ಚೆನ್ನೈ: ಮಹಾರಾಷ್ಟ್ರದ ಪುಣೆಯಲ್ಲಿ ಉದ್ಯಮಿಯೊಬ್ಬರ ಅಪ್ರಾಪ್ತ ವಯಸ್ಸಿನ ಮಗ ಮದ್ಯ ಸೇವಿಸಿ ಐಷಾರಾಮಿ ಪೋರ್ಷೆ ಕಾರು (Pune Porsche accident) ಓಡಿಸಿ ಇಬ್ಬರ ಸಾವಿಗೆ ಕಾರಣವಾದ ಘಟನೆ ನಡೆದು ಒಂದು ತಿಂಗಳೊಳಗೆ ಅಂತಹದ್ದೇ ಮತ್ತೊಂದು ಪ್ರಕರಣ ತಮಿಳುನಾಡಿನ ಚೆನ್ನೈಯಲ್ಲಿ ನಡೆದಿದೆ. ರಾಜ್ಯಸಭಾ ಸದಸ್ಯರೊಬ್ಬರ ಮಗಳು ಬಿಎಂಡಬ್ಲ್ಯು (BMW) ಕಾರು ಓಡಿಸಿ 24 ವರ್ಷದ ಯುವಕನನ್ನು ಕೊಂದಿದ್ದಾಳೆ. ಅದಾಗ್ಯೂ ಆಕೆಗೆ ಜಾಮೀನು ಲಭಿಸಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ (Hit & Run).
ಚೆನ್ನೈಯ ಪಾದಚಾರಿ ಮಾರ್ಗದ ಮೇಲೆ ಮಲಗಿದ್ದ ಯುವಕ ಮೇಲೆ ಮಹಿಳೆ ಕಾರು ಓಡಿಸಿದ್ದು, ಗಾಯಗೊಂಡ ಆತ ಮೃತಪಟ್ಟಿದ್ದಾನೆ.
ಘಟನೆ ವಿವರ
ವೈಎಸ್ಆರ್ ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸಂಸದ ಬೀಡಾ ಮಸ್ತಾನ್ ರಾವ್ ಅವರ ಪುತ್ರಿ ಮಾಧುರಿ ಸೋಮವಾರ ರಾತ್ರಿ ತನ್ನ ಸ್ನೇಹಿತೆಯೊಂದಿಗೆ ಬಿಎಂಡಬ್ಲ್ಯು ಕಾರನ್ನು ಓಡಿಸುತ್ತಿದ್ದಳು. ಈ ವೇಳೆ ಚೆನ್ನೈಯ ಬೆಸೆಂಟ್ ನಗರದ ಪಾದಚಾರಿ ಮಾರ್ಗದಲ್ಲಿ ಮಲಗಿದ್ದ 24 ವರ್ಷದ ಪೈಂಟರ್ ಸೂರ್ಯ ಎಂಬಾತನ ಮೇಲೆ ಕಾರನ್ನು ಚಲಾಯಿಸಿ ಕೊಂದಿದ್ದಾಳೆ ಎನ್ನುವ ಆರೋಪ ಕೇಳಿ ಬಂದಿದೆ.
YSRCP Rajya Sabha MP Beeda Masthan Rao’s daughter Madhuri (33) was arrested for a #HitandRun case, she allegedly ran over a 24 year old painter, while sleeping on a pavement in #BesantNagar, #Chennai. Madhuri was later granted bail.#BeedaMasthanRao #YSRCP pic.twitter.com/PkbeM0lth5
— Surya Reddy (@jsuryareddy) June 18, 2024
ಅಪಘಾತ ನಡೆದ ತಕ್ಷಣ ಮಾಧುರಿ ಸ್ಥಳದಿಂದ ಪರಾರಿಯಾಗಿದ್ದರೆ, ಆಕೆಯ ಸ್ನೇಹಿತೆ ಕಾರಿನಿಂದ ಇಳಿದು ಗುಂಪುಗೂಡಿದ್ದ ಸ್ಥಳೀಯರೊಂದಿಗೆ ವಾಗ್ವಾದ ನಡೆಸಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ವಲ್ಪ ಸಮಯದ ನಂತರ ಅವಳೂ ಹೊರಟು ಹೋದಳು. ಗಾಯಗೊಂಡಿದ್ದ ಸೂರ್ಯನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಿ ಆತ ಮೃತಪಟ್ಟಿದ್ದ ಎಂದು ಪ್ರತ್ಯಕ್ಷರ್ಶಿಗಳು ತಿಳಿಸಿದ್ದಾರೆ. ಬಳಿಕ ಪೊಲೀಸರು ಮಾಧುರಿಯನ್ನು ಬಂಧಿಸಿದರು. ಆದರೆ ಶೀಘ್ರವೇ ಆಕೆಗೆ ಜಾಮೀನು ಸಿಕ್ಕಿದೆ.
ಸಂಬಂಧಿಕರ ಆಕ್ರೋಶ
ಮೃತ ಸೂರ್ಯನಿಗೆ ಎಂಟು ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಘಟನೆ ನಡೆದ ಕೂಡಲೇ ಸ್ಥಳಕ್ಕೆ ಆಗಮಿಸಿದ ಆತನ ಸಂಬಂಧಿಕರು ಮಾಧುರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಜೆ -5 ಶಾಸ್ತ್ರಿ ನಗರ ಪೊಲೀಸ್ ಠಾಣೆ ಮುಂದೆ ಜಮಾಯಿಸಿದರು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಕಾರು ಬಿಎಂಆರ್ (ಬೀಡಾ ಮಸ್ತಾನ್ ರಾವ್) ಗ್ರೂಪ್‌ಗೆ ಸೇರಿದ್ದು ಮತ್ತು ಪುದುಚೇರಿಯಲ್ಲಿ ನೋಂದಣಿಯಾಗಿದೆ ಎಂಬುದು ತಿಳಿದು ಬಂತು. ಬಳಿಕ ಮಾಧುರಿಯನ್ನು ಬಂಧಿಸಲಾಯಿತು. ಆದರೆ ಪೊಲೀಸ್ ಠಾಣೆಯಲ್ಲಿಯೇ ಜಾಮೀನನ್ನೂ ನೀಡಲಾಯಿತು. ಬೀಡಾ ಮಸ್ತಾನ್ ರಾವ್ ಅವರು 2022ರಲ್ಲಿ ರಾಜ್ಯಸಭಾ ಸಂಸದರಾದರು. ಈ ಹಿಂದೆ ಶಾಸಕರಾಗಿದ್ದರು. ಬಿಎಂಆರ್ ಗ್ರೂಪ್ ಮೀನು ಆಹಾರದ ಉದ್ಯಮದಲ್ಲಿ ಚಿರಪರಿಚಿತ ಹೆಸರು.
ಇದನ್ನೂ ಓದಿ: Pune Porsche Accident: ಆರೋಪಿಯ ರಕ್ತದ ಮಾದರಿ ಬದಲಿಸಲು 3 ಲಕ್ಷ ರೂ. ಲಂಚ ಪಡೆದಿದ್ದ ವೈದ್ಯರು; ಆಸ್ಪತ್ರೆ ಜವಾನ ಅರೆಸ್ಟ್
ಪುಣೆ: ಲಕ್ಷುರಿ ಕಾರು ಡಿಕ್ಕಿ ಹೊಡೆದು ವ್ಯಕ್ತಿಯ ಸಾವು
ಪುಣೆಯಲ್ಲಿ ಮಂಗಳವಾರ ನಡೆದ ಮತ್ತೊಂದು ಘಟನೆಯಲ್ಲಿ ಐಷಾರಾಮಿ ಕಾರು ಡಿಕ್ಕಿ ಹೊಡೆದು ಬೈಕ್ ಸವಾರರೊಬ್ಬರು ಮೃತಪಟ್ಟಿದ್ದಾರೆ. ಪುಣೆ ನಗರದ ಯೆರವಾಡಾ ಪ್ರದೇಶದಲ್ಲಿ ಬೈಕ್‌ಗೆ ಐಷಾರಾಮಿ ಕಾರು ಡಿಕ್ಕಿ ಹೊಡೆದ ಪರಿಣಾಮ 41 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಧ್ಯಾಹ್ನ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಮೃತ ಕೇದಾರ್ ಚವಾಣ್ ಲಾಜಿಸ್ಟಿಕ್ಸ್ ಸಂಸ್ಥೆಯಲ್ಲಿ ಡೆಲಿವರಿ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು.