ಹೊಸದಿಲ್ಲಿ: ರಾಜಧಾನಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯ (G20 Summit 2023) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ವಿಶ್ವ ನಾಯಕರೊಂದಿಗೆ 15ಕ್ಕೂ ಹೆಚ್ಚು ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದೇ ವಾರಾಂತ್ಯದಲ್ಲಿ ಹೊಸದಿಲ್ಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ವಿಶ್ವದ ಬಹುತೇಕ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಸೆಪ್ಟೆಂಬರ್ 8ರಂದು ಪ್ರಧಾನಿ ಮೋದಿ ಅವರು ಅಮೆರಿಕದ ಅಧ್ಯಕ್ಷ ಜೋ ಬೈಡೆನ್, ಮಾರಿಷಸ್, ಬಾಂಗ್ಲಾದೇಶದ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಸೆಪ್ಟೆಂಬರ್ 9ರಂದು, ಜಿ 20 ಶೃಂಗಸಭೆಯಲ್ಲಿ ಭಾಗವಹಿಸುವುದರ ಜೊತೆಗೆ, ಬ್ರಿಟನ್ ಪ್ರಧಾನ ಮಂತ್ರಿ ರಿಷಿ ಸುನಕ್, ಜಪಾನ್, ಜರ್ಮನಿ ಮತ್ತು ಇಟಲಿಯ ಮುಖಂಡರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.
ಸೆ.10ರಂದು ಮೋದಿಯವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಔತಣಕೂಟದ ಸಭೆ ನಡೆಸಲಿದ್ದಾರೆ. ಕೆನಡಾ ನಾಯಕರೊಂದಿಗೆ ಕ್ಷಿಪ್ರ ಅವಧಿಯ ಸಭೆ, ಕೊಮೊರೊಸ್, ಟರ್ಕಿ, ಯುಎಇ, ದಕ್ಷಿಣ ಕೊರಿಯಾ, ಯುರೋಪ್ ಒಕ್ಕೂಟ, ಬ್ರೆಜಿಲ್ ಮತ್ತು ನೈಜೀರಿಯಾದ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.
ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಅವರ ಪುತ್ರಿ ಸೈಮಾ ವಾಝೆದ್ ಕೂಡ ಬರಲಿದ್ದಾರೆ ಎಂದು ವರದಿಗಳು ಸೂಚಿಸಿವೆ. ಜಿ20 ಸಭೆಯ ಜತೆಜತೆಗೆ ನಡೆಯುವ ಕಾರ್ಯಕ್ರಮಗಳಲ್ಲಿ ಹಸೀನಾ ಅವರು ಪ್ರಧಾನಿ ಮೋದಿಯವರೊಂದಿಗೆ ಉಭಯ ದೇಶಗಳ ಕೆಲ ಜಂಟಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ತ್ರಿಪುರಾದೊಂದಿಗೆ ರೈಲು ಸಂಪರ್ಕ ಮತ್ತು ರಾಂಪಾಲ್ ವಿದ್ಯುತ್ ಸ್ಥಾವರದ ಎರಡನೇ ಘಟಕಗಳು ಉದ್ಘಾಟನೆಯಾಗಲಿವೆ. ಉಭಯ ದೇಶಗಳ ನಾಗರಿಕರು ಪರಸ್ಪರ ದೇಶಗಳಲ್ಲಿ ಪ್ರಯಾಣಿಸುವಾಗ ಡಾಲರ್‌ಗಳ ಬದಲಿಗೆ ಸ್ಥಳೀಯ ಕರೆನ್ಸಿಯಲ್ಲಿ ಪಾವತಿಸಲು ರುಪೇ-ಟಾಕಾ ಕಾರ್ಡ್ ಅನ್ನು ತರುವ ಒಪ್ಪಂದ ಸೇರಿದಂತೆ ಹಲವಾರು ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ.
ಶುಕ್ರವಾರ ಸಂಜೆ ನವದೆಹಲಿಗೆ ಆಗಮಿಸಲಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರೊಂದಿಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಬೈಡೆನ್ ಅವರಿಗೆ ಶುಕ್ರವಾರ ಅಧಿಕೃತ ಭೋಜನಕೂಟವಿದೆ. ಆದರೆ ಅದು ಜೆಟ್-ಲ್ಯಾಗ್ ಅನ್ನು ಅವಲಂಬಿಸಿದೆ. ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಅವರು ದ್ವಿಪಕ್ಷೀಯ ಮಾತುಕತೆಗಳ ಜೊತೆಗೆ ಭಾನುವಾರ ಮಧ್ಯಾಹ್ನ ಪ್ರಧಾನಿ ಮೋದಿ ಅವರೊಂದಿಗೆ ಊಟ ಮಾಡಲು ಒಲವು ತೋರಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧ ಮತ್ತು ಜಾಗತಿಕ ಆರ್ಥಿಕತೆಯ ಮೇಲೆ ಅದರ ಪ್ರಭಾವದ ಕುರಿತ ಚರ್ಚೆ ಜಿ20 ಶೃಂಗಸಭೆಯ ಅಜೆಂಡಾಗಳಲ್ಲಿದೆ. ಆದರೆ ಜಾಗತಿಕ ದಕ್ಷಿಣದ ಬೆಳವಣಿಗೆ- ಆರ್ಥಿಕತೆ ಮೇಲೆ ಕೇಂದ್ರೀಕರಿಸುವುದು ಮತ್ತು 17 ಸುಸ್ಥಿರ ಅಭಿವೃದ್ಧಿ ಗುರಿಗಳತ್ತ ಆದ್ಯತೆಯನ್ನು ತೋರುವುದು ಶೃಂಗದಲ್ಲಿ ಪ್ರಧಾನಿ ಮೋದಿ ಅವರ ಆದ್ಯತೆಯಾಗಿದೆ. ಪ್ರಧಾನಿ ಮೋದಿ ಅವರು ಜಾಗತಿಕ ತಾಪಮಾನ ಸಂಬಂಧಿತ ವಿಪತ್ತುಗಳಿಂದ ಭವಿಷ್ಯವನ್ನು ರಕ್ಷಿಸಲು ʼಹಸಿರು ಅಭಿವೃದ್ಧಿʼ ಮತ್ತು ಹಸಿರು ಗುರಿಗಳನ್ನು ಉತ್ತೇಜಿಸುವ ನಿರೀಕ್ಷೆಯಿದೆ. ಹೆಚ್ಚಿನ ತಾಪಮಾನದಲ್ಲಿ ಬದುಕುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಜಾಗತಿಕ ಆಹಾರ ಭದ್ರತೆಗೆ ಉತ್ತರವಾಗಿ ರಾಗಿಯನ್ನು ಪಿಎಂ ಮೋದಿ ಪ್ರಮೋಟ್ ಮಾಡಲಿದ್ದಾರೆ. ಪರಿಸರ ಸಂರಕ್ಷಣೆಯ ಮಿಷನ್ ಲೈಫ್, ಅದಕ್ಕಾಗಿ ಜಾಗತಿಕ ಜೀವನಶೈಲಿಯಲ್ಲಿ ಬದಲಾವಣೆ, ಮಹಿಳಾ ಅಭಿವೃದ್ಧಿ ಮತ್ತು ಸಬಲೀಕರಣ ಮುಂತಾದವುಗಳು ಮೋದಿಯವರ ಪ್ರತಿಪಾದನೆಯ ಇತರ ಪ್ರಮುಖ ಸಂಗತಿಗಳಾಗಿವೆ.
ಇದನ್ನೂ ಓದಿ: G20 Summit 2023: ಸಂಚಾರ ನಿರ್ಬಂಧ, ಯುದ್ಧವಿಮಾನ ನಿಯೋಜನೆ; ಜಿ 20 ಸಭೆಗೆ ದೆಹಲಿ ಸನ್ನದ್ಧ