Site icon Vistara News

Gurmeet Ram Rahim: 22ವರ್ಷಗಳ ಹಳೆಯ ಕೊಲೆ ಕೇಸ್‌; ಗುರ್ಮೀತ್ ರಾಮ್​ ರಹೀಮ್​ ಖುಲಾಸೆ

Gurmeet Ram Rahim

ನವದೆಹಲಿ: ಇದು 22 ವರ್ಷಗಳ ಹಳೆಯ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮೀತ್ ರಾಮ್​ ರಹೀಮ್​(Gurmeet Ram Rahim) ರನ್ನು ಹೈಕೋರ್ಟ್​ ಖುಲಾಸೆಗೊಳಿಸಿದೆ. ಡೇರಾ ಸಚ್ಚಾ ಸೌಧಾ(Dera Sacha Sauda) ಮ್ಯಾನೇಜರ್ ಆಗಿದ್ದ ರಂಜಿತ್ ಸಿಂಗ್(Ranjith Singh) ಅವರ ಕೊಲೆ ಪ್ರಕರಣದಲ್ಲಿ ಗುರ್ಮೀತ್ ರಾಮ್ ರಹೀಮ್ ಸಿಂಗ್ ಹಾಗೂ ಇತರ ನಾಲ್ವರನ್ನು ನಿರ್ದೋಷಿಗಳೆಂದು ಹೈಕೋರ್ಟ್‌ ಘೋಷಿಸಿದ್ದು, ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ. ಈ ಹಿಂದೆ ಈ ಪ್ರಕರಣದಲ್ಲಿ ಎಲ್ಲಾ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ(Life imprisonment) ನೀಡಿ ಪಂಚಕುಲ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು. ಸಿಬಿಐ ನ್ಯಾಯಲಯದ ತೀರ್ಪನ್ನು ರಾಮ್​ ರಹೀಮ್ ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದರು.

ರಂಜಿತ್ ಸಿಂಗ್ ಹತ್ಯೆ ಪ್ರಕರಣದಲ್ಲಿ ಸಿಬಿಐ ಕೋರ್ಟ್ ಪಂಚಕುಲ ಗುರ್ಮೀತ್ ರಾಮ್ ರಹೀಮ್‌ಗೆ 2021 ರಲ್ಲಿ ಜೀವಾವಧಿ ಶಿಕ್ಷೆ ಮತ್ತು 31 ಲಕ್ಷ ರೂಪಾಯಿ ದಂಡ ವಿಧಿಸಿತ್ತು. 2002ರಲ್ಲಿ ರಂಜೀತ್ ಸಿಂಗ್ ಕೊಲೆಯಾಗಿದ್ದರು. ಸಿಬಿಐ ನ್ಯಾಯಾಲಯವು 19 ವರ್ಷಗಳ ನಂತರ ರಾಮ್ ರಹೀಮ್ ದೋಷಿ ಎಂದು ತೀರ್ಪು ನೀಡಿತ್ತು. ಜುಲೈ 10, 2002 ರಂದು ಕುರುಕ್ಷೇತ್ರ ಜಿಲ್ಲೆಯ ಖಾನ್‌ಪುರ್ ಕೊಲ್ಯಾನ್ ಗ್ರಾಮದ ತನ್ನ ಹೊಲಗಳ ಬಳಿ ರಂಜಿತ್ ಸಿಂಗ್ ಕ್ಯಾಂಪ್‌ನ ಮ್ಯಾನೇಜರ್ ಆಗಿದ್ದರು. ರಂಜಿತ್ ಕೊಲೆಯಾದ ಒಂದು ವರ್ಷದ ನಂತರ, 2003 ರಲ್ಲಿ, ಅವರ ಕುಟುಂಬವು ಕೊಲೆಯ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಮನವಿ ಮಾಡಿತ್ತು.

ಆದರೆ ಆಗಿನ ಸರ್ಕಾರ ಅವರ ಮನವಿಯನ್ನು ನಿರ್ಲಕ್ಷ್ಯ ಮಾಡಿತ್ತು. ಇದಾದ ನಂತರ ಅವರ ಕುಟುಂಬ ಸದಸ್ಯರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮೊರೆ ಹೋಗಿದ್ದರು. ಹೈಕೋರ್ಟ್ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ನಾಲ್ಕು ವರ್ಷಗಳ ನಂತರ, ಅಂದರೆ 2007 ರಲ್ಲಿ, ಸಿಬಿಐ ಕೆಲವು ಆರೋಪಿಗಳ ವಿರುದ್ಧ ಕ್ರಮ ಕೈಗೊಂಡು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಇದನ್ನೂ ಓದಿ: Viral Video: BMW ಕಾರು ಬಾನೆಟ್‌ ಮೇಲೆ ವ್ಯಕ್ತಿ…ಬ್ಯುಸಿ ರಸ್ತೆಯಲ್ಲಿ ಬಾಲಕನ ಪುಂಡಾಟ; ವಿಡಿಯೋ ವೈರಲ್‌

ಅಕ್ಟೋಬರ್ 18, 2021 ರಂದು ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯವು ಗುರ್ಮೀತ್ ರಾಮ್ ರಹೀಮ್ ದೋಷಿ ಎಂದು ತೀರ್ಪು ನೀಡಿತ್ತು. ನ್ಯಾಯಾಲಯ ರಾಮ್ ರಹೀಮ್ ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಅವರು ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಡೇರಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸೇರಿದಂತೆ 5 ಅಪರಾಧಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.

Exit mobile version