Site icon Vistara News

G20 Summit 2023: ಜಿ20 ವಿಶೇಷ ಔತಣಕೂಟಕ್ಕೆ ಸಿಎಂ ಸಿದ್ದರಾಮಯ್ಯಗೆ ಆಹ್ವಾನ, ಖರ್ಗೆಗಿಲ್ಲ ಆಮಂತ್ರಣ!

g20 dinner president

ಹೊಸದಿಲ್ಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರು ಶನಿವಾರ ರಾಜಧಾನಿಯಲ್ಲಿ ಜಿ20 ಶೃಂಗಸಭೆ (G20 Summit 2023) ಹಿನ್ನೆಲೆಯಲ್ಲಿ ವಿಶೇಷ ಭೋಜನಕೂಟ ಆಯೋಜಿಸಿದ್ದಾರೆ. ಇದರ ಅತಿಥಿಗಳ ಪಟ್ಟಿಯಲ್ಲಿ ಎಲ್ಲಾ ಕ್ಯಾಬಿನೆಟ್ ಮತ್ತು ಸಹಾಯಕ ಸಚಿವರು, ಎಲ್ಲಾ ಮುಖ್ಯಮಂತ್ರಿಗಳು, ಭಾರತ ಸರ್ಕಾರದ ಎಲ್ಲಾ ಕಾರ್ಯದರ್ಶಿಗಳು ಮತ್ತು ಇತರ ಗಣ್ಯ ಅತಿಥಿಗಳು ಸೇರಿದ್ದಾರೆ.

ಈ ವಿಶೇಷ ಸಮಾರಂಭಕ್ಕೆ ಮಾಜಿ ಪ್ರಧಾನಿಗಳಾದ ಡಾ.ಮನಮೋಹನ್ ಸಿಂಗ್ ಮತ್ತು ಎಚ್.ಡಿ.ದೇವೇಗೌಡರಿಗೂ ಆಹ್ವಾನ ನೀಡಲಾಗಿದೆ. ಆದರೆ, ರಾಜಕೀಯ ಪಕ್ಷಗಳ ನಾಯಕರಿಗೆ ಆಹ್ವಾನ ನೀಡಿಲ್ಲ. ಕಾಂಗ್ರೆಸ್ ಮುಖ್ಯಸ್ಥ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಕ್ಯಾಬಿನೆಟ್ ಸಚಿವ ಸ್ಥಾನವನ್ನು ಹೊಂದಿದ್ದಾರೆ. ಆದರೆ ಈ ಔತಣಕೂಟಕ್ಕೆ ಅವರನ್ನು ಆಹ್ವಾನಿಸಿಲ್ಲ. ಮುಖ್ಯಮಂತ್ರಿಗಳಾದ ನಿತೀಶ್ ಕುಮಾರ್, ಹೇಮಂತ್ ಸೊರೆನ್, ಮಮತಾ ಬ್ಯಾನರ್ಜಿ, ಎಂಕೆ ಸ್ಟಾಲಿನ್, ಅರವಿಂದ್ ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ಅವರು ಔತಣಕೂಟದಲ್ಲಿ ಪಾಲ್ಗೊಳ್ಳುವುದಾಗಿ ಖಚಿತಪಡಿಸಿದ್ದಾರೆ.

ದಿಲ್ಲಿಯ ಪ್ರಗತಿ ಮೈದಾನದಲ್ಲಿರುವ ಭಾರತ ವಾಣಿಜ್ಯ ಉತ್ತೇಜನಾ ಸಂಸ್ಥೆಯ ಸಂಕೀರ್ಣವಾದ ಭಾರತ ಮಂಟಪದ ಬಹುಕಾರ್ಯ ಸಭಾಂಗಣದಲ್ಲಿ ಈ ಭೋಜನವು ನಡೆಯಲಿದೆ. ಔತಣಕೂಟದ ಜೊತೆಯಲ್ಲಿ ಒಂದು ಸಣ್ಣ ಸಾಂಸ್ಕೃತಿಕ ಕಾರ್ಯಕ್ರಮವಿರಲಿದೆ ಎಂದು G20 ವಿಶೇಷ ಕಾರ್ಯದರ್ಶಿ (ಕಾರ್ಯಾಚರಣೆ), ಶೃಂಗಸಭೆಯ ಕಾರ್ಯಾಚರಣೆಗಳು ಮತ್ತು ಲಾಜಿಸ್ಟಿಕ್ಸ್ ಮುಖ್ಯಸ್ಥ ಮುಕ್ತೇಶ್ ಪರದೇಶಿ ಅವರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ದೇಶಗಳ ನಾಯಕರನ್ನು ಶೃಂಗಸಭೆಯ ತಾಣದಲ್ಲಿ ಪ್ರತ್ಯೇಕವಾಗಿ ಸ್ವಾಗತಿಸಲಿದ್ದಾರೆ. ಅಲ್ಲಿ ಅವರು ಶನಿವಾರ ಭೋಜನಕೂಟವನ್ನು ಸಹ ಆಯೋಜಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: G20 Summit 2023: 2 ದಿನದಲ್ಲಿ 15ಕ್ಕೂ ಹೆಚ್ಚು ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ ಪ್ರಧಾನಿ ಮೋದಿ!

Exit mobile version