ಹೊಸದಿಲ್ಲಿ: ಇಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ (G20 Summit 2023) ಸಾಕಷ್ಟು ಅವಮಾನ ಎದುರಿಸಿ ತವರಿಗೆ ಮರಳಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ (Canada PM Justin Trudeau) ಅವರಿಗೆ ಅಲ್ಲೂ ಅವಮಾನ ಎದುರಾಗಿದೆ. ಸ್ವದೇಶದವರೇ ಟ್ರುಡೊ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಜಿ20 ಸಭೆಗೆ ಹೊಸದಿಲ್ಲಿಗೆ ಆಗಮಿಸಿದ್ದ ಜಸ್ಟಿನ್ ಟ್ರುಡೊ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಎಕ್ಸ್‌ನಲ್ಲಿ ಇತರ ಹಲವು ನಾಯಕರಿಗೆ ಮಾಡಿದ್ದಂತೆ ಸ್ವಾಗತ ಕೋರಿರಲಿಲ್ಲ. ನಂತರ ಟ್ರುಡೊ ಅವರ ಜತೆ ಮಾತುಕತೆ ನಡೆಸಿದ್ದ ಸಂದರ್ಭದಲ್ಲಿ, ಕೆನಡಾದಲ್ಲಿ ಖಲಿಸ್ತಾನಿ ಉಗ್ರರ (Khalistan terrorism) ಚಟುವಟಿಕೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಆದರೆ ಟ್ರುಡೊ, ʼತಮ್ಮ ನೆಲದಲ್ಲಿ ಶಾಂತಿಯು ಪ್ರತಿಭಟನೆʼಗಳ ಹಕ್ಕನ್ನು ಕಾಪಾಡುವುದಾಗಿ ಹೇಳಿದ್ದರು. ತದನಂತರ, ʼಕೆನಡಾದ ಆಂತರಿಕ ವಿಚಾರಗಳಲ್ಲಿ ಭಾರತ ಹಸ್ತಕ್ಷೇಪ ಮಾಡುತ್ತಿದೆʼ ಎಂದು ದೂರಿದ್ದರು.
ಜಿ20 ಸಭೆಯ ಬಳಿಕ ಟ್ರುಡೊ ಅವರ ವಿಮಾನ ಹಾಳಾಗಿತ್ತು. ಕೆನಡಾ ಪ್ರಧಾನಿಯ ನಿಯೋಗ ಒಂದು ಹೆಚ್ಚುವರಿ ದಿನ ಇಲ್ಲೇ ಉಳಿದುಕೊಳ್ಳುವಂತಾಗಿತ್ತು. ʼಏರ್ ಇಂಡಿಯಾ ಒನ್ʼ ಪ್ರಯಾಣಕ್ಕೆ ನೀಡುವುದಾಗಿ ಭಾರತ ಆಫರ್ ಮಾಡಿದ್ದರೂ ಟ್ರುಡೊ ಬೇಡ ಎಂದಿದ್ದರು. ನಂತರ ಬೇರೊಂದು ವಿಮಾನದಲ್ಲಿ ಅವರು ಕೆನಡಾಗೆ ತೆರಳಿದ್ದರು. ʼಮೋದಿಯವರಿಂದ ಟ್ರುಡೊ ಕಟು ಟೀಕೆ ಎದುರಿಸಿದರುʼ ಎಂದು ರಾಯ್ಟರ್ಸ್‌ನಂತಹ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು.
Putting partisanship aside, no one likes to see a Canadian prime minister repeatedly humiliated & trampled upon by the rest of the world. pic.twitter.com/TOR3p4gKgn
— Pierre Poilievre (@PierrePoilievre) September 10, 2023
ಕೆನಡಾದ ಪ್ರತಿಪಕ್ಷ ನಾಯಕ ಪಿಯರೆ ಪೊಲಿವ್ರೆ ಅವರು ಸೋಶಿಯಲ್ ಮೀಡಿಯಾದಲ್ಲಿ ʼಟೊರಾಂಟೊ ಸನ್ʼ ಪತ್ರಿಕೆಯ ಮುಖಪುಟವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಮೋದಿಯವರು ಟ್ರುಡೊಗೆ ವೇದಿಕೆಯಿಂದಾಚೆಗೆ ದಾರಿ ತೋರಿಸುತ್ತಿದ್ದಾರೆ. ಪತ್ರಿಕೆ ಅದಕ್ಕೆ ʼದಿಸ್ ವೇ ಔಟ್ʼ ಎಂದು ಶೀರ್ಷಿಕೆ ನೀಡಿದೆ. ʼʼಸಹಭಾಗಿತ್ವ ಹಾಗಿರಲಿ, ಯಾರೂ ಕೂಡ ನಮ್ಮ ಪ್ರಧಾನಿ ಸತತ ಅವಮಾನಕ್ಕೆ ಒಳಗಾಗುವುದನ್ನು ಹೀಗೆ ನೋಡಲು ಬಯಸುವುದಿಲ್ಲʼʼ ಎಂದು ಪಿಯರೆ ಹೇಳಿದ್ದಾರೆ. ʼಜಿ20ಯಲ್ಲಿ ಟ್ರುಡೊಗೆ ಸ್ನೇಹಿತರೇ ಇರಲಿಲ್ಲʼ ಎಂದು ಪತ್ರಿಕೆ ಬರೆದಿದೆ.
ಪತ್ರಿಕೆಯ ಇನ್ನೊಂದು ವರದಿ ಹೇಳಿರುವ ಪ್ರಕಾರ ಟ್ರುಡೊ ಅವರು ಮೋದಿಯವರು ನಾಯಕರಿಗೆ ನೀಡಿದ ಡಿನ್ನರ್‌ಗೂ ಹೋಗಿರಲಿಲ್ಲ. ಯಾಕೆಂದು ಟ್ರುಡೊ ಕಚೇರಿ ತಿಳಿಸಿಲ್ಲ. ನಂತರ ʼಗ್ಲೋಬಲ್ ಬಯೊಫ್ಯೂಯೆಲ್ಸ್ ಒಕ್ಕೂಟʼದ ಉದ್ಘಾಟನೆಯನ್ನೂ ಜಸ್ಟಿನ್ ʼಬೇರೆ ಕೆಲಸ ಇದೆʼ ಎಂದು ತಪ್ಪಿಸಿಕೊಂಡಿದ್ದರು. ಇದರಿಂದೆಲ್ಲ ಕೆರಳಿರುವ ಕೆನಡಾದ ಹಲವು ಸೋಶಿಯಲ್ ಮೀಡಿಯಾ ಬಳಕೆದಾರರು, ಟ್ರುಡೊ ಕೆನಡಾಗೆ ಮುಜುಗರ ತಂದಿಟ್ಟಿದ್ದಾರೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: G20 Summit 2023: ‘ಟ್ರೆಷರ್ ಚೆಸ್ಟ್’ನಲ್ಲಿ ವಿಶ್ವ ನಾಯಕರು, ಅವರ ಪತ್ನಿಗೆ ಮೋದಿ ಕೊಟ್ಟ ಗಿಫ್ಟ್ ಏನು?