ನವದೆಹಲಿ: ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ರಾಜಸ್ಥಾನದಲ್ಲಿ ಚುನಾವಣೆ ಫಲಿತಾಂಶದ (Assembly Elections 2023) ಸ್ಪಷ್ಟ ಚಿತ್ರಣ ಸಿಕ್ಕಿದೆ. ಸೋಮವಾರ ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದೆ. ಮತ ಎಣಿಕೆ ಆರಂಭವಾಗಿದ್ದು, ಝೆಡ್‌ಪಿಎಂ ಪಕ್ಷವು ಮುನ್ನಡೆ ಸಾಧಿಸಿದೆ. ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣಕ್ಷಣದ ಮಾಹಿತಿ ಇಲ್ಲಿದೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಮ್ಯಾಜಿಕ್ ಗ್ಯಾರಂಟಿ?
ಹತ್ತು ವರ್ಷಗಳ ಬಿಆರ್‌ಎಸ್ ಪಾರುಪತ್ಯವನ್ನು ಅಂತ್ಯಗೊಳಿಸಿ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಎಲ್ಲ ಸಾಧ್ಯತೆಗಳಿವೆ. ಗ್ಯಾರಂಟಿ ಮೂಲಕ ಜನರನ್ನು ಮೋಡಿ ಮಾಡಿದ ಕಾಂಗ್ರೆಸ್ ಇಲ್ಲಿ 68 ಸ್ಥಾನಗಳಲ್ಲಿ ಮುಂದಿದೆ. ಇತ್ತ ಬಿಆರ್‌ಎಸ್ 39 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ.
ಛತ್ತೀಸ್‌ಗಢದಲ್ಲಿ ಮುಂದುವರಿದ ಕಣ್ಣಾಮುಚ್ಚಾಲೆ
ಛತ್ತೀಸ್‌ಗಢ ಫಲಿತಾಂಶದತ್ತ ಸದ್ಯ ದೇಶದ ಗಮನ ನೆಟ್ಟಿದೆ. ಇಲ್ಲಿ ಯಾರ ಕೊರಳಿಗೆ ವಿಜಯ ಮಾಲೆ ಬೀಳುತ್ತದೆ ಎನ್ನುವ ಕುತೂಹಲ ಕೆರಳಿಸಿದೆ. ಸದ್ಯ ಇಲ್ಲಿ ಬಿಜೆಪಿ 49 ಸ್ಥಾನಗಳಲ್ಲಿ ಮುಂದಿದ್ದರೆ ಕಾಂಗ್ರೆಸ್ 39 ಕಡೆ ಮುನ್ನಡೆ ಸಾಧಿಸಿದೆ.
ಮಧ್ಯಪ್ರದೇಶದಲ್ಲಿ ಮತ್ತೊಮ್ಮೆ ಅಧಿಕಾರದತ್ತ ಬಿಜೆಪಿ
ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರ ಹಿಡಿಯುವತ್ತ ಮುನ್ನಡೆಯುತ್ತಿದೆ. ಇಲ್ಲಿ ಬಿಜೆಪಿ 156 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 71 ಸ್ಥಾನಗಳ ಮುನ್ನಡೆಯನ್ನಷ್ಟೇ ಪಡೆದುಕೊಂಡಿದೆ.
ತೆಲಂಗಾಣದಲ್ಲಿ ಬಿಆರ್‌ಎಸ್‌ಗೆ ಮುಖಭಂಗ
ತೆಲಂಗಾಣದಲ್ಲಿ ಕಾಂಗ್ರೆಸ್ ಮ್ಯಾಜಿಕ್ ಮಾಡಿದೆ. ಆಡಳಿತರೂಢ ಬಿಆರ್‌ಎಸ್ ಹಿನ್ನಡೆಯಲ್ಲಿದೆ. ಇಲ್ಲಿ ಕಾಂಗ್ರೆಸ್ 69 ಸ್ಥಾನಗಳಲ್ಲಿ ಮುಂದಿದ್ದರೆ ಬಿಆರ್‌ಎಸ್ 38 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ಗ್ಯಾರಂಟಿಗಳೇ ಕಾಂಗ್ರೆಸ್ ಕೈ ಹಿಡಿಯಲಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಸಮಾಜ ಸುಧಾರಿಸುವ ಪ್ರಣಾಳಿಕೆ ಕಾಂಗ್ರೆಸ್‌ನದ್ದು. ತೆಲಂಗಾಣದಲ್ಲಿ ಆಡಳಿತ ಪಕ್ಷದ ನಾಯಕರು ಹಿನ್ನಡೆ ಅನುಭವಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.