ನವ ದೆಹಲಿ: ಹವಾಮಾನ ವೈಪರಿತ್ಯದಿಂದ ಉಂಟಾಗುತ್ತಿರುವ ತಾಪಮಾನದ ಏರುಪೇರಿನಿಂದಾಗಿ ಭಾರತದಲ್ಲಿ ವಿಪರೀತ ಪರಿಣಾಮ ಕಾಣಿಸಿಕೊಂಡಿದೆ. ಕಳೆದ ಎರಡು ದಶಕಗಳಲ್ಲಿ ಬಿಸಿಗಾಳಿಯ ಹೊಡೆತಕ್ಕೆ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಶೇ. ೫೫ರಷ್ಟು ಹೆಚ್ಚಿದೆ (Heat related deaths) ಎಂಬ ಕಳವಳಕಾರಿ ಮಾಹಿತಿಯನ್ನು ಸಮೀಕ್ಷೆಯೊಂದು ಹೊರಗೆಡವಿದೆ.
ಲ್ಯಾನ್ಸೆಟ್ ಜರ್ನಲ್ ನಡೆಸಿದ ಸಮೀಕ್ಷೆಯ ಪ್ರಕಾರ, ೨೦೦೦-೨೦೦೪ರ ಅವಧಿಗೂ ಮತ್ತು ೨೦೧೭-೨೦೨೧ರ ಅವಧಿಗೂ ಹೋಲಿಸಿದಾಗ ಈ ತೀಕ್ಷ್ಣ ಏರಿಕೆ ಕಂಡುಬಂದಿದೆ. ಹವಾಮಾನ ಬದಲಾವಣೆಯಿಂದ ಶಿಶುಗಳ ಮತ್ತು ೬೫ಕ್ಕೆ ಮೇಲ್ಪಟ್ಟ ವಯಸ್ಸಿನವರ ಆರೋಗ್ಯದ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿಯನ್ನು ತಿಳಿದುಬಂದಿದೆ. ವಾರ್ಷಿಕವಾಗಿ ಬೀಸುತ್ತಿದ್ದ ಬಿಸಿಗಾಳಿಯ ದಿನಗಳಲ್ಲೂ ತೀವ್ರ ಹೆಚ್ಚಳ ದಾಖಲಾಗಿದೆ.
ಭಾರತದಾದ್ಯಂತ ಒಟ್ಟಾರೆಯಾಗಿ ತೆಗೆದುಕೊಂಡರೆ, ೨೦೨೨ರ ಮಾರ್ಚ್- ಏಪ್ರಿಲ್‌ನಲ್ಲಿ ವಾಡಿಕೆಗಿಂತ ೩೦ ಪಟ್ಟು ಹೆಚ್ಚಿನ ಬಿಸಿ ಅನುಭವಕ್ಕೆ ಬಂದಿತ್ತು. ಇದರಿಂದಾಗಿ ಬಿಸಿಲಿಗೆ ಜೀವ ಕಳೆದುಕೊಂಡವರ ಸಂಖ್ಯೆಯೂ ಹೆಚ್ಚಾಗಿದ್ದು, ದಿನನಿತ್ಯದ ಬದುಕಿಗೂ ತೀವ್ರ ಬಾಧೆ ಉಂಟಾಗಿತ್ತು. “೨೦೨೧ರಲ್ಲಿ, ೧೬೭.೨ ಬಿಲಿಯನ್ ಕೆಲಸದ ಗಂಟೆಗಳನ್ನು ಈ ಸಮಯದಲ್ಲಿ ಭಾರತೀಯರು ಕಳೆದುಕೊಂಡಿದ್ದಾರೆ. ಇದರಿಂದ ಉಂಟಾದ ಆರ್ಥಿಕ ನಷ್ಟ ದೇಶದ ಒಟ್ಟು ಆಂತರಿಕ ಉತ್ಪನ್ನದ ಶೇ. ೫.೪ರಷ್ಟು” ಎನ್ನುತ್ತದೆ ಸಮೀಕ್ಷೆ.
ಈ ಸಮೀಕ್ಷೆಯಲ್ಲಿ ಪರಿಗಣಿಸಿದ ೧೦೩ ದೇಶಗಳಲ್ಲಿ, ಸುಮಾರು ೯.೮ ಕೋಟಿ ಹೆಚ್ಚುವರಿ ಜನ ಆಹಾರದ ಕೊರತೆ ಅಥವಾ ಅಭದ್ರತೆಯ ಬಗ್ಗೆ ಹೇಳಿಕೊಂಡಿದ್ದಾರೆ. ಈ ಹೆಚ್ಚುವರಿ ಅಂಕಿ-ಅಂಶಗಳು ಸಹ ಕಳೆದೆರಡು ದಶಕಗಳಲ್ಲಿ ದಾಖಲಿಸಿದ ಏರಿಕೆಯಾಗಿದೆ. ಜಾಗತಿಕವಾಗಿ ಸುಮಾರು ೧.೧ ಡಿಗ್ರಿ ಸೆ.ನಷ್ಟು ಉಷ್ಣತೆ ಏರಿಕೆಯಾಗಿರುವುದರಿಂದ, ದೈಹಿಕವಾಗಿ ಮಾತ್ರವಲ್ಲದೆ ಜನರ ಮಾನಸಿಕ ಆರೋಗ್ಯದ ಮೇಲೆಯೂ ಪ್ರತಿಕೂಲ ಪರಿಣಾಮ ಬೀರಿದೆ. ಉಷ್ಣತೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಮಾತ್ರವಲ್ಲದೆ, ನಾನಾ ರೀತಿಯ ಸೋಂಕುಗಳು- ಅವು ಪ್ರಸರಣವಾಗುವ ರೀತಿಗಳು, ಆಹಾರ ಮತ್ತು ನೀರಿನ ತೀವ್ರ ಕೊರತೆಯಿಂದಾಗಿ ಉಂಟಾಗುವ ಆರೋಗ್ಯ ಸಮಸ್ಯೆಗಳೂ ಸಿಕ್ಕಾಪಟ್ಟೆ ಏರಿಕೆಯಾಗಿವೆ.
“೨೧೦೦ರ ವೇಳೆಗೆ ವಿಶ್ವದ ಉಷ್ಣತೆ ೨.೪ ರಿಂದ ೩.೫ರವರೆಗೆ ಏರುವ ಮುನ್ಸೂಚನೆ ಇರುವುದರಿಂದ, ಈ ಕುರಿತು ಅತ್ಯಂತ ತುರ್ತಾಗಿ ಕೆಲಸ ಮಾಡಲೇಬೇಕಾದ ಅಗತ್ಯವಿದೆ. ಭೂಮಿ ಬಿಸಿಯಾಗುವುದನ್ನು ತಡೆಯದಿದ್ದರೆ ವಿಶ್ವದ ಎಲ್ಲರ ಆರೋಗ್ಯ ಸ್ಥಿತಿ ದುರಂತದತ್ತ ಸಾಗುವುದು ಖಚಿತ” ಎಂದು ಸಮೀಕ್ಷೆಯ ವರದಿ ಎಚ್ಚರಿಸಿದೆ. ಆಸ್ಟ್ರೇಲಿಯಾ, ಯುರೋಪ್, ದಕ್ಷಿಣ ಆಫ್ರಿಕಾ, ಅಮೆರಿಕದ ಹಲವು ಭಾಗಗಳು ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಉಷ್ಣತೆಯಲ್ಲಿ ತೀವ್ರ ಏರಿಕೆ ಕಂಡಿದೆ.
ಇದನ್ನೂ ಓದಿ | ಜಾಗತಿಕ ತಾಪಮಾನ | ಭೂಮಿ ಬಿಸಿಯಾಗುತ್ತಿದೆ, ಮಕ್ಕಳ ದೈಹಿಕ ಸಾಮರ್ಥ್ಯ ಕುಸಿಯುತ್ತಿದೆ