ನವದೆಹಲಿ: ಭಾರತದಲ್ಲಿ ಡಿಜಿಟಲ್ ಹಣ ಪಾವತಿಗಾಗಿ ರಚಿಸಿರುವ ಏಕೀಕೃತ ಪಾವತಿ ವ್ಯವಸ್ಥೆ (Unified Payments Interface-UPI) ಈಗ ಜಾಗತಿಕ ಮಟ್ಟದಲ್ಲಿ ಬಳಕೆಯಾಗುತ್ತಿದೆ. ಜಗತ್ತಿನ ಹತ್ತಾರು ದೇಶಗಳು ಯುಪಿಐ ಪೇಮೆಂಟ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. ಇದರ ಬೆನ್ನಲ್ಲೇ ಜರ್ಮನಿ ಡಿಜಿಟಲ್ ಹಾಗೂ ಸಾರಿಗೆ ಸಚಿವ (German Minister) ವೋಲ್ಕರ್ ವಿಸ್ಸಿಂಗ್ (Volker Wissing) ಅವರು ದೆಹಲಿಯಲ್ಲಿ ಯುಪಿಐ ಮೂಲಕ ಹಣ ಪಾವತಿಸಿ ತರಕಾರಿ ಖರೀದಿಸಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್ ಆಗಿದೆ.
ವೋಲ್ಕರ್ ಅವರು ಯುಪಿಐ ಮೂಲಕ ಹಣ ಪಾವತಿಸಿದ ವಿಡಿಯೊವನ್ನು ಭಾರತದಲ್ಲಿರುವ ಜರ್ಮನಿ ರಾಯಭಾರ ಕಚೇರಿಯು ಎಕ್ಸ್ (ಟ್ವಿಟರ್) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. “ಭಾರತದಲ್ಲಿ ಡಿಜಿಟಲ್ ಮೂಲಸೌಕರ್ಯದ ಯಶೋಗಾಥೆ ಇದಾಗಿದೆ. ಎಲ್ಲರೂ ಕ್ಷಣಮಾತ್ರದಲ್ಲಿ ಹಣ ಪಾವತಿಸುವುದನ್ನು ಯುಪಿಐ ಖಚಿತಪಡಿಸುತ್ತದೆ. ಜರ್ಮನಿ ಸಚಿವ ವೋಲ್ಕರ್ ವಿಸ್ಸಿಂಗ್ ಅವರು ಯುಪಿಐ ಮೂಲಕ ಹಣ ಪಾವತಿಸಿದ್ದು, ಅವರಿಗೆ ಯುಪಿಐ ವ್ಯವಸ್ಥೆ ತುಂಬ ಆಕರ್ಷಿಸಿದೆ” ಎಂದು ತಿಳಿಸಿದೆ.
ಯುಪಿಐ ಬಳಕೆಯ ವಿಡಿಯೊ
ವೋಲ್ಕರ್ ವಿಸ್ಸಿಂಗ್ ಅವರು ಆಗಸ್ಟ್ 19ರಂದು ಜಿ 20 ರಾಷ್ಟ್ರಗಳ ಡಿಜಿಟಲ್ ಸಚಿವರ ಸಭೆಯ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸಿದ್ದರು. ಆಗಸ್ಟ್ 20ರಂದು ಅವರು ದೆಹಲಿಯ ಬೀದಿ ಬದಿ ವ್ಯಾಪಾರಿ ಬಳಿ ಯುಪಿಐ ಮೂಲಕ ಹಣ ಪಾವತಿಸಿ ತರಕಾರಿ ಖರೀದಿಸಿದ್ದಾರೆ. ಭಾರತದಲ್ಲಿ ಡಿಜಿಟಲ್ ವಹಿವಾಟಿಗಾಗಿ 2016ರಲ್ಲಿ ಯುಪಿಐ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಈ ವ್ಯವಸ್ಥೆಗೆ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: UPI New Features: ಯುಪಿಐ 3 ಬದಲಾವಣೆ; ಇನ್ನು ಇಂಟರ್‌ನೆಟ್ ಇಲ್ಲದೆಯೂ ಹಣ ಪಾವತಿಸಿ
ವಿದೇಶಗಳಲ್ಲಿ ಯುಪಿಐ
ಜಗತ್ತಿನ ಹತ್ತಾರು ದೇಶಗಳು ಈಗಾಗಲೇ ಯುಪಿಐ ಅಳವಡಿಸಿಕೊಂಡಿವೆ. ಸಿಂಗಾಪುರ, ಯುಎಇ, ಸೌದಿ ಅರೇಬಿಯಾ, ಮಲೇಷ್ಯಾ, ಬೆಲ್ಜಿಯಂ, ನೆದರ್ಲೆಂಡ್ಸ್, ಸ್ವಿಟ್ಜರ್‌ಲ್ಯಾಂಡ್ ಸೇರಿ ಹಲವು ರಾಷ್ಟ್ರಗಳಲ್ಲಿ ಯುಪಿಐ ಜಾರಿಯಲ್ಲಿದೆ. ಆಯಾ ದೇಶಗಳ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯ ಜತೆ ಯುಪಿಐ ಕೈಜೋಡಿಸಿದ್ದು, ಜನರಿಗೆ ಉತ್ತಮ ಸೇವೆ ಒದಗಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ, ಕೆಲ ತಿಂಗಳ ಹಿಂದಷ್ಟೇ ಫ್ರಾನ್ಸ್ ಕೂಡ ಯುಪಿಐ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಇನ್ನೂ ಜಗತ್ತಿನ ಹಲವು ರಾಷ್ಟ್ರಗಳು ಯುಪಿಐ ಅಳವಡಿಕೆ ಕುರಿತು ಚಿಂತನೆ ನಡೆಸಿವೆ ಎಂದು ತಿಳಿದುಬಂದಿದೆ.