ನವ ದೆಹಲಿ: ನೀವೇನಾದರೂ ಅಮೆರಿಕಕ್ಕೆ ಹೋಗಲು ವೀಸಾಗೆ (US Visa) ಅಪ್ಲೈ ಮಾಡಿದರೆ ಅದಕ್ಕೆ ಒಪ್ಪಿಗೆ ಸಿಗಲು ಎರಡು ವರ್ಷ ಕಾಯಬೇಕು! ಅದೇ ನೀವು ಪಾಕಿಸ್ತಾನದವರಾದರೇ ಒಂದೇ ದಿನ ಸಾಕು! ಅರೇ ಇದೇನಿದು ಭಾರತೀಯರು ಯಾಕೆ ಇಷ್ಟು ದೀರ್ಘ ಅವಧಿಗೆ ಕಾಯಬೇಕು ಎಂಬ ಪ್ರಶ್ನೆ ಸಹಜ. ವಿಶೇಷವಾಗಿ ಸ್ಟೂಡೆಂಟ್ ವೀಸಾಗಾಗಿ ಅಪ್ಲೈ ಮಾಡಿದವರು ದೀರ್ಘ ಅವಧಿಗೆ ಕಾಯಬೇಕಿದೆ.
ಅಮೆರಿಕದ ವಿದೇಶಾಂಗ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಅಮೆರಿಕ ವೀಸಾಗಾಗಿ ರಾಶಿ ರಾಶಿ ಅರ್ಜಿಗಳು ದಾಖಲಾಗಿರುವ ಮಾಹಿತಿ ಇದೆ. ದಿಲ್ಲಿಯಿಂದ ಅಪ್ಲೈ ಮಾಡಿದ ವ್ಯಕ್ತಿಗೆ ವೇಯ್ಟಿಂಗ್ ಪಿರಿಯಡ್ 833 ದಿನ ಎಂದು ವೆಬ್‌ಸೈಟ್‌ನಲ್ಲಿ ತೋರಿಸುತ್ತಿದೆ. ಮುಂಬೈನಿಂದ ಅಪ್ಲೈ ಮಾಡಿದವರಿಗೆ 848 ದಿನಗಳಿವೆ. ಅದೇ ಚೀನಾದ ಬೀಜಿಂಗ್‌ನಲ್ಲಿ ಅಪ್ಲೈ ಮಾಡಿದವರಿಗೆ ವೇಯ್ಟಿಂಗ್ ಪಿರಿಯಡ್ ಕೇವಲ 2 ದಿನ ಇದೆ. ಪಾಕಿಸ್ತಾನದ ಕರಾಚಿಯಿಂದ ಅಪ್ಲೈ ಮಾಡಿದ ವಿದ್ಯಾರ್ಥಿ 264 ದಿನ ವೇಟ್ ಮಾಡಬೇಕು. ಪಾಕಿಸ್ತಾನ ಇಸ್ಲಾಮಾಬಾದ್‌ನಿಂದ ಅಪ್ಲೈ ಮಾಡಿದವರಿಗೂ ಒಂದೇ ದಿನ ಸಾಕು! ಶ್ರೀಲಂಕಾದಿಂದ ಅಪ್ಲೈ ಮಾಡಿದವರು 100 ದಿನಗಳವರೆಗೂ ವೇಟ್ ಮಾಡಬೇಕು.
ಅದೇ ನೀವು, ಸ್ಟೂಡೆಂಟ್ ವೀಸಾಗಾಗಿ ಕೆನಡಾಕ್ಕೆ ಅಪ್ಲೈ ಮಾಡಿದ್ದರೆ ನೀವು 13 ವಾರಗಳವರೆಗೆ ಕಾಯಬೇಕು. ಇಲ್ಲಿ ಪಾಕಿಸ್ತಾನ ಅಥವಾ ಭಾರತದಿಂದ ಅಪ್ಲೈ ಮಾಡಿದವರಿಗೆ ವೇಯ್ಟಿಂಗ್‌ನಲ್ಲಿ ಅಂಥ ವ್ಯತ್ಯಾಸವಿಲ್ಲ. ವಿಸಿಟರ್ಸ್ ವೀಸಾಗಾಗಿ ಭಾರತದಿಂದ ಅಪ್ಲೈ ಮಾಡಿದರೆ 134 ದಿನ ಕಾಯಬೇಕು, ಪಾಕಿಸ್ತಾನದಿಂದ ಅಪ್ಲೈ ಮಾಡಿದರೆ 145 ದಿನ ಕಾಯಬೇಕು. ಅದೇ ನೀವು ಚೀನಾದಿಂದ ಅಪ್ಲೈ ಮಾಡಿದ್ದರೆ 51 ದಿನ ಸಾಕು. ಇದು ವಿಸಿಟರ್ ವೀಸಾಗೆ ಇರುವ ವೇಟಿಂಗ್ ಪಿರಿಯಡ್.
ಇದಕ್ಕೇನು ಕಾರಣ?
ವೇಯ್ಟಿಂಗ್ ಸಮಯದ ನಡುವಿನ ವ್ಯತ್ಯಾಸದ ಬಗ್ಗೆ ಅಮೆರಿಕದ ವಿದೇಶಾಂಗ ಸಚಿವಾಲಯವು ತನ್ನದೇ ಆದ ವಾದವನ್ನು ಮುಂದಿಡುತ್ತಿದೆ. ಕಾರ್ಯಭಾರದ ಒತ್ತಡ ಹಾಗೂ ಲಭ್ಯವಿರುವ ಸಿಬ್ಬಂದಿಗೆ ಅನುಗುಣವಾಗಿ ಈ ವ್ಯತ್ಯಾಸವಾಗುತ್ತಿದೆ. ವೀಸಾ ಸೆಂಟರ್‌ಗಳಲ್ಲಿ ಕಡಿಮೆ ಸಿಬ್ಬಂದಿ ಇರುವುದೇ ಇದಕ್ಕೆ ಕಾರಣ ಎನ್ನುತ್ತಿದ್ದಾರೆ ಕಾನ್ಸುಲರ್ ವ್ಯವಹಾರಗಳ ಸಚಿವ ಡಾನ್ ಹೆಫ್ಲಿನ್ ಅವರು.
ವೇಯ್ಟ್ ಟೈಮ್ಸ್ ಬಗ್ಗೆ ತಾವೆಲ್ಲರೂ ಆತಂಕಗೊಂಡಿದ್ದೀರಿ ಎಂಬುದು ನಮ್ಮ ಗಮನದಲ್ಲಿದೆ. ನಾನು ನಿಮ್ಮೊಂದಿಗೆ ಪ್ರಾಮಾಣಿಕ ಹೇಳುತ್ತೇನೆ. ದೀರ್ಘ ಅವಧಿಯ ವೇಯ್ಟಿಂಗ್ ಪಿರಿಯಡ್ ಇದೆ. ಕೋವಿಡ್ ಪರಿಣಾಮ ಸಮಸ್ಯೆ ಉಂಟಾಗಿದೆ. ಗುಡ್ ನ್ಯೂಸ್ ಏನೆಂದರೆ, ನಾವೀಗ ಈ ಸಮಸ್ಯೆಯಿಂದ ಹೊರ ಬರುತ್ತಿದ್ದೇವೆ. ಸಿಬ್ಬಂದಿ ಸಮಸ್ಯೆಯನ್ನು ನಿಭಾಯಿಸಲಾಗುತ್ತಿದೆ. ಕೋವಿಡ್ ಹೆಚ್ಚಿದ್ದಾಗ ಮತ್ತು ಸ್ವಲ್ಪ ಸಮಯದ ನಂತರ, ನಾವು ವೀಸಾ ಕಾನ್ಸುಲೇಟ್‌ಗಳಲ್ಲಿ ಸುಮಾರು ನಾವು ಶೇ.50 ಮಾತ್ರ ಸಿಬ್ಬಂದಿ ಹೊಂದಿದ್ದೆವು. ಮುಂದಿನ ವರ್ಷದಿಂದ ಶೇ.100ರಷ್ಟು ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆಂದು ತಿಳಿಸಿದ್ದಾರೆ.
ಎಲ್ಲ ರೀತಿಯ ವೀಸಾ ಅಪಾಯ್ಟ್‌ಮೆಂಟ್‌ಗಳಿಗೆ ನಾವು ಮುಕ್ತರಾಗಿದ್ದೇವೆ. ವೀಸಾಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿರುವುದರಿಂದ ವೇಯ್ಟ್ ಟೈಮ್ ಕೂಡ ಹೆಚ್ಚಾಗುತ್ತಿದೆ. ಜತೆಗೆ ಕೋವಿಡ್ ಟೈಮ್‌ನಲ್ಲಿ ಸಿಬ್ಬಂದಿಯನ್ನು ಕಡಿತಗೊಳಿಸಿದ್ದು ಸಮಸ್ಯೆಗೆ ಕಾರಣವಾಗಿದೆ ಎಂದು ಭಾರತದಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಮಂಗಳವಾರ ಹೇಳಿತ್ತು.
ಏತನ್ಮಧ್ಯೆ, ಅಮೆರಿಕದ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಈ ಸಮಸ್ಯೆಯನ್ನು ಅಮೆರಿಕದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಅವರು ಪ್ರಾಮಾಣಿಕವಾಗಿ ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ನೀಡಿದ್ದಾರೆಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ | Visa free countries | ವೀಸಾ ಇಲ್ಲದೆ ಭಾರತೀಯರಿನ್ನು 60 ದೇಶಗಳಿಗೆ ಹೋಗಬಹುದು!