Site icon Vistara News

Census: ಇಂಗ್ಲೆಂಡ್‌‌ ಹಿಂದೂಗಳು ಅತಿ ಹೆಚ್ಚು ಆರೋಗ್ಯವಂತರು, ಅರ್ಹತೆಯುಳ್ಳವರು!

Hindus among healthiest, highly qualified in England, Says Census

ಲಂಡನ್: ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ವಾಸಿಸುತ್ತಿರುವ ಎಲ್ಲ ಧರ್ಮೀಯರ ಪೈಕಿ ಹಿಂದೂಗಳು (Hindu) ಹೆಚ್ಚು ಆರೋಗ್ಯವಂತರು ಎಂಬ ಮಾಹಿತಿ ಬಹಿರಂಗವಾಗಿದೆ. ಎಲ್ಲ ಧರ್ಮೀಯರ ಪೈಕಿ ಹಿಂದೂಗಳಲ್ಲಿ ಅತಿ ಹೆಚ್ಚು ಶೈಕ್ಷಣಿಕ ಅರ್ಹತೆ ಮತ್ತು ಕಡಿಮೆ ಅಂಗವೈಕಲ್ಯವನ್ನು ಹೊಂದಿದ್ದಾರೆಂಬ ಮಾಹಿತಿಯು ಜನಗಣತಿಯಲ್ಲಿ(Census) ಬಹಿರಂಗವಾಗಿದೆ.

ರಾಷ್ಟ್ರೀಯ ಸಾಂಖೀಕ ಕಚೇರಿ ಬಿಡುಗಡೆ ಮಾಡಿರುವ 2021ರ ಜನಗಣತಿ ವರದಿಯ ಪ್ರಕಾರ, ಶೇ.82 ಒಟ್ಟಾರೆ ಜನಸಂಖ್ಯೆಯ ಆರೋಗ್ಯಕ್ಕೆ ಹೋಲಿಸಿದರೆ, ಶೇ.87.8ರಷ್ಟು ಹಿಂದೂಗಳು ಅತ್ಯುತ್ತಮ ಅಥವಾ ಉತ್ತಮ ಆರೋಗ್ಯವನ್ನು ಹೊಂದಿದ್ದಾರೆ. ಹಿಂದೂಗಳಲ್ಲಿ ಅಂಗವೈಕಲ್ಯ ಪ್ರಮಾಣವೂ ಬಹಳ ಕಡಿಮೆ ಅಂದರೆ ಶೇ.8.8ರಷ್ಟಿದೆ. ನಂತರದ ಸ್ಥಾನದಲ್ಲಿ ಶೇ.10.8 ಸಿಖ್ಖರು, ಶೇ.11.3 ಮುಸ್ಲಿಮರಿದ್ದಾರೆ. ಇಂಗ್ಲೆಂಡ್ ಮತ್ತು ವೇಲ್ಸ್‌ನ ಸರಾಸರಿ ಅಂಗವೈಕಲ್ಯ ಪ್ರಮಾಣ ಶೇ.17.5ರಷ್ಟಿದೆ.

ಸ್ವಯಂ ಘೋಷಣೆಯನ್ನು ಆಧರಿಸಿದ ಅಂಕಿಅಂಶಗಳ ಪ್ರಕಾರ, ಒಟ್ಟಾರೆ ಜನಸಂಖ್ಯೆಯ ಶೇ.33.8ಕ್ಕೆ ಹೋಲಿಸಿದರೆ, ಶೇ.54.8ರಷ್ಟು ಹಿಂದೂಗಳು ‘ಹಂತ 4 ಅಥವಾ ಅದಕ್ಕಿಂತ ಹೆಚ್ಚಿನ’ ಅರ್ಹತೆಯನ್ನು ಹೊಂದಿದ್ದಾರೆ. ಇದೇ ವೇಳೆ, ಶೇ.31.6ರಷ್ಟು ಕ್ರೈಸ್ತರು ಅತ್ಯುನ್ನತ ಅರ್ಹತೆಯನ್ನು ಹೊಂದಿದ್ದಾರೆ. ಇನ್ನೂ ವೃತ್ತಿಪರ ಉದ್ಯೋಗಗಳನ್ನು ಪಡೆದುಕೊಂಡವರ ಶೇಕಡಾವಾರು ಪಟ್ಟಿಯಲ್ಲಿ ಯಹೂದಿಗಳ ನಂತರದ ಸ್ಥಾನದಲ್ಲಿ ಹಿಂದೂಗಳಿದ್ದಾರೆ. ಮ್ಯಾನೇಜರ್, ಡೈರೆಕ್ಟರ್ಸ್ ಮತ್ತು ಹಿರಿಯ ಅಧಿಕಾರಿಗಳ ಸ್ಥಾನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಇಂಗ್ಲೆಂಡ್ ಮತ್ತು ವೇಲ್ಸ್‌ನ ಒಟ್ಟು ಜನಸಂಖ್ಯೆಯಲ್ಲಿ ಧಾರ್ಮಿಕವಾರು ಸ್ವಂತ ಮನೆಗಳನ್ನು ಹೊಂದಿರುವುದರಲ್ಲೂ ವ್ಯತ್ಯಾಸಗಳಿವೆ. ಹೀಗಿದ್ದಾಗ್ಯೂ, ಶೇ.77.7 ಸಿಖ್ಖರು ತಮ್ಮ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇದು ಯಾವುದೇ ಧಾರ್ಮಿಕ ಸಮುದಾಯಕ್ಕೆ ಹೋಲಿಸಿದರೆ, ಅತಿ ಹೆಚ್ಚಿನ ಪ್ರಮಾಣವಾಗಿದೆ.

ಇದನ್ನೂ ಓದಿ: Richest Hindus of Pakistan : ಇವರು ಪಾಕಿಸ್ತಾನದ ಶ್ರೀಮಂತ ಹಿಂದೂಗಳು! ಎಷ್ಟಿದೆ ಆಸ್ತಿ?

ಒಟ್ಟಾರೆ ಜನಸಂಖ್ಯೆಗೆ ಹೋಲಿಸಿದರೆ, ಕಿಕ್ಕಿರಿದ ಮನೆಗಳಲ್ಲಿ ಮುಸ್ಲಿಮರು ಹೆಚ್ಚಾಗಿ ವಾಸಿಸುತ್ತಾರೆ. ಇತರ ಸಮುದಾಯಗಳಿಗೆ ಹೋಲಿಸಿದರೆ, ಈ ಪ್ರಮಾಣ ನಾಲ್ಕು ಪಟ್ಟು ಹೆಚ್ಚಳವಾಗಿದೆ. 2021ರಲ್ಲಿ 39 ಲಕ್ಷ ಜನರು ತಾವು ಮುಸ್ಲಿಮ್ ಎಂದು ಹೇಳಿಕೊಂಡಿದ್ದಾರೆ. ಈ ಪೈಕಿ ಶೇ.32.7ರಷ್ಟು ಜನರು ಕಿಕ್ಕಿರಿದ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಶೇ.45.6 ಮುಸ್ಲಿಮರು ಮಾತ್ರವೇ ತಮ್ಮ ಸ್ವಂತ ಮನೆಗಳಲ್ಲಿ ವಾಸಿಸುತ್ತಿದ್ದಾರೆ.

Exit mobile version