ನವದೆಹಲಿ: ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದಿಲ್ಲಿಗೆ ಆಗಮಿಸಿರುವ ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ (Britain PM Rishi Sunak) ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ (Akshata Murthy) ಅವರು ಶುಕ್ರವಾರ ರಾತ್ರಿ ಕೇಂದ್ರ ದಿಲ್ಲಿ ರಸ್ತೆಗಳಲ್ಲಿ (Delhi Roads) ವಾಕ್ ಮಾಡುತ್ತಿರುವ ಚಿತ್ರಗಳು ವೈರಲ್ ಆಗಿವೆ. ಪಿಎಂ ಸುನಕ್ ಮತ್ತು ಪತ್ನಿ ಅಕ್ಷಿತಾ ಅವರು ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು ನಡೆದುಕೊಂಡು ಹೋಗುತ್ತಿದ್ದಾರೆ ಮತ್ತು ಬೆಂಗಾವಲ ಪಡೆ ಅವರಿಗೆ ಪಹರೆ ಮಾಡುತ್ತಿರುವುದನ್ನು ಕಾಣಬಹುದು. ಶುಕ್ರವಾರ ರಾತ್ರಿ ಇಂಗ್ಲೆಂಡ್ ಪಿಎಂ ರಿಷಿ ಸುನಕ್ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಉಭಯ ನಾಯಕರ ಭೇಟಿ ಸಾಧ್ಯವಾಗಿಲ್ಲ(G20 Summit 2023).
ಶುಕ್ರವಾರ ದಿಲ್ಲಿಯ ಪಲಾಮ್ ಏರ್‌ಸ್ಟ್ರಿಪ್‌ಗೆ ಸುನಕ್ ಅವರು ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವರೊಂದಿಗೆ ಬಂದಿಳಿದರು. ಈ ವೇಳೆ, ಮಾತನಾಡಿದ ಅವರು ತಮ್ಮನ್ನೂ ಸೇರಿದಂತೆ ಜಗತ್ತಿನ ಹಲವು ದೇಶಗಳಿಗೆ ಪರಿಣಾಮ ಬೀರುತ್ತಿರುವ ವಿಷಯಗಳ ಕುರಿತು ಗಮನ ಸೆಳೆಯುವುದಾಗಿ ಹೇಳಿದರು. ಕೇಂದ್ರ ಸಚಿವ ಅಶ್ವಿನಿ ಚೌಬೇ, ಭಾರತದಲ್ಲಿರುವ ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ಹಾಗೂ ಹಿರಿಯ ರಾಜತಾಂತ್ರಿಕ ಅಧಿಕಾರಿಗಳು ಬ್ರಿಟನ್ ಪಿಎಂ ಸುನಕ್ ಹಾಗೂ ಅವರು ಪತ್ನಿಯನ್ನು ಬರಮಾಡಿಕೊಂಡರು.
ನಾನು ಜಿ20 ಶೃಂಗಸಭೆಗೆ ಮುಂಚಿತವಾಗಿ ದೆಹಲಿಗೆ ಬಂದಿಳಿದಿದ್ದೇನೆ. ನಮ್ಮಲ್ಲಿ ಪ್ರತಿಯೊಬ್ಬರ ಮೇಲೆ ಪರಿಣಾಮ ಬೀರುವ ಕೆಲವು ಸವಾಲುಗಳನ್ನು ಪರಿಹರಿಸಲು ನಾನು ವಿಶ್ವ ನಾಯಕರನ್ನು ಭೇಟಿಯಾಗುತ್ತಿದ್ದೇನೆ. ಇದಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡಬಹುದು ಎಂದು ರಿಷಿ ಸುನಕ್ ಅವರು ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: G20 Summit 2023: ಜಿ20 ಶೃಂಗಸಭೆ; ನಾಯಕರ ನಿರ್ಣಯ ಅಂಗೀಕರಿಸಿದ ಮೋದಿ, ಮಹತ್ವದ ಘಟ್ಟದತ್ತ ಸಭೆ
ಪ್ರಧಾನಿ ನರೇಂದ್ರ ಮೋದಿ ಅವರು ಸುನಕ್ ಅವರನ್ನು ಸ್ವಾಗತಿಸಿದರು ಮತ್ತು ಫಲಪ್ರದ ಶೃಂಗಸಭೆಯನ್ನು ಎದುರು ನೋಡುತ್ತಿರುವುದಾಗಿ ಹೇಳಿದರು. “ರಿಷಿ ಸುನಕ್ ಅವರಿಗೆ ಸ್ವಾಗತ! ಉತ್ತಮ ಗ್ರಹಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡುವ ಫಲಪ್ರದ ಶೃಂಗಸಭೆಯನ್ನು ಎದುರು ನೋಡುತ್ತಿದ್ದೇವೆ ಎಂದು ಮೋದಿ ಅವರು ಎಕ್ಸ್ ವೇದಿಕೆಯಲ್ಲಿ ಹೇಳಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.