Site icon Vistara News

Hathras Stampede: ಹತ್ರಾಸ್‌ನಲ್ಲಿ ಕಾಲ್ತುಳಿತ ಹೇಗಾಯ್ತು? ಸತ್ಸಂಗ ನಡೆಸಿದ ಭೋಲೆ ಬಾಬಾ ಯಾರು? ಇಲ್ಲಿದೆ ಮಾಹಿತಿ

Hathras Stampede

How deadly stampede broke out in Uttar Pradesh's Hathras: Eyewitnesses recount horror

ಲಖನೌ: ಉತ್ತರ ಪ್ರದೇಶದ ಹತ್ರಾಸ್‌ ಜಿಲ್ಲೆ ಮೊಘಲ್‌ಘರಾಹಿ ಎಂಬ ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ (Hathras Stampede) ಸಂಭವಿಸಿದ್ದು, 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ನಾರಾಯಣ ಸಕಾರ್‌ ಹರಿ (Narayan Sakaar Hari) ಅಥವಾ ಸಕಾರ್‌ ವಿಶ್ವ ಹರಿ ಅಥವಾ ಭೋಲೆ ಬಾಬಾ (Bhole Baba) ಅವರು ಸತ್ಸಂಗ ನೆರವೇರಿಸಿದ ಬಳಿಕ ಉಂಟಾದ ಕಾಲ್ತುಳಿತವು ನೂರಾರು ಜನರ ಸಾವಿಗೆ ಕಾರಣವಾಗಿದೆ. ಇನ್ನು, ದುರಂತದ ಕುರಿತು ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ. ಪರಿಹಾರವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಘೋಷಣೆ ಮಾಡಿದ್ದಾರೆ. ಇನ್ನು ಕಾಲ್ತುಳಿತ ಹೇಗಾಯಿತು? ನೂರಾರು ಜನರ ಸಾವಿಗೆ ಕಾರಣವೇನು? ಪ್ರತ್ಯಕ್ಷದರ್ಶಿಗಳು ಹೇಳುವುದು ಏನು ಎಂಬುದರ ಮಾಹಿತಿ ಇಲ್ಲಿದೆ.

ಪ್ರತ್ಯಕ್ಷದರ್ಶಿಗಳು ಹೇಳುವುದಿಷ್ಟು…

ಸತ್ಸಂಗ ಮುಗಿದ ಬಳಿಕ ನೂರಾರು ಜನ ಹೊರಗೆ ಬಂದಿದ್ದಾರೆ. ಎತ್ತರದ ಚರಂಡಿ ಮೇಲೆ ನಿರ್ಮಿಸಿದ ರಸ್ತೆ ಮೇಲೆ ಸಾವಿರಾರು ಜನ ನಿಂತಿದ್ದಾರೆ. ಆಗ ರಸ್ತೆಯ ಒಂದು ಭಾಗ ಚರಂಡಿಯೊಳಗೆ ಕುಸಿದಿದೆ. ಕೂಡಲೇ ಹತ್ತಾರು ಜನ ಚರಂಡಿಯೊಳಗೆ ಬಿದ್ದಿದ್ದು, ಒಬ್ಬರ ಮೇಲೆ ಒಬ್ಬರು ಬಿದ್ದ ಕಾರಣ ಹೆಚ್ಚಿನ ಜನ ಸಾವಿಗೀಡಾಗಿದ್ದಾರೆ. ಇನ್ನು ಚರಂಡಿ ಮೇಲಿನ ರಸ್ತೆ ಕುಸಿದ ಸುದ್ದಿ ಹರಿದಾಡುತ್ತಲೇ ಎಲ್ಲರೂ ಓಡಲು ಶುರು ಮಾಡಿದರು. ಆಗಲೂ ಒಬ್ಬರ ಮೇಲೆ ಒಬ್ಬರು ಬಿದ್ದು, ತುಳಿದಾಡಿದ ಕಾರಣ ಸಾವಿನ ಸಂಖ್ಯೆ ಜಾಸ್ತಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಧ್ಯಮಗಳಿಗೆ ಘಟನೆ ಕುರಿತು ವಿವರ ನೀಡಿದ್ದಾರೆ.

ಇನ್ನೊಂದಿಷ್ಟು ಮೂಲಗಳ ಪ್ರಕಾರ, ಸಣ್ಣದೊಂದು ಹಾಲ್‌ನಲ್ಲಿ ಸತ್ಸಂಗ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹೊರಗಡೆ ಚರಂಡಿ ಮೇಲಿನ ಸ್ಲ್ಯಾಬ್‌ ಕುಸಿದಿದೆ ಎಂಬ ಸುದ್ದಿ ಕೇಳಿ ಎಲ್ಲರೂ ಓಡಲು ಶುರು ಮಾಡಿದರು. ಹೊರಗೆ ಹೋಗುವ ಗೇಟ್‌ ಚಿಕ್ಕದಿದ್ದ ಕಾರಣ ಎಲ್ಲರೂ ನುಗ್ಗಿದಾಗ ಕಾಲ್ತುಳಿತ ಸಂಭವಿಸಿದೆ. ಹೆಣ್ಣುಮಕ್ಕಳು ಓಡಲೂ ಆಗದೆ, ನೂಕುತ್ತಿದ್ದ ಪುರುಷರನ್ನು ಹಿಮ್ಮೆಟ್ಟಿಸಲೂ ಆಗದೆ ನೆಲಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಯಾರಿವರು ಭೋಲೆ ಬಾಬಾ?

ಭೋಲೆ ಬಾಬಾ ಅವರು ಉತ್ತರ ಪ್ರದೇಶದ ಎತಾಹ್‌ ಜಿಲ್ಲೆಯ ಬಹದ್ದೂರ್‌ ಗ್ರಾಮದವರಾಗಿದ್ದಾರೆ. ಇವರು ಈಗ ಪ್ರಮುಖ ಧಾರ್ಮಿಕ ಮುಖಂಡರೆನಿಸಿದ್ದು, ಇವರ ಭಾಷಣ, ಬೋಧನೆಗಳನ್ನು ಕೇಳಲು ಸಾವಿರಾರು ಜನ ಆಗಮಿಸುತ್ತಾರೆ. ಇವರು ದೇಶದ ಗುಪ್ತಚರ ಇಲಾಖೆಯಲ್ಲಿ (IB) ಕಾರ್ಯನಿರ್ವಹಿಸಿದ್ದು, 26 ವರ್ಷಗಳ ಹಿಂದೆಯೇ ಸರ್ಕಾರಿ ನೌಕರಿ ತೊರೆದು, ಸ್ವಯಂಘೋಷಿತ ದೇವಮಾನವರಾಗಿದ್ದಾರೆ.

ಭೋಲೆ ಬಾಬಾ ಅವರಿಗೆ ಭಾರತದಾದ್ಯಂತ ಅನುಯಾಯಿಗಳು ಇದ್ದಾರೆ. ಅದರಲ್ಲೂ, ಉತ್ತರ ಪ್ರದೇಶದ ಪಶ್ಚಿಮ ಭಾಗ, ಉತ್ತರಾಖಂಡ, ಹರಿಯಾಣ, ರಾಜಸ್ಥಾನ ಹಾಗೂ ದೆಹಲಿಯಲ್ಲಿ ಹೆಚ್ಚು ಅನುಯಾಯಿಗಳು ಇದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಖಾತೆ ಹೊಂದಿರದಿದ್ದರೂ ಇವರ ಧಾರ್ಮಿಕ ಕಾರ್ಯಕ್ರಮವನ್ನು ಭಕ್ತರು ತಪ್ಪಿಸಿಕೊಳ್ಳುವುದಿಲ್ಲ. ಪ್ರತಿ ಮಂಗಳವಾರ ಅಲಿಗಢದಲ್ಲಿ ಅವರ ಕಾರ್ಯಕ್ರಮ ನಡೆಯುತ್ತದೆ. ಅಲ್ಲಿಯೂ ಸಾವಿರಾರು ಜನ ಸೇರುತ್ತಾರೆ. ಕೊರೊನಾ ನಿರ್ಬಂಧದ ಮಧ್ಯೆಯೂ ಸಾವಿರಾರು ಜನರನ್ನು ಸೇರಿಸಿ, ಸತ್ಸಂಗ ಆಯೋಜಿಸಿದ್ದು ವಿವಾದಕ್ಕೂ ಕಾರಣವಾಗಿತ್ತು.

ಇದನ್ನೂ ಓದಿ: Uttar Pradesh stampede: ಹತ್ರಾಸ್‌ ಕಾಲ್ತುಳಿತ ದುರ್ಘಟನೆ; ಸಾವಿನ ಸಂಖ್ಯೆ 60ಕ್ಕೆ ಏರಿಕೆ

Exit mobile version