Site icon Vistara News

GST Collection: ಸಾರ್ವಕಾಲಿಕ ದಾಖಲೆ ನಿರ್ಮಿಸಿದ ಜಿಎಸ್‌ಟಿ ಸಂಗ್ರಹ; ಏಪ್ರಿಲ್‌ನ ಕಲೆಕ್ಷನ್‌ ಎಷ್ಟು?

GST Collection

GST Collection

ನವದೆಹಲಿ: ಏಪ್ರಿಲ್‌ನ ಜಿಎಸ್‌ಟಿ ಸಂಗ್ರಹ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ (GST Collection). ಬುಧವಾರ ಬಿಡುಗಡೆಯಾದ ಅಧಿಕೃತ ಅಂಕಿ-ಅಂಶಗಳ ಪ್ರಕಾರ, 2024ರ ಏಪ್ರಿಲ್‌ನ ಒಟ್ಟು ಜಿಎಸ್‌ಟಿ ಸಂಗ್ರಹವು 2.10 ಲಕ್ಷ ಕೋಟಿ ರೂ.ಗೆ ತಲುಪಿದೆ. ಒಟ್ಟಾರೆಯಾಗಿ ಪರೋಕ್ಷ ತೆರಿಗೆ ಆದಾಯವು ಶೇ. 12.4ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ದೇಶೀಯ ವಹಿವಾಟು ಮತ್ತು ಆಮದುಗಳಲ್ಲಿನ ಹೆಚ್ಚಳ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ನಿವ್ವಳ ಜಿಎಸ್‌ಟಿ ಆದಾಯ (ಮರುಪಾವತಿಯ ನಂತರ) 1.92 ಲಕ್ಷ ಕೋಟಿ ರೂ.ಗಳಾಗಿದ್ದು, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 17.1ರಷ್ಟು ಬೆಳವಣಿಗೆ ದಾಖಲಿಸಿದೆ.

ರಾಜ್ಯವಾರು ಸಂಗ್ರಹ

ಮಹಾರಾಷ್ಟ್ರವು 37,671 ಕೋಟಿ ರೂ. ಸಂಗ್ರಹಿಸುವ ಮೂಲಕ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಕರ್ನಾಟಕ ಇದೆ. ಇಲ್ಲಿ 15,978 ಕೋಟಿ ರೂ. ಸಂಗ್ರಹವಾಗಿದೆ. ಗುಜರಾತ್ 13,301 ಕೋಟಿ ರೂ., ಉತ್ತರ ಪ್ರದೇಶ 12,290 ಕೋಟಿ ರೂ. ಮತ್ತು ತಮಿಳುನಾಡು 12,210 ಕೋಟಿ ರೂ. ಮೂಲಕ ನಂತರದ ಸ್ಥಾನಗಳಲ್ಲಿದೆ.

“ಜಿಎಸ್‌ಟಿ (Goods and Services Tax) 2024ರ ಏಪ್ರಿಲ್‌ನಲ್ಲಿ ದಾಖಲೆಯ ಗರಿಷ್ಠ 2.10 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. ಮರುಪಾವತಿಯನ್ನು ಲೆಕ್ಕ ಹಾಕಿದ ನಂತರ ನಿವ್ವಳ ಜಿಎಸ್‌ಟಿ ಆದಾಯವು 1.92 ಲಕ್ಷ ಕೋಟಿ ರೂ.ಗಳಷ್ಟಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 17.1ರಷ್ಟು ಬೆಳವಣಿಗೆಯನ್ನು ದಾಖಲಿಸಿದೆʼʼ ಎಂದು ಹಣಕಾಸು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ವಿವಿಧ ತೆರಿಗೆಗಳ ಅಂಕಿ ಅಂಶ

“ಭಾರತೀಯ ಆರ್ಥಿಕತೆಯು ವೇಗದ ಹಾದಿಯಲ್ಲಿದೆ ಮತ್ತು ವ್ಯವಹಾರಗಳು ವೇಗವಾಗಿ ಸಂಘಟಿತವಾಗುತ್ತಿವೆ” ಎಂದು ಟ್ಯಾಕ್ಸ್ ಕನೆಕ್ಟ್ ಅಡ್ವೈಸರಿ ಸರ್ವೀಸಸ್ ಎಲ್‌ಎಲ್‌ಪಿಯ ಪಾಲುದಾರ ವಿವೇಕ್ ಜಲನ್ ಹೇಳಿದ್ದಾರೆ. ಜಿಎಸ್‌ಟಿ ಸಂಗ್ರಹದ ಬಗ್ಗೆ ಮಾತನಾಡಿದ ಅವರು, ʼʼ2017ರ ಜುಲೈಯಲ್ಲಿ ಈ ನಿಯಮ ಜಾರಿಗೆ ಬಂದಾಗಿನಿಂದ 2024ರ ಏಪ್ರಿಲ್‌ವರೆಗೆ ಜಿಎಸ್‌ಟಿ ಸಂಗ್ರಹವು ಸರಾಸರಿ ಮಾಸಿಕ ಆದಾಯವನ್ನು ಸುಮಾರು 0.9 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿದೆʼʼ ಎಂದು ತಿಳಿಸಿದ್ದಾರೆ. ʼʼ2017ರ ಜುಲೈ ಮತ್ತು 2024ರ ಏಪ್ರಿಲ್ ನಡುವೆ ಜಿಎಸ್‌ಟಿ ಆದಾಯವು ವರ್ಷಕ್ಕೆ ಸರಾಸರಿ ಶೇ. 13ರಷ್ಟು ಬೆಳವಣಿಗೆಯನ್ನು ದಾಖಲಿಸಿದೆʼʼ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: GST Collection : ಜನವರಿಯಲ್ಲಿ ಜಿಎಸ್ಟಿ ಸಂಗ್ರಹ 1.72 ಲಕ್ಷ ಕೋಟಿ ರೂ. ಇದುವರೆಗಿನ ಗರಿಷ್ಠ ಸಾಧನೆ

ಹಳೆಯ ಆದಾಯ ತೆರಿಗೆ ಕಾಯ್ದೆಯನ್ನು ಬದಲಿಸಿ ನೇರ ತೆರಿಗೆ ಸಂಹಿತೆಯನ್ನು ಜಾರಿಗೆ ತರುವುದರ ಜತೆಗೆ ಆಲ್ಕೋಹಾಲ್, ಪೆಟ್ರೋಲ್, ಡೀಸೆಲ್ ಮತ್ತು ರಿಯಲ್ ಎಸ್ಟೇಟ್ ಅನ್ನು ಜಿಎಸ್‌ಟಿ ಅಡಿಯಲ್ಲಿ ತರಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

Exit mobile version