ನವದೆಹಲಿ: ಜಿ 20 ಶೃಂಗಸಭೆ ನಡೆಯುತ್ತಿರುವ ಭಾರತ ಮಂಟಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ನಾಯಕರನ್ನು ಸ್ವಾಗತಿಸಿದರು. ನಿಗದಿತ ಸ್ಥಳದಲ್ಲಿ ನಿಂತು ಒಬ್ಬೊಬ್ಬರೇ ನಾಯಕರನ್ನು ಮೋದಿ ಆತ್ಮೀಯವಾಗಿ ಸ್ವಾಗತಿಸಿದರು. ಇದೇ ವೇಳೆ ಮೋದಿ (G20 Summit 2023) ಅವರು ನಿಂತಿದ್ದ ಜಾಗದಲ್ಲಿ ಕೊನಾರ್ಕ್ ಚಕ್ರದ ಬೃಹತ್ ಚಿತ್ರವನ್ನು ಅಳವಡಿಸಿದ್ದು, ಅದು ಗಮನ ಸೆಳೆಯಿತು. ಹಾಗೆಯೇ, ನರೇಂದ್ರ ಮೋದಿ ಅವರು ಕೊನಾರ್ಕ್ ಚಕ್ರದ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರಿಗೂ ವಿವರಿಸಿದರು. ಹಾಗಾದರೆ, ಏನಿದು ಕೊನಾರ್ಕ್ ಚಕ್ರ? ಇದರ ಹಿನ್ನೆಲೆ, ವೈಶಿಷ್ಟ್ಯ ಏನಿದೆ ಎಂಬುದರ ಮಾಹಿತಿ ಇಲ್ಲಿದೆ.
ಏನಿದು ಕೊನಾರ್ಕ್ ಚಕ್ರ?
ಒಡಿಶಾದ ಪುರಿಯಲ್ಲಿರುವ ಸೂರ್ಯ ದೇವಾಲಯದಲ್ಲಿ ಕೊನಾರ್ಕ್ ಚಕ್ರವಿದೆ. ಚಕ್ರವನ್ನು 13ನೇ ಶತಮಾನದ ಗಂಗಾ ಸಾಮ್ರಾಜ್ಯದ ಅರಸ ನರಸಿಂಹದೇವ I ಅವರು ಇದನ್ನು ನಿರ್ಮಿಸಿದರು. ಕೊನಾರ್ಕ್ ಚಕ್ರವು ವಾಸ್ತುಶಿಲ್ಪದ ಶ್ರೇಷ್ಠತೆಯ ಸಂಕೇತವಾಗಿದೆ. ದೊಡ್ಡ ರಥದ ಮಾದರಿಯಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ. ಇದರಲ್ಲಿ ಚಕ್ರವನ್ನು ಕೆತ್ತಲಾಗಿದ್ದು, ಐತಿಹಾಸಿಕ ಪರಂಪರೆ ಹೊಂದಿದೆ.
ಬೈಡೆನ್‌ಗೆ ಚಕ್ರದ ಪರಿಚಯ ಮಾಡಿಸಿದ ಮೋದಿ
ಏನಿದರ ವಿಶೇಷ?
ಸೂರ್ಯ ದೇವಾಲಯವು ಸೂರ್ಯನ ರಥ ಎಂದೇ ಹೇಳಲಾಗುತ್ತದೆ. ಸುಮಾರು 24 ಚಕ್ರಗಳನ್ನು ಬಳಸಿ ದೇವಾಲಯವನ್ನು ರಥದ ಮಾದರಿಯಲ್ಲಿ ನಿರ್ಮಿಸಲಾಗಿದೆ. ಬಂಗಾಳ ಕೊಲ್ಲಿಯ ತೀರದಲ್ಲಿರುವ ಕ್ಲೊರೈಟ್ ಹಾಗೂ ಮರಳುಗಲ್ಲುಗಳನ್ನು ಬಳಸಿ, 12 ವರ್ಷ ಶ್ರಮ ವಹಿಸಿ ಇವುಗಳನ್ನು ನಿರ್ಮಿಸಲಾಗಿದೆ. ಸುಮಾರು 1,200 ಕುಶಲಕರ್ಮಿಗಳ ಶ್ರಮವು ಕೊನಾರ್ಕ್ ಚಕ್ರಗಳ ಕೆತ್ತನೆಯಲ್ಲಿ ಅಡಗಿದೆ.
ಇದನ್ನೂ ಓದಿ: G20 Summit 2023: ಜಿ20 ಶೃಂಗಸಭೆ; ನಾಯಕರ ನಿರ್ಣಯ ಅಂಗೀಕರಿಸಿದ ಮೋದಿ, ಮಹತ್ವದ ಘಟ್ಟದತ್ತ ಸಭೆ
ಕೊನಾರ್ಕ್ ಚಕ್ರಗಳನ್ನು ಚಲನಶೀಲತೆ, ಕಾಲಚಕ್ರ, ವಾಸ್ತುಶಿಲ್ಪ ಕಲೆಯ ಚಾಣಾಕ್ಷತನ ಎಂಬಂತೆ ಬಿಂಬಿಸಲಾಗುತ್ತದೆ. ಹಾಗೆಯೇ, ಇದನ್ನು ”ಜೀವನ ಚಕ್ರ” ಎಂದೂ ಹೇಳಲಾಗತ್ತದೆ. ಇದು ಪ್ರಜಾಪ್ರಭುತ್ವ ಚಕ್ರದ ಸಂಕೇತವೂ ಆಗಿರುವುದರಿಂದ ಅದರ ಪ್ರತಿಕೃತಿಯನ್ನು ಭಾರತ ಮಂಟಪದಲ್ಲಿ ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ. ಕೊನಾರ್ಕ್ ಚಕ್ರವು 9 ಅಡಿ ಸುತ್ತಳತೆಯನ್ನು ಹೊಂದಿದೆ.