ಹೊಸದಿಲ್ಲಿ: ದಕ್ಷಿಣ ಭಾರತ ಪ್ರದೇಶವು ಕಳೆದ 122 ವರ್ಷಗಳಲ್ಲಿಯೇ ಅತಿ ಹೆಚ್ಚು ತಾಪಮಾನ ಹಾಗೂ ಶುಷ್ಕ ವಾತಾವರಣದ ಜೂನ್ (Hottest June) ತಿಂಗಳನ್ನು ಈ ವರ್ಷ ದಾಖಲಿಸಿದೆ. ಈ ಜೂನ್‌ನಲ್ಲಿ ತಾಪಮಾನ 34.05°C ತಲುಪಿದೆ. 1901ರಿಂದ ನಂತರ ಈ ವರ್ಷ ಜೂನ್ ತಿಂಗಳಲ್ಲಿ ಅತಿ ಕಡಿಮೆ ಮಳೆಯಾಗಿದೆ- ಕೇವಲ 88.6 ಎಂಎಂನಷ್ಟು ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
1976ರಲ್ಲಿ ಜೂನ್‌ನಲ್ಲಿ ಕಡಿಮೆ, ಅಂದರೆ 90.7 ಎಂಎಂ ಮಳೆಯಾಗಿತ್ತು. ಇದು ಜೂನ್‌ನಲ್ಲಿ ಎರಡನೇ ಅತಿ ಕಡಿಮೆ ಮಳೆಯಾಗಿದೆ. ಈ ಪ್ರದೇಶದಲ್ಲಿ ಸಾಮಾನ್ಯವಾಗಿ ಸರಾಸರಿ 161 ಮಿಮೀ ಮಳೆಯಾಗುತ್ತದೆ. ಹವಾಮಾನ ಇಲಾಖೆ ಪ್ರಕಾರ ಜೂನ್‌ನಲ್ಲಿ ಈ ಪ್ರದೇಶದಲ್ಲಿನ ಸರಾಸರಿ ಗರಿಷ್ಠ ತಾಪಮಾನ 1901ರ ಬಳಿಕ ಈ ವರ್ಷ 34.05°Cಗೆ ತಲುಪಿದೆ. ಇದ್ಕೂ ಹಿಂದಿನ ಗರಿಷ್ಠ ದಾಖಲೆ 2014ರದಾಗಿದ್ದು, ಆಗ ಅದು 33.74°Cಗೆ ತಲುಪಿತ್ತು. ಇಲ್ಲಿನ ಜೂನ್‌ನ ಸರಾಸರಿ ಕನಿಷ್ಠ ತಾಪಮಾನ 1901ರಿಂದ 30.05°Cನಲ್ಲಿದೆ. ಹಿಂದಿನ ಅತಿ ಕನಿಷ್ಠ ತಾಪಮಾನದ ದಾಖಲೆಯೂ 2014ರಲ್ಲಿದ್ದು, 29.98°C ಆಗಿತ್ತು.
ಭಾರತದಲ್ಲಿ ಮಾನ್ಸೂನ್ ವಿಳಂಬವಾಗಿದೆ. ಪ್ರಾರಂಭವಾದಾಗಲೂ ಅದು ಬಲವಾದ ಮುಂಗಾರು ಆಗಿರಲಿಲ್ಲ. ಮಳೆಯ ಕೊರತೆಯಿದ್ದಾಗ ತಾಪಮಾನ ಹೆಚ್ಚಾಗುತ್ತದೆ. ಜೂನ್ 25ರಿಂದ ಪಶ್ಚಿಮ ಕರಾವಳಿಯಲ್ಲಿ ಸರಿಯಾಗಿ ಮಳೆಯಾಗಲು ಆರಂಭವಾಗಿದೆ. ಜೂನ್ 7ರಂದು ರೂಪುಗೊಂಡ ಅತ್ಯಂತ ತೀವ್ರವಾದ ಬೈಪರ್ಜೋಯ್ ಚಂಡಮಾರುತ ಜೂನ್ 9ರವರೆಗೆ ಇಲ್ಲಿ ಚಲಿಸಿತು. ಮಾನ್ಸೂನ್ ಅನ್ನು ವ್ಯತ್ಯಾಸಗೊಳಿಸಿ ಉತ್ತರದ ಕಡೆಗೆ ಚಲಿಸಿತು. ಅರಬಿ ಸಮುದ್ರದ ಮಾನ್ಸೂನ್ ರೂಪುಗೊಳ್ಳುವಿಕೆಗೆ ಹಿನ್ನಡೆಯಾದ ಕಾರಣ ಜೂನ್ 25ರವರೆಗೆ ಪರ್ಯಾಯ ದ್ವೀಪದಲ್ಲಿ ಮಾನ್ಸೂನ್ ದುರ್ಬಲವಾಗಿತ್ತು. ಈಗ ತುಂಬಾ ಸಕ್ರಿಯವಾಗಿದೆ ಎಂದು ಐಎಂಡಿ ಮಹಾನಿರ್ದೇಶಕ ಎಂ. ಮಹಾಪಾತ್ರ ಹೇಳಿದ್ದಾರೆ.
ಇದನ್ನೂ ಓದಿ: Weather Report : ನಾಳೆ ಬೆಂಗಳೂರಲ್ಲಿ ವರುಣಾರ್ಭಟ; ದಕ್ಷಿಣ-ಉತ್ತರ ಒಳನಾಡು, ಕರಾವಳಿಯಲ್ಲಿ ಮಳೆ ಹಾವಳಿ