ನವದೆಹಲಿ/ಒಟ್ಟಾವ: ಕೆನಡಾದಲ್ಲಿ ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಖಲಿಸ್ತಾನಿ ಉಗ್ರ (Khalistani Terrorist) ಸುಖಾ ದುನೆಕೆ (Sukha Duneke) ಹತ್ಯೆಯ ಹೊಣೆಯನ್ನು ಭಾರತದ ಕುಖ್ಯಾತ ಗ್ಯಾಂಗ್‌ಸ್ಟರ್, ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಮುಖ ಹತ್ಯೆ ಆರೋಪಿ ಲಾರೆನ್ಸ್ ಬಿಷ್ಣೋಯಿ ಹೊತ್ತುಕೊಂಡಿದ್ದಾನೆ. ಕೆನಡಾದ ವಿನ್ನಿಪಿಗ್‌ನಲ್ಲಿ ಸುಖಾ ದುನೆಕೆಯನ್ನು ಬುಧವಾರ ರಾತ್ರಿ (ಸೆಪ್ಟೆಂಬರ್ 20) ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಇದರ ಹೊಣೆಯನ್ನು ಸದ್ಯ ಅಹಮದಾಬಾದ್ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯಿ ಹೊತ್ತುಕೊಂಡಿದ್ದಾನೆ.
“ಗುರ್‌ಲಾಲ್ ಬ್ರಾರ್ ಹಾಗೂ ವಿಕ್ಕಿ ಮಿದ್ದುಖೆರ ಹತ್ಯೆಯ ಹಿಂದೆ ಸುಖಾ ದುನೆಕೆ ಪ್ರಮುಖ ಪಾತ್ರ ನಿರ್ವಹಿಸಿದ್ದಾನೆ. ದುನೆಕೆಯು ಒಬ್ಬ ಮಾದಕ ವ್ಯಸನಿಯೂ ಆಗಿದ್ದಾನೆ. ಅವನ ಪಾಪಕರ್ಮಗಳನ್ನು ನೋಡಿ ಶಿಕ್ಷೆ ನೀಡಲಾಗಿದೆ. ಆತ ಭಾರತ ಸೇರಿ ಜಗತ್ತಿನ ಯಾವುದೇ ಮೂಲೆಯಲ್ಲೂ ಬದುಕಲು ಅರ್ಹನಲ್ಲ. ಹಾಗಾಗಿ, ಸುಖಾ ದುನೆಕೆಯನ್ನು ಹತ್ಯೆ ಮಾಡಲಾಗಿದೆ” ಎಂದು ಬಿಷ್ಣೋಯಿ ಗ್ಯಾಂಗ್ ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿದೆ.
Gangster Sukhdool Singh’s murder in Canada, part of series of gangwar revenge killings
— ANI Digital (@ani_digital) September 21, 2023
Read @ANI Story | https://t.co/QcgAEpgobq#Canada #SukhdoolSingh #LawrenceBishnoi pic.twitter.com/lyOkYFXvjg
ಸುಖಾ ದುನೆಕೆ ಯಾರು?
ಸುಖಾ ದುನೆಕೆಯು ಪಂಜಾಬ್‌ನ ಮೋಗಾ ಜಿಲ್ಲೆಯ ಎ ಕೆಟಗರಿ ಗ್ಯಾಂಗ್‌ಸ್ಟರ್. ಈತ ಹಲವು ಅಪರಾಧ ಕೃತ್ಯಗಳಲ್ಲಿ ತೊಡಗಿದ್ದು, 2017ರಲ್ಲಿ ನಕಲಿ ಪಾಸ್‌ಪೋರ್ಟ್ ಪಡೆದು ಕೆನಡಾಗೆ ಪರಾರಿಯಾಗಿದ್ದಾನೆ. ಈತ ಖಲಿಸ್ತಾನಿ ಉಗ್ರ ಅರ್ಶ್‌ದೀಪ್ ದಲ್ಲಾನ ಆಪ್ತನಾಗಿದ್ದು, ಕೆನಡಾದಲ್ಲಿ ಖಲಿಸ್ತಾನ ಪರ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾನೆ. ಎನ್‌ಐಎ ಬಿಡುಗಡೆ ಮಾಡಿರುವ 43 ಖಲಿಸ್ತಾನಿ ಉಗ್ರರ ಪಟ್ಟಿಯಲ್ಲಿ ಈತನ ಹೆಸರೂ ಇದೆ.
ಇದನ್ನೂ ಓದಿ: Khalistani Terrorist: ಕೆನಡಾದಲ್ಲಿ ಮತ್ತೊಬ್ಬ ಭಾರತ ವಿರೋಧಿ ಖಲಿಸ್ತಾನಿ ಉಗ್ರನ ಹತ್ಯೆ
ಲಾರೆನ್ಸ್ ಬಿಷ್ಣೋಯಿ ದೇಶದ ಕುಖ್ಯಾತ ಗ್ಯಾಂಗ್‌ಸ್ಟರ್. ಪಂಜಾಬ್‌ನವನಾದ ಈತನದ್ದು ಅತ್ಯಂತ ದೊಡ್ಡ ಗ್ಯಾಂಗ್ ಇದೆ. ಇವನ ಶೂಟರ್ಗಳು ದೇಶಾದ್ಯಂತ 700ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಸಕ್ರಿಯರಾಗಿದ್ದಾರೆ. ಪಂಜಾಬ್ ರಾಜಕಾರಣಿ, ಗಾಯಕ ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್ ಈತನೇ ಆಗಿದ್ದಾನೆ. ಅದರಲ್ಲೂ ಸಲ್ಮಾನ್ ಖಾನ್ ಹತ್ಯೆಗೆ ಹಪಹಪಿಸುತ್ತಿದ್ದಾನೆ. ಸಲ್ಮಾನ್ ಖಾನ್ ಅವರು 1998ರಲ್ಲಿ ಹಮ್ ಸಾಥ್ ಸಾಥ್ ಹೈ ಚಿತ್ರದ ಚಿತ್ರೀಕರಣಕ್ಕೆಂದು ರಾಜಸ್ಥಾನದ ಜೋಧ್‌ಪುರಕ್ಕೆ ಹೋಗಿದ್ದರು. ಇದೇ ವೇಳೆ ಸಫಾರಿಗೆ ಹೋದ ಅವರು ಒಂದು ಕೃಷ್ಣಮೃಗವನ್ನು ಬೇಟೆಯಾಡಿದ್ದರು. ಈ ಕೃಷ್ಣಮೃಗವನ್ನು ಬಿಷ್ಣೋಯಿ ಸಮುದಾಯದವರು ತಮ್ಮ ಧಾರ್ಮಿಕ ಗುರು ಭಗವಾನ್ ಜಂಬೇಶ್ವರ ಅವರ ಪುನರ್ಜನ್ಮ ಎಂದು ಭಾವಿಸುತ್ತಾರೆ. ಅಂಥ ಕೃಷ್ಣಮೃಗವನ್ನು ಕೊಂದ ಸಲ್ಮಾನ್ ಖಾನ್ರನ್ನು ಹತ್ಯೆ ಮಾಡಿಯೇ ತೀರುತ್ತೇನೆ ಎಂಬುದು ಲಾರೆನ್ಸ್ ಬಿಷ್ಣೋಯಿ ಶಪಥ. ಈಗಾಗಲೇ ಆತ ಹಲವು ಸಲ ಸಲ್ಮಾನ್ ಖಾನ್ಗೆ ಜೀವ ಬೆದರಿಕೆ ಹಾಕಿದ್ದಾನೆ. ಇತ್ತೀಚೆಗೆ ಜೈಲಲ್ಲೇ ಕುಳಿತು ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲೂ ಸಲ್ಮಾನ್ ಖಾನ್ ಹತ್ಯೆಯೇ ಗುರಿ ಎಂದು ಹೇಳಿದ್ದ.