Site icon Vistara News

Hooch Tragedy: ತಮಿಳುನಾಡು ಕಳ್ಳಬಟ್ಟಿ ದುರಂತ; ಸಾವಿನ ಸಂಖ್ಯೆ 25ಕ್ಕೆ ಏರಿಕೆ

Hooch Tragedy

Hooch Tragedy

ಚೆನ್ನೈ: ದೇಶದಲ್ಲಿ ಕಳ್ಳಬಟ್ಟಿ ಸಾರಾಯಿ ಸೇವಿಸಿ (Illicit Liquor) ಮತ್ತೊಂದು ದುರಂತ ಸಂಭವಿಸಿದ್ದು, ಮೃತರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ತಮಿಳುನಾಡಿನ (Tamil Nadu) ಕಳ್ಳಕುರಿಚಿ ಜಿಲ್ಲೆಯಲ್ಲಿ ಈ ದುರಂತ ನಡೆದಿದ್ದು, 60ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ. ಕೆಲವರನ್ನು ಜಿಲ್ಲಾಸ್ಪತ್ರೆಗೆ ಮತ್ತು ಗಂಭೀರ ಆರೋಗ್ಯ ಸ್ಥಿತಿಯಲ್ಲಿರುವವರನ್ನು ಪುದುಚೆರಿಗೆ ಸಾಗಿಸಲಾಗಿದೆ.

ಕರುಣಾಪುರಂ ಕಾಲೋನಿಯವರು ಸೇರಿ ನೂರಾರು ಜನ ಮಂಗಳವಾರ (ಜೂನ್‌ 18) ರಾತ್ರಿ ಕಳ್ಳಬಟ್ಟಿ ಸೇವಿಸಿದ್ದಾರೆ. ಬುಧವಾರ ಬೆಳಗ್ಗೆ ವಾಂತಿ, ಭೇದಿ ಸೇರಿ ಹಲವು ರೀತಿಯ ಬಾಧೆ ಅನುಭವಿಸಿದ್ದಾರೆ. ಕೂಡಲೇ ಅವರನ್ನು ಕಳ್ಳಕುರಿಚಿ ಜಿಲ್ಲಾಸ್ಪತ್ರೆ ಸೇರಿ ಹಲವು ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಆದರೂ 25 ಮಂದಿ ಮೃತಪಟ್ಟಿದ್ದಾರೆ.

ಕಠಿಣ ಕ್ರಮ ಎಂದ ಸಿಎಂ

ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ತಪ್ಪಿತಸ್ಥರು ಮತ್ತು ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, “ಕಳ್ಳಕುರಿಚಿ ಜಿಲ್ಲೆಯಲ್ಲಿ ಕಲಬೆರಕೆ ಮದ್ಯ ಸೇವಿಸಿದ ಹಲವರು ಮೃತಪಟ್ಟಿರುವ ಸುದ್ದಿ ಕೇಳಿ ಆಘಾತವಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ಬಂಧಿಸಲಾಗಿದೆ. ಇದನ್ನು ತಡೆಗಟ್ಟಲು ವಿಫಲವಾದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಇಂತಹ ಅಪರಾಧಗಳಲ್ಲಿ ಭಾಗಿಯಾಗಿರುವವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಸಮಾಜವನ್ನು ಹಾಳು ಮಾಡುವ ಇಂತಹ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲಾಗುವುದುʼʼ ಎಂದು ಅವರು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದ 49 ವರ್ಷದ ಕನ್ನುಕುಟ್ಟಿ ಎನ್ನುವ ವ್ಯಕ್ತಿಯನ್ನು ಈಗಾಗಲೇ ಬಂಧಿಸಲಾಗಿದ್ದು ಆತನಿಂದ ಸುಮಾರು 200 ಲೀಟರ್‌ ಕಳ್ಳಬಟ್ಟಿ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಮಾರಣಾಂತಿಕ ಮೆಥನಾಲ್‌ ಇರುವುದು ಪತ್ತೆಯಾಗಿದೆ ಎಂದು ಅದಿಕಾರಿಗಳು ತಿಳಿಸಿದ್ದಾರೆ.

ಎಂ.ಕೆ.ಸ್ಟಾಲಿನ್ ಅವರು ಅಪರಾಧ ವಿಭಾಗ-ಅಪರಾಧ ತನಿಖಾ ಇಲಾಖೆ (CB-CID) ತನಿಖೆಗೆ ಆದೇಶಿಸಿದ್ದಾರೆ. ಕಳ್ಳಕುರಿಚಿ ಜಿಲ್ಲಾಧಿಕಾರಿ ಶ್ರವಣ್ ಕುಮಾರ್ ಜಟಾವತ್ ಅವರನ್ನು ವರ್ಗಾಯಿಸಲಾಗಿದೆ. ಇದರ ಜತೆಗೆ, ಕಳ್ಳಕುರಿಚಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಮಯಸಿಂಗ್‌ ಮೀನಾ ಸೇರಿ ಒಟ್ಟು 10 ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ರಜತ್ ಚತುರ್ವೇದಿ ಅವರು ಜಿಲ್ಲೆಯ ಹೊಸ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಕಲ್ಲಕುರಿಚಿ ಜಿಲ್ಲೆಯ ನೂತನ ಕಲೆಕ್ಟರ್‌ ಎಂ.ಎಸ್.ಪ್ರಶಾಂತ್, ಹಿರಿಯ ಸಚಿವರಾದ ಇ.ವಿ.ವೇಲು ಮತ್ತು ಎಂ.ಎ.ಸುಬ್ರಮಣಿಯನ್ ಅವರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಭೇಟಿಯಾದರು. ಜತೆಗೆ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದರು. ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಕೂಡ ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ʼʼನಕಲಿ ಮದ್ಯ ಸೇವನೆಯಿಂದ ಸಾವನ್ನಪ್ಪುವ ಘಟನೆ ಪದೇ ಪದೆ ವರದಿಯಾಗುತ್ತಿದೆ. ಮದ್ಯ ಅಕ್ರಮ ಉತ್ಪಾದನೆ ಮತ್ತು ಮಾರಾಟವನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕುʼʼ ಎಂದು ಸಲಹೆ ನೀಡಿದ್ದಾರೆ. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರು ಸರ್ಕಾರವನ್ನು ಟೀಕಿಸಿದ್ದು, ಅಬಕಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: Electric Shock: ಒಣ ಹಾಕಿದ್ದ ಟವೆಲ್‌ನಲ್ಲಿ ವಿದ್ಯುತ್; ತಂದೆ, ತಾಯಿ, ಮಗ ಸಾವು

Exit mobile version