ನವದೆಹಲಿ: ಭಾರತವು 20247ರ ಹೊತ್ತಿಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ(India Developed Nation). ಭ್ರಷ್ಟಾಚಾರ (Corruption), ಜಾತೀಯತೆ (Casteism) ಮತ್ತು ಕೋಮುವಾದಕ್ಕೆ (Communalism) ದೇಶದಲ್ಲಿ ಜಾಗವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೇಳಿದ್ದಾರೆ. ಮುಂದಿನವಾರ ದಿಲ್ಲಿಯಲ್ಲಿ ಜಿ20 ಶೃಂಗಸಭೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪಿಟಿಐ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿ, ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಕಾಶ್ಮೀರ (Jammu and Kashmir) ಮತ್ತು ಅರುಣಾಚಲ ಪ್ರದೇಶದಲ್ಲಿ (Arunachal Pradesh) ಜಿ20ಯ ಕೆಲವು ಸಭೆಗಳನ್ನು ನಡೆಸಿದ್ದಕ್ಕೆ ಪಾಕಿಸ್ತಾನ (Pakistan) ಮತ್ತು ಚೀನಾ (China) ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಕುರಿತು ಪ್ರತಿಕ್ರಿಯಿಸಿರುವ ಮೋದಿ, ದೇಶದ ಯಾವುದೇ ಭಾಗದಲ್ಲಿ ಸಭೆ ನಡೆಸುವುದು ಸ್ವಾಭಾವಿಕವಾಗಿದೆ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 9 ಮತ್ತು 10 ರಂದು ನಡೆಯಲಿರುವ ಜಿ20 ಶೃಂಗಸಭೆಯ ಮಹತ್ವವನ್ನು ವಿವರಿಸಿದ ಪ್ರಧಾನಮಂತ್ರಿ ಮತ್ತು ಜಾಗತಿಕ ಕಾರ್ಯಕ್ರಮದ ಭಾರತದ ಅಧ್ಯಕ್ಷತೆಯಿಂದ ಹಲವಾರು ಪರಿಣಾಮಗಳು “ಅವರ ಹೃದಯಕ್ಕೆ ಹತ್ತಿರವಾಗಿವೆ” ಎಂದು ಹೇಳಿದರು. ಭಾರತದ ಜಿ20 ಅಧ್ಯಕ್ಷತೆಯಿಂದ ಸಾಕಾಷ್ಟು ಸಕಾರಾತ್ಮಕ ಪರಿಣಾಮಗಳಾಗಿವೆ. ಈ ಪೈಕಿ ಕೆಲವು ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಭಾರತವು ಜಿ20 ಅಧ್ಯಕ್ಷತೆಯನ್ನು ಹೊಂದಲಿ ಅಥವಾ ಇರದೇ ಇರಲಿ. ನಾವು ಜಾಗತಿಕ ಶಾಂತಿಗಾಗಿ ನಡೆಯುವ ಎಲ್ಲ ಪ್ರಯತ್ನಗಳನ್ನು ನಾವು ಬೆಂಬಲಿಸುತ್ತೇವೆ. ನಾವು ನಮ್ಮ ಜಿ20 ಪ್ರೆಸಿಡೆನ್ಸಿಯ ಹಿಂದಿನ ರಚನಾತ್ಮಕ ಕೊಡುಗೆಯನ್ನು ಮುಂದುವರಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಭಾರತದ ಜಿ20 ಅಧ್ಯಕ್ಷತೆಯ ಥೀಮ್ ವಸುಧೈವ ಕುಟುಂಬಕಮ್ ಕೇವಲ ಘೋಷಣೆಯಲ್ಲ. ನಮ್ಮ ಸಂಸ್ಕೃತಿಯ ಒಟ್ಟು ತಿರುಳಾಗಿದೆ. ಒಮ್ಮೆ ಸರಳವಾಗಿ ದೊಡ್ಡ ಮಾರುಕಟ್ಟೆಯಾಗಿ ಕಂಡ ಭಾರತ ಈಗ ಜಾಗತಿಕ ಸವಾಲುಗಳಿಗೆ ಪರಿಹಾರದ ಭಾಗವಾಗಿದೆ. ಭಾರತದ ಜಿ 20 ಪ್ರೆಸಿಡೆನ್ಸಿಯು ತೃತೀಯ ಜಗತ್ತಿನ ದೇಶಗಳಲ್ಲಿ ಆತ್ಮವಿಶ್ವಾಸದ ಬೀಜಗಳನ್ನು ಬಿತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಜಿ20 ಶೃಂಗಸಭೆ ಭಾರೀ ಭದ್ರತೆ ಕೈಗೊಂಡ ಸರ್ಕಾರ
ವಿಶ್ವದ ಪ್ರಮುಖ ನಾಯಕರೆಲ್ಲರೂ ಪಾಲ್ಗೊಳ್ಳಲಿರುವ ಈ ಸಭೆಗೆ ಭಾರೀ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಸುಮಾರು 1,30,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ(Security personnel). ಈ ಪೈಕಿ 80 ಸಾವಿರ ದಿಲ್ಲಿ ಪೊಲೀಸರು (Delhi Police) ಇರಲಿದ್ದಾರೆ. ದಿಲ್ಲಿ ಪೊಲೀಸ್ ಮತ್ತು ಕೇಂದ್ರ ಭದ್ರತಾ ಪಡೆಗಳು ಸುಮಾರು 45 ಸಾವಿರ ಭದ್ರತಾ ಸಿಬ್ಬಂದಿ ಖಾಕಿ ವೇಷದಲ್ಲಿ ಇರದೇ ನೀಲಿ ಯೂನಿಫಾರ್ಮ್‌ನಲ್ಲಿ ಇರಲಿದ್ದಾರೆ. ಈ 45 ಸಾವಿರ ಭದ್ರತಾ ಪಡೆಯಲ್ಲಿ ಕಮಾಂಡೋಗಳಿದ್ದು(Commandos), ಅವರು ಹೆಲಿಕಾಪ್ಟರ್‌ಗಳಿಂದ ಇಳಿಯುವ ತರಬೇತಿ ಪಡೆದುಕೊಂಡಿದ್ದಾರೆ. ನಿಖರವಾದ ಚಾಲನಾ ಕೌಶಲ್ಯದೊಂದಿಗೆ ವೈಯಕ್ತಿಕ ಭದ್ರತಾ ಅಧಿಕಾರಿಗಳಂತೆ ಕಾರ್ಯನಿರ್ವಹಿಸಲಿದ್ದಾರೆ. ಭಾರತವು ತನ್ನ ಅತಿಥಿಗಳನ್ನು ರಕ್ಷಿಸುವ ಕರ್ತವ್ಯವನ್ನು ಪೂರೈಸಲು ಇವರು ಸಹಾಯ ಮಾಡಲಿದ್ದಾರೆ.
ಈ ಸುದ್ದಿಯನ್ನೂ ಓದಿ: G20 Summit 2023: ಶೃಂಗಸಭೆಯಲ್ಲಿ ಕಲ್ಚರ್ ಕಾರಿಡಾರ್, ಡಿಜಿಟಲ್ ಮ್ಯೂಸಿಯಂ! ಏನೆಲ್ಲ ಇರಲಿದೆ?
ದಿಲ್ಲಿ ಆಗಸದಲ್ಲಿ ಭಾರತೀಯ ವಾಯು ಪಡೆ ಹದ್ದಿನ ಕಣ್ಣು ಇಡಲಿದೆ. ಯಾವುದೇ ಅನುಮಾನಾಸ್ಪದ ಹಾರಾಟ ವಸ್ತು ಕಂಡು ಬಂದರೂ ಹೊಡೆದುರುಳಿಸುವ ಆದೇಶ ನೀಡಲಾಗಿದೆ. ಆಕಾಶದಿಂದ ಎದುರಾಗುವ ಯಾವುದೇ ಬೆದರಿಕೆಯನ್ನು ಎದುರಿಸಲು ಭಾರತೀಯ ಸೇನೆ, ದಿಲ್ಲಿ ಪೊಲೀಸ್ ಮತ್ತು ಅರೆ ಸೇನಾ ಪಡೆಗಳೊಂದಿಗೆ ಆ್ಯಂಟಿ ಡ್ರೋನ್ ಸಿಸ್ಟಮ್ ನಿಯೋಜಿಸಲಾಗಿದೆ. ಜತೆಗೆ ಸುಮಾರು 400 ಅಗ್ನಿಶಾಮಕ ವಾಹನಗಳ ಸನ್ನದ್ಧ ಸ್ಥಿತಿಯಲ್ಲಿ ಇರಲಿವೆ.
ವಿಶ್ವ ನಾಯಕರ ಭದ್ರತೆಗಾಗಿ ಕೇಂದ್ರ ಸರ್ಕಾರವು 18 ಕೋಟಿ ರೂ. ವೆಚ್ಚದಲ್ಲಿ 20 ಬುಲೆಟ್ ಪ್ರೂಫ್ ವಾಹನ(ಲಿಮೋಸಿನ್)ಗಳನ್ನು ಗುತ್ತಿಗೆಗೆ ಪಡೆದುಕೊಂಡಿದೆ. ವಾರಾಂತ್ಯದ ಸಮಯದಲ್ಲಿ ದಿಲ್ಲಿಯ ಗಡಿಯಲ್ಲಿ ಸಾಕಷ್ಟು ಭದ್ರತೆಯನ್ನು ಕೈಗೊಳ್ಳಲಾಗುತ್ತಿದೆ. ಅಲ್ಲದೇ ತೀವ್ರ ನಿಗಾ ಇಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ, ಅಮೆರಿಕದ ನಾಯಕರು ಸುಮಾರು 20 ವಿಮಾನಗಳೊಂದಿಗೆ ಭಾರತಕ್ಕೆ ಆಗಮಿಸುತ್ತಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.