ಬ್ಯಾಂಕಾಕ್: ಪ್ರಕ್ಷುಬ್ಧತೆಯನ್ನು ಅನುಭವಿಸುತ್ತಿರುವ ಜಗತ್ತು ಹಿಂದೂ ಮೌಲ್ಯಗಳಾದ ಅಹಿಂಸೆ, ಸತ್ಯ, ಸಹಿಷ್ಣುತೆ ಮತ್ತು ಸಾಮರಸ್ಯಗಳಿಂದ ಸ್ಫೂರ್ತಿ ಪಡೆಯಬೇಕು. ಆಗ ಮಾತ್ರ ಜಗತ್ತಿನಲ್ಲಿ ಶಾಂತಿ ಸ್ಥಾಪನೆಯಾಗುತ್ತದೆ ಎಂದು ಥಾಯ್‌ಲ್ಯಾಂಡ್ ಪ್ರಧಾನ ಮಂತ್ರಿ ಸ್ರೆಟ್ಟಾ ಥಾವಿಸಿನ್ (Thailand PM Srettha Thavisin) ಹೇಳಿದ್ದಾರೆ.
ಥಾಯ್‌ಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ನಡೆದ ವಿಶ್ವ ಮೂರನೇ ಹಿಂದೂ ಕಾಂಗ್ರೆಸ್‌ನಲ್ಲಿ (Third world Hindu congress) ಥಾಯ್ ಪ್ರಧಾನಿಯ ಈ ಸಂದೇಶವನ್ನು ಬಿತ್ತರಿಸಲಾಯಿತು. ಪ್ರಗತಿಪರ ಮತ್ತು ಪ್ರತಿಭಾವಂತ ಸಮಾಜವಾಗಿ ಹಿಂದೂ ಸಮುದಾಯದ ಗುರುತನ್ನು ಸ್ಥಾಪಿಸುವ ಉದ್ದೇಶವನ್ನು ಈ ಕಾಂಗ್ರೆಸ್ ಹೊಂದಿದೆ. ಆತಿಥೇಯ ದೇಶದ ಪ್ರಧಾನ ಮಂತ್ರಿ ಥಾವಿಸಿನ್ ಅವರು ಉದ್ಘಾಟನಾ ಅಧಿವೇಶನದಲ್ಲಿ ಭಾಗವಹಿಸಬೇಕಾಗಿತ್ತು. ಆದರೆ ಅವರು ಬರಲು ಸಾಧ್ಯವಾಗದ ಕಾರಣ ಪ್ರಧಾನಿಯವರ ಸಂದೇಶವನ್ನು ಓದಲಾಯಿತು.
ಹಿಂದೂ ತತ್ವಗಳ ಮೇಲೆ ಆಯೋಜಿಸಲಾದ ವಿಶ್ವ ಹಿಂದೂ ಕಾಂಗ್ರೆಸ್ ಅನ್ನು ನಡೆಸುವುದು ಥಾಯ್‌ಲ್ಯಾಂಡ್‌ಗೆ ಸಂದ ಗೌರವವಾಗಿದೆ. ವೇದಗಳು ಜಗತ್ತಿನ ಸಾಮರಸ್ಯಪೂರ್ಣ ಸಹಬಾಳ್ವೆಗೆ ಅಗತ್ಯವಾದ ಸಂದೇಶವನ್ನು, ಮೌಲ್ಯಗಳನ್ನು ಪ್ರತಿಪಾದಿಸುತ್ತವೆ ಎಂದು ಅವರು ಹೇಳಿದರು.
ʼಧರ್ಮದ ವಿಜಯ’ ಎಂಬ ಘೋಷಣೆಯೊಂದಿಗೆ, ಖ್ಯಾತ ಸಂತರುಗಳಾದ ಮಾತಾ ಅಮೃತಾನಂದಮಯಿ, ಭಾರತ ಸೇವಾಶ್ರಮ ಸಂಘದ ಸ್ವಾಮಿ ಪೂರ್ಣಾತ್ಮಾನಂದ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ ಭಾಗವತ್ (Mohan Bhagwat), ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ (Dattatreya Hosabale), ವಿಶ್ವ ಹಿಂದೂ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಮತ್ತು ಸಂಸ್ಥಾಪಕ-ಸಂಚಾಲಕರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಸ್ವಾಮಿ ವಿಜ್ಞಾನಾನಂದರು ದೀಪ ಬೆಳಗಿಸಿದರು.
ವಿಶ್ವ ಹಿಂದೂ ಕಾಂಗ್ರೆಸ್‌ಗೆ ವಿಶ್ವದ 61 ದೇಶಗಳಿಂದ 2200ಕ್ಕೂ ಹೆಚ್ಚು ಪ್ರತಿನಿಧಿಗಳು ಆಗಮಿಸಿದ್ದಾರೆ. ಶಿಕ್ಷಣ, ಆರ್ಥಿಕತೆ, ಶೈಕ್ಷಣಿಕ, ಸಂಶೋಧನೆ ಮತ್ತು ಅಭಿವೃದ್ಧಿ, ಮಾಧ್ಯಮ ಮತ್ತು ರಾಜಕೀಯ ಕ್ಷೇತ್ರಗಳ ಗಣನೀಯ ಸಾಧಕರನ್ನು ಇಲ್ಲಿಗೆ ಆಹ್ವಾನಿಸಲಾಗಿದೆ. ಇವರಲ್ಲಿ ಸುಮಾರು 25 ದೇಶಗಳ ಸಂಸದರು ಮತ್ತು ಸಚಿವರು ಸೇರಿದ್ದಾರೆ. ಥಾಯ್‌ಲ್ಯಾಂಡ್‌ನಲ್ಲಿ ಭಾರತ ಮೂಲದ ಸುಮಾರು 10 ಲಕ್ಷ ಜನರಿದ್ದಾರೆ.
ಇತ್ತೀಚೆಗೆ ಮಾತನಾಡುತ್ತ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಇಎಎಂ ಜೈಶಂಕರ್, ಇತ್ತೀಚೆಗೆ ಭಾರತದ ರಕ್ಷಣೆ ಮತ್ತು ಭದ್ರತಾ ಸಂಬಂಧವು ಥಾಯ್‌ಲ್ಯಾಂಡ್ ಜೊತೆಗೆ ಗಣನೀಯವಾಗಿ ಬೆಳೆದಿದೆ ಎಂದಿದ್ದಾರೆ. ಭಾರತವು ಲುಕ್-ಈಸ್ಟ್ ನೀತಿಯನ್ನು ಹೊಂದಿದ್ದರೆ ಥಾಯ್‌ಲ್ಯಾಂಡ್ ಲುಕ್-ವೆಸ್ಟ್ ನೀತಿಯನ್ನು ಹೊಂದಿದೆ. ಉಭಯ ದೇಶಗಳ ನಡುವಿನ ಸಂಬಂಧ ಕಳೆದ 25 ವರ್ಷಗಳಲ್ಲಿ ಹೆಚ್ಚು ಸುಸ್ಥಿರವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಮಾಜಕ್ಕೆ ಒಳ್ಳೆಯದಾಗೋದಾದ್ರೆ ದೇಣಿಗೆಗೆ ಭಿಕ್ಷೆ ಬೇಡಲು ಸೈ ಎಂದ ಮೋಹನ ಭಾಗವತ್