ನವದೆಹಲಿ: ಟ್ವಿಟರ್, ಮೆಟಾ, ಮೈಕ್ರೋಸಾಫ್ಟ್, ಅಮೆಜಾನ್, ಆಕ್ಷೆಂಚರ್, ಫೋರ್ಡ್ ಸೇರಿ ಜಗತ್ತಿನ ಅಗ್ರ, ಬಹುರಾಷ್ಟ್ರೀಯ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಿವೆ. ಜಾಗತಿಕ ಆರ್ಥಿಕ ಹಿಂಜರಿತದ ಭೀತಿ, ಕೊರೊನಾ ಸಮಯದಲ್ಲಿ ಉಂಟಾದ ನಷ್ಟ ತೂಗಿಸುವಿಕೆ ಸೇರಿ ಹಲವು ಕಾರಣಗಳಿಂದಾಗಿ ಸಾಲು ಸಾಲಾಗಿ ಕಂಪನಿಗಳು ನೌಕರರನ್ನು ವಜಾಗೊಳಿಸುತ್ತಿವೆ. ಇದರಿಂದಾಗಿ ಜಾಗತಿಕ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರೂ ಭೀತಿಯಲ್ಲಿಯೇ ಕಾರ್ಯನಿರ್ವಹಿಸುವ ಪರಿಸ್ಥಿತಿ ಎದುರಾಗಿದೆ. ಆದರೆ, ಗೂಗಲ್ ಕಂಪನಿಯಿಂದ (Google Layoffs) ವಜಾಗೊಂಡವರು ಮಾತ್ರ ಹೆಚ್ಚು ಯೋಚನೆ ಮಾಡಬೇಕಿಲ್ಲ. ಏಕೆಂದರೆ, ಅವರಿಗೆ ಸಿಗುವ ಬೇರ್ಪಡಿಸುವಿಕೆ ಮೊತ್ತ ಅಥವಾ ಕಂಪನಿಯು ಉದ್ಯೋಗಿಯನ್ನು ವಜಾಗೊಳಿಸಿದ ಬಳಿಕ ನೀಡುವ ಹಣಕಾಸು ಪರಿಹಾರದ ಪ್ಯಾಕೇಜ್ (Severance Pay) ಅಷ್ಟರಮಟ್ಟಿಗೆ ಇದೆ.
ಹೌದು, ಗೂಗಲ್ ಇತ್ತೀಚೆಗೆ ಜಾಗತಿಕವಾಗಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ. ಇವರಲ್ಲಿ ಐರ್ಲೆಂಡ್‌ನಲ್ಲಿ ಕೆಲಸ ಮಾಡುತ್ತಿದ್ದ 240 ಉದ್ಯೋಗಿಗಳು ಕೂಡ ಇದ್ದು, ಅವರಿಗೆ ವಜಾಗೊಳಿಸುವ ಕುರಿತು ಮಾಹಿತಿ ನೀಡಲಾಗಿದೆ. ಸೇಲ್ಸ್ ವಿಭಾಗದ 85, ಟೆಕ್ನಾಲಜಿ ವಿಭಾಗದ 80 ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ಆದರೆ, ಇವರಲ್ಲಿಯೇ ಕೆಲವು ಮಂದಿಗೆ ಹಣಕಾಸು ಪರಿಹಾರದ ಪ್ಯಾಕೇಜ್ 2.6 ಕೋಟಿ ರೂಪಾಯಿವರೆಗೆ ಸಿಗಲಿದೆ. ಹಾಗಾಗಿ, ವಜಾಗೊಂಡಿರುವ ನೌಕರರಿಗೆ ಸಿಗುವ ಮೊತ್ತವನ್ನು ನೋಡಿದರೆ ಅವರು ಬೇರೆ ಕೆಲಸ ಹುಡುಕುವ ಪ್ರಮೇಯವೇ ಬರುವುದಿಲ್ಲ ಎಂಬುದಾಗಿ ಅಭಿಪ್ರಾಯ ವ್ಯಕ್ತವಾಗಿದೆ.
ವಜಾಗೊಳ್ಳುತ್ತಿರುವ ನೌಕರರಿಗೆ ಕಂಪನಿಯು Severance Pay ನೀಡುವುದಾಗಿ ಭರವಸೆ ನೀಡಿದೆ. ಐರ್ಲೆಂಡ್‌ನಲ್ಲಿ 2003ರಲ್ಲಿ ಕಚೇರಿಯನ್ನು ತೆರೆದಿದ್ದು, ಕಚೇರಿ ಆರಂಭವಾದಾಗಿನಿಂದ ಇದುವರೆಗೆ ಕಾರ್ಯನಿರ್ವಹಿಸಿದ ನೌಕರರಿಗೆ ಇಷ್ಟು ಮೊತ್ತದ ಪ್ಯಾಕೇಜ್ ಸಿಗಲಿದೆ. ಹೀಗೆ, ಸುದೀರ್ಘ ಅವಧಿಗೆ ಕಾರ್ಯನಿರ್ವಹಿಸಿದ ನೌಕರರಿಗೆ ಪ್ರತಿವರ್ಷದಂತೆ ಲೆಕ್ಕ ಹಾಕಿ ಆರು ವಾರಗಳ ಹೆಚ್ಚುವಳಿ ಸಂಬಳ, 30 ದಿನಗಳ ಗಳಿಕೆ ರಜೆ ಸೇರಿ ಅವರ ಫೈನಲ್ ಸೆಟಲ್‌ಮೆಂಟ್ ಮೊತ್ತವು 2.6 ಕೋಟಿ ಆಗಲಿದೆ ಎಂದು ತಿಳಿದುಬಂದಿದೆ.
ಅಮೆರಿಕದ ನೌಕರರಿಗೂ ಸಿಗಲಿದೆ ಹೆಚ್ಚಿನ ಮೊತ್ತ
ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗೂಗಲ್ ಉದ್ಯೋಗಿಗಳಿಗೂ ಹೆಚ್ಚಿನ ಪ್ರಮಾಣದ Severance Pay ಪ್ಯಾಕೇಜ್ ಸಿಗಲಿದೆ. ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೌಕರರಿಗೆ 16 ವಾರಗಳ ಸಂಬಳ, 16 ವಾರದ ಜಿಎಸ್‌ಯು ವೆಸ್ಟಿಂಗ್, 2022ರ ಬೋನಸ್, ಆರು ತಿಂಗಳವರೆಗೆ ವಿಮೆ ವಿಸ್ತರಣೆ, ವಲಸೆ ಬಂದವರು ಬೇರೆ ದೇಶಗಳಿಗೆ ತೆರಳಲು ಅಥವಾ ತಮ್ಮ ದೇಶಗಳಿಗೆ ಮರಳಲು ನೆರವು ಒದಗಿಸುವುದು ಸೇರಿ ಹತ್ತಾರು ಸೌಲಭ್ಯ ನೀಡಿದೆ. ಆದರೆ, ಐರ್ಲೆಂಡ್‌ನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳಿಗೆ ಮಾತ್ರ ಹೆಚ್ಚಿನ ಮೊತ್ತ ನೀಡಲಾಗಿದೆ.
ಕಳೆದ ಜನವರಿಯಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಅವರು ಉದ್ಯೋಗಿಗಳಿಗೆ ಇ-ಮೇಲ್ ಕಳುಹಿಸುವ ಮೂಲಕ ಕೆಲಸದಿಂದ ವಜಾಗೊಳಿಸುತ್ತಿರುವ ತೀರ್ಮಾನವನ್ನು ಪ್ರಕಟಿಸಿದ್ದರು. ಹಾಗೆಯೇ, “ಇಂತಹ ಕಠಿಣ ತೀರ್ಮಾನದಿಂದ ನನ್ನ ಮನಸ್ಸಿಗೆ ನೋವಾಗಿದ್ದು, ಇದರ ಸಂಪೂರ್ಣ ಹೊಣೆಯನ್ನು ನಾನೇ ಹೊರುತ್ತೇನೆ” ಎಂದು ಹೇಳಿದ್ದರು. ಭಾರತದ 450 ಜನ ಗೂಗಲ್‌ನಿಂದ ವಜಾಗೊಂಡಿದ್ದಾರೆ.
ಇದನ್ನೂ ಓದಿ: xooglers: ಗೂಗಲ್‌ನಿಂದ ಕೆಲಸ ಕಳೆದುಕೊಂಡ 7 ಮಂದಿ ಹೊಸ ಕಂಪನಿಯನ್ನೇ ಆರಂಭಿಸಿದರು!