ಹೊಸದಿಲ್ಲಿ: ಜಿ20 ಶೃಂಗಸಭೆ (G20 Summit 2023) ಮುಗಿದರೂ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಇನ್ನೂ ಭಾರತದಲ್ಲೇ ಇದ್ದಾರೆ. ಅದಕ್ಕೆ ಕಾರಣ ಕೆಟ್ಟುಹೋಗಿರುವ ಅವರ ವಿಮಾನ. ಕೆನಡಾದ ಪ್ರಧಾನಿ ಆಗಮಿಸಿದ ವಿಮಾನವು ಕೆಟ್ಟುಹೋಗಿದ್ದು, ತಮ್ಮ ದೇಶದ ನಿಯೋಗದೊಂದಿಗೆ ಜಸ್ಟಿನ್ ಟ್ರುಡೊ ಇಲ್ಲೇ ಬಾಕಿಯಾಗಿದ್ದಾರೆ.
ಟ್ರುಡೊ ಅವರಿಗಾಗಿ ಬ್ಯಾಕಪ್ ವಿಮಾನ ಅಥವಾ ಮೂಲ ವಿಮಾನದ ದುರಸ್ತಿಯ ಬಿಡಿಭಾಗ ಭಾರತಕ್ಕೆ ಬರಬೇಕಿದೆ. ಈ ಎರಡರಲ್ಲಿ ಯಾವುದು ಮೊದಲು ಆಗುತ್ತದೋ ಅದನ್ನನುಸರಿಸಿ ಮೂಲ ವಿಮಾನದಲ್ಲಿ ಅಥವಾ ಬೇರೆ ವಿಮಾನದಲ್ಲಿ ಅವರು ತಮ್ಮ ದೇಶಕ್ಕೆ ಮರಳಲಿದ್ದಾರೆ ಎಂದು ಕೆನಡಾದ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಿಖರವಾಗಿ ಏನನ್ನು ಬದಲಿಸಬೇಕು ಎಂಬುದರ ಕುರಿತು ವಿವರಗಳನ್ನು ಅವರು ನೀಡಿಲ್ಲ.
“ಕೆನಡಾದ ಸಶಸ್ತ್ರ ಪಡೆಗಳು ಕೆನಡಾದ ನಿಯೋಗವನ್ನು ಮನೆಗೆ ತಲುಪಿಸಲು ತಮ್ಮ ಪ್ರಯತ್ನ ಮುಂದುವರಿಸಿವೆ. ಇತ್ತೀಚಿನ ಮಾಹಿತಿ ಪ್ರಕಾರ ಮಂಗಳವಾರ ತಡರಾತ್ರಿಯ ಅವರು ಹೊರಡುವುದು ಸಂಭವನೀಯ. ಆದರೆ ಪರಿಸ್ಥಿತಿ ಅನಿಶ್ಚಿತವಾಗಿದೆ” ಎಂದು ಟ್ರುಡೊ ಅವರ ಕಚೇರಿ ತಿಳಿಸಿದೆ.
ಕೆನಡಾ ಪ್ರಧಾನಿ ಟ್ರುಡೊ ಅವರ ಭಾರತ ಭೇಟಿ ಈ ಹಿಂದೆಯೂ ಮುಜುಗರದ ಸನ್ನಿವೇಶಗಳನ್ನು ತಂದೊಡ್ಡಿದೆ. 2018ರಲ್ಲಿ ಅವರು ಇಲ್ಲಿಗೆ ನೀಡಿದ ಮೊದಲ ಅಧಿಕೃತ ಪ್ರವಾಸವು ರಾಜತಾಂತ್ರಿಕ ದುರಂತವೇ ಆಗಿತ್ತು. ಭಾರತೀಯ ರಾಜಕಾರಣಿಯೊಬ್ಬರನ್ನು ಕೆನಡಾದ ನೆಲದಲ್ಲಿ ಹತ್ಯೆ ಮಾಡಲು ಪ್ರಯತ್ನಿಸಿದ್ದಕ್ಕಾಗಿ ಶಿಕ್ಷೆಗೊಳಗಾದ ವ್ಯಕ್ತಿಯೊಬ್ಬ ಕೆನಡಾದ ಅತಿಥಿಗಳ ಪಟ್ಟಿಯಲ್ಲಿ ಸೇರಿಕೊಂಡಿದ್ದ. ಈ ಬಾರಿ, ಅವರ ವಿಮಾನ ಹಾಳಾಗುವುದಕ್ಕೂ ಮುನ್ನವೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಟ್ರೊಡೋ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. “ಕೆನಡಾದಲ್ಲಿ ಭಾರತ-ವಿರೋಧಿ ಉಗ್ರಗಾಮಿ ಚಟುವಟಿಕೆಗಳಿಗೆ ಮೌನ ಸಮ್ಮತಿ ಅನುಮತಿ ನೀಡಿದ್ದಾರೆʼʼ ಎಂದು ಸಾರ್ವಜನಿಕವಾಗಿ ಟೀಕಿಸಿದ್ದರು.
ಇದೇ ವೇಳೆ ಟ್ರುಡೊ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ, ಕೆನಡಾದ ವ್ಯವಹಾರಗಳಲ್ಲಿ ಭಾರತವು ವಿದೇಶಿ ಹಸ್ತಕ್ಷೇಪದ ಪ್ರಮುಖ ಮೂಲವಾಗಿದೆ ಎಂದು ಹೇಳಿದ್ದಾರೆ. ಇಬ್ಬರು ಪ್ರಧಾನ ಮಂತ್ರಿಗಳು ಶೃಂಗಸಭೆಯಲ್ಲಿ ಔಪಚಾರಿಕ ದ್ವಿಪಕ್ಷೀಯ ಸಭೆಯನ್ನು ನಡೆಸಿಲ್ಲ. ಆದರೆ ಸಂಕ್ಷಿಪ್ತ ಸಂಭಾಷಣೆಯ ಸಂದರ್ಭದಲ್ಲಿ ವಿದೇಶಿ ಹಸ್ತಕ್ಷೇಪ ಮತ್ತು “ಕಾನೂನಿಗೆ ಗೌರವ”ವನ್ನು ಚರ್ಚಿಸಿದ್ದಾರೆ ಎಂದು ಟ್ರುಡೊ ಹೇಳಿದ್ದಾರೆ.
ಟ್ರುಡೊ ಮತ್ತು ಇತರ ಉನ್ನತ ಅಧಿಕಾರಿಗಳನ್ನು ವಿದೇಶಕ್ಕೆ ಸಾಗಿಸುವ ಏರ್‌ಬಸ್ A310ಗಳು 1980ರ ದಶಕದ್ದಾಗಿವೆ. ಇವುಗಳ ಪ್ರವಾಸದ ನಡುನಡುವೆ ಇಂಧನ ತುಂಬಲು ನಿಲ್ಲಿಸಬೇಕಾಗುತ್ತದೆ. ಆಗಾಗ್ಗೆ ತಮ್ಮ ಅಂತಿಮ ಗಮ್ಯಸ್ಥಾನವನ್ನು ತಲುಪುವ ಮೊದಲು ಅಲಾಸ್ಕಾ ಮತ್ತು ಜಪಾನ್‌ನಲ್ಲಿ ಇವರು ತಂಗುತ್ತಾರೆ. 1990ರ ದಶಕದಲ್ಲಿ ಆಗಿನ ಪ್ರಧಾನಿ ಬ್ರಿಯಾನ್ ಮುಲ್ರೋನಿ ಸರ್ಕಾರ ಇವುಗಳನ್ನು ಖರೀದಿಸಿ ದುರಸ್ತಿ ಮಾಡಿದ್ದರು. ಇದು ವಿವಾದ ಸೃಷ್ಟಿಸಿತ್ತು. ಮುಲ್ರೋನಿಯ ಉತ್ತರಾಧಿಕಾರಿ ಜೀನ್ ಕ್ರೆಟಿಯನ್ ಇವುಗಳನ್ನು “ಹಾರುವ ತಾಜ್ ಮಹಲ್” ಎಂದು ಅಪಹಾಸ್ಯ ಮಾಡಿದ್ದರು ಮತ್ತು ಅಧಿಕೃತ ಪ್ರವಾಸಗಳಿಗೆ ಇವುಗಳನ್ನು ಬಳಸಲು ನಿರಾಕರಿಸಿದರು.
ಏತನ್ಮಧ್ಯೆ, ಟ್ರೂಡೊ ಅವರ ಅಧಿಕೃತ ನಿವಾಸ ಕೂಡ ಭಯಾನಕ ಸ್ಥಿತಿಯಲ್ಲಿದೆ. 2015ರಲ್ಲಿ ಆಯ್ಕೆಯಾದ ನಂತರ ಅವರು ಮತ್ತು ಅವರ ಕುಟುಂಬ ಅಲ್ಲಿ ವಾಸಿಸುತ್ತಿಲ್ಲ. ಒಟ್ಟಾವಾದ 24 ಸಸೆಕ್ಸ್ ಡ್ರೈವ್‌ನಲ್ಲಿರುವ ಅಧಿಕೃತ ಮನೆಯು ಕಲ್ನಾರಿನ ಷೀಟ್ ಹೊದೆಸಿದ, ದೋಷಯುಕ್ತ ವೈರಿಂಗ್, ಹಾಗೂ ತೂತಾದ ಕಿಟಕಿಗಳಿಂದ ತುಂಬಿದೆ. ಭದ್ರತಾ ಹಿನ್ನೆಲೆಯಲ್ಲಿ ಈ ಹದಗೆಟ್ಟ ಮನೆಯಲ್ಲಿ ಅವರು ವಾಸಿಸುತ್ತಿಲ್ಲ. ಅದನ್ನು ಸರಿಪಡಿಸಲು ಸಾರ್ವಜನಿಕ ಹಣವನ್ನು ಖರ್ಚು ಮಾಡಲು ಹಿಂದಿನ ಪ್ರಧಾನಿಗಳು ನಿರಾಕರಿಸಿದ್ದರು. ಸದ್ಯಕ್ಕೆ ಟ್ರೂಡೊ ಅವರು ಮತ್ತೊಂದು ಸರ್ಕಾರಿ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ.
ಇದನ್ನೂ ಓದಿ: G20 Summit 2023: ಭಾರತದ ಪ್ರವಾಸ ಪ್ರಮುಖವಾಗಿತ್ತೆಂದು, ಭೇಟಿಯ ವಿಡಿಯೋ ಷೇರ್ ಮಾಡಿದ ಬ್ರಿಟನ್ ಪಿಎಂ