Site icon Vistara News

Rain fury: ಮುಂಗಾರು ಅಬ್ಬರಕ್ಕೆ ನಲುಗಿದ ಗುಜರಾತ್‌, ಮಹಾರಾಷ್ಟ್ರ, ತೆಲಂಗಾಣ; ಇನ್ನೂ ಇದೆ ಭಾರಿ ಮಳೆ

rain update news

ನವ ದೆಹಲಿ: ಉತ್ತರ ಹಾಗೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಳೆರಾಯನ ಅಬ್ಬರ ಮುಂದುವರಿದಿದೆ. ಕಳೆದ ಎರಡ್ಮೂರು ವಾರಗಳಿಂದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅದರಲ್ಲೂ ಗುರವಾರ (ಜು.14) ಈ ಎಂಟು ರಾಜ್ಯಗಳಲ್ಲಿ ಧಾರಕಾರ ಮಳೆಯಾಗಲಿದ್ದು, ಭೀಕರ ಪ್ರವಾಹ ಪರಿಸ್ಥಿತಿ ಉಂಟಾಗಲಿದೆ ಎಂದು ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಮಧ್ಯಪ್ರದೇಶ, ಗುಜರಾತ್, ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶದಲ್ಲಿ ಇನ್ನೂ ಕೆಲವು ದಿನ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಈಗಾಗಲೇ ಮುಂಜಾಗೃತ ಕ್ರಮವಾಗಿ ಈ ರಾಜ್ಯಗಳಲ್ಲಿ ಎನ್​ಡಿಆರ್​ಎಫ್​ ತಂಡ ಬಿಡುಬಿಟ್ಟಿದೆ. ಅಲ್ಲದೆ ಪ್ರವಾಹ ಪೀಡಿತ ಸ್ಥಳಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ಮಾಡಲಾಗುತ್ತಿದೆ.

ಮಳೆಗೆ ಮುಂಬೈ ತತ್ತರ

ಮಹಾರಾಷ್ಟ್ರದಲ್ಲಿ ನಿರಂತರವಾಗಿ ಸುರಿಯುತ್ತಿರುವ ವರ್ಷಾಧಾರೆಯಿಂದಾಗಿ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ವರುಣ ದೇವನಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನು ಕೆಲ ದಿನಗಳ ಕಾಲ ಮಳೆ ಹೀಗೆ ಮುಂದುವರಿಯುವ ಕಾರಣ ಮುಂಬೈ, ಪಾಲ್ಗಾರ್, ಥಾಣೆ ನಗರಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಪಾಲ್ಗಾರ್​ನಲ್ಲಿ ಭಾರೀ ಮಳೆಯಿಂದಾಗಿ ಭೂ ಕುಸಿತವಾಗಿದ್ದು, ತಂದೆ-ಮಗಳು ಸಾವನ್ನಪ್ಪಿದ್ದಾರೆ.

ಗುಜರಾತ್​ನಲ್ಲಿ ಮಳೆರಾಯನ ಅಟ್ಟಹಾಸ

ಗುಜರಾತ್​ನ ಅಹಮದಬಾದ್​ನಲ್ಲಿ ದಾಖಲೆ ಮಟ್ಟದಲ್ಲಿ ಮಳೆಯಾಗುತ್ತಿದ್ದು, ನಗರದ ರಸ್ತೆಗಳು ಜಲಾವೃತವಾಗಿದೆ. ಹಲವೆಡೆ ಮನೆಗಳು ಕುಸಿದಿವೆ. ತಗ್ಗು ಪ್ರದೇಶಗಳಿಗೆಲ್ಲಾ ನೀರು ನುಗ್ಗಿ ಭಾರಿ ಅವಾಂತರವನ್ನು ಸೃಷ್ಟಿ ಮಾಡಿದೆ. ಇದಿಷ್ಟೇ ಅಲ್ಲದೆ ಮಹಾಮಳೆಗೆ ಈವರೆಗೂ 70ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಎರಡು ಮೂರು ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಕಾರ ಮಳೆಯಾಗಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.

ಮಧ್ಯಪ್ರದೇಶದಲ್ಲಿ ಮಳೆಯ ಅವಾಂತರ ಜೋರು

ಮಧ್ಯಪ್ರದೇಶದಲ್ಲಿ ಬಿಟ್ಟೂಬಿಡದೆ ವರುಣ ಆರ್ಭಟಿಸುತ್ತಿದ್ದಾನೆ. ಅದರಲ್ಲೂ ಭೂಪಾಲ್​ನಲ್ಲಿ ಭಾರೀ ಮಳೆಯಾಗಿರುವುದರಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಹವಮಾನ ಇಲಾಖೆ ರೆಡ್​ ಅಲರ್ಟ್​ ಘೋಷಣೆ ಮಾಡಿದೆ.

ಮುಳುಗಿತು ಜ್ಯೋತಿರಾದಿತ್ಯ ಸಿಂಧ್ಯಾ ಮನೆ
ಶಿಮ್ಲಾದಲ್ಲಿರುವ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರ ಮನೆಗೂ ನೀರು ನುಗ್ಗಿ ಭಾರಿ ಅವಾಂತರ ಸೃಷ್ಟಿ ಮಾಡಿದೆ. ಇತ್ತೀಚಿಗೆ ಮೇ ತಿಂಗಳಲ್ಲಿ ಸಿಂಧ್ಯಾ ಹೊಸ ಕಚೇರಿಗೆ ಶಿಫ್ಟ್ ಆಗಿದ್ದರು.

ತೆಲಂಗಾಣದಲ್ಲೂ ನಿಲ್ಲದ ಮಳೆರಾಯ

ತೆಲಂಗಾಣದಲ್ಲಿ ಮುಂದಿನ 5 ದಿನಗಳ ಕಾಲ ಭಾರಿ ಮಳೆಯಾಗಲಿರುವ ಹಿನ್ನೆಲೆಯಲ್ಲಿ ರೆಡ್​ ಅಲರ್ಟ್​ ಘೋಷಣೆ ಮಾಡಲಾಗಿದೆ. 12 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​, ಹೈದರಾಬಾದ್​ನಲ್ಲಿ ಯೆಲ್ಲೋ ಅಲರ್ಟ್​ ಘೋಷಣೆ ಮಾಡಿದ್ದು, ರಾಜ್ಯಾದ್ಯಂತ 1 ವಾರ ಶಾಲಾ ಕಾಲೇಜುಗಳಿಗೆ ರಜೆ ನೀಡಿದೆ.

Exit mobile version