆ.

ಆದಾಯ ತೆರಿಗೆ ಸ್ಲ್ಯಾಬ್‌ ಪರಿಷ್ಕರಣೆಯೇ ಪ್ರಧಾನ
ನಿರ್ಮಲಾ ಸೀತಾರಾಮನ್‌ ಮಂಡಿಸಿದ ಬಜೆಟ್‌ನಲ್ಲಿ ಜನಸಾಮಾನ್ಯರ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದು ಆದಾಯ ತೆರಿಗೆ ಸ್ಲ್ಯಾಬ್‌ಗಳ ಪರಿಷ್ಕರಣೆ. ಹಳೆ ಆದಾಯ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆಯನ್ನು ಮಾಡದ ಸರ್ಕಾರ, ಹೊಸ ತೆರಿಗೆ ಪದ್ಧತಿಯಲ್ಲಿ ಸ್ಲ್ಯಾಬ್‌ಗಳ ಬದಲಾವಣೆಯನ್ನು ಮಾಡಿದೆ.

ಏಳು ಲಕ್ಷ ರೂ.ವರೆಗೆ ಯಾವುದೇ ತೆರಿಗೆ ಇಲ್ಲ
ಈ ಬಜೆಟ್‌ನಲ್ಲಿ ಮಧ್ಯಮ ವರ್ಗಕ್ಕೆ ಹಿತವಾಗುವ ಅತಿ ಮುಖ್ಯ ಘೋಷಣೆ ಎಂದರೆ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಐದು ಲಕ್ಷದಿಂದ ಏಳು ಲಕ್ಷ ರೂ.ಗಳಿಗೆ ಏರಿಸಿರುವುದು. ಇದುವರೆಗೆ ೨.೫ ಲಕ್ಷ ರೂ.ವರೆಗೆ ಶೂನ್ಯ ತೆರಿಗೆ ಮತ್ತು ಐದು ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ. ೫ ತೆರಿಗೆ ಇತ್ತು. ಅಂದರೆ, ಐದು ಲಕ್ಷ ರೂ.ವರೆಗೆ ೧೨,೫೦೦ ರೂ. ತೆರಿಗೆ ಬೀಳುತ್ತಿತ್ತು. ಆದರೆ, ಕೇಂದ್ರ ಸರಕಾರ ಈ ೧೨,೫೦೦ ರೂ.ಯನ್ನು ರಿಬೇಟ್‌ ಎಂದು ಘೋಷಿಸಿತ್ತು. ಹೀಗಾಗಿ, ಐದು ಲಕ್ಷ ರೂ.ವರೆಗೆ ಆದಾಯ ಇರುವವರು ಯಾವುದೇ ತೆರಿಗೆ ಕಟ್ಟಬೇಕಾಗಿರಲಿಲ್ಲ. ಇದೀಗ ಈ ರಿಬೇಟ್‌ ಪ್ರಮಾಣವನ್ನು ಏಳು ಲಕ್ಷ ರೂ.ವರೆಗೆ ವಿಸ್ತರಿಸಲಾಗಿದೆ. ಅಂದರೆ ಏಳು ಲಕ್ಷ ರೂ.ವರೆಗೆ ಆದಾಯ ಹೊಂದಿದವರು ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ.

ಈ ಬಾರಿ ತೆರಿಗೆ ವಿನಾಯಿತಿ ಮೂಲ ಮಿತಿಯನ್ನು ೨.೫ ಲಕ್ಷದಿಂದ ೩ ಲಕ್ಷ ರೂ.ಗಳಿಗೆ ಏರಿಸಲಾಗಿದೆ. ಹೀಗಾಗಿ ಮೂರು ಲಕ್ಷ ರೂ.ವರೆಗೆ ಆದಾಯು ಇರುವವರು ಇನ್‌ಕಂ ಟ್ಯಾಕ್ಸ್‌ ರಿಟರ್ನ್ಸ್‌ ಫೈಲ್‌ ಮಾಡಬೇಕಾಗಿಲ್ಲ. ಅದಕ್ಕಿಂತ ಹೆಚ್ಚು ಆದಾಯ ಹೊಂದಿರುವ ಎಲ್ಲರೂ ಐಟಿಆರ್‌ ಸಲ್ಲಿಸುವುದು ಕಡ್ಡಾಯವಾಗಿದೆ.


ಏಳು ತೆರಿಗೆ ಶ್ರೇಣಿ ಬದಲು ಈಗ ಆರು ಶ್ರೇಣಿ
ಈ ಬಾರಿ ತೆರಿಗೆ ಶ್ರೇಣಿ (Tax slab)ಗಳನ್ನು ಕೂಡಾ ಬದಲಿಸಲಾಗಿದೆ. ಇದುವರೆಗೆ ಆರು ತೆರಿಗೆ ಶ್ರೇಣಿಗಳಿದ್ದರೆ ಅದನ್ನು ಈಗ ಐದಕ್ಕೆ ಇಳಿಸಲಾಗಿದೆ.

ಇದುವರೆಗಿನ ಶ್ರೇಣಿ ವ್ಯವಸ್ಥೆ ಪ್ರಕಾರ,
೧. ೦-೨.೫ ಲಕ್ಷ ರೂ.ವರೆಗೆ – ಶೂನ್ಯ ತೆರಿಗೆ
೨. ೨.೫ ಲಕ್ಷದಿಂದ ೫ ಲಕ್ಷದ ವರೆಗೆ- ೫%
೩. ೫.೦ ಲಕ್ಷದಿಂದ ೭.೫ ಲಕ್ಷ ರೂ.- ೧೦ %
೪. ೭.೫ ಲಕ್ಷದಿಂದ ೧೦ ಲಕ್ಷ ರೂ. – ೧೫%
೫. ೧೦ ಲಕ್ಷದಿಂದ ೧೨.೫ ಲಕ್ಷ ರೂ- ೨೦ %
೬. ೧೨.೫ ಲಕ್ಷದಿಂದ ೧೫ ಲಕ್ಷ ರೂ.- ೨೫%
೭. ೧೫ ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ- ೩೦%

ನಿರ್ಮಲಾ ಸೀತಾರಾಮನ್‌ ಅವರು ಪ್ರಕಟಿಸಿದ ಹೊಸ ಪದ್ಧತಿಯ ಪ್ರಕಾರ ಇನ್ನು ಆರು ಶ್ರೇಣಿಗಳು ಮಾತ್ರ ಇರುತ್ತವೆ.
ಇವು ಹೊಸ ಆರು ಶ್ರೇಣಿಗಳು
೧. ಮೂರು ಲಕ್ಷದವರೆಗಿನ ಮೊತ್ತಕ್ಕೆ- ೦%
೨. ೩-೬ ಲಕ್ಷ- ೫%
೩. ೬-೯ ಲಕ್ಷ-೧೦%
೪. ೯-೧೨ ಲಕ್ಷ- ೧೫%
೫. ೧೨-೧೫ ಲಕ್ಷ- ೨೦%
೬. ೧೫ ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ- ೩೦%

ಈ ತೆರಿಗೆ ಬದಲಾವಣೆಯಿಂದ ವರ್ಗಕ್ಕೆ ಭಾರಿ ಲಾಭ ಆಗಲಿದೆ. ಆದರೆ ಸದ್ಯ ಅತಿ ಹೆಚ್ಚು ಜನರು ಹಳೆ ಪದ್ಧತಿಯಲ್ಲಿ ಇರುವುದರಿಂದ ಯಾರಿಗೆ ಎಷ್ಟು ಲಾಭವಾಗುತ್ತದೆ ಎಂದು ಕಾದು ನೋಡಬೇಕಾಗಿದೆ. ವೇತನ ಪಡೆಯುವ ವರ್ಗದಲ್ಲಿ ಹಳೆ ಪದ್ಧತಿಯನ್ನು ಉಳಿಸಿಕೊಳ್ಳಬೇಕೇ, ಹೊಸ ಪದ್ಧತಿ ಒಳ್ಳೆಯದೇ ಎಂಬ ಗೊಂದಲವನ್ನು ಇದು ಸೃಷ್ಟಿಸಿದೆ. ಹಳೆ ಪದ್ಧತಿಯಲ್ಲಿ ತೆರಿಗೆಯನ್ನು ಉಳಿಸಿಕೊಳ್ಳಲು ಉಳಿತಾಯದ ಮಾರ್ಗವನ್ನು ಜನರು ಬಳಸುತ್ತಿದ್ದರು. ಆದರೆ, ಹೊಸ ಪದ್ಧತಿಯಲ್ಲಿ ಉಳಿತಾಯದ ಯಾವ ಮಾರ್ಗವೂ ಬಳಕೆಯಾಗುವುದಿಲ್ಲ. ಪಾವತಿಸಿದ ತೆರಿಗೆಯನ್ನು ಐಟಿಆರ್‌ ಸಲ್ಲಿಕೆಯ ಮೂಲಕ ಮರಳಿ ಪಡೆಯುವ ಯಾವ ಅವಕಾಶವಿಲ್ಲ. ಹೀಗಾಗಿ ಯಾರು ಯಾವ ಪದ್ಧತಿಯನ್ನು ಆಯ್ಕೆ ಮಾಡಬಹುದು ಎನ್ನುವ ಜಿಜ್ಞಾಸೆ ಹುಟ್ಟಿಕೊಂಡಿದೆ.

ಯಾವುದು ಅಗ್ಗ? ಯಾವುದು ದುಬಾರಿ
ತೆರಿಗೆ ಬದಲಾವಣೆ ಮತ್ತು ಇತರ ಕಾರಣಗಳಿಂದಾಗಿ ಕೆಲವು ವಸ್ತುಗಳು ಅಗ್ಗವಾಗಿದ್ದರೆ ಕೆಲವು ದುಬಾರಿಯಾಗಿವೆ. ಮೊಬೈಲ್‌ ಫೋನ್‌ಗಳು, ಟಿವಿ, ವಜ್ರ, ಲಿಥಿಯಂ ಬ್ಯಾಟರಿಗಳಲ್ಲಿ ಬಳಸುವ ಉಪಕರಣಗಳು, ವಿದ್ಯುತ್‌ ಚಾಲಿತ ವಾಹನಗಳಿಗಳಿಗೆ ಬಳಸುವ ಕಚ್ಚಾವಸ್ತುಗಳು ಅಗ್ಗವಾಗಲಿವೆ.

ಸಿಗರೇಟು, ಬೆಳ್ಳಿ, ರಬ್ಬರ್‌, ಇಮಿಟೇಷನ್‌ ಜುವೆಲ್ಲರಿ, ಆಮದು ಮಾಡಲಾದ ಸೈಕಲ್‌ ಮತ್ತು ಗೊಂಬೆಗಳು, ಆಮದು ಮಾಡಲಾದ ಎಲೆಕ್ಟ್ರಿಕ್‌ ಕಿಚನ್‌ ಚಿಮ್ನಿ, ಆಮದು ಮಾಡಲಾದ ಐಷಾರಾಮಿ ಕಾರು ಮತ್ತು ಎಲೆಕ್ಟ್ರಿನ್‌ ವಾಹನಗಳು ದುಬಾರಿಯಾಗಿವೆ.

ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ
-ಹಿರಿಯ ನಾಗರಿಕರ ಉಳಿತಾಯ ಯೋಜನೆಗಳ ಗರಿಷ್ಠ ಠೇವಣಿ ಮಿತಿಯನ್ನು ೧೫ ಕೋಟಿ ರೂ.ಗಳಿಂದ ೩೦ ಲಕ್ಷಕ್ಕೆ ಏರಿಸಲಾಗಿದೆ.
– ಮಹಿಳಾ ಸಮ್ಮಾನ್‌ ಉಳಿತಾಯ ಸರ್ಟಿಫಿಕೇಟ್‌ ಎಂಬ ಹೊಸ ಉಳಿತಾಯ ಯೋಜನೆಯನ್ನು ಘೋಷಿಸಲಾಗಿದೆ.
ಇದರಲ್ಲಿ ೨ ಲಕ್ಷ ರೂ.ವರೆಗಿನ ಮೊತ್ತವನ್ನು ಎರಡು ವರ್ಷಗಳ ಅವಧಿಗೆ ಠೇವಣಿ ಇಡಬಹುದು. ಇದಕ್ಕೆ ಶೇ. ೭.೫ ಬಡ್ಡಿ ನೀಡಲಾಗುತ್ತದೆ. ಇದರಲ್ಲಿ ಭಾಗಶಃ ವಿತ್‌ಡ್ರಾವಲ್‌ನ ಅವಕಾಶವೂ ಇದೆ.

ರೈಲ್ವೇ, ರಕ್ಷಣೆ, ಶಿಕ್ಷಣಕ್ಕೆ ಒತ್ತು
ರೈಲ್ವೇಗೆ ೨.೪ ಲಕ್ಷ ಕೋಟಿ ರೂ. ಯೋಜನೆಯನ್ನು ನೀಡಲಾಗಿದ್ದು, ಇದರು ಇದುವರೆಗಿನ ಗರಿಷ್ಠ ಮೊತ್ತವಾಗಿದೆ. ರಕ್ಷಣಾ ಬಜೆಟ್‌ ಮೊತ್ತವನ್ನು ಕಳೆದ ಬಾರಿಯ ೫.೨೫ ಲಕ್ಷದಿಂದ ೫.೯೪ ಲಕ್ಷ ಕೋಟಿಗೇರಿಸಲಾಗಿದೆ. ೧೫೭ ನರ್ಸಿಂಗ್‌ ಕಾಲೇಜುಗಳ ಸ್ಥಾಪನೆ, ಏಕಲವ್ಯ ಮಾದರಿ ಶಾಲೆಗಳ ಸ್ಥಾಪನೆಯ ಘೋಷಣೆ ಮಾಡಲಾಗಿದೆ.

ಉದ್ಯೋಗ ಕ್ಷೇತ್ರಕ್ಕೆ ಆದ್ಯತೆ
ಯುವಜನರನ್ನು ಉದ್ಯೋಗಕ್ಕೆ ಸಿದ್ಧಗೊಳಿಸಲು ಹಲವಾರು ರಾಜ್ಯಗಳಲ್ಲಿ ೩೦ ಸ್ಕಿಲ್‌ ಇಂಡಿಯಾದ ಅಂತಾರಾಷ್ಟ್ರೀಯ ಕೇಂದ್ರಗಳ ಸ್ಥಾಪನೆ, ರಾಷ್ಡ್ರೀಯ ಅಪ್ರೆಂಟಿಸ್‌ಷಿಪ್‌ ಉತ್ತೇಜನಾ ಯೋಜನೆಯಡಿ ೪೭ ಲಕ್ಷ ಯುವಜನರಿಗೆ ಮೂರು ವರ್ಷಗಳ ಕಾಲ ಸ್ಟೈಪೆಂಡ್‌ ನೀಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ | Union Budget 2023 : ಮಧ್ಯಮ ವರ್ಗಕ್ಕೆ ಹಳೆಯ ಮತ್ತು ಹೊಸ ತೆರಿಗೆ ಪದ್ಧತಿ, ಯಾರಿಗೆ ಯಾವುದು ಸೂಕ್ತ?

ಕೃಷಿಗೆ ಸ್ಟಾರ್ಟಪ್‌ ಬೆಂಬಲ
ಕೃಷಿ ಕ್ಷೇತ್ರದಲ್ಲಿ ಯುವಜನರಿಗೆ ಉತ್ತೇಜನ ನೀಡುವುದಕ್ಕಾಗಿ ಕೃಷಿ ಸ್ಟಾರ್ಟಪ್‌ ಸ್ಥಾಪನೆಗೆ ಅಕ್ಸಿಲರೇಟರ್‌ ಫಂಡ್‌ ನಿಗದಿ ಮಾಡಲಾಗಿದೆ. ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಬೆಂಬಲ ಘೋಷಿಸಲಾಗಿದೆ. ಸಾಂಪ್ರದಾಯಿಕ ಕುಶಲ ಕೈಗಾರಿಕೆಗಳನ್ನು ಬೆಂಬಲಿಸಲು ವಿಶ್ವಕರ್ಮ ಕೌಶಲ ಸಮ್ಮಾನ್‌ ಯೋಜನೆ ಪ್ರಕಟಿಸಲಾಗಿದೆ.

Exit mobile version