Site icon Vistara News

ಬಿಜೆಪಿ ಅಧಿಕಾರಕ್ಕೇರಿದ್ದರ ಕ್ರೆಡಿಟ್‌ ವಾಜಪೇಯಿ, ಆಡ್ವಾಣಿ ಅವರಿಗೇ ಸಲ್ಲಬೇಕು ಎಂದ ನಿತಿನ್‌ ಗಡ್ಕರಿ

nitin gadkari

ನಾಗಪುರ: ಬಿಜೆಪಿ ಅಧಿಕಾರಕ್ಕೇರಲು ಅಟಲ್‌ ಬಿಹಾರಿ ವಾಜಪೇಯಿ, ಎಲ್‌.ಕೆ. ಆಡ್ವಾಣಿ ಮತ್ತು ದೀನ್‌ ದಯಾಳ್‌ ಉಪಾಧ್ಯಾಯ ಅವರು ಮಾಡಿದ ಕೆಲಸಗಳೇ ಕಾರಣ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಹೇಳಿದ್ದಾರೆ. ಬಿಜೆಪಿ ಇದೀಗ ಇಡೀ ದೇಶದಲ್ಲಿ ಅಜೇಯವಾಗುತ್ತಿರುವ ನಡುವೆಯೇ ಅದರ ಕ್ರೆಡಿಟ್‌ ಯಾರಿಗೆ ಎನ್ನುವ ವಿಚಾರದಲ್ಲಿ ಗಡ್ಕರಿ ಮಾತು ಬಹಳ ಮಹತ್ವವನ್ನು ಪಡೆದುಕೊಂಡಿದೆ.

ಸುಮಾರು ೧೧ ಸಾವಿರ ಶಿಕ್ಷಕರನ್ನು ಲಕ್ಷ್ಮಣರಾವ್‌ ಮಂಡಕ್‌ ಸ್ಮೃತಿ ಸಂಸ್ಥಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದು ಬುಡಕಟ್ಟು ಪ್ರದೇಶದಲ್ಲಿರುವ ಹಲವು ಶಾಲೆಗಳನ್ನು ನಡೆಸುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿದ ಗಡ್ಕರಿ ೧೯೮೦ರಲ್ಲಿ ಮುಂಬಯಿಯಲ್ಲಿ ನಡೆದ ಸಮಾವೇಶವೊಂದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರು ಮಾಡಿದ ಭಾಷಣವನ್ನು ನೆನಪು ಮಾಡಿಕೊಂಡರು.

ʻʻಅಂಧೇರಾ ಚಟೇಗಾ, ಸೂರಜ್‌ ನಿಕ್ಲೇಗಾ, ಕಮಲ್‌ ಖಿಲೇಗಾʼʼ (ಕತ್ತಲು ಕಳೆಯಲಿದೆ, ಸೂರ್ಯ ಉದಯಿಸಲಿದ್ದಾನೆ, ಕಮಲ ಅರಳಲಿದೆʼʼ ಎಂದು ವಾಜಪೇಯಿ ಅವರು ಹೇಳಿದ್ದರೆಂದು ನೆನಪಿಸಿಕೊಂಡರು. ೧೯೮೦ರ ಅವಧಿಯಲ್ಲಿ ಬಿಜೆಪಿ ಪಾಲಿಗೆ ಇಂಥಹುದೊಂದು ಕನಸು ಕಾಣುವ ಸ್ಥಿತಿಯೂ ಇರಲಿಲ್ಲ ಎನ್ನುವುದು ಗಡ್ಕರಿ ಅವರ ಮಾತಿನ ಮೂಲಾರ್ಥ.

ʻʻನಾನು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ನಾನು ಆ ಮಾತನ್ನು ಕೇಳಿದ್ದೆ ಮತ್ತು ಅಂತಹುದೊಂದು ದಿನ ಬಂದೇ ಬರುತ್ತದೆ ಎಂದು ನಂಬಿದ್ದೆ. ಅಟಲ್‌ಜೀ ಅವರು, ಆಡ್ವಾಣಿಜಿ ಅವರು, ದೀನ್‌ ದಯಾಳ್‌ ಉಪಾಧ್ಯಾಯರು ಮಾತ್ರವಲ್ಲ, ಇನ್ನೂ ಅನೇಕ ಕಾರ್ಯಕರ್ತರು ಮಾಡಿದ ಕಾಯಕದಿಂದಲೇ ಇವತ್ತು ನಾವು ನರೇಂದ್ರ ಮೋದಿಜಿ ಅವರ ನಾಯಕತ್ವದಲ್ಲಿ ದೇಶದಲ್ಲಿ ಅಧಿಕಾರದಲ್ಲಿದ್ದೇವೆ. ಕೇಂದ್ರ ಮತ್ತು ಹಲವು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದ್ದೇವೆʼʼ ಎಂದು ನುಡಿದರು.

ಕೆಲವು ದಿನಗಳ ಹಿಂದಷ್ಟೇ ಬಿಜೆಪಿಯ ಅತ್ಯಂತ ಶಕ್ತಿಶಾಲಿ ಸಂಸದೀಯ ಮಂಡಳಿಯಿಂದ ಗಡ್ಕರಿ ಅವರನ್ನು ತೆಗೆದು ಹಾಕಲಾಗಿತ್ತು. ಅಧಿಕಾರ ಕೇಂದ್ರಿತ ರಾಜಕಾರಣದ ಬಗ್ಗೆ ಸಮಾವೇಶದಲ್ಲಿ ಮಾತನಾಡಿದ ನಿತಿನ್‌ ಗಡ್ಕರಿ ಅವರು ಆರ್‌ಎಸ್‌ಎಸ್‌ ಪ್ರಮುಖರಾಗಿದ್ದ ದತ್ತೋಪಂತ ಠೇಂಗಡಿ ಅವರು ಹೇಳಿದ ಮಾತುಗಳನ್ನು ಉಲ್ಲೇಖಿಸಿದರು.
ʻಠೇಂಗಡಿ ಅವರು ಹೇಳುತ್ತಿದ್ದರು, ಪ್ರತಿ ರಾಜಕಾರಣಿಯೂ ತನ್ನ ಮುಂದಿನ ಚುನಾವಣೆಯ ಬಗ್ಗೆ ಯೋಚಿಸುತ್ತಾನೆ. ಅವನು ಮುಂದಿನ ಐದು ವರ್ಷಗಳ ಬಗ್ಗೆ ಯೋಚಿಸುತ್ತಾನೆ. ಒಂದು ಚುನಾವಣೆ ಬಂದರೆ ಮುಂದಿನ ಚುನಾವಣೆ ಬಗ್ಗೆ ಯೋಚಿಸಲು ಶುರು ಮಾಡುತ್ತಾನೆ. ಆದರೆ, ಸಮಾಜವನ್ನು, ದೇಶವನ್ನು ಕಟ್ಟಬೇಕು ಎಂದು ಯೋಚಿಸುವ ಒಬ್ಬ ಸಾಮಾಜಿಕ-ಆರ್ಥಿಕ ಸುಧಾರಕ ೊಂದು ಶತಮಾನ ಮತ್ತೊಂದು ಶತಮಾನ.. ಹೀಗೆ ಶತಮಾನಗಳ ಲೆಕ್ಕಾಚಾರದಲ್ಲಿ ಯೋಚನೆ ಮಾಡುತ್ತಾನೆ. ಅವನ ಕೆಲಸಗಳಲ್ಲಿ ಅಡ್ಡದಾರಿಗಳು, ಶಾರ್ಟ್‌ ಕಟ್‌ಗಳು ಇರುವುದಿಲ್ಲʼʼ ಎಂದು ಗಡ್ಕರಿ ಹೇಳಿದರು.

ಇದನ್ನೂ ಓದಿ | ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ, ಚುನಾವಣಾ ಸಮಿತಿಗಳಲ್ಲಿ ಸ್ಥಾನ ಕಳೆದುಕೊಂಡ ನಿತಿನ್​ ಗಡ್ಕರಿ !

Exit mobile version