ಗಾಂಧಿನಗರ: ಹಿಂದೂ ಸಂಘಟನೆಯ ನಾಯಕನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಮತ್ತು ಸುದರ್ಶನ್ ಟೆಲಿವಿಷನ್ ಚಾನೆಲ್‌ನ ಮುಖ್ಯ ಸಂಪಾದಕ, ಬಿಜೆಪಿಯ ತೆಲಂಗಾಣ ಶಾಸಕ ರಾಜಾ ಸಿಂಗ್ ಹಾಗೂ ಪಕ್ಷದ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಪಾಕಿಸ್ತಾನ ಮತ್ತು ನೇಪಾಳದ ಸಹಚರರೊಂದಿಗೆ ಸೇರಿಕೊಂಡು ಬೆದರಿಕೆ ಹಾಕಿದ ಆರೋಪದ ಮೇಲೆ ಮೌಲ್ವಿ (Maulvi)ಯನ್ನು ಗುಜರಾತ್‌ನ ಸೂರತ್‌ನಲ್ಲಿ ಶನಿವಾರ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ʼʼಬಂಧಿತ ಆರೋಪಿಯನ್ನು ಮೌಲ್ವಿ ಸೊಹೆಲ್ ಅಬೂಬಕರ್ ತಿಮೋಲ್ (27) ಎಂದು ಗುರುತಿಸಲಾಗಿದೆ. ಈತ ಕಾರ್ಖಾನೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಜತೆಗೆ ಮುಸ್ಲಿಂ ಮಕ್ಕಳಿಗೆ ಇಸ್ಲಾಂ ಬಗ್ಗೆ ಬೋಧನೆ ಮಾಡುತ್ತಿದ್ದʼʼ ಎಂದು ಸೂರತ್ ಪೊಲೀಸ್ ಆಯುಕ್ತ ಅನುಪಮ್ ಸಿಂಗ್ ಗೆಹ್ಲೋಟ್ ವಿವರಿಸಿದ್ದಾರೆ.
ʼʼಹಿಂದೂ ಸನಾತನ ಸಂಘದ ರಾಷ್ಟ್ರೀಯ ಅಧ್ಯಕ್ಷ ಉಪದೇಶ್ ರಾಣಾ ಅವರನ್ನು ಹತ್ಯೆ ಮಾಡಲು ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಮತ್ತು 1 ಕೋಟಿ ರೂ.ಗಳ ‘ಸುಪಾರಿ’ ನೀಡಲು ಸೊಹೆಲ್ ಅಬೂಬಕರ್ ತಿಮೋಲ್ ಪಾಕಿಸ್ತಾನ ಮತ್ತು ನೇಪಾಳದ ಸಹಚರರೊಂದಿಗೆ ಸೇರಿ ಪಿತೂರಿ ನಡೆಸಿರುವುದು ತನಿಖೆ ವೇಳೆ ಕಂಡುಬಂದಿದೆʼʼ ಎಂದು ಗೆಹ್ಲೋಟ್ ಹೇಳಿದ್ದಾರೆ.
“ಬಂಧಿತ ಸೊಹೆಲ್ ಅಬೂಬಕರ್ ತಿಮೋಲ್ ಬಳಿಯಿಂದ ಉಪದೇಶ್ ರಾಣಾ ಅವರ ಹತ್ಯೆಗೆ 1 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿರುವುದು ಸೇರಿದಂತೆ ಹಲವು ಪ್ರಮುಖ ಸಾಕ್ಷಿಗಳನ್ನು ಗುರುತಿಸಲಾಗಿದೆ. ಜತೆಗೆ ಮೊಬೈಲ್ ಫೋನ್‌ನಲ್ಲಿ ಹಲವು ಪ್ರಮುಖ ದಾಖಲೆಗಳು ದೊರೆತಿವೆ. ಹತ್ಯೆ ನಡೆಸುವ ಉದ್ದೇಶದಿಂದ ಆತ ಪಾಕಿಸ್ತಾನ ಮತ್ತು ನೇಪಾಳದ ವ್ಯಕ್ತಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದ” ಎಂದು ಗೆಹ್ಲೋಟ್ ತಿಳಿಸಿದ್ದಾರೆ.
“ಈ ವರ್ಷದ ಮಾರ್ಚ್‌ನಲ್ಲಿ ಉಪದೇಶ್ ರಾಣಾ ಅವರಿಗೆ ಬೆದರಿಕೆ ಹಾಕಿರುವ ಪ್ರಕರಣದಲ್ಲಿ ತಿಮೋಲ್ ಭಾಗಿಯಾಗಿರುವುದು ಕಂಡು ಬಂದಿದೆ. ಸುದರ್ಶನ್ ಟಿವಿಯ ಪ್ರಧಾನ ಸಂಪಾದಕ ಸುರೇಶ್ ಚವ್ಹಾಂಕೆ, ಬಿಜೆಪಿ ನಾಯಕಿ ನೂಪುರ್ ಶರ್ಮಾ ಮತ್ತು ಹೈದರಾಬಾದ್ ಶಾಸಕ ರಾಜಾ ಸಿಂಗ್ ಅವರಿಗೆ ಜೀವ ಬೆದರಿಕೆ ಹಾಕುವ ಬಗ್ಗೆ ಆರೋಪಿ ಮತ್ತು ಸಹಚರರು ಚರ್ಚಿಸುತ್ತಿದ್ದರು. ಆತನ ಮೊಬೈಲ್‌ನಲ್ಲಿ ದೊರೆತ ಫೋಟೊ ಮತ್ತು ಇತರ ವಿವರಗಳು ಇದನ್ನು ದೃಢಪಡಿಸುತ್ತದೆ. ಈ ಉದ್ದೇಶಕ್ಕಾಗಿ ಅವರು ಹಣ ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಯೋಜನೆ ರೂಪಿಸುತ್ತಿದ್ದರುʼʼ ಎಂದು ಹೇಳಿದ್ದಾರೆ.
ʼʼಆರೋಪಿಗಳು ಹಿಂದುತ್ವ ನಾಯಕರನ್ನು ಹತ್ಯೆ ಮಾಡುವ ಬಗ್ಗೆ ಮಾತನಾಡಿದ್ದಾರೆ ಮತ್ತು ಕಮಲೇಶ್ ತಿವಾರಿ (2019ರಲ್ಲಿ ಕೊಲೆಗೀಡಾದ ಉತ್ತರ ಪ್ರದೇಶ ಮೂಲದ ಹಿಂದೂ ಸಮಾಜ ಪಾರ್ಟಿಯ ಅಧ್ಯಕ್ಷ) ಅವರ ಹತ್ಯೆಯ ಬಗ್ಗೆ ಚರ್ಚಿಸಿದ್ದಾರೆʼʼ ಎಂದು ಗೆಹ್ಲೋಟ್ ತಿಳಿಸಿದ್ದಾರೆ. ʼʼಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಸಮಯದಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ ಸಲುವಾಗಿ ತಿಮೋಲ್ ಶೀಘ್ರದಲ್ಲೇ ರಾಣಾ ಅವರನ್ನು ಕೊಲ್ಲಲು ಬಯಸಿದ್ದ ಎನ್ನುವ ಅಂಶ ಆತನ ಮೆಸೇಜ್ ಮೂಲಕ ಬಹಿರಂಗಗೊಂಡಿದೆʼʼ ಎಂದು ಅವರು ವಿವರಿಸಿದ್ದಾರೆ.
ಅಂತಾರಾಷ್ಟ್ರೀಯ ಸಿಮ್
ಪಾಕಿಸ್ತಾನ ಮತ್ತು ನೇಪಾಳಕ್ಕೆ ಸೇರಿದ ಫೋನ್ ಸಂಖ್ಯೆಗಳನ್ನು ಹೊಂದಿರುವ ದೋಗರ್ ಮತ್ತು ಶೆಹನಾಜ್ ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳು ತಿಮೋಲ್‌ನನ್ನು ಸಂಪರ್ಕಿಸಿದ್ದಾರೆ ಎನ್ನುವ ವಿಚಾರ ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ ಎಂದು ಅಪರಾಧ ವಿಭಾಗದ ಪ್ರಕಟಣೆ ತಿಳಿಸಿದೆ. ಪೊಲೀಸರ ಪ್ರಕಾರ, ತಿಮೋಲ್ ತನ್ನ ಗುರುತನ್ನು ರಹಸ್ಯವಾಗಿಡಲು ಲಾವೋಸ್‌ನಿಂದ ಅಂತಾರಾಷ್ಟ್ರೀಯ ಸಿಮ್ ಖರೀದಿಸಿದ್ದ. ಚಾಟ್ ಅಪ್ಲಿಕೇಶನ್‌ನಲ್ಲಿ ಹಿಂದೂ ಧರ್ಮದ ವಿರುದ್ಧ ಭಾಷಣಗಳನ್ನು ಬರೆದಿದ್ದ ಮತ್ತು ಕಮಲೇಶ್ ತಿವಾರಿಯಂತೆ ರಾಣಾ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Love Jihad: ಹಿಂದು ಎಂಬಂತೆ ಬಿಂಬಿಸಿ, ಯುವತಿಯನ್ನು ನಂಬಿಸಿ, ಕೊನೆಗೆ ಅತ್ಯಾಚಾರ ಎಸಗಿದ ಮುಸ್ಲಿಂ ಯುವಕ!
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 (ಎ) (ಧರ್ಮ, ಜನಾಂಗದ ಮೇಲೆ ಉದ್ದೇಶಪೂರ್ವಕ ನಿಂದನೆ ಅಥವಾ ದಾಳಿಯಲ್ಲಿ ತೊಡಗುವುದು), 467, 468 ಮತ್ತು 471 (ದಾಖಲೆಗಳು ಅಥವಾ ಎಲೆಕ್ಟ್ರಾನಿಕ್ ದಾಖಲೆಗಳನ್ನು ನಕಲು ಮಾಡುವುದು) ಮತ್ತು ಸೆಕ್ಷನ್ 120 (ಬಿ) ಕ್ರಿಮಿನಲ್ ಪಿತೂರಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ತಿಮೋಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.