ಭಾರತದ ಕೋಗಿಲೆ ಎಂದೇ ಹೆಸರಾದ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಖ್ಯ ಹೆಸರಾದ, ಕವಯಿತ್ರಿ ಸರೋಜಿನಿ ನಾಯ್ಡು ಅವರ ಹಳೆಯ ಭಾಷಣದ ತುಣುಕೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿದೆ. ೯೫ ವರ್ಷಗಳಷ್ಟು ಹಳೆಯದು ಎನ್ನಲಾದ ಈ ವಿಡಿಯೋ ಅವರ ಯುಎಸ್ ಭೇಟಿಯ ಸಂದರ್ಭ ಮಾಡಿದ ಭಾಷಣದ್ದಾಗಿದೆ.
ʻಸುಂದರ! ಭಾರತದ ಬಗ್ಗೆ ಹೆಮ್ಮೆ! ೧೯೨೮ರಲ್ಲಿ ಅಮೆರಿಕನ್ನರನ್ನು ಉದ್ದೇಶಿಸಿ ಸರೋಜಿನಿ ನಾಯ್ಡು ಅವರು ಮಾಡಿದ ಭಾಷಣದ ಅತ್ಯಂತ ಅಪರೂಪದ ವಿಡಿಯೋ ತುಣುಕುʼ ಎಂಬ ವಿವರಣೆಯೊಂದಿಗೆ ಈ ವಿಡಿಯೋ ಹಂಚಲಾಗಿದೆ. ನಾರ್ವೆಯ ಪರಿಸರ ಹಾಗೂ ಹವಾಮಾನ ಇಲಾಖೆಯ ಮಾಜಿ ಸಚಿವ ಎರಿಕ್ ಸೋಹೈಮ್ ತಮ್ಮ ಟ್ವಿಟರ್ ಖಾತೆಯಲ್ಲಿ ಈ ಅಪರೂಪದ ವಿಡಿಯೋವನ್ನು ವಿವರಣೆಯೊಂದಿಗೆ ಹಂಚಿಕೊಂಡಿದ್ದಾರೆ.
೫೫ ಸೆಕೆಂಡುಗಳ ಈ ವಿಡಿಯೋ ಕ್ಲಿಪ್‌ನಲ್ಲಿ ಸರೋಜಿನಿ ನಾಯ್ಡು ಅವರು ಸ್ಪೂರ್ತಿದಾಯಕ ಭಾಷಣವನ್ನು ಮಾಡಿದ್ದು, ಪ್ರಪಂಚದ ಅತ್ಯಂತ ಹಳೆಯ ನಾಗರಿಕತೆಯ ಇತಿಹಾಸವಿರುವ ದೇಶವಾದ ಭಾರತದ ಮಹಿಳಾ ಪ್ರತಿನಿಧಿಯಾಗಿ ಹೊಸ ಜಗತ್ತಿನ ಕುರಿತು ಮಾತನಾಡಿದ್ದಾರೆ. ನಾನಿಲ್ಲಿ ಹಲವು ಸಾವಿರ ಮೈಲಿಗಳ ದೂರದಿಂದ ರಾಯಭಾರಿಯಾಗಿ ಬಂದು ನಿಮ್ಮೆದುರು ನಿಂತು ಮಾತನಾಡುತ್ತಿದ್ದೇನೆ. ಅತ್ಯಂತ ಪುರಾತನ ದೇಶವೊಂದರಿಂದ ಹೊಸ ಯುವ ದೇಶವೊಂದಕ್ಕೆ ಬಂದು ನಿಂತಿದ್ದೇನೆ. ಸಂಪ್ರದಾಯವಾದಿ ಎಂಬ ಹೆಸರಿರುವ ದೇಶವೊಂದರಿಂದ ಮುಂದುವರಿದ ದೇಶವೊಂದಕ್ಕೆ ಮಹಿಳಾ ರಾಯಭಾರಿಯಾಗಿ ನಾನು ಬಂದಿರುವುದಕ್ಕೆ ನಿಮಗೆ ಆಶ್ಚರ್ಯವಾಗಬಹುದು. ಆದರೆ, ಭಾರತದ ನಾಗರಿಕತೆಯ ಭವ್ಯ ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡಿದರೆ, ಮಹಿಳೆಯರಿಗೆ ಭಾರತ ದೇಶ ನೀಡಿದ ಅತ್ಯುನ್ನತ ಸ್ಥಾನದ ಅರಿವು ಖಂಡಿತವಾಗಿಯೂ ಆಗುತ್ತದೆʼ ಎನ್ನುತ್ತಾ ಭಾರತದ ಸಂಸ್ಕೃತಿಯ ಶ್ರೇಷ್ಠತೆಯನ್ನು ಮುಂದಿರಿಸಿ ಮಾತನಾಡುತ್ತಾರೆ. ತಮ್ಮ ಭಾಷಣದಲ್ಲಿ ಭಾರತದ ಸಂಸ್ಕೃತಿ, ಅದು ಪ್ರಪಂಚದ ಮೂಲೆ ಮೂಲೆಗೂ ಸ್ಪೂರ್ತಿಯಾಗುವ ರೀತಿಯನ್ನು ತಮ್ಮ ಭಾಷಣದುದ್ದಕ್ಕೂ ವಿವರಿಸುತ್ತಾರೆ.
ಇದನ್ನೂ ಓದಿ: Ima Keithal: ಮಹಿಳೆಯರಿಂದಲೇ ಮಾರುಕಟ್ಟೆ: ಇದಕ್ಕಿದೆ ೫೦೦ ವರ್ಷಗಳ ಇತಿಹಾಸ!
ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಲಕ್ಷಗಟ್ಟಲೆ ವೀಕ್ಷಣೆ ಪಡೆದಿದ್ದು, ಹಳೆಯ ವಿಡಿಯೋ ಒಂದು ಹಲವಾರು ಯುವ ಮನಸ್ಸುಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ೯೫ ವರ್ಷಗಳ ಹಳೆಯ ವಿಡಿಯೋ ತುಣುಕಿನ ಭಾಷಣದ ವಿಚಾರಗಳು ಇಂದಿಗೂ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿರುವುದು ವಿಶೇಷ.
ಬಹಳಷ್ಟು ಮಂದಿ ಈ ವಿಡಿಯೋಗೆ ಕಾಮೆಂಟ್ ಮಾಡಿದ್ದು, ಅನೇಕರು, ಆಕೆಯ ಮಾತನ್ನು ಕೇಳುವುದೇ ಸೊಗಸು. ಅತ್ಯಂತ ವಸ್ತುನಿಷ್ಠವಾಗಿ, ಗೌರವಯುತವಾಗಿ, ನಿಖರವಾಗಿ ಮಾತನಾಡುವ ಆಕೆಯ ಶೈಲಿ ಇಂದಿಗೂ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
ಆಕೆಯ ಆಂಗ್ಬಭಾಷೆಯನ್ನು ಕೇಳಿದರೆ ರೋಮಾಂಚನವಾಗುತ್ತದೆ. ಸ್ಪುಟವಾದ ಭಾಷೆ, ಶೈಲಿ ಆಕೆಯದ್ದು. ಮಾತಿನಲ್ಲಿರುವ ಗಂಭೀರತೆ ಆಕೆಯ ಮೇಲಿನ ಗೌರವವನ್ನು ಮತ್ತಷ್ಟು ಹೆಚ್ಚಿಸುತ್ತದೆ. ದೇಶಕ್ಕೊಂದು ಅಮ್ಮನ ಹಾಗೆ ಇವರು ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Viral video: 80ರ ವಯಸ್ಸಿನಲ್ಲಿ ಸೀರೆ ಉಟ್ಟು ಪಾರಾಗ್ಲೈಡಿಂಗ್ ಸಾಹಸ ಮಾಡಿದ ಅಜ್ಜಿ!