Site icon Vistara News

Garlic Price: ಕೆಲವೇ ದಿನಗಳಲ್ಲಿ ದುಪ್ಪಟ್ಟಾದ ಬೆಳ್ಳುಳ್ಳಿ ಬೆಲೆ, ಈಗ ಮಸಾಲೆ ಇನ್ನಷ್ಟು ಖಾರ

garlic

ಹೊಸದಿಲ್ಲಿ: ಬೆಳ್ಳುಳ್ಳಿ ಹಣದುಬ್ಬರದ ಇತ್ತೀಚಿನ ಬಲಿಪಶುವಾಗಿದ್ದು, ಕಳೆದ ಕೆಲವು ದಿನಗಳಲ್ಲಿ ಇದರ ಬೆಲೆ (Garlic Price) ದುಪ್ಪಟ್ಟಾಗಿದೆ. ಕೆಲವು ಪ್ರದೇಶಗಳಲ್ಲಿ ಬೆಳ್ಳುಳ್ಳಿಯ ದರ ಪ್ರತಿ ಕೆಜಿಗೆ (Garlic Price hike) ₹400ಕ್ಕೆ ತಲುಪಿದೆ. ಪೂರೈಕೆ ಕ್ಷೀಣಿಸಿರುವ ಕಾರಣ ಬೆಲೆ ಗಗನಕ್ಕೇರಿದೆ (Garlic Price rise) ಎನ್ನಲಾಗಿದೆ.

ಭಾರತದಾದ್ಯಂತ ಅಡುಗೆಯಲ್ಲಿ ಹೆಚ್ಚಾಗಿ ಬಳಸುವ ಸಾಂಬಾರ ಪದಾರ್ಥಗಳಲ್ಲಿ ಬೆಳ್ಳುಳ್ಳಿ ಒಂದಾಗಿದೆ. ಈಗ ಕೆಲವು ಚಿಲ್ಲರೆ ಮಾರುಕಟ್ಟೆಗಳಲ್ಲಿ ಕೆಜಿಗೆ ₹300ರಿಂದ ₹400ರ ವರೆಗೆ ಮಾರಾಟವಾಗುತ್ತಿದೆ. ವರ್ಷಾಂತ್ಯದವರೆಗೂ ಬೆಲೆಗಳು ಏರುವ ನಿರೀಕ್ಷೆಯಿದೆ. ಬೆಳ್ಳುಳ್ಳಿಯ ಸಗಟು ಬೆಲೆಗಳು ಹೆಚ್ಚಿನ ಏರಿಕೆ ಕಂಡಿದ್ದು, ಸಗಟು ಮಾರುಕಟ್ಟೆಗಳಲ್ಲಿ ₹130-140ಕ್ಕೆ ಮಾರಾಟವಾಗುತ್ತಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಇದೇ ವೇಳೆ ಉತ್ತಮ ಗುಣಮಟ್ಟದ ಬೆಳ್ಳುಳ್ಳಿ ಕೆಜಿಗೆ ₹220-250ರ ಸಗಟು ದರದಲ್ಲಿ ಮಾರಾಟವಾಗುತ್ತಿದೆ.

ಬೆಳ್ಳುಳ್ಳಿ ಬೆಲೆ ದ್ವಿಗುಣಗೊಂಡಿರುವುದೇಕೆ?

ಮಸಾಲೆ ಬೆಳೆಗಳಾದ ಈರುಳ್ಳಿ ಹಾಗೂ ಬೆಳ್ಳುಳ್ಳಿಯ ಬೆಲೆಗಳು ಏರುತ್ತಿವೆ. ಬೆಳ್ಳುಳ್ಳಿ ಬೆಲೆ ಕೇವಲ ಒಂದು ವಾರದೊಳಗೆ ದ್ವಿಗುಣಗೊಂಡಿದೆ. ಹವಾಮಾನ ವೈಪರೀತ್ಯದಿಂದಾಗಿ ಬೆಳೆ ಹಾನಿಗೊಳಗಾದ ಕಾರಣ ದೇಶದಾದ್ಯಂತ ಬೆಳ್ಳುಳ್ಳಿಯ ಪೂರೈಕೆ ಕ್ಷೀಣಿಸುತ್ತಿರುವುದು ಹೆಚ್ಚಿನ ಬೆಲೆಯ ಹಿಂದಿನ ಕಾರಣ. ಭಾರತದ ಕೆಲವು ಭಾಗಗಳಲ್ಲಿ ಮಿಚಾಂಗ್ ಚಂಡಮಾರುತದಿಂದ ಉಂಟಾದ ಅಕಾಲಿಕ ಮಳೆಯು ಹೆಚ್ಚಿನ ಪ್ರಮಾಣದ ಬೆಳ್ಳುಳ್ಳಿ ಬೆಳೆಗಳನ್ನು ನಾಶಮಾಡಿದೆ. ಇದರಿಂದ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿಗೆ ತೀವ್ರ ಕೊರತೆ ಉಂಟಾಗಿದ್ದು, ಬೆಲೆ ದ್ವಿಗುಣಗೊಳ್ಳಲು ಕಾರಣವಾಗಿದೆ.

ಹೊಸ ಇಳುವರಿ ಮಾರುಕಟ್ಟೆಗೆ ಬರುವವರೆಗೆ ದೇಶದಾದ್ಯಂತ ಬೆಲೆ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಬಹುಶಃ ಈ ತಿಂಗಳ ಅಂತ್ಯದ ವೇಳೆಗೆ ಬರಬಹುದು. ಕಡಿಮೆ ಇಳುವರಿ ಮತ್ತು ಪೂರೈಕೆಯಿಂದಾಗಿ ಚಳಿಗಾಲದಲ್ಲಿ ಬೆಳ್ಳುಳ್ಳಿ ಬೆಲೆಗಳು ಏರುತ್ತವೆ. ಆದರೆ ಈ ಬಾರಿ ನಿರೀಕ್ಷೆ ಮೀರಿ ಹೆಚ್ಚಳವಾಗಿದೆ.

ಸಗಟು ಮಾರುಕಟ್ಟೆಗಳಲ್ಲಿ ಈರುಳ್ಳಿ ಪೂರೈಕೆಯಲ್ಲಿ ಕೊರತೆಯಾದ ಪರಿಣಾಮ ಬೆಲೆ ಏರಿಕೆಯಾಗಿದೆ. ಬಳಿಕ ಈರುಳ್ಳಿ ರಫ್ತು ನಿಷೇಧಿಸಲಾಗಿದೆ. ಆ ನಂತರ ಬೆಳ್ಳುಳ್ಳಿ ಬೆಲೆಯಲ್ಲಿ ಅನಿರೀಕ್ಷಿತ ಏರಿಕೆಯಾಗಿದೆ. ಕೇಂದ್ರವು ಬೆಲೆ ಇಳಿಸಲು ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ದರಗಳು ಚಿಲ್ಲರೆ ವ್ಯಾಪಾರದಲ್ಲಿ ₹300-400 ಮತ್ತು ಸಗಟು ₹200ರ ಆಸುಪಾಸಿನಲ್ಲಿ ಸ್ಥಿರವಾಗಿವೆ. ಅಗತ್ಯ ಹಣ್ಣುಗಳು ಮತ್ತು ತರಕಾರಿಗಳ ಬೆಲೆಯಲ್ಲಿನ ಹಠಾತ್ ಏರಿಕೆಯ ಹಿಂದಿನ ಕಾರಣವೆಂದರೆ ಭಾರತದ ಕೆಲವು ಭಾಗಗಳಲ್ಲಿನ ಅನಿರೀಕ್ಷಿತ ಮತ್ತು ಹವಾಮಾನ ವೈಪರೀತ್ಯಗಳು.

ಇದನ್ನೂ ಓದಿ: Onion Price: ಭಾರತದಿಂದ ರಫ್ತು ನಿಷೇಧ; ನೆರೆಹೊರೆಯ ದೇಶಗಳಲ್ಲಿ ಈರುಳ್ಳಿ ಸಿಗದೆ ಕಣ್ಣೀರು!

Exit mobile version