ಮ್ಯೂನಿಕ್: ಜರ್ಮನಿಯಲ್ಲಿ ನಡೆಯುತ್ತಿರುವ 48ನೇ ಜಿ7 ಶೃಂಗಸಭೆಯಲ್ಲಿ (G7 Summit) ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಪ್ರಧಾನಿ ನರೇಂದ್ರ ಮೋದಿ ಇದ್ದಲ್ಲಿಗೆ ಬಂದು ಅವರನ್ನು ಮಾತನಾಡಿಸಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ.
ಜಿ7 ಶೃಂಗಸಭೆಯಲ್ಲಿ ನಾಯಕರು ಗ್ರೂಪ್ ಫೋಟೊಗೆ ಸಿದ್ಧತೆ ನಡೆಸುವಾಗ ಈ ಘಟನೆ ನಡೆದಿದೆ. ಮೋದಿ ಖುಷಿಯಿಂದ ಕೆನಡಾದ ಅಧ್ಯಕ್ಷರ ಕೈಹಿಡಿದು ಮಾತನಾಡುತ್ತಾ ನಿಂತಿರುತ್ತಾರೆ. ಆಗ ಹಿಂದಿನಿಂದ ಬಂದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಪ್ರಧಾನಿ ಮೋದಿಯವರ ಹೆಗಲನ್ನು ತಟ್ಟಿ ಮಾತನಾಡಿಸುತ್ತಾರೆ. ನಂತರ ಮೋದಿ ಮತ್ತು ಬೈಡೆನ್ ನಗುತ್ತಾ ಮಾತನಾಡುತ್ತಿರುವುದು ಈ ವಿಡಿಯೋದಲ್ಲಿ ದಾಖಲಾಗಿದೆ.
ಎಎನ್‌ಐ ಸುದ್ದಿ ಸಂಸ್ಥೆ ಈ ವಿಡಿಯೋವನ್ನು ಸೋಮವಾರ ಸಂಜೆ ಪ್ರಸಾರ ಮಾಡಿತ್ತು. ಇದನ್ನು ಬಿಜೆಪಿಯ ಹಲವು ನಾಯಕರು ಹಂಚಿಕೊಂಡಿದ್ದು, ಪ್ರಧಾನಿ ಮೋದಿ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊರೆಯುತ್ತಿರುವ ಗೌರವಕ್ಕೆ ಇದು ಸಾಕ್ಷಿಯಾಗಿದೆ ಎಂದು ಬರೆದುಕೊಂಡಿದ್ದಾರೆ.
ಮೋದಿಯ ಅಭಿಮಾನಿಗಳು ʼಈಗ ಯಾರು ದೊಡ್ಡಣ್ಣ?ʼ ಎಂಬುದು ಸ್ಪಷ್ಟವಾಗುತ್ತಿದೆ. ಮೋದಿಯಿಂದಾಗಿ ಭಾರತ ಪ್ರತಿಷ್ಠೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿದೆ. ಅಮೆರಿಕದ ಅಧ್ಯಕ್ಷರೂ ಭಾರತದ ಪ್ರಧಾನಿಯನ್ನು ಹುಡುಕಿಕೊಂಡು ಬಂದು ಮಾತನಾಡಿಸುವಂತಾಗಿದೆ ಎಂದೆಲ್ಲಾ ಬರೆದುಕೊಂಡು ಶೇರ್ ಮಾಡುತ್ತಿದ್ದಾರೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ʼಪದಗಳಿಗಿಂತ ಕ್ರಿಯೆಯೇ ಹೆಚ್ಚು ಮಾತನಾಡುತ್ತಿರುವ ದೃಶ್ಯ ಇದುʼ ಎಂದು ಬಣ್ಣಿಸಿದ್ದಾರೆ. ಸಂಸದ ಪ್ರತಾಪ್ ಸಿಂಹ ʼವಿಶ್ವನಾಯಕ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಜೀʼ ಎಂದು ಬರೆದುಕೊಂಡು ಈ ವಿಡಿಯೋ ಶೇರ್ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಪ್ರಮುಖ ಸಹಭಾಗಿ ದೇಶಗಳ ನಾಯಕರೊಂದಿಗೆ ಆತ್ಮೀಯವಾಗಿ ಮಾತನಾಡುತ್ತಿರುವ ಫೋಟೊಗಳೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಆಗುತ್ತಿವೆ.
ಈ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಹಭಾಗಿ ದೇಶಗಳ ನಾಯಕರು ಮತ್ತು ವಿವಿಧ ಸಂಘಟನೆಗಳಿಂದ ಬಂದ ಗಣ್ಯ ಅತಿಥಿಗಳೊಟ್ಟಿಗೆ ಜಾಗತಿಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಅದರಲ್ಲೂ ಪ್ರಸ್ತುತ ಬಹುಮುಖ್ಯ ವಿಷಯಗಳಾದ ಪರಿಸರ, ಇಂಧನ, ಹವಾಮಾನ, ಆಹಾರ ಸುರಕ್ಷತೆ, ಆರೋಗ್ಯ, ಉಗ್ರ ವಿರೋಧಿ ಹೋರಾಟ, ಲಿಂಗ ಸಮಾನತೆ ಮತ್ತು ಪ್ರಜಾಪ್ರಭುತ್ವಕ್ಕೆ ಸಂಬಂಧಪಟ್ಟಂತೆ ಸಮಗ್ರ ಚರ್ಚೆ ಈ ಶೃಂಗ ಸಭೆಯಲ್ಲಿ ನಡೆದಿದೆ.
ಇದನ್ನೂ ಓದಿ| ವಿಸ್ತಾರ TOP 10 NEWS | ಜಿ7ನಲ್ಲಿ ಪ್ರಧಾನಿ, ಪಠ್ಯ ತಪ್ಪಿಗೆ 8 ತೇಪೆ ಸೇರಿ ದಿನದ ಪ್ರಮುಖ ಸುದ್ದಿಗಳು