Site icon Vistara News

Human trafficking Case: ದೇಶಾದ್ಯಂತ NIA ರೇಡ್‌; ಮಾನವ ಕಳ್ಳಸಾಗಣೆ ಜಾಲ ಬಯಲು

Human trafficking

ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಳಿ ನಡೆಸಿದ್ದು, ಭಾರೀ ಮಾನವ ಕಳ್ಳಸಾಗಣೆ(Human trafficking Case) ಜಾಲವನ್ನು ಬೇಧಿಸಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಐವರನ್ನು ಅರೆಸ್ಟ್‌ ಮಾಡಿದ್ದಾರೆ. ಈ ಆರೋಪಿಗಳು ಕೆಲಸ ಕೊಡಿಸುವುದಾಗಿ ನಂಬಿಸಿ ಭಾರತೀಯ ಯುವಕರನ್ನು ವಿದೇಶಕ್ಕೆ ಕಳ್ಳಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.

15 ಸ್ಥಳಗಳಲ್ಲಿ ಶೋಧ ಕಾರ್ಯ

ಮಹಾರಾಷ್ಟ್ರ, ಉತ್ತರ ಪ್ರದೇಶ, ಬಿಹಾರ, ಗುಜರಾತ್, ದೆಹಲಿ, ಹರಿಯಾಣ, ಪಂಜಾಬ್ ಮತ್ತು ಚಂಡೀಗಢಯ ಒಟ್ಟು 15 ಸ್ಥಳಗಳಲ್ಲಿ ದಾಳಿ ನಡೆಸಿದ ಎನ್‌ಐಎ ಐವರನ್ನು ಬಂಧಿಸಿದೆ ಬಂಧಿತ ಆರೋಪಿಗಳನ್ನು ವಡೋದರದ ಮನೀಶ್ ಹಿಂಗು, ಗೋಪಾಲ್‌ಗಂಜ್‌ನ ಪಹ್ಲಾದ್ ಸಿಂಗ್, ನೈಋತ್ಯ ದೆಹಲಿಯ ನಬಿಯಾಲಂ ರೇ, ಗುರುಗ್ರಾಮದ ಬಲ್ವಂತ್ ಕಟಾರಿಯಾ ಮತ್ತು ಚಂಡೀಗಢದ ಸರ್ತಾಜ್ ಸಿಂಗ್ ಎಂದು ಗುರುತಿಸಲಾಗಿದೆ. ಇನ್ನು ಎನ್‌ಐಎ ರಾಜ್ಯ ಪೊಲೀಸ್‌ ಮತ್ತು ಕೇಂದ್ರೀಯ ಗುಪ್ತಚರ ಇಲಾಖೆ ಜೊತೆಗೂಡಿ ಈ ರೇಡ್‌ ನಡೆಸಿದೆ. ಇನ್ನು ಘಟನೆಗೆ ಸಂಬಂಧಿಸಿದಂತೆ ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಂಟು FIR ದಾಖಲಾಗಿವೆ

ಎನ್‌ಐಎ ತನಿಖೆಯಿಂದ ಆರೋಪಿಗಳು ಕಾನೂನುಬದ್ಧ ಉದ್ಯೋಗದ ಸುಳ್ಳು ಭರವಸೆಯ ಮೇಲೆ ಭಾರತೀಯ ಯುವಕರನ್ನು ವಿದೇಶಿ ದೇಶಗಳಿಗೆ ಆಮಿಷವೊಡ್ಡುವ ಮತ್ತು ಕಳ್ಳಸಾಗಣೆ ಮಾಡುವ ಸಂಘಟಿತ ಕಳ್ಳಸಾಗಣೆ ಸಿಂಡಿಕೇಟ್‌ನಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. “ಯುವಕರು ಲಾವೋಸ್, ಗೋಲ್ಡನ್ ಟ್ರಯಾಂಗಲ್ ಸ್ಪೆಷಲ್ ಎಕನಾಮಿಕ್ ಝೋನ್ (SEZ), ಮತ್ತು ಕಾಂಬೋಡಿಯಾದ ಇತರ ಸ್ಥಳಗಳಲ್ಲಿ ನಕಲಿ ಕಾಲ್ ಸೆಂಟರ್‌ಗಳಲ್ಲಿ ಕೆಲಸ ಮಾಡಲು ಬಲವಂತ ಮಾಡಲಾಗುತ್ತದೆ. ಈ ಕಾಲ್‌ ಸೆಂಟರ್‌ ಮುಖ್ಯವಾಗಿ ವಿದೇಶಿ ಪ್ರಜೆಗಳಿಂದ ನಿಯಂತ್ರಿಸಲ್ಪಡುತ್ತದೆ ಎಂದು ಎನ್‌ಐಎ ಹೇಳಿದೆ.

ಕೆಲವು ವಾರಗಳ ಹಿಂದೆ ಕೇರಳದಲ್ಲೂ ಇಂತಹದ್ದೇ ಒಂದು ಜಾಲವನ್ನು ಸಿಬಿಐ ಬಯಲಿಗೆಳೆದಿತ್ತು. ಯುದ್ಧ ಪೀಡಿತ ರಷ್ಯಾ ಮತ್ತು ಉಕ್ರೇನ್‌(Russia-Ukraine War)ಗೆ ಮಾನವ ಕಳ್ಳಸಾಗಾಟ(Human trafficking) ಮಾಡುತ್ತಿದ್ದ ಕೇರಳದ ತಿರುವನಂತಪುರಂ ಮೂಲದ ಇಬ್ಬರನ್ನು ಕೇಂದ್ರೀಯ ತನಿಖಾ ಸಂಸ್ಥೆ(CBI) ಬಂಧಿಸಿತ್ತು. ಟ್ರಾವೆಲ್‌ ಏಜೆಂಟ್‌ಗಳ ಮೋಸದಾಟಕ್ಕೆ ಬಲಿಯಾಗಿ ವಿದೇಶಕ್ಕೆ ಹೋಗಿ ಯುವಕರು ಸಂಕಷ್ಟ ಎದುರಿಸುತ್ತಿರುವ ಘಟನೆಗಳು ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಟ್ರಾವೆಲ್‌ ಏಕೆಂಟ್‌ಗಳ ಮೇಲೆ ಕಣ್ಣಿಟ್ಟ ಸಿಬಿಐಗೆ ಈ ದಂಧೆ ಬೆಳಕಿಗೆ ಬಂದಿತ್ತು.

ಈ ಟ್ರಾವೆಲ್‌ ಏಜೆಂಟ್‌ಗಳು ರಷ್ಯಾದಲ್ಲಿ ಕೆಲಸ ಕೊಡಿಸುವುದಾಗ ಭಾರತೀಯ ಯುವಕರನ್ನು ನಂಬಿಸಿ, ಅಲ್ಲಿಗೆ ಕಳುಹಿಸಿ ಅವರ ಪಾಸ್‌ಪೋರ್ಟ್‌ಗಳನ್ನು ಕಿತ್ತುಕೊಂಡು ಯುದ್ಧ ಪೀಡಿತ ಪ್ರದೇಶಕ್ಕೆ ಕಳಿಸುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ 17 ವಿಸಾ ಕಂಪನಿಗಳು ಹಾಗೂ ಅದರ ಮಾಲಕರು, ಏಜೆಂಟ್‌ಗಳ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿದೆ. ಅವರ ವಿರುದ್ಧ ಸಂಚು, ವಂಚನೆ ಮತ್ತು ಮಾನವ ಕಳ್ಳಸಾಗಣೆ ಪ್ರಕರಣಗಳನ್ನು ದಾಖಲಿಸಲಾಗಿದೆ.

ಏಜೆಂಟ್‌ಗಳ ಮೂಲಕ ಭಾರತೀಯ ಯುವಕರನ್ನು ರಷ್ಯಾ ಸೇನೆ, ಭದ್ರತಾ ಸಿಬ್ಬಂದಿ ಅಥವಾ ಇತರೆ ಕ್ಷೇತ್ರಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ರಷ್ಯಾಗೆ ಕಳುಹಿಸಿಕೊಡಲಾಗುತ್ತದೆ. ಸಂತ್ರಸ್ತರಿಂದ ಇದಕ್ಕಾಗಿ ಏಜೆಂಟ್‌ಗಳು ಸ್ವಲ್ಪ ಹಣವನ್ನೂ ಪಡೆಯುತ್ತಾರೆ. ಅಲ್ಲಿ ಕಾಲಿಟ್ಟೊಡನೇ ಅವರ ಪಾಸ್‌ಪೋರ್ಟ್‌ ಕಿತ್ತುಕೊಂಡು ರಷ್ಯಾ ಸೇನೆಗೆ ಒತ್ತಾಯಪೂರ್ವಕವಾಗಿ ಸೇರಿಸಲಾಗುತ್ತದೆ. ಅಲ್ಲಿ ಅವರಿಗೆ ಯುದ್ಧ ತರಬೇತಿ ನೀಡಿ ಅಲ್ಲಿಂದ ಅವರನ್ನು ಯುದ್ಧ ಪೀಡಿತ ಪ್ರದೇಶಗಳಿಗೆ ಕಳಿಸುತ್ತಾರೆ.

ಇದನ್ನೂ ಓದಿ:Deepfake Case: ವಿದ್ಯಾರ್ಥಿನಿಯ ಡೀಪ್‌ ಫೇಕ್‌ ಫೋಟೋ ಸೃಷ್ಟಿ ಮಾಡಿದ ಅದೇ ಶಾಲೆಯ 2 ಹುಡುಗರು ಡಿಬಾರ್

Exit mobile version