ಬೆಂಗಳೂರು: ಮೆಫ್ಟಾಲ್ (Meftal) ಬ್ರ್ಯಾಂಡ್ ಹೆಸರಿನಲ್ಲಿ ಜನಪ್ರಿಯವಾಗಿ ಮಾರಾಟವಾಗುವ, ಸಾಮಾನ್ಯವಾಗಿ ಬಳಸುವ ನೋವು ನಿವಾರಕ (Painkiller) ಔಷಧ, ಮಾತ್ರೆಯ ಬಳಕೆಯ ಬಗ್ಗೆ ಇಂಡಿಯನ್ ಫಾರ್ಮಾಕೊಪೊಯಿಯಾ ಕಮಿಷನ್ (Indian Pharmacopoeia Commission-IPC) ಎಚ್ಚರಿಕೆ ನೀಡಿದೆ. ಇದರಲ್ಲಿ ಬಳಸಾಗುವ ಮೆಫೆನಾಮಿಕ್ ಆಮ್ಲದಿಂದ ಅಡ್ಡ ಪರಿಣಾಮ (Side effect) ಬೀರುವ ಸಾಧ್ಯತೆ ಇದೆ ಎಂದು ವೈದ್ಯರು ಮತ್ತು ರೋಗಿಗಳಿಗೆ ಅದು ಮುನ್ನೆಚ್ಚರಿಕೆಯ ಸಂದೇಶ ರವಾನಿಸಿದೆ (Health news).
ಔಷಧೀಯ ಉತ್ಪನ್ನಗಳ ಬಳಕೆಯಿಂದ ಉಂಟಾಗುವ ಅಡ್ಡ ಪರಿಣಾಮಗಳ ಬಗ್ಗೆ ಮೇಲ್ವಿಚಾರಣೆ ನಡೆಸುವ ಮತ್ತು ಮಾಹಿತಿಯನ್ನು ಸಂಗ್ರಹಿಸುವ ಫಾರ್ಮಾಕೊವಿಜಿಲೆನ್ಸ್ ಪ್ರೋಗ್ರಾಂ ಆಫ್ ಇಂಡಿಯಾ (PvPI) ತನ್ನ ಪ್ರಾಥಮಿಕ ತನಿಖೆಯಲ್ಲಿ ಮೆಫೆನಾಮಿಕ್ ಆಮ್ಲವು ಇಸಿನೊಫಿಲಿಯಾ ಮತ್ತು ಡ್ರೆಸ್ ಸಿಂಡ್ರೋಮ್ ಎಂದು ಕರೆಯಲ್ಪಡುವ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ ಎನ್ನುವುದನ್ನು ಕಂಡುಕೊಂಡಿದೆ.
ಈ ಔಷಧವು ಪ್ರಿಸ್ಕ್ರಿಪ್ಷನ್ ಇಲ್ಲದೆ ಮಾರಾಟ ಮಾಡಬಹುದಾದ ಒಟಿಸಿ ಉತ್ಪನ್ನವಲ್ಲವಾದರೂ, ಮುಟ್ಟಿನ ನೋವು, ತಲೆನೋವು ಮತ್ತು ಸ್ನಾಯು ಮತ್ತು ಕೀಲು ನೋವನ್ನು ನಿವಾರಿಸುವಂತಹ ವಿವಿಧ ಕಾರಣಗಳಿಗಾಗಿ ಭಾರತೀಯರು ಇದನ್ನು ವ್ಯಾಪಕವಾಗಿ ಬಳಸುತ್ತಾರೆ. ಅಲ್ಲದೆ ಜ್ವರ ಬಾಧಿತ ಮಕ್ಕಳಿಗೂ ನೀಡಲಾಗುತ್ತದೆ.
ಬ್ಲೂ ಕ್ರಾಸ್ ಲ್ಯಾಬೊರೇಟರೀಸ್‌ನ ಮೆಫ್ಟಾಲ್, ಮ್ಯಾನ್‌ಕೈಂಡ್ ಫಾರ್ಮಾದ ಮೆಫ್ಕಿಂಡ್ ಪಿ, ಫಿಜರ್ಸ್‌ನ ಪೊನ್‌ಸ್ಟಾನ್, ಸೀರಮ್ ಇನ್‌ಸ್ಟಿಟ್ಯೂಟ್‌ನ ಮೆಫಾನಾರ್ಮ್ ಮತ್ತು ಡಾ. ರೆಡ್ಡೀಸ್‌ನ ಇಬುಕ್ಲಿನ್ ಪಿ ಮೆಫೆನಾಮಿಕ್ ಆಮ್ಲವನ್ನು ಒಳಗೊಂಡಿದೆ.
ಏನಿದು ಡ್ರೆಸ್ ಸಿಂಡ್ರೋಮ್?
ಡ್ರೆಸ್ ಸಿಂಡ್ರೋಮ್ ಎನ್ನುವುದು ಗಂಭೀರ ಅಲರ್ಜಿ. ಇದು ಮಾರಣಾಂತಿಕವಾಗುವ ಸಾಧ್ಯತೆಯೂ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ದೇಶದಲ್ಲಿ ಸುಮಾರು ಶೇ. 10ರಷ್ಟು ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ದೇಹವು ಕೆಲವು ಔಷಧಗಳಿಗೆ ಪ್ರತಿಕ್ರಿಯಿಸಿದಾಗ ಈ ಕಾಯಿಲೆ ಕಂಡುಬರುತ್ತದೆ. ಇದು ಮೊದಲು ಚರ್ಮದ ದದ್ದುಗಳಾಗಿ ಕಾಣಿಸಿಕೊಳ್ಳುತ್ತದೆ ಮತ್ತು ಕ್ರಮೇಣ ಆಂತರಿಕ ಅಂಗಗಳ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಔಷಧಗಳ ಬಳಕೆ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. “ಅಂತಹ ಲಕ್ಷಣ ಕಂಡುಬಂದರೆ, ಇಂಡಿಯನ್ ಫಾರ್ಮಾಕೊಪೊಯಿಯಾ ಕಮಿಷನ್‌ಗೆ ವರದಿ ಮಾಡಿʼʼ ಎಂದು ಎಚ್ಚರಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Made in India: ನಾಲ್ಕು ಅಪರೂಪದ ಕಾಯಿಲೆಗಳಿಗೆ ಸ್ವದೇಶಿ ಔಷಧ ಆವಿಷ್ಕಾರ; 100 ಪಟ್ಟು ಇಳಿಯಲಿದೆ ಚಿಕಿತ್ಸೆ ವೆಚ್ಚ!
ವೈದ್ಯರು ಏನು ಹೇಳುತ್ತಾರೆ?
“ನಾನ್‌ಸ್ಟಿರಾಯಿಡಲ್ ಆ್ಯಂಟಿ-ಇನ್ಫಮೇಟರಿ ಡ್ರಗ್ಸ್ (Nonsteroidal anti-inflammatory drugs-ಎನ್ಎಸ್ಎಐಡಿ) ಸೇವನೆಯಿಂದ ಪ್ರತಿಯೊಬ್ಬರಿಗೂ ಈ ತೀವ್ರ ಅಲರ್ಜಿ ಕಂಡು ಬರುವ ಸಾಧ್ಯತೆ ಇಲ್ಲ. ದೇಹದ ಸ್ಥಿತಿಗೆ ಹೊಂದಿಕೊಂಡು ಇದು ಕೆಲವರಲ್ಲಿ ಮಾತ್ರ ಪರಿಣಾಮ ಬೀರುತ್ತದೆʼʼ ಎಂದು ಸುಮಾರು 20 ವರ್ಷಗಳಿಂದ ವೃತ್ತಿ ನಿರ್ವಹಿಸುತ್ತಿರುವ ವೈದ್ಯರೊಬ್ಬರು ತಿಳಿಸಿದ್ದಾರೆ. ಗುರುಗ್ರಾಮ್ ಮೂಲದ ಆಸ್ಪತ್ರೆಯ ಇನ್ನೊಬ್ಬರು ವೈದ್ಯರು ಮಾತನಾಡಿ, ʼʼಮೆಫ್ಟಾಲ್ ಸೇವನೆಯಿಂದ ಡ್ರೆಸ್ ಸಿಂಡ್ರೋಮ್ ಕಾಣಿಸಿಕೊಳ್ಳುವುದು ಅಪರೂಪ. ಆದರೂ ಎನ್ಎಸ್ಎಐಡಿಗಳನ್ನು ತೆಗೆದುಕೊಳ್ಳುವ ವ್ಯಕ್ತಿಗಳು ಡ್ರೆಸ್ ಸಿಂಡ್ರೋಮ್‌ನಂತಹ ಅಪರೂಪದ, ಆದರೆ ತೀವ್ರ ಅಡ್ಡ ಪರಿಣಾಮ ಬೀರುವ ಬಗ್ಗೆ ತಿಳಿದಿರುವುದು ಬಹಳ ಮುಖ್ಯ” ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಯಾವುದೇ ಔಷಧಗಳನ್ನು ಸೇವಿಸುವ ಮುನ್ನ ತಜ್ಞರೊಂದಿಗೆ ಸಮಾಲೋಚನೆ ನಡೆಸುವುದು ಮುಖ್ಯ ಎಂದು ಎಚ್ಚರಿಸಲಾಗಿದೆ.