ಶ್ರೀನಗರ: ಸುಮಾರು ಮೂರು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಡ್ಯಾಮ್ ಕಟ್ಟುವ ಮೂಲಕ ಕೇಂದ್ರ ಸರ್ಕಾರವು (Central Government) ಪಾಕಿಸ್ತಾನಕ್ಕೆ (Pakistan) ಪೆಟ್ಟು ಕೊಟ್ಟಿದೆ. 1995ರಿಂದಲೂ ನನೆಗುದಿಗೆ ಬಿದ್ದಿದ್ದ ಶಾಹ್‌ಪುರ ಕಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ರಾವಿ ನದಿಯಿಂದ (Ravi River Water) ಪಾಕಿಸ್ತಾನಕ್ಕೆ ಹರಿಯುತ್ತಿದ್ದ ನೀರನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಇದರಿಂದ ಪಾಕಿಸ್ತಾನದ ಕೃಷಿಗೆ ಭಾರಿ ಪೆಟ್ಟು ಬೀಳುವ ಜತೆಗೆ ಭಾರತದ ಲಕ್ಷಾಂತರ ರೈತರಿಗೆ ಈ ನದಿಯ ನೀರಿನಿಂದ ಹೆಚ್ಚಿನ ಪ್ರಮಾಣದಲ್ಲಿ ಅನುಕೂಲವಾಗಲಿದೆ.
ಹೌದು, ರಾವಿ ನದಿಗೆ ಅಡ್ಡಲಾಗಿ ಜಮ್ಮು ಗಡಿ ಭಾಗದಲ್ಲಿ ಶಾಹ್‌ಪುರ ಕಂಡಿ ಅಣೆಕಟ್ಟೆ ನಿರ್ಮಿಸಲಾಗಿದೆ. ಈ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಈಗಾಗಲೇ ಪಾಕಿಸ್ತಾನಕ್ಕೆ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ಇದರಿಂದಾಗಿ ಜಮ್ಮು-ಕಾಶ್ಮೀರ ಹಾಗೂ ಪಂಜಾಬ್‌ನ 32 ಸಾವಿರ ಹೆಕ್ಟೇರ್ ಜಮೀನುಗಳಿಗೆ ನೀರು ಹರಿಸಬಹುದಾಗಿದೆ. ಸುಮಾರು 1,150 ಕ್ಯುಸೆಕ್ ನೀರು ಉಳಿತಾಯವಾಗುವುದರಿಂದ ಲಕ್ಷಾಂತರ ರೈತರು ಉತ್ತಮ ಬೆಳೆ ಬೆಳೆಯಲು ಸಹಕಾರಿಯಾಗಲಿದೆ. ಅದರಲ್ಲೂ, ಜಮ್ಮು-ಕಾಶ್ಮೀರದ ಕಠುವಾ, ಸಾಂಬಾ ರೈತರು ಅಣೆಕಟ್ಟಿನ ಲಾಭ ಪಡೆಯಲಿದ್ದಾರೆ.
Flow of Ravi water to Pak fully stopped, 32000 hac J&K land to be irrigated!
— The Jaipur Dialogues (@JaipurDialogues) February 24, 2024
Modi Hai, To Mumkin Hai!🔥 pic.twitter.com/sYK1ejMXEU
1995ರಿಂದಲೂ ಯೋಜನೆ ನನೆಗುದಿಗೆ
ರಾವಿ ನದಿಗೆ ಅಡ್ಡಲಾಗಿ ಅಣೆಕಟ್ಟೆ ಕಟ್ಟಬೇಕು ಎಂಬ ಯೋಜನೆಯು ಹಲವು ಕಾರಣಗಳಿಂದಾಗಿ ನನೆಗುದಿಗೆ ಬಿದ್ದಿತ್ತು. 1995ರಲ್ಲಿ ಪಿ.ವಿ. ನರಸಿಂಹರಾವ್ ಅವರು ಪ್ರಧಾನಿಯಾಗಿದ್ದಾಗ ಅಣೆಕಟ್ಟೆ ಕಟ್ಟುವ ಯೋಜನೆ ರೂಪಿಸಲಾಗಿತ್ತು. ಆದರೆ, ಹತ್ತಾರು ಅಡೆತಡೆಗಳಿಂದಾಗಿ ಯೋಜನೆಯು ನನೆಗುದಿಗೆ ಬಿದ್ದಿತ್ತು. ಆದರೆ, 2018ರಲ್ಲಿ ಅಣೆಕಟ್ಟೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಈಗ ಆರು ವರ್ಷಗಳಲ್ಲಿಯೇ ಕಾಮಗಾರಿ ಪೂರ್ಣಗೊಂಡಿದೆ. ಈಗ ನದಿಯ ನೀರು ಪಾಕಿಸ್ತಾನಕ್ಕೆ ಹರಿಯದೆ, ಭಾರತದ ರೈತರು ನೀರಿನ ಲಾಭ ಪಡೆಯಲಿದ್ದಾರೆ.
ಇದನ್ನೂ ಓದಿ: India Canada Row: ಉಗ್ರರ ಸುರಕ್ಷಿತ ತಾಣವಾಗುತ್ತಿರುವ ಕೆನಡಾ! ಭಾರತದ ತೀಕ್ಷ್ಣ ಪ್ರತಿಕ್ರಿಯೆ, ಪಾಕ್‌ಗೆ ಹೋಲಿಸಿತೇ ಸರ್ಕಾರ?
ಅಣೆಕಟ್ಟೆಯು ರೈತರಿಗೆ ಅನುಕೂಲವಾಗುವ ಜತೆಗೆ ಜಲವಿದ್ಯುತ್ ಉತ್ಪಾದನೆ ಯೋಜನೆಯ ಜಾರಿಗೂ ಭಾರಿ ಅನುಕೂಲವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೂ ಮೊದಲು ರಾವಿ ನದಿಯ ನೀರು ಹಳೆಯ ಲಖನ್‌ಪುರ ಡ್ಯಾಮ್‌ನಿಂದ ಪಾಕಿಸ್ತಾನದ ಕಡೆ ಹರಿಯುತ್ತಿತ್ತು. ಈಗ ಮಾಧೋಪುರ ಕಾಲುವೆ ಮೂಲಕ ಜಮ್ಮು-ಕಾಶ್ಮೀರ ಹಾಗೂ ಪಂಜಾಬ್ ಜಮೀನುಗಳಿಗೆ ನೀರು ಹರಿಸಲಾಗುತ್ತದೆ ಎಂದು ತಿಳಿದುಬಂದಿದೆ. 1960ರಲ್ಲಿ ಸಿಂಧೂ ನದಿ ನೀರು ಹಂಚಿಕೆ ಕುರಿತು ಭಾರತ ಹಾಗೂ ಪಾಕಿಸ್ತಾನವು ಒಪ್ಪಂದ ಮಾಡಿಕೊಂಡಿವೆ. ಅದರಂತೆ, ಭಾರತದ ಹಲವು ನದಿಗಳ ನೀರನ್ನು ಪಾಕಿಸ್ತಾನ ಬಳಸುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ