Site icon Vistara News

G20 Summit 2023: ದಿಲ್ಲಿ ಜಿ20 ಶೃಂಗ ಸಭೆ ಸಕ್ಸೆಸ್! ಮಾನವ ಕೇಂದ್ರಿತ ನೀತಿಗೆ ವಿಶ್ವನಾಯಕರ ಬಹುಪರಾಕ್!

Narendra Modi At G20 Summit

G20 Summit 2023: PM Narendra Modi's remarks during Session 1 on One Earth at Bharat Mandapam

ನವದೆಹಲಿ: ದಿಲ್ಲಿಯ ಭಾರತ್ ಮಂಟಪದಲ್ಲಿ (Bharat Mandapam) ಶನಿವಾರ 18ನೇ ಜಿ20 ಶೃಂಗಸಭೆಗೆ (G20 Summit 2023) ಚಾಲನೆ ದೊರೆಯಿತು. ಈ ಸಭೆಗೆ ಜಾಗತಿಕ ನಾಯಕರನ್ನು ಸ್ವಾಗತಿಸಿದ ಪ್ರಧಾನಿ ನರೇಂದ್ರ ಮೋದಿ(PM Narendra Modi), ಮೊದಲ ಅಧಿವೇಶನ ಉದ್ದೇಶಿಸಿ ಮಾತನಾಡಿದರು. “ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ-20 ಸಭೆಯು ಜಗತ್ತನ್ನು ಒಳಗೊಂಡು ನಡೆಯುತ್ತಿರುವ ಸಭೆಯಾಗಿದೆ. ಜಗತ್ತು ಒಗ್ಗೂಡುವ ಮೂಲಕ ಏಳಿಗೆ ಹೊಂದಬೇಕು ಎಂಬುದು ನಮ್ಮ ಆಶಯವಾಗಿದೆ” ಎಂದು ತಿಳಿಸಿದರು. ಬಳಿಕ ಮಧ್ಯಾಹ್ನದ ಹೊತ್ತಿಗೆ ಭಾರತದ ಹೊರಡಿಸಿದ ನವದೆಹಲಿ ಘೋಷಣೆಗೆ (G20 New Delhi Leaders’ Declaration) ಶೃಂಗದಲ್ಲಿ ಪಾಲ್ಗೊಂಡ ಎಲ್ಲ ರಾಷ್ಟ್ರಗಳು ತಮ್ಮ ಸಮ್ಮತಿ ಸೂಚಿಸಿದವು. ಇದರೊಂದಿಗೆ 18ನೇ ಜಿ20 ಶೃಂಗ ಸಭೆ ಬಹುತೇಕ ಯಶಸ್ವಿಯಾದಂತಾಗಿದೆ. ಈ ವೇಳೆ, ಹಲವು ದ್ವಿಪಕ್ಷೀಯ ಮಾತುಕತೆಗಳೂ ಕೂಡ ಯಶಸ್ವಿಯಾಗಿ ನಡೆದವು. ಶೃಂಗಸಭೆಯ ಎರಡನೇ ದಿನವಾದ ಭಾನುವಾರ(ಸೆ.10) ಇನ್ನಷ್ಟು ಮಹತ್ವದ ಚರ್ಚೆಗಳು ನಡೆಯಲಿವೆ.

ಪ್ರಧಾನಿ ಮೋದಿ ಹೇಳಿದ್ದೇನು?

“ಭಾರತದಲ್ಲಿ ಸಬ್‌ ಕಾ ಸಾಥ್‌ ಸಬ್‌ ಕಾ ವಿಶ್ವಾಸ್‌ ಎಂಬ ಮಂತ್ರದಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಇದೇ ಸೂತ್ರದಂತೆ ವಿಶ್ವವೂ ಮುನ್ನಡೆದರೆ ಮಾನವ ಏಳಿಗೆಯು ಸಾಧ್ಯವಾಗಲಿದೆ. ಹಾಗಾಗಿ, ಎಲ್ಲರೂ ಒಗ್ಗೂಡಿ ಮಾನವ ಕುಲವನ್ನು ಏಳಿಗೆಯತ್ತ, ಅಭಿವೃದ್ಧಿಯತ್ತ ಕೊಂಡೊಯ್ಯೋಣ. ಜಗತ್ತು ಒಂದಾದರೆ ಅಭಿವೃದ್ಧಿ, ಜಗತ್ತು ಒಂದಾದರೆ ಶಾಂತಿ ಸ್ಥಾಪನೆ ಸಾಧ್ಯವಾಗಲಿದೆ. ಇದೇ ಮನಸ್ಥಿತಿಯಲ್ಲಿ ನಾವು ಕೊರೊನಾದಂತಹ ಸಾಂಕ್ರಾಮಿಕ ಕಾಯಿಲೆಯನ್ನು ತೊಲಗಿಸಿದ್ದೇವೆ” ಎಂದು ಹೇಳಿದರು.

“ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್ ಜತೆಗೆ ಸಬ್‌ ಕಾ ವಿಶ್ವಾಸ್ ಕೂಡ ಎಲ್ಲರ ಆದ್ಯತೆಯಾಗಿದೆ. ಜಾಗತಿಕ ಆರ್ಥಿಕತೆ, ಹವಾಮಾನ ಬದಲಾವಣೆ, ಶಾಂತಿ ಸ್ಥಾಪನೆ, ಸರ್ವ ಕ್ಷೇತ್ರಗಳ ಏಳಿಗೆಗೆ ಶ್ರಮಿಸೋಣ. ಹಾಗೆಯೇ, ಉಗ್ರವಾದದ ವಿರುದ್ಧ ಎಲ್ಲರೂ ಹೋರಾಟ ನಡೆಸುವ ಮೂಲಕ ಮಾನವ ಕುಲವನ್ನು ಶಾಂತಿಯತ್ತ ಕೊಂಡೊಯ್ಯೋಣ. ಭಾರತದಲ್ಲಿ ಜಿ 20 ಶೃಂಗಸಭೆಯು ಜನರ ಸಭೆಯಾಗಿ ಪರಿವರ್ತನೆಯಾಗಿದೆ” ಎಂದರು.

“ಜಿ 20 ಶೃಂಗಸಭೆಗೆ ಭಾರತದ 140 ಕೋಟಿ ಜನರು ಕೂಡ ಯೋಗದಾನ ನೀಡಿದ್ದಾರೆ. ಭಾರತದ ಪ್ರಮುಖ ನಗರಗಳಲ್ಲಿ ಸಭೆ ನಡೆದಿರುವುದು ಜನರ ಸಹಭಾಗಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ” ಎಂದು ಹೇಳಿದರು. ಇದಾದ ಬಳಿಕ ಜಿ 20 ನಾಯಕರು ಫೋಟೊ ಸೆಷನ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಎಲ್ಲ ನಾಯಕರು ಒಗ್ಗೂಡಿ ಫೋಟೊ ತೆಗೆಸಿಕೊಳ್ಳುವ ಮೂಲಕ ಒಗ್ಗಟ್ಟಿನ ಸಂದೇಶ ರವಾನಿಸಲಿದ್ದಾರೆ.

ನಾಯಕರ ನಿರ್ಣಯ ಅಂಗೀಕರಿಸಿದ ಮೋದಿ

ಮಧ್ಯಾಹ್ನ ಊಟದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಅಧಿವೇಶನ ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ, ಜಿ 20 ಶೃಂಗಸಭೆಯ ನಾಯಕರ ನಿರ್ಣಯವನ್ನು ಅಂಗೀಕರಿಸಿದರು. “ಜಿ 20 ಸಭೆಯ ಎಲ್ಲ ನಾಯಕರು ಸಮ್ಮತಿಯಿಂದ ನಿರ್ಣಯ ತೆಗೆದುಕೊಳ್ಳಲಾಗಿದೆ” ಎಂದು ಘೋಷಿಸಿದರು.

“ನಮ್ಮ ಅಧಿಕಾರಿಗಳ ಪರಿಶ್ರಮ ಹಾಗೂ ಜಿ 20 ನಾಯಕರ ಸಹಕಾರದಿಂದಾಗಿ ಜಿ 20 ನಾಯಕರ ನಿರ್ಣಯವನ್ನು ಅಂಗೀಕರಿಸಲಾಗುತ್ತಿದೆ. ನಿರ್ಣಯ ಅಳವಡಿಸಿಕೊಂಡ ಕುರಿತು ನಾನು ಘೋಷಿಸಲು ಖುಷಿಯಾಗುತ್ತಿದೆ. ಇದಕ್ಕಾಗಿ ಎಲ್ಲರಿಗೂ ಅಭಿನಂದನೆಗಳು” ಎಂದು ಮೋದಿ ಹೇಳಿದರು. ಜಿ 20 ಶೃಂಗಸಭೆಯ ಎರಡನೇ ಅಧಿವೇಶನವು ‘ಒಂದು ಕುಟುಂಬ’ (One Family) ವಿಷಯದ ಆಧಾರದ ಮೇಲೆ ನಡೆಯುತ್ತಿದೆ.

ಉಕ್ರೇನ್‌ ಬಿಕ್ಕಟ್ಟಿನ ವಿಷಯದ ಕುರಿತು ಪ್ರಸ್ತಾಪ

ಉಕ್ರೇನ್‌ನಲ್ಲಿ ರಷ್ಯಾ ನಡೆಸುತ್ತಿರುವ ಆಕ್ರಮಣಕ್ಕೆ ವಿಷಯಕ್ಕೆ ಸಂಬಂಧಿಸಿದಂತೆ ಜಿ 20 ಶೃಂಗಸಭೆಯಲ್ಲಿ ತೆಗೆದುಕೊಂಡ ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. ಉಕ್ರೇನ್‌ನಲ್ಲಿ ಶಾಂತಿಸ್ಥಾಪನೆ ಕುರಿತು ಗ್ರೂಪ್‌ನ ಎಲ್ಲ ರಾಷ್ಟ್ರಗಳು ಒಂದೇ ಅಭಿಪ್ರಾಯ ಮಂಡಿಸಿವೆ ಎಂದು ತಿಳಿದುಬಂದಿದೆ. ನಿರ್ಣಯದ ಕುರಿತು ಕೆಲವೇ ಕ್ಷಣಗಳಲ್ಲಿ ಪ್ರಕಟಣೆ ಹೊರಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಜಿ20 ನವದೆಹಲಿ ವಿಶ್ವ ನಾಯಕರ ಡಿಕ್ಲೆರೇಷನ್ ಹೀಗಿದೆ…

-ಬಲಿಷ್ಠ, ಸುಸ್ಥಿರ, ಸಮತೋಲಿತ ಮತ್ತು ಅಂತರ್ಗತ ಬೆಳವಣಿಗೆಯ ಉತ್ತೇಜನ
-ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಅಭಿವೃದ್ಧಿ ಒಪ್ಪಂದ
-ನೀಲಿ (ಸಮುದ್ರ) ಆರ್ಥಿಕತೆ, ಆಹಾರ ಭದ್ರತೆ ಕುರಿತಾದ ಘೋಷಣೆಗಳು ಅನುಮೋದನೆ
-ಬಲವಾದ, ಸಮರ್ಥನೀಯ, ಸಮತೋಲಿತ ಮತ್ತು ಅಂತರ್ಗತ ಬೆಳವಣಿಗೆ, ಜಾಗತಿಕ ಆರ್ಥಿಕ ಪರಿಸ್ಥಿತಿ
-ವಿಶ್ವದ ಬೆಳವಣಿಗೆಗಾಗಿ ಉತ್ತಮ ವ್ಯಾಪಾರ ಸಂಬಂಧ ಭವಿಷ್ಯದ ದೃಷ್ಟಿಯಲ್ಲಿ ತಯಾರಿ ನಡೆಸುವುದು
-ಆರ್ಥಿಕ ಒಳಗೊಳ್ಳುವಿಕೆ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಡುವುದು
-ಸುಸ್ಥಿರ ಅಭಿವೃದ್ಧಿ ಗುರಿಗಳ ಮೇಲೆ ಪ್ರಗತಿ ಸಾಧಿಸುವುದು ಹಾಗೂ ಅದರ ವೇಗವನ್ನ ಹೆಚ್ಚುಗೊಳಿಸುವುದು
-ವಿಶ್ವದಲ್ಲಿನ ಹಸಿವು ಮತ್ತು ಅಪೌಷ್ಟಿಕತೆಯನ್ನು ನಿವಾರಿಸುವ ಕೆಲಸ ಮಾಡುವುದು
-ಆಹಾರ ಮತ್ತು ಅಭದ್ರತೆಯ ಮೇಲೆ ಆರ್ಥಿಕ ಪರಿಣಾಮಗಳ ಬಗ್ಗೆ ಕಾಳಜಿ ವಹಿಸುವುದು
-ಜಾಗತಿಕ ಆರೋಗ್ಯ ಬಲಪಡಿಸುವುದು ಹಾಗೂ ಮಹತ್ತರ ಆರೋಗ್ಯ ವಿಧಾನವನ್ನು ಕಾರ್ಯಗತಗೊಳಿಸುವತ್ತ ಕೆಲಸ ಮಾಡುವುದು
-ಗುಣಮಟ್ಟದ ಶಿಕ್ಷಣವನ್ನು ನೀಡುವುದು
-ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಅಭಿವೃದ್ಧಿ ಒಪ್ಪಂದ
-ಹವಾಮಾನ ಬದಲಾವಣೆ ಮತ್ತು ಪರಿವರ್ತನೆಯ ಹಾದಿಗಳಿಂದ ಉಂಟಾಗುವ ಆರ್ಥಿಕ ಅಪಾಯಗಳು
-ಸುಸ್ಥಿರ ಅಭಿವೃದ್ಧಿ ಬಗ್ಗೆ ಗಮನ ಹರಿಸಿ ಜೀವನಶೈಲಿಯತ್ತ ಗಮನ ಕೊಡುವುದು
-ಸುಸ್ಥಿರ, ಕೈಗೆಟಕುವ ರೀತಿಯಲ್ಲಿ ಸುಸ್ಥಿರ ಹಣಕಾಸು ವ್ಯವಸ್ಥೆ ಅನುಷ್ಠಾನಗೊಳಿಸುವುದು
-ಪರಿಸರ ವ್ಯವಸ್ಥೆಗಳನ್ನು ಸಂರಕ್ಷಿಸುವುದು, ಸುಸ್ಥಿರವಾಗಿ ಬಳಸುವುದು ಮತ್ತು ಮರುಸ್ಥಾಪಿಸುವುದು
-ನೀಲಿ (ಸಾಗರ ) ಆಧಾರಿತ ಆರ್ಥಿಕತೆಯನ್ನು ಬಳಸಿಕೊಳ್ಳುವುದು ಮತ್ತು ಸಂರಕ್ಷಿಸುವುದು
-ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಯುವುದು
-ಮುಂದೆ ನಗರಗಳಾಗಿ ಬೆಳೆಯುವ ಪ್ರದೇಶಗಳಿಗೆ ಹಣಕಾಸು ಒದಗಿಸುವುದು
-ವಿಪತ್ತು ಅಪಾಯವನ್ನು ಕಡಿಮೆ ಮಾಡುವುದು ಮತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯವನ್ನು ನಿರ್ಮಿಸುವುದು
-21ನೇ ಶತಮಾನಕ್ಕೆ ಬಹುಪಕ್ಷೀಯ ಸಂಸ್ಥೆಗಳನ್ನ ಸ್ಥಾಪನೆ ಮಾಡುವತ್ತ ಕೆಲಸ ನಿರ್ವಹಿಸುವುದು
-ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳನ್ನು ಸುಧಾರಿಸುವುದು
-ಜಾಗತಿಕ ಸಾಲದ ದೋಷಗಳನ್ನು ನಿರ್ವಹಿಸುವುದು
-ತಾಂತ್ರಿಕ ರೂಪಾಂತರ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಬಳಕೆ ಮಾಡುವುದು
-ಡಿಜಿಟಲ್ ಆರ್ಥಿಕತೆಯಲ್ಲಿ ಸುರಕ್ಷತೆ, ಭದ್ರತೆ, ಸ್ಥಿತಿಸ್ಥಾಪಕತ್ವ ಮತ್ತು ವಿಶ್ವಾಸವನ್ನ ನಿರ್ಮಾಣ ಮಾಡುವುದು
-ಕ್ರಿಪ್ಟೋ-ಸ್ವತ್ತುಗಳು, ನೀತಿ ಮತ್ತು ನಿಯಂತ್ರಣದ ಬಗ್ಗೆ ಗಮನ ಹರಿಸುವುದು
-ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಹಾಗೂ ಡಿಜಿಟಲ್ ಪರಿಸರ ವ್ಯವಸ್ಥೆಗಳನ್ನು ಬೆಳೆಸುವುದು
-ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಅನ್ನು ಜವಾಬ್ದಾರಿಯುತವಾಗಿ ಎಲ್ಲರೂ ಬಳಸಿಕೊಳ್ಳುವಂತೆ ಮಾಡುವುದು
-ಅಂತಾರಾಷ್ಟ್ರೀಯ ತೆರಿಗೆ
-ಲಿಂಗ ಸಮಾನತೆ ಮತ್ತು ಮಹಿಳೆಯರ ಸಬಲೀಕರಣ
-ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣವನ್ನು ಹೆಚ್ಚಿಸುವುದು
-ಒಂದು ಭೂಮಿ ಒಂದು ಕುಟುಂಬ ಒಂದು ಭವಿಷ್ಯದ ಗುರಿ
-ಮಹಿಳೆಯರ ಆಹಾರ ಭದ್ರತೆ, ಪೋಷಣೆ ಮತ್ತು ಯೋಗಕ್ಷೇಮವನ್ನು ಭದ್ರಪಡಿಸುವುದು
-ಮಹಿಳಾ ಸಬಲೀಕರಣದ ಮೇಲೆ ವರ್ಕಿಂಗ್ ಗ್ರೂಪ್ ರಚನೆ
-ಆರ್ಥಿಕ ವಲಯದ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನ ಹರಿಸುವುದು
-ಭಯೋತ್ಪಾದನೆ ಮತ್ತು ಮನಿ ಲಾಂಡರಿಂಗ್ ನ್ನ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕಾರ್ಯ ಸನ್ನದ್ದಾರಾಗುವುದು.

ಈ ಸುದ್ದಿಯನ್ನೂ ಓದಿ: G20 Summit 2023: ನರೇಂದ್ರ ಮೋದಿಯನ್ನು ಶ್ಲಾಘಿಸಿದ ಅಮೆರಿಕ ಅಧ್ಯಕ್ಷ ಬೈಡೆನ್

ಅಮೆರಿಕ ಅಧ್ಯಕ್ಷರಿಗೆ ಕೊನಾರ್ಕ್ ಚಕ್ರದ ಮಾಹಿತಿ ನೀಡಿದ ಪಿಎಂ

ಜಿ 20 ಶೃಂಗಸಭೆ ನಡೆಯುತ್ತಿರುವ ಭಾರತ ಮಂಟಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ನಾಯಕರನ್ನು ಸ್ವಾಗತಿಸಿದರು. ನಿಗದಿತ ಸ್ಥಳದಲ್ಲಿ ನಿಂತು ಒಬ್ಬೊಬ್ಬರೇ ನಾಯಕರನ್ನು ಮೋದಿ ಆತ್ಮೀಯವಾಗಿ ಸ್ವಾಗತಿಸಿದರು. ಇದೇ ವೇಳೆ ಮೋದಿ (G20 Summit 2023) ಅವರು ನಿಂತಿದ್ದ ಜಾಗದಲ್ಲಿ ಕೊನಾರ್ಕ್‌ ಚಕ್ರದ ಬೃಹತ್‌ ಚಿತ್ರವನ್ನು ಅಳವಡಿಸಿದ್ದು, ಅದು ಗಮನ ಸೆಳೆಯಿತು. ಹಾಗೆಯೇ, ನರೇಂದ್ರ ಮೋದಿ ಅವರು ಕೊನಾರ್ಕ್‌ ಚಕ್ರದ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರಿಗೂ ವಿವರಿಸಿದರು.

ವಿವಿಧ ದ್ವಿಪಕ್ಷೀಯ ಮಾತುಕತೆ

ಜಿ20 ಶೃಂಗ ಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ರಾಷ್ಟ್ರಗಳ ಜತೆಗೆ ದ್ವಿಪಕ್ಷೀಯ ಮಾತುಕತೆಯನ್ನು ನಡೆಸಿದರು. ಬ್ರಿಟನ್‌ ಪ್ರಧಾನಿ ರಿಷಿ ಸುನಕ್, ಜಪಾನ್‌ ಪ್ರಧಾನಿ ಫುಮಿಯೋ ಕಿಶಿದಾ ಸೇರಿ ಐದು ರಾಷ್ಟ್ರಗಳ ನಾಯಕರ ಜತೆ ಮೋದಿ ಮಹತ್ವದ ವಿಷಯಗಳನ್ನು ಚರ್ಚಿಸಿದ್ದಾರೆ. ಉಭಯ ದೇಶಗಳ ಸಂಬಂಧ ವೃದ್ಧಿ, ವ್ಯಾಪಾರ-ಒಪ್ಪಂದ ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು.

ಗ್ಲೋಬರ್ ಬಯೋಫ್ಯುಯೆಲ್ಸ್ ಅಲಯನ್ಸ್

ಜಿ20 ಶೃಂಗ ಸಭೆಯ ಸಂದರ್ಭದಲ್ಲಿ ಭಾರತದ ನಿರಂತ್ರ ಪ್ರಯತ್ನಗಳ ಫಲವಾಗಿ ಗ್ಲೋಬಲ್ ಬಯೋಫ್ಯುಯೆಲ್ಸ್ ಅಲಯನ್ಸ್ ರಚನೆಯಾಗಿದೆ. ಭಾರತ, ಬ್ರೆಜಿಲ್, ಅಮೆರಿಕ ಸದಸ್ಯ ರಾಷ್ಟ್ರಗಳಾಗಿದ್ದು, ಅರ್ಜಿಂಟಿನಾ, ಕೆನಡಾ, ಇಟಲಿ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಸಿಂಗಾಪುರ್, ಮಾರಿಷಿಸ್ ಮತ್ತು ಯುಎಇ ಆಹ್ವಾನಿತ ಸದಸ್ಯ ರಾಷ್ಟ್ರಗಳಾಗಿವೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version