ನವದೆಹಲಿ: ಭಾರತ ಹಾಗೂ ಕೆನಡಾ ಬಿಕ್ಕಟ್ಟು ದಿನೇದಿನೆ ಉಲ್ಬಣವಾಗುತ್ತಿರುವ ಬೆನ್ನಲ್ಲೇ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಕುರಿತು ಚರ್ಚೆ ಜೋರಾಗಿವೆ. ಒಂದೆಡೆ, ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಕೈವಾಡ ಇದೆ ಎಂಬ ಆರೋಪಕ್ಕೆ (India Canada Row) ಜಸ್ಟಿನ್ ಟ್ರುಡೋ (Justin Trudeau) ಸಾಕ್ಷ್ಯ ನೀಡತ್ತಿಲ್ಲ. ಮತ್ತೊಂದೆಡೆ, ಭಾರತದ ವಿರುದ್ಧ ಮಾಡುತ್ತಿರುವ ಆರೋಪ ನಿಲ್ಲಿಸುತ್ತಿಲ್ಲ. ಇದರ ಬೆನ್ನಲ್ಲೇ, ಭಾರತವು ಕೆನಡಾಗೆ ತಿರುಗೇಟು ನೀಡಿದೆ. “ಹರ್ದೀಪ್ ಸಿಂಗ್ ನಿಜ್ಜರ್ ಒಬ್ಬ ಕೊಲೆಗಾರನೇ ಹೊರತು, ಧಾರ್ಮಿಕ ನಾಯಕನಲ್ಲ” ಎಂದು ತಿಳಿಸಿದೆ.
ಹರ್ದೀಪ್ ಸಿಂಗ್ ನಿಜ್ಜರ್ ಒಬ್ಬ ಮಹಾನ್ ವ್ಯಕ್ತಿ ಎಂಬಂತೆ ಕೆನಡಾ ಬಿಂಬಿಸುತ್ತಿರುವ ಹಿನ್ನೆಲೆಯಲ್ಲಿ ಭಾರತದ ಗುಪ್ತಚರ ಇಲಾಖೆಯು ಕೆನಡಾಗೆ ತಿರುಗೇಟು ನೀಡಿದೆ. “ಹರ್ದೀಪ್ ಸಿಂಗ್ ನಿಜ್ಜರ್ ಖಲಿಸ್ತಾನ ಕಮಾಂಡೋ ಫೋರ್ಸ್ (KCF) ಸದಸ್ಯನಾಗಿದ್ದಾಗ ಜನರ ಹತ್ಯೆಯಲ್ಲಿ ತೊಡಗಿದ್ದ. ಆತ 1980ರ ದಶಕದ ಕೊನೆ ಹಾಗೂ 1990ರ ದಶಕದ ಆರಂಭದಲ್ಲಿ ಪಂಜಾಬ್‌ನಲ್ಲಿ 200 ಜನರ ಕೊಲೆಯಲ್ಲಿ ಭಾಗಿಯಾಗಿದ್ದ. ಆತ ಮತ್ತೊಬ್ಬ ಗ್ಯಾಂಗ್‌ಸ್ಟರ್ ಗುರ್ನೆಕ್ ಸಿಂಗ್ ಸಹಚರನಾಗಿದ್ದ” ಎಂದು ಗುಪ್ತಚರ ಇಲಾಖೆಯು ಹರ್ದೀಪ್ ಸಿಂಗ್ ನಿಜ್ಜರ್‌ನ ಬಣ್ಣ ಬಯಲು ಮಾಡಿದೆ.
ಇದನ್ನೂ ಓದಿ: India Canada Row: ಉಗ್ರರ ಸುರಕ್ಷಿತ ತಾಣವಾಗುತ್ತಿರುವ ಕೆನಡಾ! ಭಾರತದ ತೀಕ್ಷ್ಣ ಪ್ರತಿಕ್ರಿಯೆ, ಪಾಕ್‌ಗೆ ಹೋಲಿಸಿತೇ ಸರ್ಕಾರ?
ಜೂನ್ 18ರಂದು ಕೆನಡಾದಲ್ಲಿ ಹತ್ಯೆಗೀಡಾದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಕೈವಾಡ ಇದೆ, ಭಾರತದ ಏಜೆಂಟರೇ ಹತ್ಯೆ ಮಾಡಿದ್ದಾರೆ ಎಂದು ಜಸ್ಟಿನ್ ಟ್ರುಡೋ ಆರೋಪಿಸಿದ್ದಾರೆ. ಆದರೆ, ಅವರು ಸುದ್ದಿಗೋಷ್ಠಿ ನಡೆಸುವ ವೇಳೆ ಭಾರತದ ವಿರುದ್ಧದ ಆರೋಪಗಳಿಗೆ ಸಾಕ್ಷ್ಯ ಇದೆಯೇ ಎಂಬ ಕುರಿತು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಹಾರಿಕೆಯ ಉತ್ತರ ನೀಡಿದ್ದಾರೆ. “ಭಾರತದ ವಿರುದ್ಧ ಆರೋಪ ಮಾಡಲು ಬಲವಾದ ಹಾಗೂ ವಿಶ್ವಾಸಾರ್ಹ ಕಾರಣಗಳಿವೆ” ಎಂದು ಜಸ್ಟಿನ್ ಟ್ರುಡೋ ಹೇಳಿದ್ದಾರೆ. ಆದರೆ, ಅವರು ಯಾವುದೇ ಸಾಕ್ಷ್ಯಗಳನ್ನು ನೀಡಿಲ್ಲ ಹಾಗೂ ಇವೆ ಎಂದು ಕೂಡ ಉತ್ತರಿಸಿಲ್ಲ.
ಹತ್ಯೆಗೀಡಾದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್‌ನನ್ನು ಕೆನಡಾದ ನಾಗರಿಕ ಎಂದು ಪರಿಗಣಿಸಿ ಜಸ್ಟಿನ್ ಟ್ರುಡೋ ಭಾರತದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಆತನ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಆರೋಪಿಸಿದ್ದಾರೆ. “ಕೆನಡಾ ನಾಗರಿಕರ ಹಕ್ಕುಗಳನ್ನು ಹಾಗೂ ದೇಶದ ಮೌಲ್ಯಗಳನ್ನು ರಕ್ಷಿಸುವುದು ನನ್ನ ಕರ್ತವ್ಯವಾಗಿದೆ” ಎಂದು ಅವರು ಹೇಳಿದ್ದಾರೆ. ಆದರೆ, ಅವರು ಭಾರತಕ್ಕೆ ಪ್ರಚೋದನೆ ನೀಡುವುದಿಲ್ಲ ಎಂದು ಹೇಳುತ್ತಲೇ ಇಂತಹ ಆರೋಪ ಮಾಡಿದ್ದಾರೆ.