EXPLAINER
G 20 Summit 2023: ಭಾರತದ ಪ್ರತಿಷ್ಠೆ ಹೆಚ್ಚಿಸಲಿದೆಯೆ ಜಿ 20 ಶೃಂಗಸಭೆ? ನೀವು ತಿಳಿದಿರಬೇಕಾದ ಸಂಗತಿಗಳಿವು
ಆದರೆ ಈ G20 ಎಂದರೇನು? ಯಾವಾಗ ಅಸ್ತಿತ್ವಕ್ಕೆ ಬಂತು? ಇದು ಹೇಗೆ ಕೆಲಸ ಮಾಡುತ್ತದೆ? ಇದರಲ್ಲಿರುವ ದೇಶಗಳ್ಯಾವುವು? ಅಧ್ಯಕ್ಷತೆಯ ನಿರ್ಣಯ ಆಗುವುದು ಹೇಗೆ? ದಿಲ್ಲಿಯ ಶೃಂಗಸಭೆ ಅಜೆಂಡಾ ಏನು? ಇತ್ಯಾದಿ ನೀವು ತಿಳಿದುಕೊಳ್ಳಬೇಕಾದ ಎಲ್ಲ ವಿಷಯಗಳೂ ಇಲ್ಲಿವೆ.
ಹೊಸದಿಲ್ಲಿ: ಸೆಪ್ಟೆಂಬರ್ 9-10ರಂದು ನಡೆಯಲಿರುವ G20 ರಾಷ್ಟ್ರಗಳ ಮುಖ್ಯಸ್ಥರ ಶೃಂಗಸಭೆಗಾಗಿ (G20 Summit 2023) ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳ ನಾಯಕರು ಹೊಸದಿಲ್ಲಿಯಲ್ಲಿ ಬಂದು ಸೇರಲಿದ್ದಾರೆ. ಈ ಸಲದ ಜಿ20 ಅಧ್ಯಕ್ಷತೆ ಭಾರತದ್ದು. ಒಂದು ವರ್ಷ ಅವಧಿಯ ಈ ಅಧ್ಯಕ್ಷತೆ ಈ ಶೃಂಗಸಭೆಯ ಕೊನೆಯಲ್ಲಿ ಜಿ20 ನಾಯಕರ ಘೋಷಣೆಯನ್ನು ಅಂಗೀಕರಿಸುವುದರೊಂದಿಗೆ ಮುಕ್ತಾಯಗೊಳ್ಳುತ್ತದೆ.
ಆದರೆ ಈ G20 ಎಂದರೇನು? ಯಾವಾಗ ಅಸ್ತಿತ್ವಕ್ಕೆ ಬಂತು? ಇದು ಹೇಗೆ ಕೆಲಸ ಮಾಡುತ್ತದೆ? ಇದರಲ್ಲಿರುವ ದೇಶಗಳ್ಯಾವುವು? ಅಧ್ಯಕ್ಷತೆಯ ನಿರ್ಣಯ ಆಗುವುದು ಹೇಗೆ? ದಿಲ್ಲಿಯ ಶೃಂಗಸಭೆ ಅಜೆಂಡಾ ಏನು? ಇತ್ಯಾದಿ ನೀವು ತಿಳಿದುಕೊಳ್ಳಬೇಕಾದ ಎಲ್ಲ ವಿಷಯಗಳೂ ಇಲ್ಲಿವೆ.
G20 ಎಂದರೇನು? ಅದು ಏನು ಮಾಡುತ್ತದೆ?
G20 ಅಥವಾ ಗ್ರೂಪ್ ಆಫ್ ಟ್ವೆಂಟಿ, 19 ದೇಶಗಳನ್ನು ಮತ್ತು ಒಂದು ಒಕ್ಕೂಟವನ್ನು ಒಳಗೊಂಡಿದೆ. ಅವು ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಬ್ರಿಟನ್, ಅಮೆರಿಕ. ಮತ್ತು ಯುರೋಪಿಯನ್ ಯೂನಿಯನ್. ಈ ಸದಸ್ಯರು ಜಾಗತಿಕ ಜಿಡಿಪಿಯ ಸುಮಾರು 85 ಪ್ರತಿಶತವನ್ನು ಪ್ರತಿನಿಧಿಸುತ್ತಾರೆ. ಜಾಗತಿಕ ವ್ಯಾಪಾರದ ಶೇಕಡಾ 75ಕ್ಕಿಂತ ಹೆಚ್ಚು ಮತ್ತು ವಿಶ್ವದ ಜನಸಂಖ್ಯೆಯ ಸುಮಾರು ಮೂರನೇ ಎರಡರಷ್ಟು ಭಾಗವನ್ನು ಪ್ರತಿನಿಧಿಸುತ್ತಾರೆ.
ಜಿ20ಯ ಪ್ರಮುಖ ಉದ್ದೇಶಗಳು
- ಅಂತಾರಾಷ್ಟ್ರೀಯ ಆರ್ಥಿಕ ಸಹಕಾರದ ವೇದಿಕೆಯಾಗಿ, ಎಲ್ಲಾ ಪ್ರಮುಖ ಅಂತಾರಾಷ್ಟ್ರೀಯ ಆರ್ಥಿಕ ಸಮಸ್ಯೆಗಳ ಮೇಲೆ ಜಾಗತಿಕ ಅಭಿಪ್ರಾಯ, ಆಡಳಿತ ರೂಪಿಸುವಲ್ಲಿ ಮತ್ತು ಬಲಪಡಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.
- ಜಾಗತಿಕ ಆರ್ಥಿಕ ಸ್ಥಿರತೆ, ಸುಸ್ಥಿರ ಬೆಳವಣಿಗೆಯನ್ನು ಸಾಧಿಸುವ ಸಲುವಾಗಿ ಸದಸ್ಯರ ನಡುವೆ ನೀತಿ ಸಮನ್ವಯ.
- ಅಪಾಯಗಳನ್ನು ಕಡಿಮೆ ಮಾಡುವ ಮತ್ತು ಭವಿಷ್ಯದ ಆರ್ಥಿಕ ಬಿಕ್ಕಟ್ಟುಗಳನ್ನು ತಡೆಗಟ್ಟುವ ಹಣಕಾಸಿನ ನಿಯಮಗಳನ್ನು ಉತ್ತೇಜಿಸುವ, ಹೊಸ ಅಂತಾರಾಷ್ಟ್ರೀಯ ಹಣಕಾಸು ವ್ಯವಸ್ಥೆ ರಚಿಸುವ ಉಪಕ್ರಮಗಳ ಚಿಂತನೆ.
G20 ಯಾವಾಗ, ಯಾಕೆ ಅಸ್ತಿತ್ವಕ್ಕೆ ಬಂದಿತು?
ಸೋವಿಯತ್ ಒಕ್ಕೂಟವು 1991ರಲ್ಲಿ ಕುಸಿಯಿತು. ಶೀತಲ ಸಮರ ಕೊನೆಗೊಂಡಿತು. ಅದೇ ಸಮಯದಲ್ಲಿ ಜಾಗತಿಕ ದಕ್ಷಿಣದಲ್ಲಿ ಬ್ರೆಜಿಲ್, ಚೀನಾ ಮತ್ತು ಭಾರತದಂತಹ ದೇಶಗಳಲ್ಲಿ ಆರ್ಥಿಕತೆಗಳು ಬೆಳೆಯತೊಡಗಿದವು. ಈ ಸಂದರ್ಭದಲ್ಲಿಯೇ ಜಾಗತಿಕ ಆಡಳಿತ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಸುಧಾರಣೆಯ ಅಗತ್ಯ ಕಂಡುಬಂತು. G7ನಂತಹ, ಆಗ ಅಸ್ತಿತ್ವದಲ್ಲಿದ್ದ ವೇದಿಕೆಗಳು ಅಥವಾ ವಿಶ್ವ ಬ್ಯಾಂಕ್‌ನಂತಹ ಅಂತಾರಾಷ್ಟ್ರೀಯ ಸಂಸ್ಥೆಗಳು ಜಾಗತಿಕ ಬಿಕ್ಕಟ್ಟುಗಳನ್ನು ನಿಭಾಯಿಸಲು ಅಸಮರ್ಥವಾದವು.
1997ರಲ್ಲಿ, ಏಷ್ಯಾದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಯಿತು. ಇದು ಶೀಘ್ರದಲ್ಲೇ ಲ್ಯಾಟಿನ್ ಅಮೆರಿಕಕ್ಕೆ ಹರಡಿತು. ಈ ಬಿಕ್ಕಟ್ಟಿನ ಸಂದರ್ಭದಲ್ಲಿಯೇ 1998ರಲ್ಲಿ 22ಕ್ಕೂ ಅಧಿಕ ದೇಶಗಳು ಸೇರಿ ಒಕ್ಕೂಟ ಸ್ಥಾಪಿಸುವ ಅಗತ್ಯ ಮಾತಾಡಿಕೊಂಡವು. 1999ರ ಆರಂಭದಲ್ಲಿ 33 ಸದಸ್ಯರು (G33) ಸೇರಿ ಇನ್ನೂ ಎರಡು ಸಭೆಗಳನ್ನು ಕರೆಯಲಾಯಿತು. ಜಾಗತಿಕ ಆರ್ಥಿಕತೆ ಮತ್ತು ಅಂತಾರಾಷ್ಟ್ರೀಯ ಹಣಕಾಸು ವ್ಯವಸ್ಥೆಯ ಸುಧಾರಣೆಗಳನ್ನು ಚರ್ಚಿಸಲಾಯಿತು. 1999ರ ಕೊನೆಯಲ್ಲಿ G20 ಮೂಡಿತು. ಅಂತಿಮವಾಗಿ ರಾಷ್ಟ್ರಗಳ ಹಣಕಾಸು ಮಂತ್ರಿಗಳು, ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳು ವಾರ್ಷಿಕವಾಗಿ ಭೇಟಿಯಾಗಲು ಅನೌಪಚಾರಿಕ ವೇದಿಕೆಯಾಗಿ ಸ್ಥಾಪಿಸಲಾಯಿತು.
G20 ನಾಯಕರ ಶೃಂಗಸಭೆ ಯಾವಾಗ ಪ್ರಾರಂಭವಾಯಿತು?
1999 ಮತ್ತು 2008ರ ನಡುವೆ G20 ಹೆಚ್ಚಾಗಿ ತೆರೆಮರೆಯಲ್ಲಿ ಕಾರ್ಯನಿರ್ವಹಿಸಿತು. ವಾರ್ಷಿಕ ಸಭೆಗಳು ನಡೆಯುತ್ತಿದ್ದರೂ ಅವು ಇಂದಿನಂತೆ ದೊಡ್ಡ ವಿಷಯವಾಗಿರಲಿಲ್ಲ. 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟು G20ಯನ್ನು ಪ್ರಸ್ತುತ ಸ್ಥಿತಿಗೆ ತಂದಿತು. ಗ್ರೇಟ್ ಡಿಪ್ರೆಶನ್ (1929-39) ನಂತರದ ಇನ್ನೊಂದು ದೊಡ್ಡ ಆರ್ಥಿಕ ಬಿಕ್ಕಟ್ಟಿನಿಂದ ಜಗತ್ತು ತತ್ತರಿಸುತ್ತಿರುವಾಗ, ಆ ಸಮಯದಲ್ಲಿ EU ಅಧ್ಯಕ್ಷ ಸ್ಥಾನವನ್ನು ಹೊಂದಿದ್ದ ಫ್ರಾನ್ಸ್, ಬಿಕ್ಕಟ್ಟನ್ನು ಪರಿಹರಿಸಲು ತುರ್ತು ಶೃಂಗಸಭೆಗೆ ಆಗ್ರಹಿಸಿತು. ಮೊದಲ G20 ನಾಯಕರ ಶೃಂಗಸಭೆಯನ್ನು (ʼಹಣಕಾಸು ಮಾರುಕಟ್ಟೆಗಳು ಮತ್ತು ವಿಶ್ವ ಆರ್ಥಿಕತೆಯ ಶೃಂಗಸಭೆ’) ನವೆಂಬರ್ 2008ರಲ್ಲಿ ವಾಷಿಂಗ್ಟನ್ DCಯಲ್ಲಿ ಕರೆಯಲಾಯಿತು. 20 ಸದಸ್ಯರ ಜೊತೆಗೆ IMF, ವಿಶ್ವ ಬ್ಯಾಂಕ್, ಸ್ಪೇನ್ ಮತ್ತು ನೆದರ್ಲ್ಯಾಂಡ್ಸ್ ರಾಷ್ಟ್ರಗಳನ್ನೂ ಆಹ್ವಾನಿಸಲಾಯಿತು. ಅಂದಿನಿಂದ ವಾರ್ಷಿಕ ಶೃಂಗಸಭೆಗಳು ನಡೆಯುತ್ತಿವೆ.
G20 ಹೇಗೆ ಕೆಲಸ ಮಾಡುತ್ತದೆ?
G20 ಒಂದು ಅನೌಪಚಾರಿಕ ಗುಂಪು ಎಂದು ಗಮನಿಸುವುದು ಮುಖ್ಯ. ಇದರರ್ಥ ಇದು ಯುನೈಟೆಡ್ ನೇಷನ್ಸ್ (UN) ಗಿಂತ ಭಿನ್ನ. ಇದು ಶಾಶ್ವತ ಕಾರ್ಯದರ್ಶಿ ಅಥವಾ ಸಿಬ್ಬಂದಿಯನ್ನು ಹೊಂದಿಲ್ಲ. ಬದಲಿಗೆ, G20 ಅಧ್ಯಕ್ಷ ಸ್ಥಾನವು ವಾರ್ಷಿಕವಾಗಿ ಸದಸ್ಯರ ನಡುವೆ ಆವರ್ತಗೊಳ್ಳುತ್ತದೆ. ಅಧ್ಯಕ್ಷತೆ ವಹಿಸಿದ ದೇಶ G20 ಕಾರ್ಯಸೂಚಿಯನ್ನು ಒಟ್ಟುಗೂಡಿಸುವ ಜವಾಬ್ದಾರಿ ಹೊಂದಿರುತ್ತದೆ. ಅದರ ಕಾರ್ಯಚಟುವಟಿಕೆಗಳನ್ನು ಆಯೋಜಿಸುತ್ತದೆ ಮತ್ತು ಶೃಂಗಸಭೆಗಳನ್ನು ಆಯೋಜಿಸುತ್ತದೆ. ಸದ್ಯ ಭಾರತವು ಡಿಸೆಂಬರ್ 1, 2022ರಿಂದ ನವೆಂಬರ್ 30, 2023ರವರೆಗೆ ಅಧ್ಯಕ್ಷ ಸ್ಥಾನವನ್ನು ಹೊಂದಿದೆ. ಇಂಡೋನೇಷ್ಯಾ ಈ ಹಿಂದಿನ ಅಧ್ಯಕ್ಷನಾಗಿತ್ತು. ಬ್ರೆಜಿಲ್ ಮುಂಬರುವ ಅಧ್ಯಕ್ಷನಾಗಲಿದೆ.
G20 ಮತ್ತೊಂದು ಅರ್ಥದಲ್ಲಿಯೂ ಅನೌಪಚಾರಿಕವಾಗಿದೆ. ಅದರ ನಿರ್ಧಾರಗಳು ಸ್ವಯಂಚಾಲಿತವಾಗಿ ಕಾರ್ಯಗತಗೊಳ್ಳುವುದಿಲ್ಲ. ಬದಲಿಗೆ G20 ನಾಯಕರು ವಿವಿಧ ವಿಷಯಗಳನ್ನು ಚರ್ಚಿಸುವ ಮತ್ತು ಅವರ ಉದ್ದೇಶಗಳನ್ನು ಸೂಚಿಸುವ ಘೋಷಣೆಗಳನ್ನು ಮಾಡುವ ವೇದಿಕೆ. ನಂತರ ಅವುಗಳನ್ನು ಸಂಬಂಧಿತ ರಾಷ್ಟ್ರಗಳು ಅಥವಾ ಅಂತಾರಾಷ್ಟ್ರೀಯ ಸಂಸ್ಥೆಗಳು ಕಾರ್ಯಗತಗೊಳಿಸುತ್ತವೆ. ಉದಾಹರಣೆಗೆ, G20 ವ್ಯಾಪಾರದ ಮೇಲೆ ಒಂದು ಘೋಷಣೆ ಮಾಡಿದರೆ, ಘೋಷಣೆಯ ನಿಜವಾದ ಅನುಷ್ಠಾನವನ್ನು ವಿಶ್ವ ವ್ಯಾಪಾರ ಸಂಸ್ಥೆ (WTO)ಯಿಂದ ಮಾಡಲಾಗುತ್ತದೆ.
ಅಧ್ಯಕ್ಷ ಸ್ಥಾನವನ್ನು ಹೇಗೆ ನಿರ್ಧರಿಸಲಾಗುತ್ತದೆ?
G20 ಅಧ್ಯಕ್ಷ ಸ್ಥಾನಕ್ಕಾಗಿ ಅದರ ಸದಸ್ಯರ ನಡುವೆ (EU ಹೊರತುಪಡಿಸಿ) 5 ಗುಂಪುಗಳಾಗಿ ವಿಂಗಡಿಸಲಾಗಿದೆ. ಅಧ್ಯಕ್ಷ ಸ್ಥಾನವು ಒಂದು ಗುಂಪಿನಿಂದ ಇನ್ನೊಂದು ಗುಂಪಿಗೆ ಹೋಗುತ್ತದೆ. ಒಂದು ಗುಂಪಿನೊಳಗಿನ ಪ್ರತಿಯೊಂದು ದೇಶವೂ ಅವರ ಗುಂಪಿನ ಸರದಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅರ್ಹವಾಗಿರುತ್ತದೆ. ಹೀಗಾಗಿ, ಗುಂಪಿನ ಅಧ್ಯಕ್ಷ ಸ್ಥಾನವನ್ನು ನಿರ್ಧರಿಸಲು ಅರ್ಹ ಗುಂಪಿನಲ್ಲಿರುವ ದೇಶಗಳು ತಮ್ಮ ನಡುವೆ ಮಾತುಕತೆ ನಡೆಸುತ್ತವೆ.
ಅಧ್ಯಕ್ಷನ ಜವಾಬ್ದಾರಿಯೇನು?
G20ಯ ವಾರ್ಷಿಕ ಕಾರ್ಯಸೂಚಿ ಹೊಂದಿಸುವುದು ಅಧ್ಯಕ್ಷೀಯ ಜವಾಬ್ದಾರಿ. ಇದನ್ನು ಇತರ ಸದಸ್ಯರೊಂದಿಗೆ ಸಮಾಲೋಚಿಸುತ್ತದೆ. ಅಧ್ಯಕ್ಷರು ವಿವಿಧ ಸಭೆಗಳನ್ನು ಮತ್ತು G20 ನಾಯಕರ ಶೃಂಗಸಭೆಯನ್ನು ಆಯೋಜಿಸುತ್ತಾರೆ. ಇದು ವರ್ಷದುದ್ದಕ್ಕೂ ಕೆಳ ಹಂತಗಳಲ್ಲಿ ನಡೆಯುತ್ತದೆ. ಇದರ ಎಲ್ಲ ಉಸ್ತುವಾರಿ ಅಧ್ಯಕ್ಷರದು. ಇದೆಲ್ಲ ಯಶಸ್ವಿಯಾಗಿ ನಡೆಸಲು ಮಾನವ ಮತ್ತು ವಸ್ತು ಸಂಪನ್ಮೂಲಗಳನ್ನು ಒದಗಿಸುತ್ತದೆ. ಅತಿಥಿ ದೇಶಗಳಿಗೆ G20 ಶೃಂಗದಲ್ಲಿ ಭಾಗವಹಿಸಲು ಆಮಂತ್ರಣ ಕಳುಹಿಸುವ ವಿಶೇಷ ಅಧಿಕಾರ ಹೊಂದಿದೆ.
G20ನ ಕಾರ್ಯ ರಚನೆ ಹೇಗಿದೆ?
G20 ಮೂರು ಪ್ರಮುಖ ಟ್ರ್ಯಾಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಎರಡು ಪ್ರಮುಖವಾದವು ಫೈನಾನ್ಸ್ ಟ್ರ್ಯಾಕ್, ಶೆರ್ಪಾ ಟ್ರ್ಯಾಕ್. ಇನ್ನೊಂದು ಅನಧಿಕೃತ ಟ್ರ್ಯಾಕ್ ನಾಗರಿಕ ಸಮಾಜದ ಗುಂಪುಗಳು.
ಹಣಕಾಸು ಟ್ರ್ಯಾಕ್: ಹಣಕಾಸು ಮಂತ್ರಿಗಳು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್‌ಗಳ ನೇತೃತ್ವದಲ್ಲಿ, ಸಾಮಾನ್ಯವಾಗಿ ವರ್ಷಕ್ಕೆ ನಾಲ್ಕು ಬಾರಿ ಭೇಟಿಯಾಗುತ್ತಾರೆ. ಇದು ಜಾಗತಿಕ ಆರ್ಥಿಕತೆ, ಮೂಲಸೌಕರ್ಯ, ಹಣಕಾಸು ನಿಯಂತ್ರಣ, ಹಣಕಾಸು ಸೇರ್ಪಡೆ, ಅಂತಾರಾಷ್ಟ್ರೀಯ ಹಣಕಾಸು ವಾಸ್ತುಶಿಲ್ಪ, ತೆರಿಗೆ, ವಿತ್ತೀಯ ನೀತಿಗಳ ಮೇಲೆ ಕೇಂದ್ರೀಕರಿಸುತ್ತದೆ.
ಶೆರ್ಪಾ ಟ್ರ್ಯಾಕ್: 2008ರಲ್ಲಿ G20 ನಾಯಕರ ಶೃಂಗಸಭೆಯ ನಂತರ ಸ್ಥಾಪಿಸಲಾಯಿತು. ಇದು ಸದಸ್ಯ ರಾಷ್ಟ್ರಗಳ ಅಧ್ಯಕ್ಷ/ಪ್ರಧಾನ ಮಂತ್ರಿಯ ನಿಯೋಜಿತ ಪ್ರತಿನಿಧಿಗಳಾಗಿರುವ ಶೆರ್ಪಾಸ್ ನೇತೃತ್ವದಲ್ಲಿದೆ. ಇದು ಕೃಷಿ, ಭ್ರಷ್ಟಾಚಾರ-ವಿರೋಧಿ, ಹವಾಮಾನ, ಡಿಜಿಟಲ್ ಆರ್ಥಿಕತೆ, ಶಿಕ್ಷಣ, ಉದ್ಯೋಗ, ಇಂಧನ, ಪರಿಸರ, ಆರೋಗ್ಯ, ಪ್ರವಾಸೋದ್ಯಮ, ವ್ಯಾಪಾರ ಮತ್ತು ಹೂಡಿಕೆಯಂತಹ ಸಾಮಾಜಿಕ-ಆರ್ಥಿಕ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ.
G20 ಶೃಂಗಸಭೆ ಕಾರ್ಯಸೂಚಿಯಲ್ಲಿ ಏನಿದೆ?
ಶೃಂಗಸಭೆಗಳ ಅಂತ್ಯದಲ್ಲಿ ಸಾಮಾನ್ಯವಾಗಿ ಎಲ್ಲಾ ಸದಸ್ಯರು ಒಪ್ಪಿದ ಘೋಷಣೆ ಅಥವಾ ಜಂಟಿ ಹೇಳಿಕೆಯನ್ನು ನೀಡಲಾಗುತ್ತದೆ. ಇದು ಅಂತರಾಷ್ಟ್ರೀಯ ಘರ್ಷಣೆಗಳು, ಹವಾಮಾನ ಬದಲಾವಣೆ- ಸಂಬಂಧಿತ ಬದ್ಧತೆಗಳು, ಭವಿಷ್ಯದ ಸಹಕಾರದ ಕ್ಷೇತ್ರಗಳು ಇತ್ಯಾದಿ ವಿಷಯಗಳ ಕುರಿತು ಸಾಮಾನ್ಯ ನಿಲುವುಗಳನ್ನು ತೆಗೆದುಕೊಳ್ಳುತ್ತದೆ. ಹವಾಮಾನ ಬದಲಾವಣೆ- ಸಂಬಂಧಿತ ಸಹಕಾರವನ್ನು ಅಧಿಕೃತ ಹೇಳಿಕೆಗಳಲ್ಲಿ ಸೂಚಿಸಲಾಗಿದೆ.
ಈ ವರ್ಷದ G20 ಥೀಮ್ ಏನು?
ಅಧಿಕೃತ G20 ವೆಬ್‌ಸೈಟ್ ಪ್ರಕಾರ, ಈ ವರ್ಷದ ಥೀಮ್ “ವಸುಧೈವ ಕುಟುಂಬಕಂ – ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ”. ಇದನ್ನು ಉಪನಿಷತ್ತಿನಿಂದ ಪಡೆಯಲಾಗಿದೆ. “ಮೂಲಭೂತವಾಗಿ ಈ ಥೀಮ್ ಮಾನವ, ಪ್ರಾಣಿ, ಸಸ್ಯ ಮತ್ತು ಸೂಕ್ಷ್ಮಜೀವಿಗಳು ಎಲ್ಲರಿಗೂ ಭೂಮಿಯ ಮೇಲೆ ಇರುವ ಅಧಿಕಾರವನ್ನು ಮತ್ತು ವಿಶಾಲ ವಿಶ್ವದಲ್ಲಿ ಅವುಗಳ ಪರಸ್ಪರ ಸಂಬಂಧʼʼವನ್ನು ಸೂಚಿಸುತ್ತದೆ. ಇದಲ್ಲದೆ, ಥೀಮ್ ಲೈಫ್ (ಪರಿಸರಕ್ಕಾಗಿ ಜೀವನಶೈಲಿ) ಅನ್ನು ಸಹ ಗುರುತಿಸಲಾಗಿದೆ.
2023ರ G20 ಲೋಗೋ
ಈ ವರ್ಷದ G20 ಲೋಗೋ ಭಾರತದ ರಾಷ್ಟ್ರಧ್ವಜದ ಬಣ್ಣಗಳಿಂದ ಸ್ಫೂರ್ತಿ ಪಡೆದಿದೆ. ಕೇಸರಿ, ಬಿಳಿ, ಹಸಿರು ಮತ್ತು ನೀಲಿ. ಸವಾಲುಗಳ ನಡುವೆ ಬೆಳವಣಿಗೆಯನ್ನು ಪ್ರತಿಬಿಂಬಿಸುವ ಭಾರತದ ರಾಷ್ಟ್ರೀಯ ಪುಷ್ಪವಾದ ಕಮಲದೊಂದಿಗೆ ಭೂಮಿಯನ್ನು ಇದು ಜೋಡಿಸುತ್ತದೆ. ಪ್ರಕೃತಿಯೊಂದಿಗೆ ಪರಿಪೂರ್ಣ ಸಾಮರಸ್ಯವನ್ನು ಹೊಂದಿದೆ.
ಇದನ್ನೂ ಓದಿ: G20 Summit 2023: ಜಿ20 ಶೃಂಗಸಭೆಯ ʼಭಾರತ ಮಂಟಪʼ ಎಷ್ಟು ಅದ್ಭುತವಾಗಿದೆ ನೋಡಿ! ಇದಕ್ಕಿದೆ ಕರ್ನಾಟಕದ ಲಿಂಕ್!
EXPLAINER
Asian Games 2023 : ಏಷ್ಯನ್ ಗೇಮ್ಸ್ಗೆ ಅರುಣಾಚಲ ಪ್ರದೇಶದ ಅಥ್ಲಿಟ್ಗೆ ಚೀನಾ ಪ್ರವೇಶ ನಿರಾಕರಣೆ, ಭಾರತದ ಖಂಡನೆ; ಏನಿದು ಹೊಸ ವಿವಾದ?
ಏಷ್ಯನ್ ಗೇಮ್ಸ್ ಕ್ರೀಡಾಕೂಟದ (Asian Games 2023) ಸ್ಫೂರ್ತಿ ಮತ್ತು ಸದಸ್ಯ ರಾಷ್ಟ್ರಗಳ ಸ್ಪರ್ಧಿಗಳ ವಿರುದ್ಧ ತಾರತಮ್ಯವನ್ನು ನಿಷೇಧಿಸುವ ನಿಯಮಗಳನ್ನು ಚೀನಾ ಉಲ್ಲಂಘಿಸಿದೆ ಎಂದು ವಿದೇಶಾಂಗ ಸಚಿವಾಲಯ ಟೀಕಿಸಿದೆ.
ನವ ದೆಹಲಿ: ಚೀನಾದ ಆತಿಥ್ಯದಲ್ಲಿ ನಡೆಯುವ ಏಷ್ಯನ್ ಗೇಮ್ಸ್ನಲ್ಲಿ (Asian Games 2023) ಗಡಿ ರಾಜಕೀಯ ಮುನ್ನೆಲೆಗೆ ಬಂದಿದೆ. ಅರುಣಾಚಲ ಪ್ರದೇಶದ ಮೂವರು ವುಶ್ ಸ್ಪರ್ಧಿಗಳಿಗೆ ಚೀನಾದ ಅಧಿಕಾರಿಗಳು ಪ್ರವೇಶ ನಿರಾಕರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಅರುಣಾಚಲ ಪ್ರದೇಶ ವಿಚಾರದಲ್ಲಿ ಭಾರತ ಹಾಗೂ ಚೀನಾ ನಡುವೆ ವಿವಾದವಿದೆ. ಹೀಗಾಗಿ ವುಶು ಸ್ಪರ್ಧಿಗಳಿಗೆ ಅಲ್ಲಿನ ಅಧಿಕಾರಿಗಳು ಪ್ರವೇಶ ನಿರಾಕರಿಸಿದ್ದರು. ಅವರಿಗೆ ಮಾನ್ಯತಾ ಪತ್ರಗಳನ್ನು ಡೌನ್ಲೋಡ್ ಮಾಡಲು ಸಾಧ್ಯವಾಗದ ಕಾರಣ ದೆಹಲಿಯಲ್ಲೇ ಉಳಿದಿದ್ದಾರೆ. ಚೀನಾದ ಈ ನೀತಿಗೆ ಭಾರತ ಖಂಡನೆ ವ್ಯಕ್ತಪಡಿಸಿದ್ದು, ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕ್ರೀಡಾಕೂಟದ ಹಿನ್ನೆಲೆಯಲ್ಲಿ ಚೀನಾಗೆ ಪ್ರವಾಸ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಆತಿಥೇಯರ ಆಹ್ವಾನವನ್ನು ಖಡಾಖಂಡಿತವಾಗಿ ತಿರಸ್ಕರಿಸಿದ್ದಾರೆ.
ಚೀನಾ ತಾರತಮ್ಯವನ್ನು ವಿರೋಧಿಸಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಮ್ಮ ಚೀನಾ ಭೇಟಿಯನ್ನು ರದ್ದುಗೊಳಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಶುಕ್ರವಾರ ತಿಳಿಸಿದೆ.
Our response to media queries on some Indian sportspersons being denied entry into 19th Asian Games:https://t.co/wtoQA8zaDH pic.twitter.com/cACRspcQkD
— Arindam Bagchi (@MEAIndia) September 22, 2023
ಚೀನಾದ ಹ್ಯಾಂಗ್ಝೌನಲ್ಲಿ ನಡೆಯಲಿರುವ 19 ನೇ ಏಷ್ಯನ್ ಕ್ರೀಡಾಕೂಟಕ್ಕೆ ಮಾನ್ಯತೆ ಮತ್ತು ಪ್ರವೇಶ ನಿರಾಕರಿಸುವ ಮೂಲಕ ಚೀನಾದ ಅಧಿಕಾರಿಗಳು ಅರುಣಾಚಲ ಪ್ರದೇಶದ ಕೆಲವು ಭಾರತೀಯ ಕ್ರೀಡಾಪಟುಗಳಿಗೆ ಪೂರ್ವನಿಯೋಜಿತ ತಾರತಮ್ಯ ಎಸಗಿದೆ ಎಂದು ಭಾರತ ಸರ್ಕಾರ ತಿಳಿದುಕೊಂಡಿದೆ ಎಂದು ಗೃಹ ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ವಾಸಸ್ಥಳ ಅಥವಾ ಜನಾಂಗೀಯತೆಯ ಆಧಾರದ ಮೇಲೆ ಭಾರತೀಯ ನಾಗರಿಕರನ್ನು ವಿಭಿನ್ನವಾಗಿ ಪರಿಗಣಿಸುವುದನ್ನು ಭಾರತ ವಿರೋಧಿಸುತ್ತದೆ. ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ.
ಭಾರತವು ಕುರಿತು ತಮ್ಮ ಬಲವಾದ ಪ್ರತಿಭಟನೆ ದಾಖಲಿಸಿದೆ. ಏಷ್ಯನ್ ಕ್ರೀಡಾಕೂಟದ ಸ್ಫೂರ್ತಿ ಮತ್ತು ಸದಸ್ಯ ರಾಷ್ಟ್ರಗಳ ಸ್ಪರ್ಧಿಗಳ ವಿರುದ್ಧ ತಾರತಮ್ಯವನ್ನು ನಿಷೇಧಿಸುವ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಚೀನಾವನ್ನು ತರಾಟೆಗೆ ತೆಗೆದುಕೊಳ್ಳುತ್ತೇವೆ ಎಂದು ಭಾರತ ಹೇಳಿದೆ.
ಚೀನಾದ ಕ್ರಮದ ವಿರುದ್ಧ ನಮ್ಮ ಪ್ರತಿಭಟನೆಯ ಸಂಕೇತವಾಗಿ, ಭಾರತದ ಮಾಹಿತಿ ಮತ್ತು ಪ್ರಸಾರ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರು ಚೀನಾಕ್ಕೆ ನಿಗದಿಯಾಗಿದ್ದ ಭೇಟಿಯನ್ನು ರದ್ದುಗೊಳಿಸಿದ್ದಾರೆ. ನಮ್ಮ ಹಿತಾಸಕ್ತಿಗಳನ್ನು ರಕ್ಷಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಭಾರತ ಸರ್ಕಾರ ಕಾಯ್ದಿರಿಸಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇಡೀ ಅರುಣಾಚಲ ಪ್ರದೇಶ ಚೀನಾದ ವಾದವನ್ನು ತಿರಸ್ಕರಿಸಿದೆ: ಕೇಂದ್ರ ಸಚಿವ ಕಿರಣ್ ರಿಜಿಜು
ಅರುಣಾಚಲ ಪ್ರದೇಶದ ಕ್ರೀಡಾಪಟುಗಳಿಗೆ ವೀಸಾ ನಿರಾಕರಿಸುವ ಚೀನಾದ ನಿರ್ಧಾರವನ್ನು ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಮಂಗಳವಾರ ಬಲವಾಗಿ ಖಂಡಿಸಿದ್ದಾರೆ. ರಾಜ್ಯದ ಜನರು ತಮ್ಮ ಭೂಮಿಯ ಮೇಲಿನ ಚೀನಾದ ಹಕ್ಕನ್ನು ದೃಢವಾಗಿ ವಿರೋಧಿಸುತ್ತದೆ. ಹೀಗಾಗಿ ಚೀನಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ (ಐಒಸಿ) ಕರೆ ನೀಡಿದರು.
ಹ್ಯಾಂಗ್ಝೌನಲ್ಲಿ ನಡೆಯಲಿರುವ 19 ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಬೇಕಿದ್ದ ಅರುಣಾಚಲ ಪ್ರದೇಶದ ನಮ್ಮ ವುಶು ಕ್ರೀಡಾಪಟುಗಳಿಗೆ ವೀಸಾ ನಿರಾಕರಿಸಿದ ಚೀನಾದ ಈ ಕ್ರಮವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಇದು ಕ್ರೀಡಾ ಸ್ಫೂರ್ತಿ ಮತ್ತು ಏಷ್ಯನ್ ಕ್ರೀಡಾಕೂಟದ ನಡವಳಿಕೆಯನ್ನು ನಿಯಂತ್ರಿಸುವ ನಿಯಮಗಳನ್ನು ಉಲ್ಲಂಘಿಸುತ್ತದೆ, ಇದು ಸದಸ್ಯ ರಾಷ್ಟ್ರಗಳ ಸ್ಪರ್ಧಿಗಳ ವಿರುದ್ಧ ತಾರತಮ್ಯವನ್ನು ಸ್ಪಷ್ಟವಾಗಿ ನಿಷೇಧಿಸುತ್ತದೆ” ಎಂದು ಅವರು ರಿಜಿಜು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
I strongly condemn this act by China to deny visas to our Wushu Athletes from Arunachal Pradesh who were to participate in the 19th Asian Games in Hangzhou. This violates both the spirit of Sports & also the Rules governing the conduct of Asian Games, which explicitly prohibits…
— Kiren Rijiju (@KirenRijiju) September 22, 2023
ಅರುಣಾಚಲ ಪ್ರದೇಶವು ವಿವಾದಿತ ಪ್ರದೇಶವಲ್ಲ. ಅದು ಭಾರತದ ಅವಿಭಾಜ್ಯ ಅಂಗವಾಗಿದೆ. ಅರುಣಾಚಲ ಪ್ರದೇಶದ ಸಂಪೂರ್ಣ ಜನರು ತನ್ನ ಭೂಮಿ ಮತ್ತು ಜನರ ಮೇಲೆ ಚೀನಾದ ಯಾವುದೇ ಕಾನೂನುಬಾಹಿರ ಹಕ್ಕನ್ನು ದೃಢವಾಗಿ ವಿರೋಧಿಸುತ್ತಾರೆ. ಚೀನಾದ ಕಾನೂನುಬಾಹಿರ ಕ್ರಮವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ನಿಯಂತ್ರಿಸಬೇಕು ಎಂದು ಅವರು ಹೇಳಿದರು.
ಈ ವಿಷಯವನ್ನು ಎರಡೂ ಸರ್ಕಾರಗಳೊಂದಿಗೆ ತೆಗೆದುಕೊಳ್ಳಲಾಗುತ್ತಿದೆ: ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ
ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾದ ಹಂಗಾಮಿ ಅಧ್ಯಕ್ಷ ರಣಧೀರ್ ಸಿಂಗ್ ಪ್ರತಿಕ್ರಿಯೆ ನೀಡಿ, ಈ ವಿಷಯವನ್ನು ಆಯೋಜಕರ ಕಾರ್ಯಕಾರಿ ಗುಂಪಿನೊಂದಿಗೆ ಚರ್ಚಿಸಲಾಗುವುದು. ಎರಡೂ ದೇಶಗಳ ಸರ್ಕಾರಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ನಾವು ನಿನ್ನೆ ಕಾರ್ಯಕಾರಿ ಗುಂಪಿನೊಂದಿಗೆ ಸಭೆ ನಡೆಸಿದ್ದೇವೆ. ಅವರು ಇದನ್ನು ಸರ್ಕಾರದ ಗಮನಕ್ಕೆ ತರುತ್ತಿದ್ದಾರೆ. ಇದು ನಮ್ಮೊಳಗೂ ಚರ್ಚೆಯಲ್ಲಿದೆ. ನಾವು ಅದರ ಒಸಿಎ ಕಡೆಯಿಂದ ಬಂದಿದ್ದೇವೆ. ನಾವು ಅದನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಏನಿದು ವಿವಾದ?
ಅರುಣಾಚಲ ಪ್ರದೇಶದ ವುಶು ಅಥ್ಲೀಟ್ಗಳು ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ಗಾಗಿ ಚೀನಾಕ್ಕೆ ಪ್ರಯಾಣಿಸಲು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ. ನೈಮನ್ ವಾಂಗ್ಸು, ಒನಿಲು ಟೆಗಾ ಮತ್ತು ಮೆಪುಂಗ್ ಲಮ್ಗು ಅವರನ್ನೊಳಗೊಂಡ ಮೂವರು ತಂಡದ ಸದಸ್ಯರಿಗೆ ಚೀನಾ ಪ್ರವೇಶಕ್ಕೆ ಅವಕಾಶ ಸಿಗಲಿರಲಿಲ್ಲ. ಅವರು ದೆಹಲಿಯಲ್ಲೇ ಉಳಿದುಕೊಂಡಿದ್ದಾರೆ
ವರದಿಗಳ ಪ್ರಕಾರ, ಹ್ಯಾಂಗ್ಝೌ ಏಷ್ಯನ್ ಗೇಮ್ಸ್ ಸಂಘಟನಾ ಸಮಿತಿಯು ಮೂವರು ಕ್ರೀಡಾಪಟುಗಳಿಗೆ ಮಾನ್ಯತಾ ಪತ್ರ ನೀಡಿದೆ. ಆದರೆ ಅವರ ಪತ್ರಗಳನ್ನು ಮೌಲ್ಯಮಾಪನಕ್ಕಾಗಿ ಡೌನ್ಲೋಡ್ ಮಾಡಲು ಸಾಧ್ಯವಾಗಲಿಲ್ಲ. ಇತರ ಕ್ರೀಡಾಪಟುಗಳಿಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ. ಐಜಿಐ ವಿಮಾನ ನಿಲ್ದಾಣದಿಂದ ಬುಧವಾರ ರಾತ್ರಿ ಚೀನಾಕ್ಕೆ ತೆರಳಲು ಸಜ್ಜಾಗಿದ್ದ 11 ಸದಸ್ಯರ ವುಶು ತಂಡದ ಭಾಗವಾಗಿದ್ದರು ಅವರೆಲ್ಲರೂ.
ಏಷ್ಯನ್ ಗೇಮ್ಸ್ ಗಾಗಿ ಭಾರತದ ಚೆಫ್-ಡಿ-ಮಿಷನ್ ಭೂಪೇಂದ್ರ ಸಿಂಗ್ ಬಜ್ವಾ ಈ ವಿಷಯವನ್ನು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಮತ್ತು ಹ್ಯಾಂಗ್ ಝೌ ಏಷ್ಯನ್ ಗೇಮ್ಸ್ ಸಂಘಟನಾ ಸಮಿತಿಯ ಗಮನಕ್ಕೆ ತಂದರು. ಇದಕ್ಕೂ ಮುನ್ನ ಚೆಂಗ್ಡುವಿನಲ್ಲಿ ನಡೆಯಲಿರುವ ವಿಶ್ವ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಭಾಗವಹಿಸಲು 12 ಸದಸ್ಯರ ತಂಡ ಪ್ರಯಾಣಿಸುತ್ತಿದ್ದಾಗ ದೆಹಲಿಯ ಚೀನಾದ ರಾಯಭಾರ ಕಚೇರಿ ಮೂವರು ಕ್ರೀಡಾಪಟುಗಳಿಗೆ ಸ್ಟೇಪಲ್ಡ್ ವೀಸಾಗಳನ್ನು (ಅಧಿಕೃತ ಮುದ್ರೆಯೊತ್ತದ ಅನುಮತಿ ಪತ್ರ) ನೀಡಿತ್ತು. ಆ ಸಮಯದಲ್ಲಿ ಭಾರತವು ಬಲವಾದ ಪ್ರತಿಭಟನೆಯನ್ನು ದಾಖಲಿಸಿದ ನಂತರ ಪ್ರವಾಸ ರದ್ದುಗೊಳಿಸಲಾಯಿತು.
ಅರುಣಾಚಲ ಪ್ರದೇಶದ ಕ್ರೀಡಾಪಟುಗಳಿಗೆ ಈ ಹಿಂದೆಯೂ ಸ್ಟಾಂಪ್ ವೀಸಾ ನೀಡಲು ಚೀನಾ ನಿರಾಕರಿಸಿದೆ . 2011ರಲ್ಲಿ ಅರುಣಾಚಲ ಪ್ರದೇಶದ ಐವರು ಕರಾಟೆ ಪಟುಗಳಿಗೆ ಕ್ವಾನ್ಝೌನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಲು ಸ್ಟೇಪಲ್ಡ್ ವೀಸಾ ನೀಡಲಾಗಿತ್ತು. ಏಪ್ರಿಲ್ನಲ್ಲಿ ಅರುಣಾಚಲ ಪ್ರದೇಶದ ಕೆಲವು ಸ್ಥಳಗಳ ಮರುನಾಮಕರಣವನ್ನು ಚೀನಾ ಸಾರಾಸಗಟಾಗಿ ತಿರಸ್ಕರಿಸಿತ್ತು.
ಚೀನಾದ ಹೊಸ ‘ಕಾನೂನುಬಾಹಿರ’ ನಕ್ಷೆ
ಈ ತಿಂಗಳ ಆರಂಭದಲ್ಲಿ, ಚೀನಾ ತನ್ನ ದೇಶದ ಹೊಸ ನಕ್ಷೆಯನ್ನು ಪ್ರಕಟಿಸಿ ಅರುಣಾಚಲ ಪ್ರದೇಶ ತನ್ನ ಭಾಗವೆಂದು ಹೇಳಿತ್ತು. ಇದು ಭಾರತವನ್ನು ಕೆರಳಿಸಿತ್ತು. ಚೀನಾದ ನೈಸರ್ಗಿಕ ಸಂಪನ್ಮೂಲ ಸಚಿವಾಲಯದ ವೆಬ್‌ಸೈಟ್ ಮತ್ತು ಅಲ್ಲಿನ ಗ್ಲೋಬಲ್ ಟೈಮ್ಸ್ ಹೊಸ ನಕ್ಷೆಯನ್ನು ಹಂಚಿಕೊಂಡಿತ್ತು. ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್ ಪ್ರದೇಶ, ತೈವಾನ್ ಮತ್ತು ದಕ್ಷಿಣ ಚೀನಾ ಸಮುದ್ರ ಪ್ರದೇಶದಗಳನ್ನು ತಮ್ಮ ಭೂಪ್ರದೇಶದ ಅಡಿಯಲ್ಲಿ ಸೇರಿಸಿಕೊಳ್ಳಲಾಗಿದೆ.
ಈ ನಕ್ಷೆಯನ್ನು ಯುನೈಟೆಡ್ ಸ್ಟೇಟ್ಸ್, ತೈವಾನ್ ಮತ್ತು ವಿಯೆಟ್ನಾಂ ಸೇರಿದಂತೆ ಹಲವಾರು ದೇಶಗಳು ವ್ಯಾಪಕವಾಗಿ ಟೀಕಿಸಿದವು. ಹಲವಾರು ಪ್ರತಿಭಟನೆಗಳ ಹೊರತಾಗಿಯೂ, ಚೀನಾ ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಆಧಾರರಹಿತ ಪ್ರಾದೇಶಿಕ ಹಕ್ಕುಗಳನ್ನು ಸ್ಥಾಪಿಸುವುದನ್ನು ಮುಂದುವರಿಸಿದೆ.
ಇದನ್ನೂ ಓದಿ : G20 Summit 2023: ಭಾರತ ಸೂಪರ್ ಪವರ್ ರಾಷ್ಟ್ರ, ಚೀನಾಕ್ಕಿಂತ ಮುಂದಿದೆ; ಆಫ್ರಿಕನ್ ಯೂನಿಯನ್ ಶ್ಲಾಘನೆ
ಏಪ್ರಿಲ್ನಲ್ಲಿ ಅರುಣಾಚಲ ಪ್ರದೇಶದ 11 ಸ್ಥಳಗಳ ಹೆಸರುಗಳನ್ನು ಪ್ರಮಾಣೀಕರಿಸುವುದಾಗಿ ಚೀನಾ ಸರ್ಕಾರ ಹೇಳಿತ್ತು. ಆ ಸಮಯದಲ್ಲಿ, ಅರುಣಾಚಲ ಪ್ರದೇಶ ದಕ್ಷಿಣ ಟಿಬೆಟ್ ಎಂದಿತ್ತು. ಅಲ್ಲಿನ ಸರ್ಕಾರವು ಜಾಂಗ್ನಾನ್ ಎಂದು ಹೇಳಿಕೊಂಡಿತ್ತು. ಇದಲ್ಲದೆ, ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರಕ್ಕೆ ಹತ್ತಿರ ಪಟ್ಟಣವೊಂದನ್ನು ನಿರ್ಮಿಸಿದೆ.
ಇತ್ತ , ಅರುಣಾಚಲ ಪ್ರದೇಶ ಎಂದೆಂದಿಗೂ ಭಾರತ ಅವಿಭಾಜ್ಯ ಅಂಗ ಎಂದು ಹೇಳಿದೆ ನವದೆಹಲಿಯಲ್ಲಿ ನಡೆಯಲಿರುವ ಬಹುನಿರೀಕ್ಷಿತ ಜಿ 20 ಶೃಂಗಸಭೆಗೆ ಸುಮಾರು ಹತ್ತು ದಿನಗಳ ಮೊದಲು ಭಾರತ ಮತ್ತೊಂದು ಬಾರಿ ಇದನ್ನು ದೃಢಪಡಿಸಿತ್ತು.
EXPLAINER
ವಿಸ್ತಾರ Explainer: ಕೆನಡಾದ ಜಸ್ಟಿನ್ ಟ್ರುಡೋ ಸರ್ಕಾರ ಖಲಿಸ್ತಾನಿಗಳಿಗೆ ಬೆಂಬಲ ನೀಡುತ್ತಿರುವುದೇಕೆ? ಇಲ್ಲಿದೆ ಇನ್‌ಸೈಡ್ ಸ್ಟೋರಿ!
ವಿಸ್ತಾರ Explainer: ಭಾರತ ಹಾಗೂ ಕೆನಡಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ತಾರಕಕ್ಕೇರಿದೆ. ಭಾರತದ ವಿರುದ್ಧ ಕೆನಡಾ ಆರೋಪ ಮಾಡುವುದು, ಭಾರತದ ರಾಯಭಾರಿಯನ್ನು ಉಚ್ಚಾಟಿಸುವುದು ಸೇರಿ ಹಲವು ಉದ್ಧಟತನ ಮಾಡುತ್ತಿದೆ. ಇದಕ್ಕೆ ಭಾರತವೂ ತಕ್ಕ ತಿರುಗೇಟು ನೀಡುತ್ತಿದೆ. ಆದರೆ, ಬಿಕ್ಕಟ್ಟಿನ ಹಿಂದೆ ಏನಿದೆ ಕಾರಣ?
“ಕೆನಡಾದಲ್ಲಿರುವ ಭಾರತ ವಿರೋಧಿ ಚಟುವಟಿಕೆಗಳನ್ನು ನಿಗ್ರಹಿಸಿ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳವವರೆಗೆ ಭಾರತ ಹಾಗೂ ಕೆನಡಾ ಮಧ್ಯೆ ಎಲ್ಲವೂ ಚೆನ್ನಾಗಿತ್ತು. ಖುಷಿಯಿಂದಲೇ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಭಾರತದ ಆತಿಥ್ಯ ಸ್ವೀಕರಿಸಿದ್ದರು. ಆದರೆ, ಯಾವಾಗ ಮೋದಿ ಅವರು ಭಾರತ ವಿರೋಧಿ ಚಟುವಟಿಕೆಗಳು ಎಂದರೋ, ಆಗ ಜಸ್ಟಿನ್ ಟ್ರುಡೋ ವಿಚಲಿತರಾದರು. ವಿಮಾನ ಕೆಟ್ಟು ನಿಂತಾಗ ಭಾರತದ ವಿಐಪಿ ಕೋಣೆಗಳಲ್ಲಿ ಇರಿ ಎಂದರೆ ಒಲ್ಲೆ ಎಂದರು. ನಮ್ಮದೇ ದೇಶದ ವಿಮಾನದಲ್ಲಿ (ಏರ್ ಇಂಡಿಯಾ ಒನ್) ಕೆನಡಾಗೆ ತೆರಳಿ ಎಂದಾಗಲೂ ಜಸ್ಟಿನ್ ಟ್ರುಡೋ ಬೇಡ ಎಂದು ತಲೆ (ವಿಸ್ತಾರ Explainer) ಅಲ್ಲಾಡಿಸಿದರು.
ಭಾರವಾದ ಮನಸ್ಸಿನಿಂದ ಭಾರತದಿಂದ ಹಿಂತಿರುಗಿದ ಕೆಲವೇ ದಿನಗಳಲ್ಲಿ ಭಾರತದ ಜತೆ ನಡೆಯಬೇಕಿದ್ದ ವ್ಯಾಪಾರ ಒಪ್ಪಂದವನ್ನು ಕೆನಡಾ ರದ್ದುಪಡಿಸಿತು. ಕೆನಡಾದಲ್ಲಿರುವ ಭಾರತದ ರಾಯಭಾರಿಯನ್ನು ಉಚ್ಚಾಟಿಸಿತು. ಭಾರತದ ವಿರುದ್ಧ ಹಲವು ಆರೋಪ ಮಾಡಿತು. ಜಮ್ಮು-ಕಾಶ್ಮೀರ, ಮಣಿಪುರದಲ್ಲಿ ಹಿಂಸೆ ನಡೆಯುತ್ತಿದೆ, ಅಲ್ಲಿಗೆ ತೆರಳಬೇಡಿ ಎಂದು ಭಾರತದಲ್ಲಿರುವ ಕೆನಡಾ ನಾಗರಿಕರಿಗೆ ಸೂಚಿಸಿತು. ಹಾಗಾದರೆ, ಭಾರತದ ಮೇಲೆ ಕೆನಡಾ ಇಷ್ಟೊಂದು ಮುರಕೊಂಡು ಬೀಳಲು ಕಾರಣವೇನು? ನರೇಂದ್ರ ಮೋದಿ ಅವರು “ಭಾರತ ವಿರೋಧಿ ಚಟುವಟಿಕೆ” ಎಂದು ಹೇಳಿದ್ದು ಜಸ್ಟಿನ್ ಟ್ರುಡೋ ಅವರಿಗೇಕೆ ಅಷ್ಟೊಂದು ಆಳವಾಗಿ ನಾಟಿತು? ಜಸ್ಟಿನ್ ಟ್ರುಡೋ ಅವರೇಕೆ ಖಲಿಸ್ತಾನಿಗಳ ಪರ ನಿಲ್ಲುತ್ತಿದ್ದಾರೆ? ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಪರೋಕ್ಷವಾಗಿ ಸೂಚಿಸಿದರೂ ಏಕೆ ಜಸ್ಟಿನ್ ಟ್ರುಡೋ ಕೆರಳಿ ಕೆಂಡವಾಗಿದ್ದಾರೆ? ಇದರ ಹಿಂದೆ ಯಾವ ರಾಜಕೀಯ, ಅಧಿಕಾರದ ದಾಹ ಅಡಗಿದೆ? ಅಷ್ಟಕ್ಕೂ, ಖಲಿಸ್ತಾನಿಗಳ ಬೆಂಬಲ ಇಲ್ಲದಿದ್ದರೆ ಜಸ್ಟಿನ್ ಟ್ರುಡೋ ಅಧಿಕಾರವನ್ನೇ ಕಳೆದುಕೊಳ್ಳಲಿದ್ದಾರೆಯೇ? ಇಲ್ಲಿದೆ ಮಾಹಿತಿ.
ಖಲಿಸ್ತಾನಿ ಪಕ್ಷದ ಬೆಂಬಲವೇ ಜಸ್ಟಿನ್ ಟ್ರುಡೋ ಬಲ
ಒಂದೇ ಮಾತಿನಲ್ಲಿ ಹೇಳುವುದಾದರೆ, ಜಸ್ಟಿನ್ ಟ್ರುಡೋ ಸರ್ಕಾರ ನಿಂತಿರುವುದೇ ಖಲಿಸ್ತಾನಿಗಳ ಪರವಾಗಿರುವ ಪಕ್ಷದ ಬೆಂಬಲದ ಮೇಲೆ. ಹೌದು, 2021ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜಸ್ಟಿನ್ ಟ್ರುಡೋ ಅವರ ಲಿಬರಲ್ ಪಕ್ಷವು ಬಹುಮತ ಪಡೆದು ಅಧಿಕಾರ ಪಡೆದಿಲ್ಲ. ಮ್ಯಾಜಿಕ್ ನಂಬರ್ ಆದ 170 ಸೀಟುಗಳ ಬದಲು ಜಸ್ಟಿನ್ ಟ್ರುಡೋ ಅವರ ಪಕ್ಷವು 157 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆಗ, ಖಲಿಸ್ತಾನಿಗಳ ಪರ ಒಲವಿರುವ, ಜಗಮೀತ್ ಸಿಂಗ್ ನೇತೃತ್ವದ ನ್ಯೂ ಡೆಮಾಕ್ರಟಿಕ್ ಪಕ್ಷವು ಜಸ್ಟಿನ್ ಟ್ರುಡೋ ಅವರಿಗೆ ಬೆಂಬಲ ಸೂಚಿಸಿತು. ಜಗಮೀತ್ ಸಿಂಗ್ ತನ್ನ ಪಕ್ಷದ 25 ಸಂಸದರ ಬೆಂಬಲವನ್ನು ಜಸ್ಟಿನ್ ಟ್ರುಡೋ ಅವರಿಗೆ ಘೋಷಿಸಿದ. 182 ಸಂಸದರ ಬಲದೊಂದಿಗೆ ಜಸ್ಟಿನ್ ಟ್ರುಡೋ ಕೆನಡಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಈಗ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟು ಕೆನಡಾದಲ್ಲಿರುವ ಖಲಿಸ್ತಾನಗಳ ವಿರುದ್ಧ ಕ್ರಮ ತೆಗೆದುಕೊಂಡರೆ, ಖಲಿಸ್ತಾನ ಚಳವಳಿ ಹಿನ್ನೆಲೆಯ ಜಗಮೀತ್ ಸಿಂಗ್ ಪಕ್ಷವು ಬೆಂಬಲ ವಾಪಸ್ ಪಡೆಯುತ್ತದೆ. ಆಗ, ಜಸ್ಟಿನ್ ಟ್ರುಡೋ ಅಧಿಕಾರ ಕಳೆದುಕೊಳ್ಳುತ್ತಾರೆ.
#JustinTrudeau
— Kadak (@kadak_chai_) September 19, 2023
Justin Trudeau blamed Bharat for k!lling of Khalistani Hardeep Singh Nijjar who was actually k!lled in an internal gang fight
How low can this Joker stoop for votes? pic.twitter.com/u8o4IjmBCa
ಯಾರು ಈ ಜಗಮೀತ್ ಸಿಂಗ್?
ಪಂಜಾಬ್ ಮೂಲದ ದಂಪತಿಗೆ ಕೆನಡಾದ ಒಂಟಾರಿಯೋದ ಸ್ಕಾರ್‌ಬೊರಫ್‌ನಲ್ಲಿ 1979ರಲ್ಲಿ ಜನಿಸಿದ ಜಗಮೀತ್ ಸಿಂಗ್ ಈಗ ಕೆನಡಾದ ಮೂರನೇ ಅತಿದೊಡ್ಡ ಪಕ್ಷದ ನಾಯಕನಾಗಿದ್ದಾನೆ. ವಕೀಲನಾಗಿ ವೃತ್ತಿ ಆರಂಭಿಸಿ, ಕೆನಡಾದಲ್ಲಿರುವ ಸಿಖ್ ಸಮುದಾಯದ ನಾಯಕನಾಗಿ, ಶಾಸಕನಾಗಿ, ಸಂಸದನಾಗಿ, ಖಲಿಸ್ತಾನ ಪರ ಹೋರಾಟಕ್ಕೆ ಬೆಂಬಲ ಸೂಚಿಸಿ ಈಗ ಸರ್ಕಾರದ ಭಾಗವೇ ಆಗಿದ್ದಾನೆ. ಅಷ್ಟೇ ಅಲ್ಲ, ಜಸ್ಟಿನ್ ಟ್ರುಡೋ ಅವರಿಗೇ ಆಗಾಗ ತನ್ನ ಬೇಡಿಕೆಗಳನ್ನು ಇಡುತ್ತ, ಅವುಗಳನ್ನು ಈಡೇರಿಸಿಕೊಳ್ಳುತ್ತ, ಪರೋಕ್ಷವಾಗಿ ಖಲಿಸ್ತಾನಿಗಳಿಗೆ ಬೆಂಬಲಿಸುತ್ತ ‘ಪವರ್ ಕಂಟ್ರೋಲರ್’ ಆಗಿ ಹೊರಹೊಮ್ಮಿದ್ದಾನೆ.
ಭಾರತದಲ್ಲಿ ಖಲಿಸ್ತಾನ ವಿಷ ಬೀಜ ಬಿತ್ತಿದ ಭಿಂದ್ರನ್‌ವಾಲೆಯ ಪೋಸ್ಟರ್‌ಗಳುಳ್ಳ ಖಲಿಸ್ತಾನಿ ಹೋರಾಟದಲ್ಲಿ ಜಗಮೀತ್ ಸಿಂಗ್ ಭಾಗವಹಿಸುತ್ತಾನೆ. ಆ ಮೂಲಕ ಖಲಿಸ್ತಾನಿ ಹೋರಾಟಕ್ಕೆ ಬೆಂಬಲ ಸೂಚಿಸುತ್ತಾನೆ. ಕೃಷಿ ಕಾಯ್ದೆಗಳ ವಿರುದ್ಧ ಭಾರತದಲ್ಲಿ ನಡೆದ ಪ್ರತಿಭಟನೆಯ ಹಿಂದೆ ಖಲಿಸ್ತಾನಿಗಳ ಕೈವಾಡ ಇದೆ ಎಂಬ ಮಾಹಿತಿ ಹರಿದಾಡುತ್ತಲೇ, ಭಾರತದ ರೈತರ ಪರ ಕಾಳಜಿ ತೋರುತ್ತಾನೆ. ಅವಕಾಶ ಸಿಕ್ಕಾಗಲೆಲ್ಲ ಭಾರತ ವಿರೋಧಿ ಮನಸ್ಥಿತಿ ತೋರುತ್ತಾನೆ. ಅಷ್ಟೇ ಏಕೆ, 2013ರಲ್ಲಿ ಈತ ಪಂಜಾಬ್‌ಗೆ ಆಗಮಿಸುತ್ತಾನೆ ಎಂದಾಗ ಆಗಿನ ಯುಪಿಎ ಸರ್ಕಾರವು ಈತನಿಗೆ ವೀಸಾ ನೀಡಿರಲಿಲ್ಲ.
ಇದನ್ನೂ ಓದಿ: India Canada Row: ಏಟಿಗೆ ಎದುರೇಟು; ಕೆನಡಾದಲ್ಲಿರುವ ಭಾರತೀಯರಿಗೆ ಕೇಂದ್ರ ಅಡ್ವೈಸರಿ
ಜಸ್ಟಿನ್ ಟ್ರುಡೋಗೆ ಅಧಿಕಾರವೇ ಮುಖ್ಯ
ತಂದೆಯ (ಪಿಯರ್ ಟ್ರುಡೋ) ಕಾಲದಿಂದಲೂ ಕೆನಡಾ ಅಧಿಕಾರದ ಪಡಸಾಲೆಯಲ್ಲಿ ಓಡಾಡಿಕೊಂಡಿರುವ ಜಸ್ಟಿನ್ ಟ್ರುಡೋ ಅವರಿಗೆ ಈಗ ಅಧಿಕಾರವೇ ಮುಖ್ಯ. ಯಾವುದೇ ಪಕ್ಷಕ್ಕೆ ಅಧಿಕಾರವೇ ಮುಖ್ಯವಾದರೂ, ಆ ಪಕ್ಷ ಯಾವ ನೀತಿಗಳ ಆಧಾರದ ಮೇಲೆ ನಿಲ್ಲುತ್ತದೆ ಎಂಬುದು ಮುಖ್ಯವಾಗುತ್ತದೆ. ಆದರೆ, ಖಲಿಸ್ತಾನಿಗಳಿಗೆ ಬೆಂಬಲ ನೀಡುವುದು ಪಿಯರ್ ಟ್ರುಡೋ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಈ ಸಂಪ್ರದಾಯವನ್ನು ಮುರಿಯುವುದು, ಮುರಿದು ಅಧಿಕಾರ ಕಳೆದುಕೊಳ್ಳುವುದು ಜಸ್ಟಿನ್ ಟ್ರುಡೋ ಅವರಿಗೆ ಸುತಾರಾಂ ಇಷ್ಟವಿಲ್ಲ. ಹಾಗಾಗಿಯೇ, ಜೂನ್‌ನಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೀಡಾಗಿದ್ದಕ್ಕೆ ಸೆಪ್ಟೆಂಬರ್‌ನಲ್ಲಿ ಭಾರತದ ವಿರುದ್ಧ ಮಾತನಾಡಿದರು. ಭಾರತ ವಿರೋಧಿ ಚಟುವಟಿಕೆ ನಿಯಂತ್ರಿಸಿ ಎಂದಿದ್ದಕ್ಕೇ ಭಾರತದ ರಾಯಭಾರಿಯನ್ನು ವಜಾಗೊಳಿಸಿದರು. ಈಗ ಭಾರತದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನೆನಪಿರಲಿ, 1982ರಲ್ಲಿ ಕೆನಡಾ ಪ್ರಧಾನಿಯಾಗಿದ್ದ ಪಿಯರ್ ಟ್ರುಡೋ, ಉಗ್ರ ತಲವಿಂದರ್ ಪಾರ್ಮರ್‌ನನ್ನು ಭಾರತಕ್ಕೆ ಹಸ್ತಾಂತರಿಸಲು ಒಪ್ಪಿರಲಿಲ್ಲ.
ಭಾರತ ವಿರುದ್ಧ ಜಸ್ಟಿನ್ ಟ್ರುಡೋ ಆರೋಪ
Canada is a rule of law country & the protection of our citizens & the defence of our sovereignty are fundamental.
— Kamal Khera (@KamalKheraLib) September 18, 2023
Allegations that the Indian gov. was involved in the killing of a Canadian citizen, Hardeep Singh Nijjar, on Canadian soil is extremely concerning & unacceptable. pic.twitter.com/oXYgOEJCBI
ಇದನ್ನೂ ಓದಿ: India Canada Row: ಕೆನಡಾಗೆ ಭಾರತ ಮತ್ತೊಂದು ಗುದ್ದು; ವೀಸಾ ಸೇವೆಯೇ ರದ್ದು
ಹೇಗಿದೆ ಭಾರತ-ಕೆನಡಾ ಸಂಬಂಧ?
ಕೆನಡಾದಲ್ಲಿ ಭಾರತೀಯ ಮೂಲದ 14 ಲಕ್ಷ ಜನ ವಾಸಿಸುತ್ತಿದ್ದಾರೆ. ಸುಮಾರು 2.26 ಲಕ್ಷ ವಿದ್ಯಾರ್ಥಿಗಳು ಕೆನಡಾದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಭಾರತ ಹಾಗೂ ಕೆನಡಾ ಮಧ್ಯೆ 8 ಶತಕೋಟಿಗೂ ಅಧಿಕ ಡಾಲರ್ ಮೊತ್ತದ ವ್ಯಾಪಾರ ಇದೆ. ಭಾರತವು 4 ಶತಕೋಟಿ ಡಾಲರ್ ಮೊತ್ತದ ಉತ್ಪನ್ನಗಳನ್ನು ಕೆನಡಾಗೆ ರಫ್ತು ಮಾಡುತ್ತದೆ. ಕೆನಡಾ ಭಾರತಕ್ಕೆ 4 ಶತಕೋಟಿ ಡಾಲರ್ ಮೊತ್ತದ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ಇಷ್ಟಿದ್ದರೂ 2010ಕ್ಕಿಂತ ಮೊದಲಿನಿಂದಲೂ ಭಾರತ ಹಾಗೂ ಕೆನಡಾ ವ್ಯಾಪಾರ ಸಂಬಂಧವು ಅಷ್ಟಕ್ಕಷ್ಟೇ ಇದೆ. 2010ರಿಂದಲೂ ಬೃಹತ್ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಮಾತುಕತೆ ನಡೆಸಲಾಗುತ್ತಿದೆ. ಆದರೆ, ಇತ್ತೀಚೆಗೆ ಒಪ್ಪಂದ ಮಾಡಿಕೊಳ್ಳಲು ಎರಡೂ ದೇಶ ಒಪ್ಪಿಕೊಂಡಿದ್ದವು. ಈಗ ಜಸ್ಟಿನ್ ಟ್ರುಡೋ ಅವರ ಅಧಿಕಾರದ ದಾಹದಿಂದಾಗಿ ಒಪ್ಪಂದವನ್ನು ಮುಂದೂಡಲಾಗಿದೆ. ಭಾರತ ಕೂಡ ಸರಿಯಾಗಿಯೇ ತಿರುಗೇಟು ನೀಡಿರುವುದರಿಂದ ಶೀಘ್ರದಲ್ಲಿ ಒಪ್ಪಂದ ಮಾಡಿಕೊಳ್ಳುವ ಲಕ್ಷಣಗಳೂ ಕಾಣಿಸುತ್ತಿಲ್ಲ.
EXPLAINER
Parliament Dress Code : ಮೋದಿ ಉದ್ಘಾಟಿಸಿದ ಸಂಸತ್ ಭವನದ ಸಿಬ್ಬಂದಿಗೆ ‘ಕಮಲ’ ಸಮವಸ್ತ್ರ; ಇದರ ಉದ್ದೇಶವೇನು?
ನೂತನ ಸಂಸತ್ ಭವನದ ಸಿಬ್ಬಂದಿಗಾಗಿ ವಿನ್ಯಾಸ ಮಾಡಲಾದ ಸಮವಸ್ತ್ರ (Parliament Dress Code) ಸಣ್ಣ ಕಿಡಿಯೊಂದನ್ನು ಹಚ್ಚಿದೆ. ಇದು ಬಿಜೆಪಿಯ ಕಿತಾಪತಿ ಎಂಬುದಾಗಿ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಅವರು ಇತ್ತೀಚೆಗೆ ಉದ್ಘಾಟನೆ ಮಾಡಿದ್ದ ನೂತನ ಸಂಸತ್ ಭವನದಲ್ಲಿ ಮಂಗಳವಾರದಿಂದ (ಸೆಪ್ಟೆಂಬರ್ 19) ಸಂಸತ್ ಕಲಾಪಗಳು ನಡೆಯಲಿವೆ. ಅಚ್ಚುಕಟ್ಟಾಗಿ ಹಾಗೂ ಅತ್ಯಾಧುನಿಕವಾಗಿ ನಿರ್ಮಾಣಗೊಂಡಿರುವ ಸಂಸತ್ ಭವನಕ್ಕೆ ಹೋದ ಬಳಿಕ ಸಂಪೂರ್ಣ ಚಿತ್ರಣವೇ ಬದಲಾಗಲಿದೆ. ಸಂಸತ್ ಸದಸ್ಯರು ಮತ್ತು ಸಿಬ್ಬಂದಿಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲವೂ ಹೊಸತು. ಏತನ್ಮಧ್ಯೆ, ಅಲ್ಲಿನ ಸಿಬ್ಬಂದಿಗಾಗಿ ವಿನ್ಯಾಸ ಮಾಡಲಾದ ಸಮವಸ್ತ್ರ (Parliament Dress Code) ಸಣ್ಣ ಕಿಡಿಯೊಂದನ್ನು ಹಚ್ಚಿದೆ. ಇದು ಬಿಜೆಪಿಯ ಕಿತಾಪತಿ ಎಂಬುದಾಗಿ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಹಾಗಾದರೆ ಏನಿದು ವಿವಾದ? ಪ್ರತಿಪಕ್ಷಗಳು ಏಕೆ ವಿರೋಧವೇಕೆ ? ಯಾವ ಸಿಬ್ಬಂದಿಗೆ ಯಾವ ಉಡುಪು ಎಂಬುದರ ಮಾಹಿತಿ ಇಲ್ಲಿದೆ.
ಪ್ರತಿಪಕ್ಷಗಳಿಗೆ ಕೋಪ ಯಾಕೆ?
ಸಂಸತ್ ಭವನದ ಪರಿಚಾರಕರು, ಪರಿಚಾರಕಿಯರು, ಸೆಕ್ಯುರಿಟಿ ಸಿಬ್ಬಂದಿ, ವಾಹನಗಳ ಚಾಲಕರು, ಮಾರ್ಷಲ್‌ಗಳು ಸೇರಿ ಹಲವು ಸಿಬ್ಬಂದಿಗೆ ಕೇಂದ್ರ ಸರ್ಕಾರವು ಕೆಂಪು, ಕಂದು, ಖಾಕಿ ಸೇರಿ ಹಲವು ಬಣ್ಣದ, ವಿಧವಿಧದ ಸಮವಸ್ತ್ರಗಳನ್ನು ನೀಡಲು ಮುಂದಾಗಿದೆ. ಆದರೆ, ಸಿಬ್ಬಂದಿಯ ಸಮವಸ್ತ್ರದ ಮೇಲೆ ಬಿಜೆಪಿಯ ಪಕ್ಷದ ಚಿಹ್ನೆಯಾದ ‘ಕಮಲ’ ಇರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಸಮವಸ್ತ್ರದ ಮೇಲೆ ಕಮಲದ ಚಿತ್ರಗಳು
“ಸಂಸತ್ ಸಿಬ್ಬಂದಿ ಸಮವಸ್ತ್ರದ ಮೇಲೆ ಕಮಲದ ಚಿಹ್ನೆ ಏಕೆ ಮುದ್ರಿಸಲಾಗಿದೆ? ರಾಷ್ಟ್ರೀಯ ಪ್ರಾಣಿ ಹುಲಿ ಅಥವಾ ರಾಷ್ಟ್ರೀಯ ಪಕ್ಷ ನವಿಲಿನ ಚಿಹ್ನೆ ಏಕಿಲ್ಲ” ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಸಚೇತಕ ಮಾಣಿಕಂ ಟ್ಯಾಗೋರ್ ಪ್ರಶ್ನಿಸಿದ್ದಾರೆ. ಕಾಂಗ್ರೆಸ್‌ನ ಹಲವು ನಾಯಕರು ಸ್ಪೀಕರ್ ಓಂ ಬಿರ್ಲಾ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಿಳಾ ಸಿಬ್ಬಂದಿಯ ಸಮವಸ್ತ್ರ
ವೈವಿಧ್ಯಮಯ ಸಮವಸ್ತ್ರ
ಸಂಸತ್ ಸಿಬ್ಬಂದಿಗೆ ಕೇಂದ್ರ ಸರ್ಕಾರವು ವೈವಿಧ್ಯಮಯ ಸಮವಸ್ತ್ರಗಳನ್ನು ನೀಡಲು ಮುಂದಾಗಿದೆ. ಖಾಕಿ ಪೈಜಾಮ, ಕ್ರೀಮ್ ಬಣ್ಣದ ಜಾಕೆಟ್‌ಗಳು, ಕ್ರೀಮ್ ಟಿಶರ್ಟ್‌ಗಳು (ಇವುಗಳ ಮೇಲೆ ಗುಲಾಬಿ ಬಣ್ಣದ ಕಮಲದ ಚಿತ್ರಗಳಿವೆ) ಪುರುಷರಿಗಾಗಿ ನೀಡಲಾಗುತ್ತಿದೆ. ಇನ್ನು ಮಹಿಳಾ ಸಿಬ್ಬಂದಿಯು ಬ್ರೈಟ್ ಕಲರ್ ಸೀರೆ, ಜಾಕೆಟ್‌ಗಳನ್ನು ನೀಡಲಾಗುತ್ತಿದೆ. ಹಾಗೆಯೇ, ಮಾರ್ಷಲ್‌ಗಳಿಗೆ ರುಮಾಲು ನೀಡಲಾಗುತ್ತದೆ. ಅಷ್ಟೇ ಅಲ್ಲ, ಅಧಿಕಾರಿಗಳು ಕೆನ್ನೇರಳೆ ಅಥವಾ ಗಾಢ ಗುಲಾಬಿಯ ನೆಹರು ಜಾಕೆಟ್ ಧರಿಸಲಿದ್ದಾರೆ.
ಮಹಿಳೆಯರು ಹಾಗೂ ಪುರುಷ ಸೆಕ್ಯುರಿಟಿ ಗಾರ್ಡ್‌ಗಳ ಉಡುಪು
ಅಧಿಕಾರಿಗಳ ಪ್ರಕಾರ ಸಿಬ್ಬಂದಿಯ ಸಮವಸ್ತ್ರಗಳಿಗೆ ಹೊಸ ವಿನ್ಯಾಸಗಳನ್ನು ಸೂಚಿಸಲು ಎಲ್ಲಾ 18 ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಗಳ (ಎನ್‌ಐಎಫ್‌ಟಿ) ಬಳಿ ಕೇಳಲಾಯಿತು. ತಜ್ಞರ ಸಮಿತಿಯು ಆ ಪ್ರಸ್ತಾವನೆಗಳಿಂದ ಹೊಸ ಸಮವಸ್ತ್ರವನ್ನು ಅಂತಿಮಗೊಳಿಸಿತು. ಸಂಸತ್ತಿನ ಸೆಕ್ರೆಟರಿಯೇಟ್‌ನ ಎಲ್ಲಾ ಐದು ಪ್ರಮುಖ ಶಾಖೆಗಳಾದ ವರದಿಗಾರಿಕೆ, ಟೇಬಲ್ ಆಫೀಸ್, ನೋಟಿಸ್ ಆಫೀಸ್, ಶಾಸಕಾಂಗ ಶಾಖೆ ಮತ್ತು ಭದ್ರತೆಯ ಅಧಿಕಾರಿಗಳು ಈ ಅಧಿವೇಶನದಲ್ಲಿ ಮಾರ್ಷಲ್‌ಗಳಂತೆ ಹೊಸ ಸಮವಸ್ತ್ರಗಳನ್ನು ಧರಿಸುತ್ತಾರೆ. ಈ ಶಾಖೆಗಳು ಸಂಸದರು ಮತ್ತು ಇತರ ಸಂದರ್ಶಕರೊಂದಿಗೆ ವ್ಯವಹರಿಸುತ್ತವೆ. ಅವರ ಸಮವಸ್ತ್ರಗಳು ಭಾರತೀಯ ಸಂಸತ್ತಿನ ಘನತೆ ಮತ್ತು ಗ್ಲಾಮರ್ ಅನ್ನು ಹೆಚ್ಚಿಸಲಿವೆ ಎನ್ನಲಾಗಿದೆ.
ಪುರುಷ ಮಾರ್ಷಲ್‌ಗಳ ದಿರಸು
ಇದನ್ನೂ ಓದಿ: Special Parliament session: ಹೊಸ ಸಂಸತ್ತಿನಲ್ಲಿ ಸಿಬ್ಬಂದಿಗೆ ಹೊಸ ʼಭಾರತೀಯʼ ಸಮವಸ್ತ್ರ; ಏನೇನು ಬದಲಾವಣೆ?
ಸೆಪ್ಟೆಂಬರ್ 18ರಿಂದ 22ರವರೆಗೆ ನಿಗದಿಯಾಗಿರುವ ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನವು ಬಹುತೇಕ ಹೊಸ ಸಂಸತ್ ಕಟ್ಟಡದಲ್ಲಿ ನಡೆಯಲಿದೆ. ಅಧಿವೇಶನದ ಮೊದಲ ದಿನ ಹಳೆ ಕಟ್ಟಡದಲ್ಲಿ ನಡೆದರೆ, ಉಳಿದ ಭಾಗ ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ನೂತನ ಕಟ್ಟಡದಲ್ಲಿ ನಡೆಯಲಿದೆ. ಕಲಾಪಕ್ಕೆ ಹೊಸ ಕಟ್ಟಡ ಪೂರ್ತಿ ಸಜ್ಜಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
EXPLAINER
ವಿಸ್ತಾರ Explainer: New Parliament Building: ನೂತನ ಸಂಸತ್ ಭವನದ ರಚನೆ, ವಿನ್ಯಾಸ ಅದ್ಭುತ! ವಿಡಿಯೊ ನೋಡಿ
ಗಣೇಶ ಚತುರ್ಥಿ ದಿನವಾದ ಮಂಗಳವಾರದಿಂದ (ಸೆಪ್ಟೆಂಬರ್ 19ರಂದು) ನೂತನ ಸಂಸತ್ ಭವನದಲ್ಲಿ ಕಲಾಪಗಳು ನಡೆಯಲಿವೆ.
ನವದೆಹಲಿಯಲ್ಲಿ ನಿರ್ಮಿಸಿರುವ ನೂತನ ಸಂಸತ್ ಭವನಕ್ಕೆ (New Parliament Building) ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಉದ್ಘಾಟನೆಯಾಗಿದ್ದರೂ ಇದುವರೆಗೆ ಸಂಸತ್ ಕಲಾಪಗಳು ವೃತ್ತಾಕಾರದ ಹಳೆಯ ಭವನದಲ್ಲಿಯೇ ನಡೆದಿದ್ದವು. ಆದರೀಗ ನೂತನ ಸಂಸತ್ ಭವನದಲ್ಲಿ ಕಲಾಪ (Special Parliament Session) ಆರಂಭಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಗಣೇಶ ಚತುರ್ಥಿಯ (ಸೆಪ್ಟೆಂಬರ್ 19) ಶುಭದಿನದಂದೇ ಹೊಸ ಸಂಸತ್‌ನಲ್ಲಿ ಕಲಾಪ ಆರಂಭವಾಗಲಿದೆ.
ಈ ಹಿಂದೆ ಕಲಾಪಗಲು ನಡೆಯುತ್ತಿದ್ದ ಸಂಸತ್ ಭವನ ಸ್ವಾತಂತ್ರ್ಯೋತ್ತರ ಕಾಲದ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಹಲವು ಅಧಿಕಾರ ಹಸ್ತಾಂತರಗಳು, ಹಲವು ಚಾರಿತ್ರಿಕ ಕಲಾಪಗಳು, ಹಲವು ಜಾಗತಿಕ ಖ್ಯಾತಿಯ ಮುತ್ಸದ್ಧಿಗಳು ಹಾಗೂ ಚರ್ಚೆಗಳು…ಇತ್ಯಾದಿ. ಇಷ್ಟರಲ್ಲಿಯೇ ಈ ಸಂಸತ್ ಭವನ ಇತಿಹಾಸ ಸೇರಲಿದೆ. ಹೊಸ, ಭವ್ಯ ಸಂಸತ್ ಭವನ (New Parliament Building) ಹೊಸದೊಂದು ಇತಿಹಾಸಕ್ಕೆ ಮುನ್ನುಡಿ ಬರೆಯಲಿದೆ.
ಮೂಲ ಸಂಸತ್ ಭವನ ಕಟ್ಟಡ ರಚನೆಯಾದುದು 1927ರಲ್ಲಿ. ಹತ್ತಿರ ಹತ್ತಿರ ಒಂದು ಶತಮಾನ ಇದಕ್ಕೆ ಪೂರ್ಣಗೊಂಡಿದೆ. ಶತಮಾನ ಹಳೆಯದಾದ ಈ ರಚನೆ ಇಂದಿನ ಹಾಗೂ ಮುಂದಿನ ಅವಶ್ಯಕತೆಗಳನ್ನು ಪೂರೈಸಲು ಸಾಕಾಗದು. ಇದನ್ನು ಗಮನದಲ್ಲಿಟ್ಟುಕೊಂಡು ಲೋಕಸಭೆ ಮತ್ತು ರಾಜ್ಯಸಭೆ ಸಂಸತ್ತಿಗೆ ಹೊಸ ಕಟ್ಟಡ ನಿರ್ಮಿಸಲು ನಿರ್ಣಯಗಳನ್ನು ಅಂಗೀಕರಿಸಿದವು. ಡಿಸೆಂಬರ್ 10, 2020ರಂದು ಪ್ರಧಾನಿ ನರೇಂದ್ರ ಮೋದಿ ಹೊಸ ಭವನಕ್ಕೆ ಶಂಕುಸ್ಥಾಪನೆ ಮಾಡಿದರು.
ಎಷ್ಟು ದೊಡ್ಡದಿದೆ ಈ ಭವನ?
ಈ ಕಟ್ಟಡವನ್ನು 64,500 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ಸೆಂಟ್ರಲ್ ವಿಸ್ಟಾ ಕಟ್ಟಡಗಳ ಮಾದರಿಯಲ್ಲಿ ನಿರ್ಮಿಸಲಾದ ಹೊಸ ಸಂಸತ್ತು ತ್ರಿಕೋನಾಕೃತಿಯಲ್ಲಿದೆ. ಇದು ಲೋಕಸಭೆ, ರಾಜ್ಯಸಭೆ, ಸೆಂಟ್ರಲ್ ಲಾಂಜ್ ಮತ್ತು ಸಾಂವಿಧಾನಿಕ ಅಧಿಕಾರಿಗಳ ಕಚೇರಿಗಳನ್ನು ಹೊಂದಿದೆ. ಹೊಸ ಲೋಕಸಭೆಯನ್ನು ಭಾರತದ ರಾಷ್ಟ್ರೀಯ ಪಕ್ಷಿಯಾದ ನವಿಲಿನ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಹೊಸ ರಾಜ್ಯಸಭೆಯು ರಾಷ್ಟ್ರೀಯ ಪುಷ್ಪವಾದ ಕಮಲದ ಹೋಲಿಕೆಯನ್ನು ಹೊಂದಿದೆ. ರಾಷ್ಟ್ರಪತಿ ಭವನದಂತಹ ಭಾರತದ ಪ್ರಮುಖ ಪಾರಂಪರಿಕ ಕಟ್ಟಡಗಳಿಂದಲೂ ವಿವಿಧ ವಾಸ್ತುಶಿಲ್ಪದ ಪ್ರಭಾವಗಳನ್ನು ಪಡೆದಿದೆ.
ಹಳೆಯ ಕಟ್ಟಡದಲ್ಲಿ ಲೋಕಸಭೆಯಲ್ಲಿ 543 ಮತ್ತು ರಾಜ್ಯಸಭೆಯಲ್ಲಿ 250 ಸದಸ್ಯರು ಕುಳಿತುಕೊಳ್ಳಬಹುದು. ಹೊಸ ಸಂಸತ್ ಕಟ್ಟಡ ಲೋಕಸಭೆಯಲ್ಲಿ 888 ಸದಸ್ಯರು ಮತ್ತು 384 ಸದಸ್ಯರಿಗೆ ಸ್ಥಳಾವಕಾಶವನ್ನು ಹೊಂದಿದೆ. ಕೇಂದ್ರ ಪ್ರಾಂಗಣದಲ್ಲಿ ಎರಡೂ ಸದನಗಳ ಸದಸ್ಯರು ಮುಕ್ತವಾಗಿ ಸಭೆ ಸೇರಲು ಸ್ಥಳವಿದೆ. ಜಂಟಿ ಅಧಿವೇಶನ ನಡೆದಾಗ ಇದನ್ನು ಉಪಯೋಗಿಸಿಕೊಳ್ಳಲಾಗುತ್ತದೆ. ಪುನರಾಭಿವೃದ್ಧಿಯಾದ ಶ್ರಮ ಶಕ್ತಿ ಭವನದಲ್ಲಿ ಸಂಸದರಿಗಾಗಿ ಸುಮಾರು 800 ಕೋಣೆಗಳನ್ನು ನಿರ್ಮಿಸಲಾಗುತ್ತಿದೆ.
ನೂತನ ಕಟ್ಟಡವು ಆರು ಸಮಿತಿ ಕೊಠಡಿಗಳನ್ನು ಹೊಂದಿರುತ್ತದೆ. ಪ್ರಸ್ತುತ ಕಟ್ಟಡದಲ್ಲಿ ಅಂತಹ ಮೂರು ಕೊಠಡಿಗಳಷ್ಟೇ ಇವೆ. ಮಂತ್ರಿಮಂಡಲದ ಬಳಕೆಗೆ 92 ಕೊಠಡಿಗಳು ಇರುತ್ತವೆ. ಹೊಸ ಕಟ್ಟಡದಲ್ಲಿ, ಲೋಕಸಭೆ ಮತ್ತು ರಾಜ್ಯಸಭೆಗಳ ಪ್ರತಿ ಬೆಂಚ್‌ನಲ್ಲಿ ಇಬ್ಬರು ಸದಸ್ಯರು ಅಕ್ಕಪಕ್ಕದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿ ಆಸನದಲ್ಲಿ ಡಿಜಿಟಲ್ ವ್ಯವಸ್ಥೆಗಳು ಮತ್ತು ಟಚ್ ಸ್ಕ್ರೀನ್‌ಗಳನ್ನು ಅಳವಡಿಸಲಾಗುತ್ತಿದೆ.
ಹಳೆಯ ಸಂಸತ್ ಕಟ್ಟಡದ ಬಳಕೆ ಮುಂದುವರಿಯಲಿದೆ. ಎರಡು ಕಟ್ಟಡಗಳು ಒಂದಕ್ಕೊಂದು ಪೂರಕವಾಗಿರುವಂತೆ ಇವೆ. ಇವುಗಳ ಮೂಲ ವಾಸ್ತುಶಿಲ್ಪದ ತಂತ್ರವೇ ಹಾಗಿದೆ. ಹಳೆಯ ಕಟ್ಟಡದ ಐತಿಹಾಸಿಕ ಪರಂಪರೆಯನ್ನು ಉಳಿಸಿಕೊಳ್ಳಲು ಕಾಳಜಿ ವಹಿಸಲಾಗುತ್ತದೆ. ಸಂಸತ್ತಿನ ಸಂಕೀರ್ಣದಲ್ಲಿರುವ ಎಲ್ಲಾ ಪ್ರತಿಮೆಗಳನ್ನು ಸಹ ಪುನಃಸ್ಥಾಪಿಸಲಾಗುತ್ತದೆ. ಉನ್ನತ ಮಟ್ಟದ ಭದ್ರತಾ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ.
ಇದನ್ನು ಓದಿ : Special Parliament Session: ಸಂಸತ್ತಿನ ಮೆಟ್ಟಿಲಿಗೆ ನಾನೇಕೆ ನಮಿಸಿದೆ? ಭಾವುಕರಾದ ಮೋದಿ ಹೇಳಿದ್ದಿಷ್ಟು…
ಹೊಸ ಕಟ್ಟಡದಲ್ಲಿ ಭಾರತದ ಪ್ರಜಾಪ್ರಭುತ್ವ ಪರಂಪರೆಯನ್ನು ಪ್ರದರ್ಶಿಸುವ ಸಂವಿಧಾನ ಭವನ ಇರಲಿದೆ. ಲಕ್ಷಾಂತರ ಮುದ್ರಿತ ಹಾಗೂ ಡಿಜಿಟಲ್ ಬುಕ್‌ಗಳನ್ನು ಹೊಂದಿರುವ ಗ್ರಂಥಾಲಯವಿರುತ್ತದೆ. ಊಟದ ಕೋಣೆ ಮತ್ತು ಸದಸ್ಯರಿಗೆ ಸಾಕಷ್ಟು ಪಾರ್ಕಿಂಗ್ ವ್ಯವಸ್ಥೆ ಸೇರಿವೆ. ಹೊಸ ಕಟ್ಟಡವು ಮಳೆನೀರು ಕೊಯ್ಲು ಮತ್ತು ನೀರಿನ ಮರುಬಳಕೆ ವ್ಯವಸ್ಥೆಯನ್ನು ಹೊಂದಿದೆ. ಕಟ್ಟಡದಾದ್ಯಂತ 100% ಯುಪಿಎಸ್ ಪವರ್ ಬ್ಯಾಕಪ್ ಒದಗಿಸಲಾಗಿದೆ.
ಹೊಸ ಕಟ್ಟಡದ ವಿನ್ಯಾಸವನ್ನು ಅಹಮದಾಬಾದ್ ಮೂಲದ HCP ಡಿಸೈನ್ ಮತ್ತು ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ಮಾಡಿದೆ. ಕೇಂದ್ರದ ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಗಳ ಭಾಗವಾದ ಹೊಸ ಸಂಸತ್ ಕಟ್ಟಡ ನಿರ್ಮಾಣದ ಗುತ್ತಿಗೆಯನ್ನು ಟಾಟಾ ಪ್ರಾಜೆಕ್ಟ್ಸ್ ಪಡೆದಿದ್ದು, ಇದನ್ನು ನಿರ್ಮಿಸಿದೆ.
ಅಧಿಕಾರದ ಹಸ್ತಾಂತರಕ್ಕೆ ಸೆಂಗೋಲ್?
ಹೊಸ ಸಂಸತ್ ಭವನದ ಇನ್ನೊಂದು ಆಕರ್ಷಣೆ ಎಂದರೆ, ಪುರಾತನ ಭಾರತದಲ್ಲಿ ಅಧಿಕಾರದ ಹಸ್ತಾಂತರಕ್ಕೆ ಬಳಸುತ್ತಿದ್ದ ಸೆಂಗೋಲ್ ಅಥವಾ ರಾಜದಂಡ. ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ಆಡಳಿತ ನಡೆಸಿದ್ದ ಚೋಳ ರಾಜನ ಅವಧಿಯಲ್ಲಿ ಮಹತ್ವ ಪಡೆದ ರಾಜದಂಡ ಇದಾಗಿತ್ತು. ಸೆಂಗೋಲ್ ಸದ್ಯ ಅಲಹಾಬಾದ್ ಮ್ಯೂಸಿಯಂನಲ್ಲಿದೆ. ಅದನ್ನು ತಮಿಳಿನ ಹಿರಿಯರು ಪ್ರಧಾನಿಗೆ ನೀಡಲಿದ್ದು, ಅದನ್ನು ಲೋಕಸಭೆಯ ಸ್ಪೀಕರ್ ಕುರ್ಚಿಯ ಸಮೀಪ ಪ್ರಧಾನಿ ಇಡಲಿದ್ದಾರೆ. ಚಿನ್ನದಿಂದ ಮಾಡಿದ ಈ ದಂಡವನ್ನು ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ರಾಜಾಜಿಯವರು ತಮಿಳುನಾಡಿನ ಚಿನ್ನಾಭರಣ ತಯಾರಕರಿಂದ ಮಾಡಿಸಿ ತರಿಸಿ ನೆಹರೂ ಅವರಿಗೆ ನೀಡಿದ್ದರು. ನಂತರ ಇದು ಮ್ಯೂಸಿಯಂ ಸೇರಿತ್ತು.
ಬೃಹತ್ ರಾಷ್ಟ್ರ ಲಾಂಛನ
ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸಂಸತ್ತಿನ ಕಟ್ಟಡದ ಮೇಲಿರುವ ರಾಷ್ಟ್ರೀಯ ಲಾಂಛನವಾದ ನಾಲ್ಕು ಸಿಂಹಗಳನ್ನು ಅನಾವರಣಗೊಳಿಸಿದ್ದಾರೆ. 6.5 ಮೀಟರ್ ಎತ್ತರವಾಗಿರುವ ಈ ಲಾಂಛನ 9,500 ಕೆಜಿ ತೂಕ ಹೊಂದಿದ್ದು ಕಂಚಿನಿಂದ ಮಾಡಲ್ಪಟ್ಟಿದೆ.
ಈ ಕಟ್ಟಡದ ನಿರ್ಮಾಣಕ್ಕೆಂದು ತೆಗೆದಿರಿಸಲಾದ ಹಣದ 2600 ಕೋಟಿ ರೂ. ಇದುವರೆಗೆ ಇದರ ನಿರ್ಮಾಣದಲ್ಲಿ ಸುಮಾರು 23,04,095 ಮಾನವ ದಿನಗಳಷ್ಟು ಉದ್ಯೋಗ ನೀಡಲಾಗಿದೆ. 26,045 ಟನ್ ಸ್ಟೀಲ್ ಬಳಸಲಾಗಿದೆ. 63,807 ಟನ್ ಸಿಮೆಂಟ್ ಹಾಗೂ 9,689 ಘನ ಮೀಟರ್ ಹಾರುಬೂದಿ ಬಳಸಲಾಗಿದೆ.
-
ಪ್ರಮುಖ ಸುದ್ದಿ12 hours ago
Lina Mukherjee: ಇಸ್ಲಾಮಿಕ್ ದೇಶದಲ್ಲಿ ಹಂದಿ ಮಾಂಸ ತಿಂದ ಟಿಕ್ಟಾಕ್ ಸ್ಟಾರ್ಗೆ 2 ವರ್ಷ ಜೈಲು ಶಿಕ್ಷೆ!
-
ಪ್ರಮುಖ ಸುದ್ದಿ3 hours ago
Ipsos poll Survey: ಟ್ರುಡೋ ಜನಪ್ರಿಯತೆ ಕುಸಿತ, ಕೆನಡಾ ಪಿಎಂ ಆಗಲು ಪ್ರತಿಪಕ್ಷ ನಾಯಕನೇ ಬೆಸ್ಟ್!
-
ಉಡುಪಿ9 hours ago
FB Profile Deleted: 20ಕ್ಕೂ ಅಧಿಕ ಹಿಂದು ಜಾಗರಣ ವೇದಿಕೆ ನಾಯಕರ ಫೇಸ್ ಬುಕ್ ಪ್ರೊಫೈಲ್ ಏಕಕಾಲದಲ್ಲಿ ಡಿಲೀಟ್!
-
ಸುವಚನ17 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕಲೆ/ಸಾಹಿತ್ಯ23 hours ago
Painting: ಕೇವಲ 328 ರೂ.ಗೆ ಖರೀದಿಸಿದ ಪೇಂಟಿಂಗ್ 1.5 ಕೋಟಿ ರೂಪಾಯಿಗೆ ಹರಾಜು!
-
ಕರ್ನಾಟಕ22 hours ago
Honey Bee Attack: ಶವ ಸಂಸ್ಕಾರಕ್ಕೆಂದು ಹೋದವರ ಮೇಲೆ ಹೆಜ್ಜೇನು ದಾಳಿ; 10 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ
-
ಗ್ಯಾಜೆಟ್ಸ್6 hours ago
YouTube: ಯುಟ್ಯೂಬ್ ವಿಡಿಯೋ ಮಾಡುವುದು ಇನ್ನೂ ಸುಲಭ! ಹೊಸ ಎಡಿಟಿಂಗ್ ಆ್ಯಪ್ ಲಾಂಚ್
-
ಆರೋಗ್ಯ15 hours ago
Health Tips: ಎಳನೀರು ಒಳ್ಳೆಯದೆಂದು ಕುಡಿಯುವ ಮೊದಲು ಅದರ ಅವಗುಣಗಳೂ ಗೊತ್ತಿರಲಿ!