Site icon Vistara News

NR Narayana Murthy: “70 ಅಲ್ಲ, 90 ಗಂಟೆ ಕೆಲಸ…ʼʼ ನಾರಾಯಣ ಮೂರ್ತಿ ಇನ್ನೊಂದು ಬಾಂಬ್‌

Narayana Murthy

Infosys founder Narayana Murthy says he starved for 120 hours straight during hitchhike in Europe 50 years ago

ಹೊಸದಿಲ್ಲಿ: ʼಭಾರತದಲ್ಲಿ ಯುವಜನತೆ ವಾರಕ್ಕೆ ಕನಿಷ್ಠ 70 ಗಂಟೆಗಳ ಕಾಲ (70 hours work) ಕೆಲಸ ಮಾಡಬೇಕುʼ ಎಂದು ಸಲಹೆ ನೀಡಿ ಹಲವರಿಂದ ಟೀಕೆಗೂ ಶ್ಲಾಘನೆಗೂ ಸಮಾನವಾಗಿ ತುತ್ತಾಗಿದ್ದ ಇನ್ಫೋಸಿಸ್ (Infosys) ಸಹ-ಸಂಸ್ಥಾಪಕ ಎನ್‌.ಆರ್‌ ನಾರಾಯಣ ಮೂರ್ತಿ (NR Narayana Murthy), ಈಗ ಇನ್ನೊಂದು ಬಾಂಬ್‌ ಸಿಡಿಸಿದ್ದಾರೆ. ಇನ್ಫೋಸಿಸ್ ಆರಂಭಿಸಿದ ಸಮಯದಲ್ಲಿ ತಾನು ವಾರಕ್ಕೆ 85ರಿಂದ 90 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆ ಎಂದಿದ್ದಾರೆ.

ಬ್ಯುಸಿನೆಸ್‌ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಅವರು ಇದನ್ನು ಹೇಳಿದ್ದಾರೆ. 1994ರವರೆಗೆ ತಾನು ವಾರಕ್ಕೆ 85ರಿಂದ 90 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆ. ಬೆಳಿಗ್ಗೆ 6.20ಕ್ಕೆ ಕಚೇರಿಯಲ್ಲಿರುತ್ತಿದ್ದೆ ಮತ್ತು ರಾತ್ರಿ 8.30ಕ್ಕೆ ಕಚೇರಿಯಿಂದ ಹೊರಡುತ್ತಿದ್ದೆ. ವಾರದಲ್ಲಿ ಆರು ದಿನ ಕೆಲಸ ಮಾಡುತ್ತಿದ್ದೆ” ಎಂದು ಅವರು ತಿಳಿಸಿದ್ದಾರೆ. “ಅಭಿವೃದ್ಧಿ ಹೊಂದಿದ ಪ್ರತಿಯೊಂದು ರಾಷ್ಟ್ರವೂ ಕಠಿಣ ಪರಿಶ್ರಮದ ಮೂಲಕ ಅದನ್ನು ಸಾಧಿಸಿದೆ ಎಂದು ನನಗೆ ತಿಳಿದಿದೆ” ಎಂದಿದ್ದಾರೆ.

“ಬಡತನದಿಂದ ಪಾರಾಗುವ ಏಕೈಕ ಮಾರ್ಗವೆಂದರೆ ತುಂಬಾ ಕಷ್ಟಪಟ್ಟು ಕೆಲಸ ಮಾಡುವುದು ಎಂದು ಪೋಷಕರು ನನಗೆ ಕಲಿಸಿದರು. ಪ್ರತಿಯೊಂದು ಗಂಟೆಯ ಕೆಲಸದಿಂದಲೂ ವ್ಯಕ್ತಿಯು ಹೆಚ್ಚಿನ ಉತ್ಪಾದಕತೆಯನ್ನು ಪಡೆಯುತ್ತಾನೆ. ನನ್ನ ಸಂಪೂರ್ಣ 40 ವರ್ಷಗಳ ವೃತ್ತಿಪರ ಜೀವನದಲ್ಲಿ, ನಾನು ವಾರಕ್ಕೆ ಸರಾಸರಿ 70 ಗಂಟೆಗಳ ಕಾಲ ಕೆಲಸ ಮಾಡಿದ್ದೇನೆ. 1994ರವರೆಗೆ ನಾವು ಆರು ದಿನಗಳ ವಾರವನ್ನು ಹೊಂದಿದ್ದೆವು. ಆಗ ನಾನು ವಾರಕ್ಕೆ ಕನಿಷ್ಠ 85ರಿಂದ 90 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆ. ಅದು ವ್ಯರ್ಥವಾಗಲಿಲ್ಲ” ಎಂದಿದ್ದಾರೆ.

ಭಾರತವು ಚೀನಾ ಮತ್ತು ಜಪಾನ್‌ನಂತಹ ವೇಗವಾಗಿ ಬೆಳೆಯುತ್ತಿರುವ ದೇಶಗಳೊಂದಿಗೆ ಸ್ಪರ್ಧಿಸಲು ಬಯಸಿದರೆ ಕೆಲಸದ ಉತ್ಪಾದಕತೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಮೂರ್ತಿ ಅವರು ಇನ್ಫೋಸಿಸ್ ಮಾಜಿ ಸಿಎಫ್‌ಒ ಮೋಹನ್‌ದಾಸ್ ಪೈ ಅವರೊಂದಿಗೆ ಅಕ್ಟೋಬರ್‌ನಲ್ಲಿ ನಡೆಸಿದ ಸಂವಾದದಲ್ಲಿ ಹೇಳಿದ್ದರು. “ಎರಡನೆಯ ಮಹಾಯುದ್ಧದ ನಂತರ, ಜರ್ಮನಿ ಮತ್ತು ಜಪಾನ್‌ನ ಜನರು ತಮ್ಮ ದೇಶಕ್ಕಾಗಿ ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡಿದರು. ಭಾರತದಲ್ಲಿನ ಯುವಕರು ಸಹ ದೇಶಕ್ಕಾಗಿ, ನಮ್ಮ ಆರ್ಥಿಕತೆಯ ಸಲುವಾಗಿ ಶ್ರಮಿಸುತ್ತಾರೆ” ಎಂದು ಮೂರ್ತಿ ಗಮನಿಸಿದರು.

ಓಲಾ ಸಿಇಒ ಭವಿಶ್ ಅಗರ್ವಾಲ್ ಅವರು ಮೂರ್ತಿ ಮಾತನ್ನು ಸಮ್ಮತಿಸಿದ್ದಾರೆ. “ಮೂರ್ತಿ ಅವರ ಅಭಿಪ್ರಾಯಗಳನ್ನು ಸಂಪೂರ್ಣವಾಗಿ ಒಪ್ಪುತ್ತೇನೆ. ಇದು ಕಡಿಮೆ ಕೆಲಸ ಮಾಡುವ ಮತ್ತು ಮನರಂಜನೆ ಪಡೆಯುವ ಕ್ಷಣವಲ್ಲ. ಬದಲಿಗೆ ಇತರ ದೇಶಗಳು ಹಲವು ತಲೆಮಾರುಗಳಲ್ಲಿ ನಿರ್ಮಿಸಿದ್ದನ್ನು ಒಂದು ತಲೆಮಾರಿನಲ್ಲಿ ನಿರ್ಮಿಸುವ ನಮ್ಮ ಕ್ಷಣವಾಗಿದೆ!ʼʼ ಎಂದು Xನಲ್ಲಿ ಪೋಸ್ಟ್‌ ಮಾಡಿದ್ದಾರೆ. ಕೈಗಾರಿಕೋದ್ಯಮಿ ಸಜ್ಜನ್ ಜಿಂದಾಲ್ ಅವರೂ ಮೂರ್ತಿಯವರ ಹೇಳಿಕೆಯನ್ನು ಮನಃಪೂರ್ವಕವಾಗಿ ಅನುಮೋದಿಸಿದ್ದಾರೆ. ಐದು ದಿನಗಳ ವಾರದ ಸಂಸ್ಕೃತಿಯು ಭಾರತದಂತಹ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ಅಗತ್ಯವಿಲ್ಲ ಎಂದಿದ್ದಾರೆ.

ಆದರೆ ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಮೂರ್ತಿ ಮಾತನ್ನು ಟೀಕಿಸಿದ್ದರು. “ಕೇವಲ ಹೆಚ್ಚು ಗಂಟೆಗಳ ಕೆಲಸದಿಂದ ಉತ್ಪಾದಕತೆ ಹೆಚ್ಚುವುದಿಲ್ಲ” ಎಂದು ಚಲನಚಿತ್ರ ನಿರ್ಮಾಪಕ ರೋನಿ ಸ್ಕ್ರೂವಾಲಾ ಹೇಳಿದ್ದಾರೆ. ಸೋಮವಾರ ಆರಂಭವಾದ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿಯೂ ಮೂರ್ತಿ ಅವರ ಸಲಹೆಯನ್ನು ಉಲ್ಲೇಖಿಸಲಾಗಿದೆ. ಮೂರ್ತಿ ನೀಡಿದ ಸಲಹೆಯನ್ನು ಅಳವಡಿಸಲು ಪರಿಶೀಲಿಸುತ್ತಿದ್ದೀರಾ ಎಂದು ಮೂವರು ಲೋಕಸಭಾ ಸಂಸದರು ಸರ್ಕಾರವನ್ನು ಪ್ರಶ್ನಿಸಿದ್ದರು. “ಅಂತಹ ಯಾವುದೇ ಪ್ರಸ್ತಾವನೆಯು ಭಾರತ ಸರ್ಕಾರದ ಪರಿಗಣನೆಯಲ್ಲಿಲ್ಲ” ಎಂದು ಕಾರ್ಮಿಕ ಮತ್ತು ಉದ್ಯೋಗ ಇಲಾಖೆ ಸಹಾಯಕ ಸಚಿವ (MoS) ರಾಮೇಶ್ವರ್ ತೇಲಿ ಉತ್ತರಿಸಿದ್ದರು.

ಇದನ್ನೂ ಓದಿ: Narayana Murthy: ವಾರಕ್ಕೆ 70 ಗಂಟೆ ಕೆಲಸ ಮಾಡಲು ಯುವಕರಿಗೆ ಇನ್ಫೋಸಿಸ್ ನಾರಾಯಣಮೂರ್ತಿ ಸಲಹೆ!

Exit mobile version