Site icon Vistara News

G7 Summit: ಮೂರನೇ ಬಾರಿ ಪ್ರಧಾನಿಯಾದ ಬಳಿಕ ಮೋದಿ ಮೊದಲ ವಿದೇಶ ಪ್ರವಾಸ ಇಂದು; ಇಟಲಿಯ ಜಿ7 ಶೃಂಗಸಭೆಯಲ್ಲಿ ಭಾಗಿ

G7 Summit

G7 Summit

ನವದೆಹಲಿ: ಸತತ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿ (Narendra Modi) ಅವರು ತಮ್ಮ ಮೊದಲ ವಿದೇಶ ಪ್ರವಾಸವನ್ನು ಗುರುವಾರ (ಜೂನ್‌ 13) ಕೈಗೊಂಡಿದ್ದಾರೆ. ಇಟಲಿಯಲ್ಲಿ ಆಯೋಜಿಸಿರುವ ಜಿ7 ಶೃಂಗಸಭೆ (G7 Summit)ಯಲ್ಲಿ ಪಾಲ್ಗೊಳ್ಳಲು ನರೇಂದ್ರ ಮೋದಿ ಅವರು ತೆರಳುತ್ತಿದ್ದಾರೆ.

ಇಟಲಿಯ ಅಪುಲಿಯಾ ಪ್ರದೇಶದ ಐಷಾರಾಮಿ ರೆಸಾರ್ಟ್ ಬೊರ್ಗೊ ಎಗ್ನಾಜಿಯಾದಲ್ಲಿ ಜೂನ್‌ 13ರಿಂದ 15ರವರೆಗೆ ಈ ಬಾರಿಯ, 50ನೇ ಜಿ7 ಶೃಂಗಸಭೆಯನ್ನು ಆಯೋಜಿಸಲಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ವಿದೇಶಾಂಗ ಕಾರ್ಯದರ್ಶಿ ವಿನಯ್ ಅವರನ್ನು ಒಳಗೊಂಡಿರುವ ಉನ್ನತ ಮಟ್ಟದ ನಿಯೋಗವು ಪ್ರಧಾನಿ ಅವರೊಂದಿಗೆ ಇರಲಿದೆ. ಜೂನ್‌ 14ರಂದು ಸಭೆಯಲ್ಲಿ ಮೋದಿ ಅವರು ಪಾಲ್ಗೊಂಡು ಅಂದೇ ಭಾರತಕ್ಕೆ ಹಿಂದಿರುಗಲಿದ್ದಾರೆ.

ಚರ್ಚಾ ವಿಷಯ

ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧ ಮತ್ತು ಗಾಜಾದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದ ವಿಚಾರವು ಜಿ7 ಶೃಂಗಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆಯಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ರಷ್ಯಾದ ಆಕ್ರಮಣದ ಕುರಿತು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎನ್ನಲಾಗಿದೆ. ಜತೆಗೆ ಭಾರತ ರಕ್ಷಣಾ ಮತ್ತು ಸಮುದ್ರ ಮಾರ್ಗದಲ್ಲಿನ ಸಹಕಾರದ ಬಗ್ಗೆ ಪ್ರಸ್ತಾವಿಸಲಿದೆ ಎಂದು ಮೂಲಗಳು ತಿಳಿಸಿವೆ. ಅಮೆರಿಕ, ಇಂಗ್ಲೆಂಡ್‌, ಕೆನಡಾ, ಜರ್ಮನಿ, ಇಟಲಿ, ಜಪಾನ್, ಫ್ರಾನ್ಸ್ ಮತ್ತು ಯುರೋಪಿಯನ್ ಒಕ್ಕೂಟದ ಏಳು ಸದಸ್ಯ ರಾಷ್ಟ್ರಗಳ ನಾಯಕರು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

ʼʼವಿಶೇಷ ಆಹ್ವಾನಿತರಾಗಿರುವ ಪ್ರಧಾನಿ ಮೋದಿ ಗುರುವಾರ ಉನ್ನತ ಮಟ್ಟದ ನಿಯೋಗದೊಂದಿಗೆ ಇಟಲಿಗೆ ತೆರಳಲಿದ್ದು, ಮೂರನೇ ಬಾರಿಗೆ ಪ್ರಧಾನಿಯಾಗಿ ಮರಳಿದ ನಂತರ ಇದು ಅವರ ಮೊದಲ ವಿದೇಶ ಪ್ರವಾಸʼʼ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ತಿಳಿಸಿದ್ದಾರೆ. ʼʼಭಾರತದ ಜಿ20 ಅಧ್ಯಕ್ಷತೆಯ ಅವಧಿಯಲ್ಲಿ ಚರ್ಚಿಸಲಾದ ಕೆಲವು ಪ್ರಮುಖ ವಿಷಯಗಳ ಬಗ್ಗೆ ಅವರು ಪ್ರಸ್ತಾವಿಸಲಿದ್ದಾರೆʼʼ ಎಂದೂ ಹೇಳಿದ್ದಾರೆ.

ಶೃಂಗಸಭೆಯಲ್ಲಿ ರಷ್ಯಾ-ಉಕ್ರೇನ್ ಸಂಘರ್ಷ ಚರ್ಚೆಯ ವಿಷಯಗಳಲ್ಲಿ ಒಂದಾಗುವ ನಿರೀಕ್ಷೆಯಿದೆ. ಸಂಘರ್ಷವನ್ನು ಪರಿಹರಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆ ಉತ್ತಮ ಆಯ್ಕೆಯಾಗಿದೆ ಎಂದು ಭಾರತ ಪುನರುಚ್ಚರಿಸಿದೆ. “ಸಂಘರ್ಷ, ಸಂವಾದ ಮತ್ತು ರಾಜತಾಂತ್ರಿಕತೆಯ ಅಗತ್ಯತೆಯ ಬಗ್ಗೆ ಮಾತ್ರವಲ್ಲ, ಸಂಘರ್ಷವು ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಬೀರುವ ಪರಿಣಾಮ ಬೀರುವ ಬಗ್ಗೆಯೂ ಮಾತನಾಡಲಿದ್ದೇವೆ” ಎಂದು ಕ್ವಾತ್ರಾ ತಿಳಿಸಿದ್ದಾರೆ.

ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರೂ ಪಾಲ್ಗೊಳ್ಳುತ್ತಿದ್ದು, ಮೋದಿ ಅವರೊಂದಿಗೆ ಮಾತುಕತೆ ನಡೆಸುವ ನಿರೀಕ್ಷೆ ಇದೆ. ಜತೆಗೆ ಮೋದಿ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ದ್ವಿಪಕ್ಷೀಯ ಒಪ್ಪಂಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.

ಇದನ್ನೂ ಓದಿ: Narendra Modi: ಪ್ರಧಾನಿ ಮೋದಿಗೆ ಜಿ 7 ಶೃಂಗಸಭೆಯ ಆಹ್ವಾನ ನೀಡಿದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ

ಗ್ರೂಪ್ ಆಫ್ ಸೆವೆನ್ (ಜಿ 7) ಏಳು ಪ್ರಮುಖ ದೇಶಗಳನ್ನು ಒಳಗೊಂಡಿರುವ ಅಂತರ್ ಸರ್ಕಾರಿ ಸಂಸ್ಥೆಯಾಗಿದೆ. ಆರ್ಥಿಕ ನೀತಿ, ಜಾಗತಿಕ ಭದ್ರತೆ ಮತ್ತು ಇತರ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಮತ್ತು ಸಮನ್ವಯಗೊಳಿಸಲು ಈ ದೇಶಗಳು ವಾರ್ಷಿಕವಾಗಿ ಸಭೆ ಸೇರುತ್ತವೆ. 

Exit mobile version