ನವದೆಹಲಿ: ಇತ್ತೀಚೆಗೆ ಮಲಯಾಳಂ ಭಾಷೆಯಲ್ಲಿ ಆಡು ಜೀವಿತಂ(Goat Life) ಎಂಬ ಸಿನಿಮಾ ಬಹುದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಅದರಲ್ಲಿ ಇಬ್ಬರು ಕೇರಳ ಮೂಲದ ಯುವಕರನ್ನು ಕೆಲಸ ಕೊಡಿವುದಾಗಿ ನಂಬಿಸಿ ವಿದೇಶಕ್ಕೆ ಕರೆಸಿ ಅಲ್ಲಿ ಅವರ ಪಾಸ್‌ಪೋರ್ಟ್ ಕಿತ್ತುಕೊಂಡು ಮರುಭೂಮಿಯಲ್ಲಿ ಆಡು, ಒಂಟೆ ಮೇಲಿಸಲು ಕಳಿಸಲಾಗುತ್ತದೆ. ಅಲ್ಲಿ ಅವರು ಅನುಭವಿಸಿದ ನರಕಯಾತನೆ ಕುರಿತಾದ ಕಥಾಹಂದರವಿರುದ ಸಿನಿಮಾ ಅದು. ಇದೀಗ ಅಂತಹದ್ದೇ ಒಂದು ದಂಧೆ ಬೆಳಕಿಗೆ ಬಂದಿದೆ. ಯುದ್ಧ ಪೀಡಿತ ರಷ್ಯಾ ಮತ್ತು ಉಕ್ರೇನ್(Russia-Ukraine War)ಗೆ ಮಾನವ ಕಳ್ಳಸಾಗಾಟ(Human trafficking) ಮಾಡುತ್ತಿದ್ದ ಕೇರಳದ ತಿರುವನಂತಪುರಂ ಮೂಲದ ಇಬ್ಬರನ್ನು ಕೇಂದ್ರೀಯ ತನಿಖಾ ಸಂಸ್ಥೆ(CBI) ಬಂಧಿಸಿದೆ. ಬಂಧಿತ ಆರೋಪಿಗಳ ಗುರುತನ್ನು ಸಿಬಿಐ ಇನ್ನೂ ಬಹಿರಂಗ ಪಡಿಸಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆರೋಪಿಗಳು ಸಿಬಿಐ ಬಲೆಗೆ ಬೀಳುವ ಸಾಧ್ಯತೆ ಇದೆ.
ಸಿಬಿಐ ಕಾರ್ಯಾಚರಣೆ ಹೇಗಿತ್ತು?
ಟ್ರಾವೆಲ್ ಏಜೆಂಟ್‌ಗಳ ಮೋಸದಾಟಕ್ಕೆ ಬಲಿಯಾಗಿ ವಿದೇಶಕ್ಕೆ ಹೋಗಿ ಯುವಕರು ಸಂಕಷ್ಟ ಎದುರಿಸುತ್ತಿರುವ ಘಟನೆಗಳು ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಟ್ರಾವೆಲ್ ಏಕೆಂಟ್‌ಗಳ ಮೇಲೆ ಕಣ್ಣಿಟ್ಟ ಸಿಬಿಐಗೆ ಈ ದಂಧೆ ಬೆಳಕಿಗೆ ಬಂದಿತ್ತು. ಈ ಟ್ರಾವೆಲ್ ಏಜೆಂಟ್‌ಗಳು ರಷ್ಯಾದಲ್ಲಿ ಕೆಲಸ ಕೊಡಿಸುವುದಾಗ ಭಾರತೀಯ ಯುವಕರನ್ನು ನಂಬಿಸಿ, ಅಲ್ಲಿಗೆ ಕಳುಹಿಸಿ ಅವರ ಪಾಸ್‌ಪೋರ್ಟ್‌ಗಳನ್ನು ಕಿತ್ತುಕೊಂಡು ಯುದ್ಧ ಪೀಡಿತ ಪ್ರದೇಶಕ್ಕೆ ಕಳಿಸುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ 17 ವಿಸಾ ಕಂಪನಿಗಳು ಹಾಗೂ ಅದರ ಮಾಲಕರು, ಏಜೆಂಟ್‌ಗಳ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿದೆ. ಅವರ ವಿರುದ್ಧ ಸಂಚು, ವಂಚನೆ ಮತ್ತು ಮಾನವ ಕಳ್ಳಸಾಗಣೆ ಪ್ರಕರಣಗಳನ್ನು ದಾಖಲಿಸಲಾಗಿದೆ.
ಭಾರತೀಯ ಪ್ರಜೆಗಳ ಮೇಲೆ ದೌರ್ಜನ್ಯ
ಏಜೆಂಟ್‌ಗಳ ಮೂಲಕ ಭಾರತೀಯ ಯುವಕರನ್ನು ರಷ್ಯಾ ಸೇನೆ, ಭದ್ರತಾ ಸಿಬ್ಬಂದಿ ಅಥವಾ ಇತರೆ ಕ್ಷೇತ್ರಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ರಷ್ಯಾಗೆ ಕಳುಹಿಸಿಕೊಡಲಾಗುತ್ತದೆ. ಸಂತ್ರಸ್ತರಿಂದ ಇದಕ್ಕಾಗಿ ಏಜೆಂಟ್‌ಗಳು ಸ್ವಲ್ಪ ಹಣವನ್ನೂ ಪಡೆಯುತ್ತಾರೆ. ಅಲ್ಲಿ ಕಾಲಿಟ್ಟೊಡನೇ ಅವರ ಪಾಸ್‌ಪೋರ್ಟ್ ಕಿತ್ತುಕೊಂಡು ರಷ್ಯಾ ಸೇನೆಗೆ ಒತ್ತಾಯಪೂರ್ವಕವಾಗಿ ಸೇರಿಸಲಾಗುತ್ತದೆ. ಅಲ್ಲಿ ಅವರಿಗೆ ಯುದ್ಧ ತರಬೇತಿ ನೀಡಿ ಅಲ್ಲಿಂದ ಅವರನ್ನು ಯುದ್ಧ ಪೀಡಿತ ಪ್ರದೇಶಗಳಿಗೆ ಕಳಿಸುತ್ತಾರೆ.
ಇದನ್ನೂ ಓದಿ:Covishield Vaccine: ಕೋವಿಶೀಲ್ಡ್ ಲಸಿಕೆ ಹಿಂಪಡೆಯುವುದಾಗಿ ಅಸ್ಟ್ರಾಜೆನೆಕಾ ಘೋಷಣೆ
ವಿದ್ಯಾರ್ಥಿಗಳೂ ಬಲಿಪಶು
ಇನ್ನು ಈ ದಂಧೆಗೆ ಯುವಕರು ಮಾತ್ರವಲ್ಲದೇ ವಿದ್ಯಾರ್ಥಿಗಳೂ ಬಲಿಪಶುಗಳಾಗಿದ್ದಾರೆ. ರಷ್ಯಾದ ದೊಡ್ಡ ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ ದಾಖಲಾತಿ ಮಾಡಿಸಿಕೊಡುವುದಾಗಿ ನಂಬಿಸಿ ವಂಚಕರಿ ವಂಚಿಸಿದ್ದರು. ಅವರಿಂದ ಖಾಸಗಿ ಶಾಲೆಗಳ ಶುಲ್ಕದಲ್ಲಿ ರಿಯಾಯಿತಿ ಮತ್ತು ವೀಸಾ ಅವಧಿ ವಿಸ್ತರಣೆ ಮೊದಲಾದ ಭರವಸೆಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದರು ಎನ್ನಲಾಗಿದೆ. ಇನ್ನು ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡೇ ವಂಚಕರು ಜನರಿಗೆ ಬಲೆ ಬೀಸುತ್ತಿದ್ದರು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ.