ಅಹಮದಾಬಾದ್: ಮುಂದಿನ ಶೈಕ್ಷಣಿಕ ವರ್ಷದಿಂದ 6ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಕಲಿಕೆಯನ್ನು ಕಡ್ಡಾಯಗೊಳಿಸಿರುವ ಗುಜರಾತ್‌ನ ಶಿಕ್ಷಣ ಇಲಾಖೆ ನಿರ್ಣಯ ಪ್ರಶ್ನಿಸಿ ಮುಸ್ಲಿಂ ಸಂಘಟನೆಯೊಂದು ಹೈಕೋರ್ಟ್ ಮೊರೆ ಹೊಕ್ಕಿದೆ.
ದೇಶದ ಪ್ರಮುಖ ಮುಸ್ಲಿಂ ಪಂಡಿತರ ಸಂಘಟನೆಯಾಗಿರುವ ಜಮಿಯತ್ ಉಲಮಾ-ಎ-ಹಿಂದ್ ಸಲ್ಲಿಸಿದ ಅರ್ಜಿಯನ್ನು ಸ್ವೀಕರಿಸಿದ ಮುಖ್ಯ ನ್ಯಾಯಮೂರ್ತಿ ಅರವಿಂದ ಕುಮಾರ್ ಮತ್ತು ನ್ಯಾಯಮೂರ್ತಿ ಅಶುತೋಷ್ ಜೆ ಶಾಸ್ತ್ರಿ ಅವರಿದ್ದ ವಿಭಾಗೀಯ ಪೀಠ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಬೇಕೆಂಬ ಅರ್ಜಿದಾರರ ಮನವಿ ಪರಿಗಣಿಸಲು ನಿರಾಕರಿಸಿತು. ಆದರೆ, ಈ ಬಗ್ಗೆ ಸರಕಾರದ ಅಭಿಪ್ರಾಯವೇನು ಎಂಬ ಬಗ್ಗೆ ತಿಳಿದುಕೊಳ್ಳಲು ಬಯಸಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 18ಕ್ಕೆ ಮುಂದೂಡಲಾಗಿದೆ.
ಅರ್ಜಿದಾರರ ವಾದವೇನು?
-ಸರ್ಕಾರದ ಬೊಕ್ಕಸದಿಂದ ಸಂಪೂರ್ಣವಾಗಿ ನಿರ್ವಹಿಸಲಾಗುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಧಾರ್ಮಿಕ ಸೂಚನೆ ನೀಡಬಾರದು ಎಂದು ತಿಳಿಸುವ ಸಂವಿಧಾನದ 28ನೇ ವಿಧಿಯನ್ನು ಈ ನಿರ್ಧಾರ ಉಲ್ಲಂಘಿಸಿದೆ.
-ಗೀತೆಯು ಹಿಂದೂಗಳ ಧಾರ್ಮಿಕ ಪುಸ್ತಕವಾಗಿದೆ. ಗೀತೆಯಲ್ಲಿ ಹೇಳಲಾದ ಎಲ್ಲಾ ಮೌಲ್ಯಗಳು ಹಿಂದೂ ಧರ್ಮದ ತತ್ವಗಳೊಂದಿಗೆ ಹೆಣೆದುಕೊಂಡಿವೆ ಎಂಬುದು ನಿರ್ವಿವಾದಿತ ಸತ್ಯ.
-ಕೇವಲ ಒಂದು ಧರ್ಮದ ಬಗ್ಗೆ ಶಿಕ್ಷಣ ನೀಡಿದರೆ ಉಳಿದ ಧರ್ಮಗಳಿಗಿಂತ ಆ ಧರ್ಮ ಶ್ರೇಷ್ಠ ಎಂದು ಚಿಕ್ಕ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ. ಇದು ಸಂವಿಧಾನದ 21 ಮತ್ತು 25ರ ಅಡಿ ಒದಗಿಸಲಾಗುವ ಮುಕ್ತ ಆಯ್ಕೆ ಮತ್ತು ವಿವೇಚನೆ ಮೇಲೆ ಪ್ರಭಾವ ಬೀರುತ್ತದೆ.
-ಶ್ರೀಮಂತ ಮತ್ತು ಪ್ರಾಚೀನ ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸುವ ವಿಶಾಲವಾದ ಮತ್ತು ವೈವಿಧ್ಯಮಯ ಸಾಹಿತ್ಯದ ತರ್ಕಬದ್ಧ ವಿಶ್ಲೇಷಣೆ ನಡೆಸಲು ನಿರ್ಣಯ ವಿಫಲವಾಗಿದೆ.
-ಮೌಲ್ಯಾಧಾರಿತ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸುವ ಸೋಗಿನಲ್ಲಿ ವಿವಾದಿತ ನಿರ್ಣಯ ತರ್ಕಬದ್ಧವಾಗಿ ಮತ್ತು ಸೂಕ್ತ ವಿವೇಚನೆ ಇಲ್ಲದೆ ಒಂದು ಪುಸ್ತಕವನ್ನು ಮೌಲ್ಯ ಗ್ರಂಥ ಎಂದು ಆಯ್ಕೆ ಮಾಡಿ ಅದರ ಬೋಧನೆ ಕಡ್ಡಾಯಗೊಳಿಸಿದೆ.
-ಸಂವಿಧಾನದ 51 ಎ (ಎಚ್) ವಿಧಿ ಒಳಗೊಂಡಿರುವ ಸಂಯಮ, ಮಾನವತಾವಾದ ಹಾಗೂ ವೈಜ್ಞಾನಿಕ ಹಾಗೂ ಪ್ರಶ್ನಿಸುವ ಮನೋಭಾವವನ್ನು ಪ್ರೋತ್ಸಾಹಿಸುವ ಸಾಂವಿಧಾನಿಕ ಗುರಿಗೆ ಧಾರ್ಮಿಕ ಮೌಲ್ಯಾಧಾರಿತ ಶಿಕ್ಷಣ ವಿರುದ್ಧವಾಗಿದೆ.
-ನಂಬಿಕೆ ಮತ್ತು ಪುರಾಣಗಳೊಂದಿಗೆ ಆಳವಾಗಿ ಬೆಸೆದುಕೊಂಡಿರುವ ಮೌಲ್ಯಗಳ ಬೋಧನೆಯನ್ನು ಆಕ್ಷೇಪಾರ್ಹ ನಿರ್ಣಯ ಕಡ್ಡಾಯಗೊಳಿಸುತ್ತದೆ. ಇದು ಆ ಸತ್ಯವನ್ನು ಒಪ್ಪುವವರಿಗೆ ಮಾತ್ರ ರುಚಿಸುತ್ತದೆ.
ಇದನ್ನೂ ಓದಿ| ಪರಸ್ಪರ ಒಪ್ಪಿಗೆಯಿಂದ ಲೈಂಗಿಕ ಕ್ರಿಯೆ ನಡೆಸಿ ಮದುವೆಯಾಗಲಿಲ್ಲ ಎಂದರೆ ಅದು ಅತ್ಯಾಚಾರ ಆಗಲ್ಲ ಎಂದ ಹೈಕೋರ್ಟ್