ನವದೆಹಲಿ: ರಾಷ್ಟ್ರೀಯ ರಜಪೂತ್ ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೇಡಿ (Sukhdev Singh Gogamedi) ಅವರ ಹತ್ಯೆಗೆ ಸಂಬಂಧಿಸಿದ ಒಂದೊಂದೇ ರಹಸ್ಯಗಳು ಬಯಲಾಗುತ್ತಿದೆ. ಸುಖದೇವ್ ಸಿಂಗ್ ಅವರ ಮನೆಯೊಳಗೆ ಹತ್ತಿರದಿಂದಲೇ ಹಲವು ಸುತ್ತು ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶೂಟರ್‌ಗಳು ಸೇರಿ ಮೂವರನ್ನು ಹರಿಯಾಣದಲ್ಲಿ ಈಗಾಗಲೇ ಬಂಧಿಸಲಾಗಿದೆ. ರೋಹಿತ್ ರಾಥೋಡ್, ನಿತಿನ್ ಫೌಜಿ, ಉಧಮ್ ಸಿಂಗ್ ಬಂಧಿತರು. ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ಹತ್ಯೆಯ ಬೇರು ಕೆನಡಾದವರೆಗೂ ಹರಡಿರುವುದು ಕಂಡು ಬಂದಿದೆ. ಹತ್ಯೆಯ ಪಿತೂರಿ ಹೇಗೆ ನಡೆಯಿತು ಎನ್ನುವುದನ್ನು ಅವರು ಹಂತ ಹಂತವಾಗಿ ವಿವರಿಸಿದ್ದಾರೆ.
ಸುಖದೇವ್ ಸಿಂಗ್ ಅವರನ್ನು ಹತ್ಯೆ ಮಾಡುವ ಸಂಚಿನ ಮಾಸ್ಟರ್ ಮೈಂಡ್ ರಾಜಸ್ಥಾನದ ದರೋಡೆಕೋರ ರೋಹಿತ್ ಗೋದಾರಾ, ಕೆನಡಾದಲ್ಲಿ ವಾಸಿಸುತ್ತಿದ್ದಾನೆ ಎಂದು ಶಂಕಿಸಲಾಗಿದೆ. ಕಳೆದ ವರ್ಷ ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರ ಹತ್ಯೆಗೆ ಸಂಬಂಧಿಸಿದ ಗೋಲ್ಡಿ ಬ್ರಾರ್ ಮತ್ತು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ರೋಹಿತ್ ಗೋದಾರಾ ನಿಕಟ ಸಂಬಂಧ ಹೊಂದಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಸುಖದೇವ್ ಸಿಂಗ್ ಅವರನ್ನು ಹತ್ಯೆ ಮಾಡುವ ಮತ್ತು ಶೂಟರ್‌ಗಳನ್ನು ನೇಮಿಸುವ ಜವಾಬ್ದಾರಿಯನ್ನು ಗೋದಾರಾ ತನ್ನ ಸಹಚರ ವೀರೇಂದ್ರ ಚರಣ್‌ಗೆ ವಹಿಸಿದ್ದ. ಅತ್ಯಾಚಾರ ಪ್ರಕರಣದಲ್ಲಿ ರಾಜಸ್ಥಾನದ ಅಜ್ಮೀರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾಗ ಚರಣ್ ಮತ್ತು ಗೋದಾರಾ ಭೇಟಿಯಾಗಿದ್ದರು. ತನ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎನ್ನುವ ಕಾರಣಕ್ಕೆ ಸುಖದೇವ್ ಸಿಂಗ್ ವಿರುದ್ಧ ಗೋದಾರಾ ದ್ವೇಷ ಕಟ್ಟಿಕೊಂಡಿದ್ದ. ಇದಕ್ಕಾಗಿ ಸೇಡು ತೀರಿಸಿಕೊಳ್ಳಲು ಯೋಜನೆ ರೂಪಿಸಿದ್ದ ಎಂದು ಮೂಲಗಳು ತಿಳಿಸಿವೆ.
ಬಂಧಿತ ನಿತಿನ್ ಫೌಜಿ ವಿದೇಶಕ್ಕೆ ತೆರಳಿ ಅಲ್ಲಿ ನೆಲೆಸಲು ಬಯಸಿದ್ದ. ಇದನ್ನೇ ಬಂಡವಾಳವಾಗಿಸಿಕೊಂಡ ಚರಣ್ ಆತನಿಗೆ ಹತ್ಯೆಯ ಜವಾಬ್ದಾರಿ ವಹಿಸಿ, ಕೆಲಸ ಮುಗಿದ ನಂತರ ವಿದೇಶಕ್ಕೆ ತೆರಳಲು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದ. ಹೀಗೆ ರೋಹಿತ್ ರಾಥೋಡ್, ನಿತಿನ್ ಫೌಜಿ ಅವರಿಗೆ ಹತ್ಯೆ ಮಾಡಲು ಸೂಚಿಸಿದ ಚರಣ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ.
ಗನ್ ಸಂಗ್ರಹ
ಚರಣ್ ತನ್ನ ಪ್ರಭಾವ ಬಳಸಿ ಇಬ್ಬರು ಶೂಟರ್‌ಗಳಿಗೂ ಬಂದೂಕುಗಳನ್ನು ತಲುಪಿಸಿದ್ದ. ಹತ್ಯೆಯ ನಂತರ ಇಬ್ಬರೂ ಬಂದೂಕುಗಳನ್ನು ನಗರದ ಹೋಟೆಲ್ ಬಳಿ ಹೂತು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಂದೂಕುಗಳನ್ನು ವಶಪಡಿಸಿಕೊಳ್ಳಲು ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯ ವೇಳೆ ಗೋದಾರಾ ಮತ್ತು ಸುಖದೇವ್ ಸಿಂಗ್ ನಡುವಿನ ಆಸ್ತಿ ವಿವಾದ ಬೆಳಕಿಗೆ ಬಂದಿದೆ. ಅಲ್ಲದೆ ಜಾತಿ ಸಮೀಕರಣದ ವಿಚಾರದಲ್ಲಿಯೂ ತನಿಖೆ ಮಾಡಲಾಗುತ್ತಿದೆ.
ಇದನ್ನೂ ಓದಿ: Sukhdev Singh Gogamedi : ಕರ್ಣಿಸೇನಾ ನಾಯಕನನ್ನು ಗುಂಡಿಟ್ಟು ಹತ್ಯೆ ಮಾಡಿದ್ದ ಮೂವರ ಬಂಧನ
ಒಟ್ಟಿಗೆ ಚಹಾ ಸೇವಿಸಿದ್ದ ಕೊಲೆ ಪಾತಕಿಗಳು
ಬಲಪಂಥೀಯ ಸಂಘಟನೆಯಾಗಿರುವ ರಾಷ್ಟ್ರೀಯ ರಜಪೂತ್ ಕರ್ಣಿ ಸೇನಾದ ಮುಖ್ಯಸ್ಥ ಸುಖದೇವ್ ಸಿಂಗ್ ಗೋಗಮೇಡಿ ಅವರನ್ನು ಡಿಸೆಂಬರ್ 5ರಂದು ಹತ್ಯೆ ಮಾಡುವ ಮೊದಲು ಜೈಪುರದ ಅವರ ಮನೆಯಲ್ಲಿ ಆರೋಪಿಗಳು ಅವರೊಂದಿಗೆ ಚಹಾ ಸೇವಿಸಿದ್ದರು. ಈ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಏಕಾಏಕಿ ಎದ್ದು ಆರೋಪಿಗಳು ಸುಖದೇವ್ ಸಿಂಗ್ ಅವರ ಬೆಂಗಾವಲು ಸಿಬ್ಬಂದಿ ಸೇರಿದಂತೆ ಹಲವರ ಮೇಲೆ ಗುಂಡಿನ ದಾಳಿ ಮಾಡಿದ್ದರು. ಬಳಿಕ ಸುಖ್ದೇವ್ ಅವರ ತಲೆಗೆ ರಿವಾಲ್ವರ್ ಇಟ್ಟು ಗುಂಡು ಹೊಡೆದು ಹತ್ಯೆ ಮಾಡಿ ಪರಾರಿಯಾಗಿದ್ದರು.