ಬೆಂಗಳೂರು: ಗುಜರಾತ್ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ವಿವಿಧ ಪಕ್ಷಗಳ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದ್ದು, ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಒಟ್ಟು ಮೂವರು ಮಾತ್ರ ಕನ್ನಡಿಗರು ಸ್ಥಾನ ಪಡೆದಿದ್ದಾರೆ.
ಎಐಎಂಐಎಂ ಪಕ್ಷದ 12, ಆಮ್ ಆದ್ಮಿ ಪಕ್ಷದ 20, ಬಹುಜನ ಸಮಾಜ ಪಕ್ಷದ 40, ಸಮಾಜವಾದಿ ಪಕ್ಷದ 20, ಬಿಜೆಪಿಯ 40 ಹಾಗೂ ಕಾಂಗ್ರೆಸ್‌ನ 40 ಸ್ಟಾರ್ ಪ್ರಚಾರಕರನ್ನು ಆಯಾ ಪಕ್ಷದಿಂದ ನೀಡಲಾದ ಪಟ್ಟಿಯ ಆಧಾರದಲ್ಲಿ ಘೋಷಣೆ ಮಾಡಲಾಗಿದೆ.
ನಿರೀಕ್ಷೆಯಂತೆ ಎಐಎಂಐಎಂ, ಆಮ್ ಆದ್ಮಿ ಪಕ್ಷ, ಸಮಾಜವಾದಿ, ಬಿಎಸ್‌ಪಿಗಳಿಂದ ಯಾವುದೇ ಕನ್ನಡಿಗ ಸ್ಟಾರ್ ಪ್ರಚಾರಕರಿಲ್ಲ. ಬಿಜೆಪಿಯ 40 ಸ್ಟಾರ್ ಪ್ರಚಾರಕರಲ್ಲಿ ರಾಷ್ಟ್ರೀಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಮಾತ್ರ ಸ್ಥಾನ ಪಡೆದಿದ್ದಾರೆ. ಉಳಿದಂತೆ ಯಾವುದೇ ಕನ್ನಡಿಗರು ಈ ಪಟ್ಟಿಯಲ್ಲಿ ಇಲ್ಲ. ಬಿಜೆಪಿ ಆಳ್ವಿಕೆಯ ರಾಜ್ಯಗಳ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್, ಶಿವರಾಜ್‌ಸಿಂಗ್ ಚೌಹಾನ್, ಹಿಮಂತ ಬಿಸ್ವ ಶರ್ಮ, ಭೂಪೇಂದ್ರಭಾಯಿ ಪಟೇಲ್ ಅವರನ್ನು ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ದಕ್ಷಿಣ ಭಾರತದ ಏಕೈಕ ಬಿಜೆಪಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೆಸರಿಲ್ಲ.
ಉಳಿದಂತೆ ಬಿಜೆಪಿಯಲ್ಲಿ ನರೇಂದ್ರ ಮೋದಿ, ಜೆ.ಪಿ. ನಡ್ಡಾ, ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ಸ್ಮೃತಿ ಇರಾನಿ, ಹೇಮಾ ಮಾಲಿನಿ, ಮನೋಜ್ ತಿವಾರಿ ಸೇರಿ 40 ಜನರಿದ್ದಾರೆ.
ಕಾಂಗ್ರೆಸ್‌ನಿಂದ ೪೦ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಅನಿವಾರ್ಯವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮೊದಲ ಸ್ಥಾನದಲ್ಲೆ ಹೆಸರಿಸಲಾಗಿದೆ. ಉಳಿದಂತೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಸ್ಥಾನ ಪಡೆದಿದ್ದಾರೆ. ಅಲ್ಲಿಯೂ ಇತರೆ ಯಾವುದೇ ನಾಯಕರಿಗೆ ಸ್ಥಾನ ನೀಡಲಾಗಿಲ್ಲ.
ಉಳಿದಂತೆ ಕಾಂಗ್ರೆಸ್‌ನ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಕ ಗಾಂಧಿ ವಾದ್ರಾ, ಅಶೋಕ್ ಗೆಹ್ಲೊಟ್, ಕಮಲ್ ನಾಥ್ ಸೇರಿ 40 ಜನರಿದ್ದಾರೆ.
ಇದನ್ನೂ ಓದಿ | Gujarat Election 2022 | ಬಿಲ್ಕಿಸ್ ಬಾನೊ ಅತ್ಯಾಚಾರಿಗಳನ್ನು ‘ಸಂಸ್ಕಾರಿಗಳು’ ಎಂದ ವ್ಯಕ್ತಿಗೆ ಬಿಜೆಪಿ ಟಿಕೆಟ್