ನವದೆಹಲಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ (Paytm Payments Bank) ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ನಿರ್ಬಂಧ ಹೇರಿದ್ದು, ಮಾರ್ಚ್ 15ರಿಂದ ಹತ್ತಾರು ಸೇವೆಗಳಿಗೆ ಕತ್ತರಿ ಬೀಳಲಿದೆ. ಇದರಿಂದ ಫಾಸ್ಟ್‌ಟ್ಯಾಗ್ ಸೇರಿ ಹಲವು ಸೇವೆಗಳಿಗಾಗಿ ಪೇಟಿಎಂ ಆ್ಯಪ್ ಬಳಸುತ್ತಿದ್ದ ಗ್ರಾಹಕರಿಗೆ ತೊಂದರೆಯಾಗಲಿದೆ. ಆದರೆ, ಡಿಜಿಟಲ್ ಪೇಮೆಂಟ್‌ಗೆ ಫ್ಲಿಪ್‌ಕಾರ್ಟ್ ಕೂಡ ಪ್ರವೇಶಿಸಿದ್ದು, ಫ್ಲಿಪ್‌ಕಾರ್ಟ್ ಯುಪಿಐ (Flipkart UPI) ಸೇವೆಗಳಿಗೆ ಚಾಲನೆ ನೀಡಿದೆ. ಇದರ ಮೂಲಕ ಗ್ರಾಹಕರು ಹತ್ತಾರು ಸೇವೆಗಳನ್ನು ಪಡೆಯಬಹುದಾಗಿದೆ.
ಆ್ಯಕ್ಸಿಸ್ ಬ್ಯಾಂಕ್ ಸಹಯೋಗದಲ್ಲಿ ಫ್ಲಿಪ್‌ಕಾರ್ಟ್ ಯುಪಿಐ ಸೇವೆಗಳಿಗೆ ಚಾಲನೆ ನೀಡಿದೆ. ಭಾರತದಲ್ಲಿ 50 ಕೋಟಿ ಫ್ಲಿಪ್‌ಕಾರ್ಟ್ ಬಳಕೆದಾರರಿದ್ದು, 14 ಲಕ್ಷ ಮಾರಾಟಗಾರರು ಕೈಜೋಡಿಸಿದ್ದಾರೆ. ಇದರ ಮಹತ್ವವನ್ನು ಅರಿತ ಫ್ಲಿಪ್‌ಕಾರ್ಟ್, ಬೇರೆ ಆ್ಯಪ್‌ಗಳಂತೆ ಥರ್ಡ್ ಪಾರ್ಟಿಯ ಭಿಡೆ ಇಲ್ಲದೆ, ಸ್ವಂತ ಯುಪಿಐ ಸೇವೆಗಳಿಗೆ ಚಾಲನೆ ನೀಡಿದೆ. “ಫ್ಲಿಪ್‌ಕಾರ್ಟ್ ಯುಪಿಐ ಸೇವೆ ಬಳಸುವವರಿಗೆ ಥರ್ಡ್‌ಪಾರ್ಟಿ ಆ್ಯಪ್ ಎಂಬ ಆತಂಕ ಬೇಡ. ಗ್ರಾಹಕರ ಹಿತರಕ್ಷಣೆ, ಖಾಸಗಿತನ ಕಾಪಾಡುವುದು, ಪೇಮೆಂಟ್ ಸುರಕ್ಷತೆ ಸೇರಿ ಎಲ್ಲ ರೀತಿಯ ಮಾನದಂಡಗಳನ್ನು ಅನುಸರಿಸಿ ಸೇವೆಗೆ ಚಾಲನೆ ನೀಡಿದ್ದೇವೆ” ಎಂದು ಫ್ಲಿಪ್‌ಕಾರ್ಟ್ ತಿಳಿಸಿದೆ.
Flipkart UPI is now live in India.#Flipkart #FlipkartUPI pic.twitter.com/Xs8H2p3xz7
— Mukul Sharma (@stufflistings) March 3, 2024
ಫ್ಲಿಪ್‌ಕಾರ್ಟ್ ಸೇವೆ ಹೀಗೆ ಪಡೆಯಿರಿ
- ಪ್ಲೇಸ್ಟೋರ್ ಅಥವಾ ಆ್ಯಪಲ್ ಆ್ಯಪ್ ಸ್ಟೋರ್ ಮೂಲಕ ಲೇಟೆಸ್ಟ್ ವರ್ಷನ್ನ ಫ್ಲಿಪ್‌ಕಾರ್ಟ್ ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳಿ
- ಆ್ಯಪ್ ಓಪನ್ ಮಾಡಿ, ಫ್ಲಿಪ್‌ಕಾರ್ಟ್ ಯುಪಿಐ ಆಪ್ಶನ್ ಮೇಲೆ ಕ್ಲಿಕ್ ಮಾಡಿ
- ಆ್ಯಡ್ ಬ್ಯಾಂಕ್ ಅಕೌಂಟ್ ಮೇಲೆ ಟ್ಯಾಪ್ ಮಾಡಿ
- ನೀವು ಫ್ಲಿಪ್‌ಕಾರ್ಟ್ ಯುಪಿಐಗೆ ಲಿಂಕ್ ಮಾಡಬಯಸುವ ಬ್ಯಾಂಕ್ ಸೆಲೆಕ್ಟ್ ಮಾಡಿಕೊಳ್ಳಿ
- ಇದಾದ ಬಳಿಕ ವೇರಿಫಿಕೇಷನ್ ಪ್ರಕ್ರಿಯೆ ಪೂರ್ಣಗೊಳಿಸಿ, ಬಳಿಕ ವಹಿವಾಟು ಆರಂಭಿಸಿ
ಇದನ್ನೂ ಓದಿ: Paytm Fine: ನಿಷೇಧದ ಬೆನ್ನಲ್ಲೇ ಪೇಟಿಎಂಗೆ ಮತ್ತೊಂದು ಶಾಕ್, ಬಿತ್ತು 5.49 ಕೋಟಿ ರೂ. ದಂಡ
ಶಾಪಿಂಗ್ ಕೂಡ ಮಾಡಬಹುದು
ಯುಪಿಐ ಆಪ್ಶನ್ ಬಳಸಿಕೊಂಡು ಶಾಪಿಂಗ್ ಕೂಡ ಮಾಡಬಹುದಾಗಿದೆ. ಫ್ಲಿಪ್‌ಕಾರ್ಟ್ ಆ್ಯಪ್‌ನಲ್ಲಿ ನಿಮಗೆ ಬೇಕಾದ ವಸ್ತುಗಳನ್ನು ಆರ್ಡರ್ ಮಾಡಿ, ಪೇಮೆಂಟ್ ಮಾಡುವಾಗ ಫ್ಲಿಪ್‌ಕಾರ್ಟ್ ಯುಪಿಐಅನ್ನು ಪೇಮೆಂಟ್ ಮೆಥಡ್ ಆಗಿ ಆಯ್ಕೆ ಮಾಡಬೇಕು. ಇದಾದ ನಂತರ ಯುಪಿಐ ಪಿನ್ ಎಂಟರ್ ಮಾಡಿ ಹಣ ಪಾವತಿಸಬಹುದು. ಸ್ಕ್ಯಾನ್ ಆ್ಯಂಡ್ ಪೇ ಎಂಬ ಆಪ್ಶನ್ ಕೂಡ ಇದ್ದು, ಯಾವುದೇ ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡಿ ಹಣ ಪಾವತಿಸಬಹುದಾಗಿದೆ. ಮೊಬೈಲ್ ರಿಚಾರ್ಜ್, ವಿದ್ಯುತ್ ಬಿಲ್ ಪಾವತಿ, ಬೇರೆಯವರಿಗೆ ಹಣ ಕಳುಹಿಸುವುದು ಸೇರಿ ಹತ್ತಾರು ಸೌಲಭ್ಯಗಳಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ