Site icon Vistara News

G20 Summit 2023: ಪ್ರಧಾನಿ ಮೋದಿ ನಾಯಕತ್ವಕ್ಕೆ ಮಾಜಿ ಪಿಎಂ ಡಾ. ಮನಮೋಹನ್ ಸಿಂಗ್ ಬಹುಪರಾಕ್!

PM Narendra Modi and Former PM Dr Manmohan Singh

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ (PM Narendra Modi Leadership) ಭಾರತವು (India) ತನ್ನ ಸಾರ್ವಭೌಮ ಮತ್ತು ಆರ್ಥಿಕ ಹಿತಾಸಕ್ತಿಗಳಿಗೆ ಆದ್ಯತೆ ನೀಡುವುದರ ಜೊತೆಗೆ ವಿಶ್ವ ಶಾಂತಿಗಾಗಿ ಮನವಿ ಮಾಡುತ್ತಿರುವುದನ್ನು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ (Former PM Dr Manmohan Singh) ಅವರು ಶ್ಲಾಘಿಸಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧದಲ್ಲಿ (Russia-Ukraine War) ಭಾರತದ ನಿಲುವನ್ನು ಶ್ಲಾಘಿಸಿದ ಅವರು, ಭಾರತವು “ಸರಿಯಾದ ಕೆಲಸ” ಮಾಡಿದೆ ಎಂದು ಮಾಜಿ ಪ್ರಧಾನಿ ಸಿಂಗ್ ಹೇಳಿದರು(G20 Summit 2023).

2004ರಿಂದ 2014ರವರೆಗೆ ಪ್ರಧಾನಿಯಾಗಿದ್ದ ಅವಧಿಗೆ ಹೋಲಿಸಿದರೆ ದೇಶೀಯ ರಾಜಕೀಯದಲ್ಲಿ ವಿದೇಶಾಂಗ ನೀತಿಯು ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿರುವುದರ ಬಗ್ಗೆ ಮನಮೋಹನ್ ಸಿಂಗ್ ಅವರು ಗಮನಸೆಳೆದರು. ಜಿ20 ಔತಣಕೂಟಕ್ಕೆ ಸಿಂಗ್ ಅವರನ್ನು ಆಹ್ವಾನಿಸಲಾಗಿದೆ. ಜಿ20 ಅಧ್ಯಕ್ಷತೆಯಲ್ಲಿ ಪಕ್ಷಪಾತದ ರಾಜಕೀಯದಿಂದ ಹೆಚ್ಚು ಪ್ರಭಾವ ಬೀರದೆ ರಾಜತಾಂತ್ರಿಕತೆಯ ಮಹತ್ವವನ್ನು ಪಡೆದುಕೊಂಡಿದೆ ಎಂದು ಅವರು ಒತ್ತಿ ಹೇಳಿದರು.

ವಿದೇಶಾಂಗ ಚಟುವಟಿಕೆ ದೇಶಿ ರಾಜಕೀಯಕ್ಕೆ ಹತ್ತಿರ

ನನ್ನ ಜೀವಿತಾವಧಿಯಲ್ಲಿ ಜಿ20 ಅಧ್ಯಕ್ಷ ಸ್ಥಾನಕ್ಕೆ ಭಾರತಕ್ಕೆ ಅವಕಾಶ ಬಂದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಮತ್ತು ಜಿ20 ಶೃಂಗಸಭೆಗೆ ಭಾರತವು ವಿಶ್ವ ನಾಯಕರನ್ನು ಆಯೋಜಿಸುವುದಕ್ಕೆ ನಾನು ಸಾಕ್ಷಿಯಾಗುತ್ತಿದ್ದೇನೆ. ವಿದೇಶಾಂಗ ನೀತಿ ಯಾವಾಗಲೂ ಭಾರತದ ಆಡಳಿತ ಚೌಕಟ್ಟಿನ ಪ್ರಮುಖ ಅಂಶವಾಗಿದೆ. ಇದು ಮೊದಲಿಗಿಂತ ಇಂದು ದೇಶೀಯ ರಾಜಕೀಯಕ್ಕೆ ಹೆಚ್ಚು ಹತ್ತಿರವಾಗುತ್ತಿದೆ ಮತ್ತು ಮಹತ್ವದ ಪಾತ್ರವನ್ನು ಪಡೆದುಕೊಳ್ಳುತ್ತಿದೆ. ಜಗತ್ತಿನಲ್ಲಿ ಭಾರತದ ಸ್ಥಾನಮಾನವು ದೇಶೀಯ ರಾಜಕೀಯದಲ್ಲಿ ನ್ಯಾಯಸಮ್ಮತವಾಗಿ ಒಂದು ಸಮಸ್ಯೆಯಾಗಿದ್ದರೂ, ರಾಜತಾಂತ್ರಿಕತೆ ಮತ್ತು ವಿದೇಶಾಂಗ ನೀತಿಯನ್ನು ಪಕ್ಷ ಅಥವಾ ವೈಯಕ್ತಿಕಕ್ಕಾಗಿ ಬಳಸುವಲ್ಲಿ ಸಂಯಮವನ್ನು ಪ್ರದರ್ಶಿಸುವುದು ಅಷ್ಟೇ ಮುಖ್ಯ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಹೇಳಿದರು.

ರಷ್ಯಾ-ಉಕ್ರೇನ್ ಸಂಘರ್ಷ- ಭಾರತದ ನೀತಿ ಸರಿ

ರಷ್ಯಾ-ಉಕ್ರೇನ್ ವಿಷಯದಲ್ಲಿ ಭಾರತವು “ಸರಿಯಾದ ನಿರ್ಧಾರ”ವನ್ನು ಕೈಗೊಂಡಿದೆ. ಎರಡು ಅಥವಾ ಹೆಚ್ಚಿನ ಶಕ್ತಿಗಳು ಸಂಘರ್ಷದಲ್ಲಿ ಸಿಲುಕಿದಾಗ, ಇತರ ರಾಷ್ಟ್ರಗಳ ಮೇಲೆ ಯಾವುದಾದರೂ ಒಂದು ಬದಿಯನ್ನು ಆಯ್ಕೆ ಮಾಡಲು ಅಪಾರ ಒತ್ತಡವಿರುತ್ತದೆ. ಈ ಹಿನ್ನೆಲೆಯಲ್ಲಿ ಭಾರತವು ಸರಿಯಾದ ಕೆಲಸವನ್ನು ಮಾಡಿದೆ ಎಂದು ನಾನು ನಂಬುತ್ತೇನೆ. ಶಾಂತಿಗಾಗಿ ಮನವಿ ಮಾಡುವಾಗ ನಮ್ಮ ಸಾರ್ವಭೌಮ ಮತ್ತು ಆರ್ಥಿಕ ಹಿತಾಸಕ್ತಿಗಳಿಗೆ ಮೊದಲ ಸ್ಥಾನವನ್ನು ನೀಡಬೇಕಾಗುತ್ತದೆ. ಜಿ20 ಶೃಂಗ ಸಭೆಯು ಭದ್ರತಾ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ನೀತಿ ಸಮನ್ವಯದ ಮೇಲೆ ತನ್ನ ಗಮನವನ್ನು ಇಟ್ಟುಕೊಳ್ಳುವುದು ಮುಖ್ಯವಾಗಿದೆ. ಹವಾಮಾನ, ಅಸಮಾನತೆ ಮತ್ತು ಜಾಗತಿಕ ವ್ಯಾಪಾರದಲ್ಲಿ ವಿಶ್ವಾಸದ ಸವಾಲುಗಳು ನಮ್ಮ ಮುಂದಿವೆ. ಈ ಕುರಿತು ಜಿ20 ಗಮನಹರಿಸಬೇಕು ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ: G20 Summit 2023: ರಾಷ್ಟ್ರಪತಿ ಡಿನ್ನರ್ ವೇಳೆ 78 ಕಲಾವಿದರಿಂದ ವಸುಧೈವ ಕುಟುಂಬಕಂ ಸಂಗೀತ ಪ್ರದರ್ಶನ

ಪಿಎಂಗೆ ನಾನು ಸಲಹೆ ಕೊಡಲಾರೆ

ಇದೇ ವೇಳೆ, ಭಾರತ ಮತ್ತು ಚೀನಾ ಸಂಘರ್ಷ ಕುರಿತು ಮಾತನಾಡಿದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು, ಭಾರತ ಮತ್ತು ಚೀನಾ ನಡುವಿನ ಸಂಕೀರ್ಣ ರಾಜತಾಂತ್ರಿಕ ಸಂಗತಿಗಳನ್ನು ಹೇಗೆ ನಿರ್ವಹಣೆ ಮಾಡಬೇಕೆಂದು ನಾನು ಸಲಹೆ ಕೊಡುವುದು ಉಚಿತವಲ್ಲ. ಆದರೆ, ಜಿ20 ಶೃಂಗಸಭೆಗೆ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಅವರು ಬಾರದಿರುವ ಆಯ್ಕೆಯನ್ನು ಆಯ್ಕೆ ಮಾಡಿಕೊಂಡಿರುವ ದುರದೃಷ್ಟಕರವಾಗಿದೆ. ಭಾರತದ ಪ್ರದೇಶ ಮತ್ತು ಸಾರ್ವಭೌಮ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಅಗತ್ಯವಿರು ಎಲ್ಲ ಕ್ರಮಗಳನ್ನು ಮೋದಿ ಅವರು ತೆಗೆದುಕೊಳ್ಳುತ್ತಾರೆಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version