Site icon Vistara News

Gobi Manchurian: ಭಾರತದ ಈ ನಗರದಲ್ಲಿ ಗೋಬಿ ಮಂಚೂರಿ ಮಾರಾಟ ಮಾಡುವಂತಿಲ್ಲ; ಕಾರಣವೇನು?

gobi

gobi

ನವದೆಹಲಿ: ಗೋಬಿ ಮಂಚೂರಿ (Gobi Manchurian) ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ? ಮಕ್ಕಳಿಂದ ಹಿಡಿದು ವಯಸ್ಸಾದವರೂ ಬಾಯಿ ಚಪ್ಪರಿಸಿಕೊಂಡು ಸವಿಯುವ ತಿನಿಸು ಇದು. ಆದರೆ ಗೋವಾದ ಮಾಪುಸಾ ನಗರದಲ್ಲಿ ಹೂಕೋಸು (Cauliflower)ವಿನಿಂದ ಮಾಡುವ ಈ ಖಾದ್ಯವನ್ನು ನಿಷೇಧಿಸಲಾಗಿದೆ. ಕೃತಕ ಬಣ್ಣಗಳ ಬಳಕೆ ಮತ್ತು ನೈರ್ಮಲ್ಯದ ಬಗೆಗಿನ ಕಾಳಜಿಯಿಂದಾಗಿ ಈ ಖಾದ್ಯವನ್ನು ಸ್ಟಾಲ್‌ಗಳು ಮತ್ತು ಹಬ್ಬಗಳಲ್ಲಿ ಮಾರಾಟ ಮಾಡುವುದನ್ನು ನಿರ್ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹಿಂದೆಯೂ ನಡೆದಿತ್ತು

ಅಚ್ಚರಿ ಎಂದರೆ ಮಾಪುಸಾ ಮುನ್ಸಿಪಲ್ ಕೌನ್ಸಿಲ್ ಗೋಬಿ ಮಂಚೂರಿಯನ್ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದ ಮೊದಲ ನಾಗರಿಕ ಸಂಸ್ಥೆ ಅಲ್ಲ. ಹಿಂದೆಯೂ ಈ ಫಾಸ್ಟ್‌ ಫುಡ್‌ ವಿರುದ್ಧ ಗೋವಾದಲ್ಲಿ ಕಾನೂನು ಸಮರ ಕೈಗೊಳ್ಳಲಾಗಿತ್ತು. 2022ರಲ್ಲಿ ಗೋವಾದ ಶ್ರೀ ದಾಮೋದರ್ ದೇವಸ್ಥಾನದಲ್ಲಿ ನಡೆದ ವಾಸ್ಕೋ ಸಪ್ತಾಹ ಮೇಳದ ಸಮಯದಲ್ಲಿ ಗೋಬಿ ಮಂಚೂರಿ ಮಾರಾಟ ಮಾಡುವ ಮಳಿಗೆಗಳನ್ನು ನಿರ್ಬಂಧಿಸಲು ಮೊರ್ಮುಗಾವೊ ಮುನ್ಸಿಪಲ್ ಕೌನ್ಸಿಲ್‌ಗೆ ಆಹಾರ ಮತ್ತು ಔಷಧ ಆಡಳಿತ (FDA) ಸೂಚನೆ ನೀಡಿತ್ತು. ಇದಕ್ಕೂ ಮೊದಲು, ಎಫ್‌ಡಿಎ ಗೋಬಿ ಮಂಚೂರಿ ಸ್ಟಾಲ್‌ಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿತ್ತು.

ರಾಸಾಯನಿಕಗಳ ಬಳಕೆ

ಇತ್ತೀಚಿನ ದಿನಗಳಲ್ಲಿ ಗೋಬಿ ಮಂಚೂರಿ ತಯಾರಿಸುವ ಬಗ್ಗೆ ಆಕ್ಷೇಪ ಕೇಳಿ ಬರುತ್ತಿದೆ. ಇದನ್ನು ತಯಾರಿಸಲು ಅತಿಯಾಗಿ ರಾಸಾಯನಿಕ ಯುಕ್ತ ಬಣ್ಣಗಳನ್ನು ಬಳಸಲಾಗುತ್ತದೆ. ಅಲ್ಲದೆ ಇದರ ತಯಾರಿ ವೇಳೆ ಬಹುತೇಕ ವ್ಯಾಪಾರಿಗಳು ಸ್ವಚ್ಛತೆ ಕಾಪಾಡುವುದಿಲ್ಲ ಎನ್ನುವ ಆರೋಪಗಳೂ ಇದೆ.

ʼʼಬೀದಿ ಬದಿಗಳಲ್ಲಿ ಗೋಬಿ ಮಂಚೂರಿ ಮಾರುವವರು ಉತ್ತಮ ಗುಣಮಟ್ಟದ ಸಾಸ್‌ ಬಳಸುವುದಿಲ್ಲ. ಕಡಿಮೆ ಬೆಲೆಯ ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುತ್ತಿದ್ದು, ಅವು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಹೂಕೋಸು ಗರಿಗರಿಯಾಗಲು ಮತ್ತು ಖಾದ್ಯದ ರುಚಿ ಹೆಚ್ಚಲು ರಾಸಾಯನಿಕ ಪೌಡರ್‌ಗಳನ್ನೂ ಬಳಸುತ್ತಾರೆ. ಈ ಎಲ್ಲ ಕಾರಣಗಳಿಂದ ಗೋಬಿ ಮಂಚೂರಿಯನ್ನು ನಿಷೇಧಿಸಲಾಗಿದೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನಪ್ರಿಯ ಖಾದ್ಯ

ಸ್ಥಳೀಯ ಖಾದ್ಯಗಳಿಗೆ ಸೆಡ್ಡು ಹೊಡೆದು ಗೋಬಿ ಮಂಚೂರಿ ಜನಪ್ರಿಯವಾಗಿದೆ. ಇದು ಆಹಾರ ಸಂಸ್ಕೃತಿಯ ಸ್ಥಾನ ಪಲ್ಲಟಕ್ಕೂ ಕಾರಣವಾಗಿದೆ. ಚಿಕನ್‌ ಮಂಚೂರಿಯಿಂದ ಸ್ಫೂರ್ತಿ ಪಡೆದು ಗೋಬಿ ಮಂಚೂರಿಯನ್ನು ಕಂಡು ಹಿಡಿಯಲಾಗಿತ್ತು. ಭಾರತದಲ್ಲಿ ಮೊದಲ ಬಾರಿಗೆ ಗೋಬಿ ಮಂಚೂರಿಯನ್ನು ಪರಿಚಯಿಸಿದ ಕೀರ್ತಿ ಮುಂಬೈಯ ಚೀನಿ ಮೂಲದ ಶೆಫ್‌ ನೆಲ್ಸನ್ ವಾಂಗ್ ಅವರಿಗೆ ಸಲ್ಲುತ್ತದೆ. ನೆಲ್ಸನ್ ವಾಂಗ್ 1970ರ ದಶಕದಲ್ಲಿ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದಲ್ಲಿ ಅಡುಗೆ ಮಾಡುವಾಗ ಚಿಕನ್ ಮಂಚೂರಿಯನ್ನು ಶೋಧಿಸಿದ್ದರು.

ಇದನ್ನೂ ಓದಿ: Namma Metro : ಮೆಟ್ರೋ ರೈಲಿನಲ್ಲಿ ಗೋಬಿ ಮಂಚೂರಿ ತಿಂದವನಿಗೆ 500 ರೂ. ದಂಡ

ನೆಲ್ಸನ್ ವಾಂಗ್ ಅವರು ಮಸಾಲೆಯುಕ್ತ ಕಾರ್ನ್ ಫ್ಲೋರ್ ಹಿಟ್ಟಿನಲ್ಲಿ ಡೀಪ್ ಫ್ರೈಡ್ ಚಿಕನ್ ಕರಿದು ಸೋಯಾ ಸಾಸ್, ವಿನೆಗರ್, ಸಕ್ಕರೆ, ಟೊಮೆಟೊ ಸಾಸ್‌ನಿಂದ ಮಾಡಿದ ಗ್ರೇವಿಯೊಂದಿಗೆ ಬಡಿಸಿದ್ದರು. ಇದು ಬಹಳ ಜನಪ್ರಿಯವಾಗಿತ್ತು. ಬಳಿಕ ಇದಕ್ಕೆ ಪರ್ಯಾಯವಾಗಿ ಸಸ್ಯಾಹಾರಿಗಳು ಚಿಕನ್‌ ಬದಲು ಹೂಕೋಸು ಬಳಸಲು ಆರಂಭಿಸಿದರು. ಕ್ರಮೇಣ ಇದು ಕೂಡ ಎಲ್ಲರ ನೆಚ್ಚಿನ ಖಾದ್ಯವಾಗಿ ಬದಲಾಯಿತು ಎನ್ನುತ್ತಾರೆ ತಜ್ಞರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version