ಹೊಸದಿಲ್ಲಿ: ವಿಶ್ವದ ಹಲವು ದೇಶಗಳ ನಾಯಕರು ಸಮಾವೇಶಗೊಂಡಿದ್ದ ಜಿ 20 ಶೃಂಗಸಭೆಯ (G20 Summit 2023) ಅಭೂತಪೂರ್ವ ಭದ್ರತೆಯ ನಡುವೆಯೂ ಸಣ್ಣದೊಂದು ಲೋಪ ಕಾಣಿಸಿಕೊಂಡಿದೆ. ಶನಿವಾರ ನಡೆದ ಈ ಘಟನೆ ಕೆಲ ಕಾಲ ಆತಂಕಕ್ಕೆ ಕಾರಣವಾಗಿತ್ತು.
ಸಂಯುಕ್ತ ಅರಬ್ ಸಂಸ್ಥಾನದ ಅಧ್ಯಕ್ಷರು ತಂಗಿದ್ದ ಪಂಚತಾರಾ ಹೊಟೇಲ್‌ಗೆ ಆಗಂತುಕನೊಬ್ಬ ಪ್ರವೇಶಿಸಿ, ಅವರನ್ನು ಭೇಟಿ ಮಾಡಲು ಯತ್ನಿಸಿ ಕೆಲಸಮಯ ಗೊಂದಲ ಸೃಷ್ಟಿಸಿದ. ಸೌದಿ ಅರೇಬಿಯಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತನ್ನ ಸಹೋದರನಿಗೆ ನೆರವು ಕೋರಲು ತಾನು ಬಂದಿದ್ದಾಗಿ ಆತ ವಿಚಾರಣೆಯಲ್ಲಿ ತಿಳಿಸಿದ್ದಾನೆ.
ಯುಎಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ತಂಗಿದ್ದ ಪಂಚತಾರಾ ಹೊಟೆಲ್ ಪ್ರವೇಶಿದ್ದ ವ್ಯಕ್ತಿ ಸೌದಿ ಅರೇಬಿಯಾದ ಪ್ರಜೆ. ನವದೆಹೆಲಿಯ ಪ್ರಮುಖ ಹೊಟೇಲೊಂದರಲ್ಲಿ ತಂಗಿದ್ದ ಆತ, ದೆಹೆಲಿಯಲ್ಲಿ ಪ್ರಯಾಣಿಸಲು ತನಗೊಂದು ಕ್ಯಾಬ್ ವ್ಯವಸ್ಥೆ ಮಾಡುವಂತೆ ತಾನು ತಂಗಿದ್ದ ಹೊಟೇಲ್ ಸಿಬ್ಬಂದಿಯನ್ನು ಕೋರಿದ್ದ. ಆತನಿಗಾಗಿ, ದೆಹಲಿ ಪೊಲೀಸ್‌ನ ಭದ್ರತಾ ಸಿಬ್ಬಂದಿ ನೀಡಿದ್ದ ಭದ್ರತಾ ಸ್ಟಿಕ್ಕರ್ ಹೊಂದಿದ್ದ ಕಪ್ಪು ಬಣ್ಣದ ಇನೋವಾ ಕ್ರಿಸ್ಟಾ ಕಾರನ್ನು ಹೊಟೇಲ್ ನೀಡಿತ್ತು. ವಿದೇಶಿ ಗಣ್ಯರು ತಂಗಿದ್ದ ದೆಹೆಲಿಯ 16 ಹೊಟೇಲ್‌ಗಳಿಗೆ ಇಂಥ ಭದ್ರತಾ ಸ್ಟಿಕ್ಕರ್‌ಗಳನ್ನು ನೀಡಲಾಗಿತ್ತು. ವಿದೇಶಿ ಗಣ್ಯರ ಕಾರುಗಳನ್ನು ಇತರ ಅತಿಥಿಗಳ ಕಾರುಗಳಿಂದ ಬೇರೆಯಾಗಿ ಗುರುತಿಸುವ ಉದ್ದೇಶದಿಂದ ಇದನ್ನು ಮಾಡಲಾಗಿತ್ತು. ಸೌದಿ ಅರೇಬಿಯಾದಿಂದ ಬಂದಿದ್ದ ಆತನ ಪ್ರಯಾಣದ ಉದ್ದೇಶವೇನು ಎಂಬುದನ್ನು ಅರಿಯದ ಹೊಟೇಲ್ ಸಿಬ್ಬಂದಿ, ಶೃಂಗಸಭೆಯ ಅತಿಥಿಯೆಂದೇ ಭಾವಿಸಿರುವ ಸಾಧ್ಯತೆಯಿದೆ.
ಆತ ಪ್ರಯಾಣಿಸಿದ ಇನೋವಾ ಕಾರಿಗೆ ಭದ್ರತಾ ಸ್ಟಿಕ್ಕರ್ ಇದ್ದುದರಿಂದ, ಅಧ್ಯಕ್ಷರು ತಂಗಿದ್ದ ಹೊಟೇಲ್‌ನ ಭದ್ರತಾ ಸಿಬ್ಬಂದಿ ಕಾರನ್ನು ತಡೆಯಲಿಲ್ಲ. ಆದರೆ ಲಾಬಿಯಲ್ಲಿ ಆತ ನಿರೀಕ್ಷಿಸುತ್ತಿದ್ದಾಗ, ಅಧ್ಯಕ್ಷರ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ತೆಗೆದುಕೊಂಡರು. ಶನಿವಾರವಷ್ಟೇ ತಾನು ಭಾರತಕ್ಕೆ ಬಂದಿದ್ದಾಗಿ ಹೇಳಿದ ಆತ, ಸೌದಿ ಅರೇಬಿಯಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತನ್ನ ಸೋದರನಿಗೆ ನೆರವಾಗಲು ಅಧ್ಯಕ್ಷರನ್ನು ಕೋರಲು ಬಂದಿದ್ದಾಗಿ ತಿಳಿಸಿದ್ದಾನೆ. ಭದ್ರತಾ ಶಿಷ್ಟಾಚಾರಗಳ ಬಗ್ಗೆ ತನಗೇನೂ ತಿಳಿದಿರಲಿಲ್ಲ ಎಂದೂ ಆತ ಹೇಳಿದ್ದಾನೆ. ವಿಚಾರಣೆಯ ನಂತರ ಆತನನ್ನು ಭದ್ರತಾ ಸಿಬ್ಬಂದಿ ಬಿಡುಗಡೆ ಮಾಡಿದ್ದಾರೆ.
ಅಭೂತಪೂರ್ವ ಭದ್ರತೆ
ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ (New Delhi) ಆಯೋಜಿಸಲಾಗಿದ್ದ ಶೃಂಗ ಸಭೆಗೆ (G20 Summit 2023) ಅಭೂತಪೂರ್ವ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 1,30,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು(Security personnel). ಈ ಪೈಕಿ 80 ಸಾವಿರ ದಿಲ್ಲಿ ಪೊಲೀಸರು (Delhi Police) ಇದ್ದರು. ದಿಲ್ಲಿ ಪೊಲೀಸ್ ಮತ್ತು ಕೇಂದ್ರ ಭದ್ರತಾ ಪಡೆಗಳು ಸುಮಾರು 45 ಸಾವಿರ ಭದ್ರತಾ ಸಿಬ್ಬಂದಿ ಖಾಕಿ ವೇಷದಲ್ಲಿ ಇರದೇ ನೀಲಿ ಯೂನಿಫಾರ್ಮ್‌ನಲ್ಲಿ ಭದ್ರತಾ ಕಾರ್ಯ ಕೈಗೊಂಡಿದ್ದರು. ಈ 45 ಸಾವಿರ ಭದ್ರತಾ ಪಡೆಯಲ್ಲಿ ಕಮಾಂಡೋಗಳಿದ್ದು(Commandos), ಅವರು ಹೆಲಿಕಾಪ್ಟರ್‌ಗಳಿಂದ ಇಳಿಯುವ ತರಬೇತಿ ಪಡೆದುಕೊಂಡಿದ್ದರು. ನಿಖರವಾದ ಚಾಲನಾ ಕೌಶಲ್ಯದೊಂದಿಗೆ ವೈಯಕ್ತಿಕ ಭದ್ರತಾ ಅಧಿಕಾರಿಗಳಂತೆ ಕಾರ್ಯನಿರ್ವಹಿಸಲಿದ್ದಾರೆ. ಭಾರತವು ತನ್ನ ಅತಿಥಿಗಳನ್ನು ರಕ್ಷಿಸುವ ಕರ್ತವ್ಯವನ್ನು ಪೂರೈಸಲು ಇವರು ಸಹಾಯ ಮಾಡಿದ್ದರು.
ದಿಲ್ಲಿ ಆಗಸದಲ್ಲಿ ಭಾರತೀಯ ವಾಯು ಪಡೆ ಹದ್ದಿನ ಕಣ್ಣಿಟ್ಟಿತ್ತು. ಯಾವುದೇ ಅನುಮಾನಾಸ್ಪದ ಹಾರಾಟ ವಸ್ತು ಕಂಡು ಬಂದರೂ ಹೊಡೆದುರುಳಿಸುವ ಆದೇಶ ನೀಡಲಾಗಿತ್ತು. ಆಕಾಶದಿಂದ ಎದುರಾಗುವ ಯಾವುದೇ ಬೆದರಿಕೆಯನ್ನು ಎದುರಿಸಲು ಭಾರತೀಯ ಸೇನೆ, ದಿಲ್ಲಿ ಪೊಲೀಸ್ ಮತ್ತು ಅರೆ ಸೇನಾ ಪಡೆಗಳೊಂದಿಗೆ ಆ್ಯಂಟಿ ಡ್ರೋನ್ ಸಿಸ್ಟಮ್ ನಿಯೋಜಿಸಲಾಗಿತ್ತು. ಜತೆಗೆ ಸುಮಾರು 400 ಅಗ್ನಿಶಾಮಕ ವಾಹನಗಳು ಸನ್ನದ್ಧ ಸ್ಥಿತಿಯಲ್ಲಿ ಇದ್ದವು.
ವಿಶ್ವ ನಾಯಕರ ಭದ್ರತೆಗಾಗಿ ಕೇಂದ್ರ ಸರ್ಕಾರವು 18 ಕೋಟಿ ರೂ. ವೆಚ್ಚದಲ್ಲಿ 20 ಬುಲೆಟ್ ಪ್ರೂಫ್ ವಾಹನ(ಲಿಮೋಸಿನ್)ಗಳನ್ನು ಗುತ್ತಿಗೆಗೆ ಪಡೆದುಕೊಂಡಿತ್ತು. ವಾರಾಂತ್ಯದ ಸಮಯದಲ್ಲಿ ದಿಲ್ಲಿಯ ಗಡಿಯಲ್ಲಿ ಸಾಕಷ್ಟು ಭದ್ರತೆಯನ್ನು ಕೈಗೊಳ್ಳಲಾಗಿತ್ತು. ಈ ಮಧ್ಯೆ, ಅಮೆರಿಕದ ನಾಯಕರು ತಮ್ಮದೇ 20 ವಿಮಾನಗಳೊಂದಿಗೆ ಭಾರತಕ್ಕೆ ಆಗಮಿಸಿದ್ದರು. ಶೃಂಗಸಭೆ ನಡೆದ ಪ್ರಗತಿ ಮೈದಾನದಲ್ಲಿ ಭದ್ರತಾ ಕೊಠಡಿಗಳನ್ನು ಸ್ಥಾಪಿಸಲಾಗಿತ್ತು. ಇದೇ ವೇಳೆ, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಉಳಿದುಕೊಳ್ಳಲಿರುವ ಐಟಿಸಿ ಮೌರ್ಯ ಹೊಟೇಲ್‌ನಲ್ಲಿ ವಿಶೇಷ ಭದ್ರತೆಯನ್ನು ಕೈಗೊಳ್ಳಲಾಗಿತ್ತು.
ಇದನ್ನೂ ಓದಿ: G 20 Summit 2023: ಭಾರತದ ಪ್ರತಿಷ್ಠೆ ಹೆಚ್ಚಿಸಲಿದೆಯೆ ಜಿ 20 ಶೃಂಗಸಭೆ? ನೀವು ತಿಳಿದಿರಬೇಕಾದ ಸಂಗತಿಗಳಿವು